
ಬೆಂಗಳೂರು: ಪ್ರಕೃತಿ ಸೊಬಗಿನ ಚಿಕ್ಕಮಗಳೂರು ಸುತ್ತುಮುತ್ತಲ ಕಾಫಿ ತೋಟಗಳಲ್ಲಿ ನಡೆಯುವ 9ನೇ ವರ್ಷದ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಇದೇ ತಿಂಗಳ 22ರಂದು ನಡೆಯಲಿದೆ. ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರಿನಿಂದ ಈ ಸ್ಪರ್ಧೆ ಆರಂಭವಾಗಲಿದ್ದು 1200ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ.
ಚಿಕ್ಕಮಗಳೂರು ಗಾಲ್ಫ್ ಕ್ಲಬ್ (ಸಿಜಿಸಿ) ಪ್ರಾಯೋಜಿಸುತ್ತಿರುವ ಈ ಮ್ಯಾರಥಾನ್ 30 ಕಿ.ಮೀ., 50 ಕಿ.ಮೀ. ಮತ್ತು 100 ಕೀ.ಮೀ. (ಹಗಲು- ರಾತ್ರಿ ಅವಧಿ) ವಿಭಾಗದಲ್ಲಿ ನಡೆಯಲಿದೆ. ಸ್ಪರ್ಧೆಗಳು ಮಲ್ಲಂದೂರು ದೇವಸ್ಥಾನ ಮೈದಾನದಿಂದ ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದ್ದು, ಅಲ್ಲಿಯೇ ಕೊನೆಗೊಳ್ಳಲಿದೆ.
ಈ ಮ್ಯಾರಥಾನ್ ವಿಭಿನ್ನ ರೀತಿಯದಾಗಿದ್ದು, ಮಧ್ಯ ನಿರ್ದಿಷ್ಟ ತಾಣದಲ್ಲಿ ಇಂತಿಷ್ಟೇ ಅವಧಿಯಲ್ಲಿ ಗುರಿತಲುಪಬೇಕಾಗುತ್ತದೆ. ಖಾಸಗಿ ತೋಟಗಳಲ್ಲಿ ಜೀಪುಗಳು ಸಂಚರಿಸುವಂಥ ಹಾದಿಯಲ್ಲಿ ಓಟಗಾರರು ಓಡಬೇಕಾಗುತ್ತದೆ. ಐಟಿಆರ್‌ಎ (ಇಂಟರ್‌ನ್ಯಾಷನಲ್ ಟ್ರೇಲ್ ರನ್ನಿಂಗ್ ಅಸೋಸಿಯೇಷನ್) ಮಾನ್ಯತೆಯನ್ನು ಈ ಮ್ಯಾರಥಾನ್ ಪಡೆದಿದೆ.
‘ಪಶ್ಚಿಮ ಘಟ್ಟ ಉಳಿಸಲು ಓಟ’ ಈ ಬಾರಿಯ ಧ್ಯೇಯವಾಕ್ಯವಾಗಿದೆ. ಜಿಲ್ಲೆ ಆರು ನದಿಗಳ (ತುಂಗಾ, ಭದ್ರಾ, ನೇತ್ರಾವತಿ, ಹೇಮಾವತಿ, ಯಗದಿ ಮತ್ತು ವೇದಾವತಿ) ಉಗಮ ಸ್ಥಾನವಾಗಿದ್ದು, ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮ್ಯಾರಥಾನ್‌ಗೆ ಕೈಜೋಡಿಸಿದ್ದೇವೆ’ ಎಂದು ಸಿಜಿಸಿ ಸ್ಥಾಪಕರಾದ ಎ.ಬಿ.ಸುದರ್ಶನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.