
ಚೆನ್ನೈ: ಎರಡು ಗೋಲುಗಳ ಹಿನ್ನಡೆಯಿಂದ ವೀರೋಚಿತ ಆಟವಾಡಿದ ಭಾರತ ತಂಡ ಬುಧವಾರ 4–2 ಗೋಲುಗಳಿಂದ ಅರ್ಜೆಂಟೀನಾ ತಂಡವನ್ನು ಸೋಲಿಸಿ ಪುರುಷರ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿತು.
ಲಖನೌದಲ್ಲಿ ನಡೆದ 2016ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಆತಿಥೇಯ ತಂಡಕ್ಕೆ, ನಂತರದ ಎರಡು ಆವೃತ್ತಿಗಳಲ್ಲಿ ಮೊದಲ ಮೂರರಲ್ಲಿ ಸ್ಥಾನ ಪಡೆಯಲು (ಪೋಡಿಯಂ ಫಿನಿಷ್) ಸಾಧ್ಯವಾಗಿರಲಿಲ್ಲ. ಭುವನೇಶ್ವರದಲ್ಲಿ (2021) ಮತ್ತು ಕ್ವಾಲಾಲಂಪುರದಲ್ಲಿ (2023) ತಂಡ ನಾಲ್ಕನೇ ಸ್ಥಾನ ಪಡೆದಿತ್ತು.
ಆದರೆ ಈ ಬಾರಿ ಪಿ.ಆರ್.ಶ್ರೀಜೇಶ್ ಮಾರ್ಗದರ್ಶನದ ತಂಡ, ಕೊನೆಯ ಕ್ವಾರ್ಟರ್‌ವರೆಗೆ (45ನೇ ನಿಮಿಷದವರೆಗೆ) ಗೋಲುಗಳ ಹಿನ್ನಡೆಯಿಂದ ಎದೆಗುಂದಲಿಲ್ಲ. ಅಂಕಿತ್ ಪಾಲ್ (49ನೇ ನಿಮಿಷ), ಮನಮೀತ್ ಸಿಂಗ್ (52ನೇ ನಿಮಿಷ), ಅನ್ಮೋಲ್ ಎಕ್ಕಾ (58ನೇ ನಿಮಿಷ) ಅವರು ಪೆನಾಲ್ಟಿ ಕಾರ್ನರ್‌ಗಳ ಮೂಲಕ ಗೋಲುಗಳನ್ನು ಗಳಿಸಿದರು. ಪಂದ್ಯ ಮುಗಿಯಲು ನಾಲ್ಕು ನಿಮಿಷಗಳಿರುವಾಗ ಶಾರದಾನಂದ ತಿವಾರಿ ಅವರು ಪೆನಾಲ್ಟಿ ಸ್ಟ್ರೋಕ್‌ಅನ್ನು ಗೋಲಾಗಿ ಪರಿವರ್ತಿಸಿದರು.
ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಅರ್ಜೆಂಟೀನಾ ತಂಡ ಉತ್ತಮ ತಂಡವಾಗಿ ಕಾಣಿಸಿತು. ಹೆಚ್ಚಿನ ಅವಧಿಯಲ್ಲಿ ತಂಡವು ನಿಯಂತ್ರಣ ಪಡೆದಿತ್ತು. ನಿಕೋಲಸ್ ರೋಡ್ರಿಗಸ್ ಅವರು ಮೂರನೇ ನಿಮಿಷ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಗಳಿಸಿ ತಂಡಕ್ಕೆ ಬೇಗನೇ ಮುನ್ನಡೆ ಒದಗಿಸಿದರು. ಅನ್ಮೋಲ್ ಎಕ್ಕಾ ಮಾಡಿದ ಫೌಲ್ ಇದಕ್ಕೆ ಕಾರಣವಾಯಿತು. 44ನೇ ನಿಮಿಷ ಸ್ಯಾಂಟಿಯಾಗೊ ಫರ್ನಾಂಡೀಸ್ ಅವರು ಮುನ್ನಡೆಯನ್ನು 2–0 ಗೋಲುಗಳಿಗೆ ಹೆಚ್ಚಿಸಿದರು.
ರೋಹಿತ್ ಯಾದವ್ ನೇತೃತ್ವದ ಭಾರತ ತಂಡಕ್ಕೆ 20ನೇ ನಿಮಿಷ ಮೊದಲ ಅವಕಾಶ ದೊರೆಯಿತು. ಆದರೆ ವೃತ್ತದ ತುದಿಯಿಂದ ದಿಲ್‌ರಾಜ್ ಗೋಲಿನತ್ತ ಹೊಡೆದ ಚೆಂಡನ್ನು ಅರ್ಜೆಂಟೀನಾದ ಗೋಲ್ ಕೀಪರ್ ಜೋಕಿನ್ ರುಯಿಸ್ ಉತ್ತಮವಾಗಿ ತಡೆದರು. ಇದರ ನಂತರವೂ ಭಾರತ ಎದುರಾಳಿಗಳ ಮೇಲೆ ಒತ್ತಡ ಹೇರಿತು. 31ನೇ ನಿಮಿಷ ಒಂದರ ಹಿಂದೆ ಒಂದರಂತೆ ಪೆನಾಲ್ಟಿ ಕಾರ್ನರ್ ಅವಕಾಶಗಳು ದೊರೆತವು. ಇದರಲ್ಲಿ ಕೊನೆಯ ಅವಕಾಶದಲ್ಲಿ ಅನ್ಮೋಲ್ ಎಕ್ಕಾ ಅವರ ಯತ್ನದಲ್ಲಿ ಚೆಂಡು ಗೋಲುಪೆಟ್ಟಿಗೆ ಮೇಲಿಂದ ಹೋಯಿತು.
ಅರ್ಜೆಂಟೀನಾ ಪ್ರತಿದಾಳಿಗಳನ್ನು ನಡೆಸಿತು. ಆದರೆ 37ನೇ ನಿಮಿಷ ಪೆನಾಲ್ಟಿ ಕಾರ್ನರ್‌ನಲ್ಲಿ ಅರ್ಜೆಂಟೀನಾ ತಂಡದ ಯತ್ನವನ್ನು ಗೋಲ್‌ಕೀಪರ್ ಪ್ರಿನ್ಸ್‌ದೀಪ್ ಸಿಂಗ್ ಅಮೋಘವಾಗಿ ತಡೆದು ಆತಿಥೇಯ ತಂಡದ ನಿಟ್ಟುಸಿರಿಗೆ ಕಾರಣರಾದರು. 40ನೇ ನಿಮಿಷ ಮತ್ತೆರಡು ಶಾರ್ಟ್ ಕಾರ್ನರ್ ಅವಕಾಶಗಳೂ ವಿಫಲವಾದವು. 41ನೇ ನಿಮಿಷ ಅರ್ಜೆಂಟೀನಾ ನಾಲ್ಕನೇ ಪೆನಾಲ್ಟಿ ಕಾರ್ನರ್ ಪಡೆಯಿತು. ಆದರೆ ರೋಡ್ರಿಗಸ್ ಅವರ ‘ಫ್ಲಿಕ್’ ಯತ್ನದಲ್ಲಿ ಚೆಂಡು ಗುರಿತಪ್ಪಿತು.
ಈ ಹಿನ್ನಡೆಯಿಂದ ಭಾರತ ವಿಚಲಿತವಾಗಲಿಲ್ಲ. ಅಂತಿಮ ಕ್ವಾರ್ಟರ್‌ನಲ್ಲಿ ಒತ್ತಡ ಹೇರಿತು. ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿ ಸ್ಕೋರ್ ಸಮ ಮಾಡಿಕೊಂಡಿತು. ಪಂದ್ಯ ಮುಗಿಯಲು ನಾಲ್ಕು ನಿಮಿಷಗಳಿದ್ದಾಗ ಒದಗಿಬಂದ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿಸುವಲ್ಲಿ ಶಾರದಾನಂದ ತಿವಾರಿ ಎಡವಲಿಲ್ಲ. ಈ ಮುನ್ನಡೆಯ ಪರಿಣಾಮ ಹುರುಪಿನಿಂದ ಆಡಿದ ಆತಿಥೇಯ ತಂಡ ಮರುನಿಮಿಷ ಮತ್ತೊಂದು ಪೆನಾಲ್ಟಿ ಕಾರ್ನರ್ ಪಡೆಯಿತು. ಇದರಲ್ಲಿ ಅನ್ಮೋಲ್ ಚೆಂಡನ್ನು ಗುರಿಮುಟ್ಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.