ADVERTISEMENT

ಫೆಡರೇಷನ್‌ ಕಪ್‌: ಕೂಟ ದಾಖಲೆ ಸ್ಥಾಪಿಸಿದ ವಿದ್ಯಾ ರಾಮರಾಜ್

400 ಮೀ. ಹರ್ಡಲ್ಸ್‌ ಓಟ

ಪಿಟಿಐ
Published 23 ಏಪ್ರಿಲ್ 2025, 15:53 IST
Last Updated 23 ಏಪ್ರಿಲ್ 2025, 15:53 IST
ವಿದ್ಯಾ ರಾಮರಾಜ್
ಪಿಟಿಐ ಸಂಗ್ರಹ ಚಿತ್ರ
ವಿದ್ಯಾ ರಾಮರಾಜ್ ಪಿಟಿಐ ಸಂಗ್ರಹ ಚಿತ್ರ   

ಕೊಚ್ಚಿ: ಏಷ್ಯನ್ ಗೇಮ್ಸ್‌ ಕಂಚಿನ ಪದಕ ವಿಜೇತೆ ವಿದ್ಯಾ ರಾಮರಾಜ್ ಅವರು ರಾಷ್ಟ್ರೀಯ ಫೆಡರೇಷನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಬುಧವಾರ 400 ಮೀ. ಹರ್ಡಲ್ಸ್ ಓಟದಲ್ಲಿ ನಿರೀಕ್ಷೆಯಂತೆ ಚಿನ್ನ ಗೆದ್ದರು; ಮಾತ್ರವಲ್ಲ ಆ ಹಾದಿಯಲ್ಲಿ ಕೂಟ ದಾಖಲೆಯನ್ನೂ ಸುಧಾರಿಸಿದರು.

ತಮಿಳುನಾಡಿನ 26 ವರ್ಷ ವಯಸ್ಸಿನ ವಿದ್ಯಾ 56.04 ಸೆಕೆಂಡುಗಳಲ್ಲಿ ನಿಗದಿತ ದೂರವನ್ನು ಕ್ರಮಿಸಿದರು. ಹಳೆಯ ದಾಖಲೆ (2019ರಲ್ಲಿ, 57.21 ಸೆ.) ಗುಜರಾತ್‌ನ ಸರಿತಾಬೆನ್ ಗಾಯಕವಾಡ್‌ ಹೆಸರಿನಲ್ಲಿತ್ತು. ಅವರು ತನ್ಮೂಲಕ ಏಷ್ಯನ್ ಚಾಂಪಿಯನ್‌ಷಿಪ್‌ಗೆ ಭಾರತ ಅಥ್ಲೆಟಿಕ್‌ ಫೆಡರೇಷನ್ ನಿಗದಿಪಡಿಸಿದ 57.80 ಸೆ.ಗಳ ಅರ್ಹತಾ ಮಟ್ಟವನ್ನೂ ದಾಟಿದರು.

ಅನುಭವಿ ವಿದ್ಯಾ ಅವರಿಗೆ ಎರಡನೇ ಸ್ಥಾನ ಗಳಿಸಿದ ಕೇರಳದ ಅನು ಆರ್‌. (58.26 ಸೆಕೆಂಡು) ಮತ್ತು ಮೂರನೇ ಸ್ಥಾನ ಪಡೆದ ಆರ್‌.ಅಶ್ವಿನಿ (1:02.41) ಅವರಿಂದ ಹೆಚ್ಚಿನ ಸವಾಲು ಎದುರಾಗಲಿಲ್ಲ.

ADVERTISEMENT

ಮಂಗಳವಾರ ನಡೆದ 400 ಮೀ. ಓಟದಲ್ಲಿ ವಿದ್ಯಾ ಬೆಳ್ಳಿ ಪದಕ ಗೆದ್ದಿದ್ದರು.

ಅಂತರರಾಷ್ಟ್ರೀಯ ಸ್ಪರ್ಧಿ ಅವಿನಾಶ ಸಾಬ್ಳೆ ಅನುಪಸ್ಥಿತಿಯಲ್ಲಿ ನಡೆದ ಪುರುಷರ 3000 ಮೀ. ಸ್ಟೀಪಲ್‌ಚೇಸ್‌ ಓಟದಲ್ಲಿ ಗುಜರಾತ್‌ನ ಸುನೀಲ್ ಜೋಲಿಯಾ ಜಿನಾಭಾಯ್ (8ಸೆ.43.82 ಸೆ.) ಚಿನ್ನ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಮಧ್ಯ ಪ್ರದೇಶದ ಮಂಜು ಅಜಯ್‌ ಯಾದವ್ 10ನಿ.34.08 ಸೆ.ಗಳಲ್ಲಿ ದೂರ ಕ್ರಮಿಸಿ ಮೊದಲ ಸ್ಥಾನ ಪಡೆದರು.

ಮಹಿಳೆಯರ ವಿಭಾಗದ ಶಾಟ್‌ಪಟ್‌ನಲ್ಲಿ ಉತ್ತರ ಪ್ರದೇಶದ ವಿಧಿ (16.10 ಮೀ.) ಮೊದಲಿಗರಾದರೂ, ಏಷ್ಯನ್ ಚಾಂಪಿಯನ್‌ಷಿಪ್‌ ಅರ್ಹತಾ ಮಟ್ಟ (16.89 ಮೀ.) ತಲುಪಲಾಗಲಿಲ್ಲ.

ಯಶಸ್‌ಗೆ ಚಿನ್ನ, ತಪ್ಪಿದ ಏಷ್ಯನ್ ಟಿಕೆಟ್

ಕರ್ನಾಟಕದ ಯಶಸ್‌ ಪಿ. ಅವರು ಪುರುಷರ 400 ಮೀ. ಹರ್ಡಲ್ಸ್ ಓಟವನ್ನು 49.32 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದುಕೊಂಡರು. ಅವರು ಏಷ್ಯನ್ ಚಾಂಪಿಯನ್‌ಷಿಪ್‌ಗೆ ನಿಗದಿಪಡಿಸಿದ್ದ ಅರ್ಹತಾ ಮಟ್ಟವನ್ನು (49.19 ಸೆ.) ಸ್ವಲ್ಪದರಲ್ಲೇ ತಪ್ಪಿಸಿಕೊಂಡರು.

ಜೆಎಸ್‌ಡಬ್ಲ್ಯು ತಂಡದ ಸುಬಾಷ್‌ ದಾಸ್ 50.11 ಸೆ.ಗಳೊಡನೆ ರಜತ ಮತ್ತು ಗುಜರಾತ್‌ನ ಸುಚಿತ್‌ ಮೋರಿ 51.08 ಸೆ.ಗಳೊಡನೆ ಕಂಚಿನ ಪದಕ ಗೆದ್ದುಕೊಂಡರು.

‘ನನಗೆ ತೀವ್ರ ಪೈಪೋಟಿ ಎದುರಾಗಲಿಲ್ಲ. ಹೀಗಾಗಿ ನನಗೆ ಏಷ್ಯನ್ ಚಾಂಪಿಯನ್‌ಷಿಪ್‌ಗೆ ನಿಗದಿಪಡಿಸಿದ ಸಮಯದ ಒಳಗೆ ಗುರಿಮುಟ್ಟಲಾಗಲಿಲ್ಲ’ ಎಂದು ಯಶಸ್‌ ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.