ADVERTISEMENT

ಇಂದಿನಿಂದ ‘ಪ್ರೈಮ್‌’ ವಾಲಿಬಾಲ್ ರೋಮಾಂಚನ

ಏಳು ತಂಡಗಳು; ಮೊದಲ ಪಂದ್ಯದಲ್ಲಿ ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌–ಕೊಚ್ಚಿ ಬ್ಲೂ ಸ್ಪೈಕರ್ಸ್‌ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 19:30 IST
Last Updated 4 ಫೆಬ್ರುವರಿ 2022, 19:30 IST
ಬೆಂಗಳೂರು ಟಾರ್ಪೆಡೊಸ್‌
ಬೆಂಗಳೂರು ಟಾರ್ಪೆಡೊಸ್‌   

ಬೆಂಗಳೂರು: ಪ್ರತಿಭಾವಂತ ಯುವ ಆಟಗಾರರನ್ನು ಹೊಂದಿರುವ ತಂಡಗಳು ಪ್ರೈಮ್ ವಾಲಿಬಾಲ್ ಲೀಗ್‌ನ ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ. ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್‌ನ ಪಂದ್ಯಗಳು ಶನಿವಾರ (ಫೆ. 5) ಆರಂಭವಾಗಲಿವೆ.

ಲೀಗ್‌ನಲ್ಲಿ ಏಳು ತಂಡಗಳಾದ ಅಹಮದಾಬಾದ್‌ ಡಿಫೆಂಡರ್ಸ್‌, ಬೆಂಗಳೂರು ಟಾರ್ಪೆಡೊಸ್‌, ಕ್ಯಾಲಿಕಟ್‌ ಹೀರೋಸ್‌, ಚೆನ್ನೈ ಬ್ಲಿಟ್ಸ್‌, ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌, ಕೊಚ್ಚಿ ಬ್ಲೂ ಸ್ಪೈಕರ್ಸ್‌ ಮತ್ತು ಕೋಲ್ಕತ್ತ ಥಂಡರ್‌ ಬೋಲ್ಟ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯಗಳು ಬಯೊಬಬಲ್‌ನಲ್ಲಿ, ಕೋವಿಡ್‌-19ರ ನಿಯಮಗಳನ್ನು ಪಾಲಿಸಿಕೊಂಡುಫೆಬ್ರವರಿ 27ರ ವರೆಗೆ ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಒಟ್ಟು 24 ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌ ಮತ್ತು ಕೊಚ್ಚಿ ಬ್ಲೂ ಸ್ಪೈಕರ್ಸ್‌ ಸೆಣಸಲಿವೆ. ಎಲ್ಲ ತಂಡಗಳು ಪರಸ್ಪರ ಒಮ್ಮೆ ಮುಖಾಮುಖಿಯಾಗಲಿವೆ. ನಾಕೌಟ್‌ ಹಣಾಹಣಿ ಫೆಬ್ರುವರಿ 24 ಮತ್ತು 25ರಂದು ನಡೆಯಲಿವೆ.

ADVERTISEMENT

ಬೆಂಗಳೂರು ಟಾರ್ಪೆಡೊಸ್‌ ತಂಡವು ಅನುಭವಿ ಆಟಗಾರರಾದ ರಂಜಿತ್‌ ಸಿಂಗ್‌ (ನಾಯಕ ಮತ್ತು ಸೆಟ್ಟರ್)‌ ಹಾಗೂ ಪಂಕಜ್‌ ಶರ್ಮಾ (ಅಟ್ಯಾಕರ್‌) ಅವರನ್ನು ಹೊಂದಿದ್ದು ಅಮೆರಿಕದ ನೋಹ್‌ ಟೈಟಾನೊ ಮತ್ತು ಕೇಯ್ಲ್‌ ಫ್ರೆಂಡ್‌ (ಅಟ್ಯಾಕರ್)‌ ಅವರ ಬೆಂಬಲವಿದೆ. ರೋಹಿತ್‌ ಪಿ, ವರುಣ್‌ ಜಿ.ಎಸ್‌, ಬಿ.ಮಿಥುನ್‌ ಕುಮಾರ್‌, ಸಾರಂಗ್‌ ಶಾಂತಿಲಾಲ್‌, ಲವಮೀತ್‌ ಕಟಾರಿಯಾ, ಸೃಜನ್‌ ಯು ಶೆಟ್ಟಿ, ರಂಜಿತ್‌ ಸಿಂಗ್‌, ವಿನಾಯಕ ರೋಖಡೆ ಮತ್ತು ಗಣೇಶ್‌ ಕೆ ತಂಡಕ್ಕೆ ಬಲ ತುಂಬಿದ್ದಾರೆ.

ಆತಿಥೇಯ ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌ ತಂಡದಲ್ಲಿ ಅಟ್ಯಾಕರ್‌ ಅಮಿತ್‌ ಗುಲಿಯಾ ಪ್ರಮುಖ ಆಕರ್ಷಣೆ. ಅವರಿಗೆ ಸೆಟ್ಟರ್‌ಗಳಾದ ಹರಿಹರನ್‌ ವಿ ಮತ್ತು ವಿಪುಲ್‌ ಕುಮಾರ್‌ ಅವರ ಬೆಂಬಲವಿದೆ. ಅಂತರರಾಷ್ಟ್ರೀಯ ಆಟಗಾರರಾದ ವೆನಿಜುವೆಲಾದ ಆ್ಯಂಟೊನಿಯೊ ಎರಿಯಾಸ್‌ ಗಜ್ಮಾನ್‌ ಮತ್ತು ಕ್ಯೂಬಾದ ಹೆನ್ರಿ ಬೆಲ್‌ (ಅಟ್ಯಾಕರ್)‌ ತಂಡದ ಪ್ರಮುಖ ಶಕ್ತಿ. ರೋಹಿತ್‌ ಕುಮಾರ್‌, ಜಾರ್ಜ್‌ ಆ್ಯಂಟನಿ, ಆನಂದ್‌ ಕೆ, ಸುಧೀರ್‌ ಶೆಟ್ಟಿ, ಜಾನ್‌ ಜೋಸೆಫ್‌ ಇಜೆ, ಜಿಷ್ಣು ಪಿ.ವಿ, ಪ್ರಫುಲ್‌ ಎಸ್‌ ಮತ್ತು ಎಸ್‌ವಿ ಗುರುಪ್ರಶಾಂತ್‌ ಈ ತಂಡದ ಪ್ರಮುಖ ಆಟಗಾರರು.

ಭಾರತ ತಂಡದ ನಾಯಕರಾಗಿದ್ದ ಕರ್ನಾಟಕದ ಕಾರ್ತಿಕ್‌ ಮಧು (ಮಿಡ್ಲ್‌ ಬ್ಲಾಕರ್)‌ ಕೊಚ್ಚಿ ಬ್ಲೂ ಸ್ಪೈಕರ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅವರಿಗೆ ಮಿಡ್ಲ್‌ ಬ್ಲಾಕರ್‌, ಅನುಭವಿ ದೀಪಕ್‌ ಕುಮಾರ್‌ ಸಿನ್ಹಾ ಸಾಥ್‌ ಅವರ ಸಹಕಾರ ಇದೆ. ಅಂತರರಾಷ್ಟ್ರೀಯ ಆಟಗಾರರಾದ ಅಮೆರಿಕದ ಕಾಲ್ಟನ್‌ ಕೊವೆಲ್‌ (ಅಟ್ಯಾಕರ್)‌ ಮತ್ತು ಕೊಡಿ ಕಾಲ್ಡ್‌ವೆಲ್‌ (ಅಟ್ಯಾಕರ್)‌ ತಂಡವನ್ನು ಬಲಿಷ್ಠಗೊಳಿಸಿದ್ದಾರೆ. ರೈಸನ್‌ ಬೆನೆಟ್‌ ರೆಬೆಲ್ಲೊ, ಸೇತು ಟಿ.ಆರ್‌, ಎರಿನ್‌ ವರ್ಗೀಸ್‌, ದರ್ಶನ್‌ ಎಸ್ ಗೌಡ, ಸಿ.ವೇಣು, ಅಭಿನವ್‌ ಬಿ.ಎಸ್‌, ದುಷ್ಯಂತ್‌ ಜಿ.ಎಸ್‌, ಪ್ರಶಾಂತ್‌ ಕುಮಾರ್‌ ಸರೋಹ, ಅಶಾಮ್‌ ಎ ಮತ್ತು ಅಬ್ದುಲ್‌ ರಹೀಮ್‌ ಕೂಡ ತಂಡದಲ್ಲಿದ್ದಾರೆ.

ಅಶ್ವಲ್‌ ರೈ (ನಾಯಕ ಮತ್ತು ಮಿಡ್ಲ್‌ ಬ್ಲಾಕರ್)‌ ಅವರ ನಾಯಕತ್ವದಲ್ಲಿ ಕೋಲ್ಕತ್ತ ಥಂಡರ್‌ ಬೋಲ್ಟ್ಸ್ ಕಣಕ್ಕಿಳಿಯಲಿದೆ. ವಿನೀತ್‌ ಕುಮಾರ್‌, ಅಮೆರಿಕದ ಮ್ಯಾಥ್ಯೂ ಆಗಸ್ಟ್‌ (ಬ್ಲಾಕರ್)‌ ಮತ್ತು ಇಯಾನ್‌ ಸೆಟರ್‌ಫೀಲ್ಡ್‌ (ಯುನಿವರ್ಸಲ್‌) ತಂಡಕ್ಕೆ ಆಧಾರವಾಗಲಿದ್ದಾರೆ. ಅನು ಜೇಮ್ಸ್‌, ತರುಣ್‌ ಗೌಡ ಕೆ, ಮೊಹಮ್ಮದ್ ರಿಯಾಜುದ್ದೀನ್‌, ರಾಹುಲ್‌ ಕೆ, ಹರಿಪ್ರಸಾದ್‌ ಬಿ.ಎಸ್‌, ಮೊಹಮ್ಮದ್‌ ಶಫೀಕ್‌, ಅರವಿಂದನ್‌ ಎಸ್‌ ಮತ್ತು ಜನ್ಶದ್‌ ಯು ತಂಡದ ಪ್ರಮುಖ ಆಟಗಾರರು.

ಅಹಮದಾಬಾದ್‌ ಡಿಫೆಂಡರ್ಸ್‌ ತಂಡವು ಅತ್ಯುತ್ತಮ ಸೆಟ್ಟರ್‌ ಮುತ್ತುಸ್ವಾಮಿ ಅವರಿಗೆ ಹೊಂದಿದ್ದು ಅವರಿಗೆ ಮಿಡ್ಲ್‌ ಬ್ಲಾಕರ್‌ ಮನೋಜ್‌ ಎಂ, ಅಮೆರಿಕದ ರೆಯಾನ್‌ ಮೀಹಾನ್‌ (ಬ್ಲಾಕರ್), ಅರ್ಜೆಂಟೀನಾದ ರಾಡ್ರಿಗೊ ವಿಲ್ಲಾಲ್‌ಬೊವ್‌ (ಅಟ್ಯಾಕರ್)‌ ಅವರ ಬಲವಿದೆ. ಹರ್ದೀಪ್‌ ಸಿಂಗ್‌, ಶಾನ್‌ ಟಿ ಜಾನ್‌, ಎಸ್.‌ ಸಂತೋಶ್‌, ಪ್ರಭಾಕರನ್‌ ಪಿ, ಸಂಜು ಪ್ರಕಾಶ್‌ ಮೇಯಾಲ್‌, ಪ್ರಸನ್ನ ರಾಜಾ ಎ.ಎ., ಚೌಧರಿ ಹರ್ಷ ಮತ್ತು ಅಂಗಮುತ್ತು ಕೂಡ ತಂಡದಲ್ಲಿದ್ದಾರೆ.

ಆರಂಭ: ರಾತ್ರಿ 7.00

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.