ADVERTISEMENT

ಒಲಿಂಪಿಕ್ಸ್‌: ಸವಾಲುಗಳ ನಡುವೆ ಕೌಂಟ್‌ಡೌನ್ ಶುರು

ಮುಂದುವರಿದ ಜ್ಯೋತಿಯಾತ್ರೆ; ಜಗತ್ತಿನಾದ್ಯಂತ ಕ್ರೀಡಾಪಟುಗಳ ಸಿದ್ಧತೆ

ಏಜೆನ್ಸೀಸ್
Published 14 ಏಪ್ರಿಲ್ 2021, 14:41 IST
Last Updated 14 ಏಪ್ರಿಲ್ 2021, 14:41 IST
ಒಲಿಂಪಿಕ್ಸ್‌ ಲಾಂಚನದ ಹಿನ್ನೆಲೆಯಲ್ಲಿ ಜಪಾನ್‌ನ ರೇನ್‌ಬೋ ಬ್ರಿಜ್‌ ಮತ್ತು ಟೋಕಿಯೊ ಗೋಪುರ ಬುಧವಾರ ಕಂಗೊಳಿಸಿತು –ರಾಯಿಟರ್ಸ್ ಚಿತ್ರ
ಒಲಿಂಪಿಕ್ಸ್‌ ಲಾಂಚನದ ಹಿನ್ನೆಲೆಯಲ್ಲಿ ಜಪಾನ್‌ನ ರೇನ್‌ಬೋ ಬ್ರಿಜ್‌ ಮತ್ತು ಟೋಕಿಯೊ ಗೋಪುರ ಬುಧವಾರ ಕಂಗೊಳಿಸಿತು –ರಾಯಿಟರ್ಸ್ ಚಿತ್ರ   

ಟೋಕಿಯೊ: ಕೋವಿಡ್‌–19ರ ಆತಂಕದಿಂದ ಮುಂದೂಡಲಾದ ಒಲಿಂಪಿಕ್ಸ್‌ಗೆ ನೂರು ದಿನಗಳ ಕೌಂಟ್‌ಡೌನ್ ಬುಧವಾರ ಆರಂಭವಾಯಿತು. ಜಪಾನ್‌ನ ವಿವಿಧ ಕಡೆಗಳಲ್ಲಿ ಜ್ಯೋತಿಯಾತ್ರೆ ಸಾಗುತ್ತಿರುವಾಗಲೇ ಜಗತ್ತಿನ ಮೂಲೆ ಮೂಲೆಗಳಲ್ಲಿ ಕ್ರೀಡಾಪಟುಗಳು ಕ್ರೀಡಾಕೂಟಕ್ಕೆ ಸಜ್ಜಾಗುತ್ತಿದ್ದಾರೆ. ಆದರೆ ಆಯೋಜಕರು ಆಂತಕದಲ್ಲೇ ಸಿದ್ಧತೆಗಳಲ್ಲಿ ತೊಡಗಿದ್ದಾರೆ.

ಜಪಾನ್‌ನಾದ್ಯಂತ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಆಯೋಜಿಸಲು ಸಾಧ್ಯವೇ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದು ಬೆಟ್ಟದಷ್ಟು ಸವಾಲುಗಳನ್ನು ಸಂಘಟಕರ ಮುಂದೆ ಇರಿಸಿದೆ. ಜ್ಯೋತಿಯಾತ್ರೆಗೆ ಈಗಾಗಲೇ ಕೆಲವು ನಗರಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ವಿದೇಶಿ ಪ್ರೇಕ್ಷಕರಿಗೆ ಅಕವಾಶ ಇಲ್ಲ ಎಂದು ಸೂಚಿಸಲಾಗಿದೆ. ಈ ನಡುವೆ ವಿವಿಧೆಡೆ ‘ನೂರು ದಿನಗಳ’ ಕಾರ್ಯಕ್ರಮಗಳು ರಂಗು ಪಡೆದುಕೊಂಡವು.

ಜಪಾನ್‌ನಲ್ಲಿ ಕ್ರೀಡಾಕೂಟಗಳು ಈಗಲೂ ನಡೆಯುತ್ತಿವೆ. ಕಳೆದ ತಿಂಗಳು ಫುಕುಶಿಮಾದಲ್ಲಿ ಜ್ಯೋತಿಯಾತ್ರೆ ಆರಂಭಗೊಂಡಿತ್ತು. ಕ್ರೀಡಾಪಟುಗಳು ಲಿಸಿಕೆ ಪಡೆಯುವುದನ್ನು ಜಪಾನ್ ಕಡ್ಡಾಯ ಮಾಡಿಲ್ಲ. ಆದರೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಲಸಿಕೆ ನೀಡಲು ಪ್ರಯತ್ನಿಸುತ್ತಿದೆ. ಈ ನಡುವೆ ಕೋವಿಡ್‌ ಆತಂಕದಿಂದ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವುದಾಗಿ ಉತ್ತರ ಕೊರಿಯಾ ಹೇಳಿರುವುದು ಕೂಡ ಆತಂಕ ಹೆಚ್ಚಲು ಕಾರಣವಾಗಿದೆ.

ADVERTISEMENT

ಒಲಿಂಪಿಕ್ಸ್ ಆಯೋಜನೆ ಕಷ್ಟಸಾಧ್ಯ

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಕೂಟ ಆಯೋಜಿಸುವುದು ಕಷ್ಟಸಾಧ್ಯ ಎಂದು ಟೋಕಿಯೊ ವೈದ್ಯಕೀಯ ಸಂಘದ ಮುಖ್ಯಸ್ಥ ಹರುವೊ ಒಜಾಕಿ ಬುಧವಾರ ಎಚ್ಚರಿಕೆ ನೀಡಿದ್ದಾರೆ.

‘ಸೋಂಕು ಇದೇ ರೀತಿ ಏರುಗತಿಯಲ್ಲಿ ಸಾಗುತ್ತಿದ್ದರೆ ಕ್ರೀಡಾಕೂಟ ಆಯೋಜಿಸುವುದು ದೊಡ್ಡ ಸವಾಲಾಗಲಿದೆ. ಸೋಂಕು ತಡೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಆಯೋಜಕರು ತಿಳಿಸಬೇಕು’ ಎಂದು ಒಜಾಕಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.