ಆಮ್‌ಸ್ಟೆಲ್ವೀನ್, ನೆದರ್ಲೆಂಡ್ಸ್ (ಪಿಟಿಐ): ಭಾರತ ಪುರುಷರ ಹಾಕಿ ತಂಡವು ಎಫ್‌ಐಎಚ್ ಪ್ರೊ ಲೀಗ್‌ನ ಯುರೋಪಿಯನ್ ಲೆಗ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ನೆದರ್ಲೆಂಡ್ಸ್ ವಿರುದ್ಧ ಸತತ ಎರಡನೇ ಸೋಲು ಅನುಭವಿಸಿತು.
ಹರ್ಮನ್‌ಪ್ರೀತ್ ಸಿಂಗ್ ಬಳಗವು ಸೋಮವಾರ ನಡೆದ ರೋಚಕ ಪಂದ್ಯದಲ್ಲಿ 2–3 ಗೋಲುಗಳಿಂದ ಆತಿಥೇಯ ತಂಡಕ್ಕೆ ಮಣಿಯಿತು. ಭಾರತ ಗಳಿಸಿದ್ದ ಒಟ್ಟು ಒಂಬತ್ತು ಪೆನಾಲ್ಟಿ ಕಾರ್ನರ್‌ಗಳಲ್ಲಿ ಎಂಟನ್ನು ಕೈಚೆಲ್ಲಿದ್ದು ದುಬಾರಿಯಾಯಿತು. ಇದೇ ತಂಡದ ವಿರುದ್ಧ ಶನಿವಾರ ಭಾರತ 1–2 ಗೋಲುಗಳಿಂದ ಮುಗ್ಗರಿಸಿತ್ತು.
ಭಾರತ ಪರ 100ನೇ ಪಂದ್ಯ ಆಡಿದ ಅಭಿಷೇಕ್ 20ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಜುಗ್ರಾಜ್ ಸಿಂಗ್ 54ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.
ನೆದರ್ಲೆಂಡ್ಸ್ ಪರ ವ್ಯಾನ್ ಡ್ಯಾಮ್ ಥಿಜ್ಸ್ (24ನೇ), ಟಿಜೆಪ್ ಹೋಡೆಮೇಕರ್ಸ್ (33ನೇ) ಮತ್ತು ಜಿಪ್ ಯಾನ್ಸೆನ್ (57ನೇ) ಗೋಲು ದಾಖಲಿಸಿ ಗೆಲುವಿನ ರೂವಾರಿಗಳಾದರು.
ಭಾರತ ತಂಡವು ಆರನೇ ನಿಮಿಷದಲ್ಲೇ ಗೋಲು ಅವಕಾಶ ಪಡೆದಿತ್ತು. ಆದರೆ, ಅಭಿಷೇಕ್ ಹೊಡೆತ ಗುರಿ ತಪ್ಪಿತು. 18ನೇ ನಿಮಿಷದಲ್ಲಿ ಭಾರತ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಗಳಿಸಿತು. ಈ ಅವಕಾಶವನ್ನು ಹರ್ಮನ್‌ಪ್ರೀತ್ ಕೈಚೆಲ್ಲಿದರು. ಅದಾದ ಎರಡು ನಿಮಿಷದಲ್ಲಿ ಶಿಲಾನಂದ್ ಲಾಕ್ರ ಕೊಟ್ಟ ಪಾಸ್‌ನ ನೆರವಿನಿಂದ ಅಭಿಷೇಕ್ ಚೆಂಡನ್ನು ಗುರಿ ಸೇರಿಸಿ ಭಾರತಕ್ಕೆ ಆರಂಭಿಕ ಮೇಲುಗೈ ಒದಗಿಸಿದರು.
ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ನಾಲ್ಕು ನಿಮಿಷಗಳ ನಂತರದಲ್ಲಿ ಥಿಯೆರ್ರಿ ಬ್ರಿಂಕ್‌ಮನ್ ಅವರ ಪಾಸ್‌ನಿಂದ ಬಂದ ಚೆಂಡು ಭಾರತದ ಆಟಗಾರರೊಬ್ಬರ ಸ್ಟಿಕ್‌ಗೆ ಬಡಿದು ಗೋಲು ಪೆಟ್ಟಿಗೆಯ ಮುಂದೆ ಸಾಗಿದಾಗ ವ್ಯಾನ್ ಅವರು ಸರಿಯಾದ ಸ್ಥಳಕ್ಕೆ ಸೇರಿಸಿದರು. ಹೀಗಾಗಿ, ಮಧ್ಯಂತರದ ವೇಳೆಗೆ ಸ್ಕೋರ್ 1–1 ಸಮಬಲಗೊಂಡಿತು.
ಮೂರನೇ ಕ್ವಾರ್ಟರ್‌ನ ಮೂರನೇ ನಿಮಿಷದಲ್ಲಿ ಟಿಜೆಪ್ ಗೋಲು ಗಳಿಸಿ, ಡಚ್ ತಂಡಕ್ಕೆ ಮುನ್ನಡೆ ಒದಗಿಸಿದರು. ಡೆರ್ಕ್ ಡಿ ವಿಲ್ಡರ್ ಅವರ ಪಾಸ್ ಅನ್ನು ಅಚ್ಚುಕಟ್ಟಾಗಿ ಗುರಿಯತ್ತ ತಿರುಗಿಸಿದರು. ಅದಾದ ಕೆಲವು ನಿಮಿಷಗಳ ನಂತರ ಆತಿಥೇಯ ತಂಡಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ, ಭಾರತ ಅದನ್ನು ಸಮರ್ಥವಾಗಿ ತಡೆಯಿತು.
ನಂತರದಲ್ಲಿ ಭಾರತ ತಂಡವು ಸತತ ಆರು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತು. ಹರ್ಮನ್‌ಪ್ರೀತ್ ಮತ್ತು ಜುಗ್ರಾಜ್ ಸಿಂಗ್ ಅವುಗಳಲ್ಲಿ ಯಾವುದನ್ನೂ ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು.
54ನೇ ನಿಮಿಷದಲ್ಲಿ ಭಾರತಕ್ಕೆ ಇನ್ನೆರಡು ಪೆನಾಲ್ಟಿ ಕಾರ್ನರ್‌ಗಳು ದೊರೆತವು. ಅದರಲ್ಲಿ ಎರಡನೆಯದನ್ನು ಜುಗ್ರಾಜ್ ಗೋಲಾಗಿ ಪರಿವರ್ತಿಸಿದ್ದರಿಂದ ಮತ್ತೆ ಸ್ಕೋರ್ ಸಮಬಲಗೊಂಡಿತು. ಆದರೆ, ಪಂದ್ಯ ಮುಕ್ತಾಯಕ್ಕೆ ಮೂರು ನಿಮಿಷ ಇರುವಂತೆ ಡಚ್ ಆಟಗಾರ ಯಾನ್ಸೆನ್, ಪೆನಾಲ್ಟಿ ಕಾರ್ನರ್‌ನಲ್ಲಿ ಕೈಚೆಳಕ ತೋರಿ, ಗೆಲುವಿನ ರೂವಾರಿಯಾದರು.
ಭಾರತ ತಂಡವು ಬುಧವಾರ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಹರ್ಮನ್‌ಪ್ರೀತ್ ಬಳಗ 10 ಪಂದ್ಯಗಳಲ್ಲಿ 15 ಅಂಕ ಗಳಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್ ಅಷ್ಟೇ ಪಂದ್ಯಗಳಿಂದ 20 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.