ADVERTISEMENT

ದೇಹತೂಕ 600 ಗ್ರಾಮ್ ಹೆಚ್ಚಳ: ಕುಸ್ತಿಪಟು ನೇಹಾ ಅಮಾನತು

ಪಿಟಿಐ
Published 25 ಆಗಸ್ಟ್ 2025, 15:22 IST
Last Updated 25 ಆಗಸ್ಟ್ 2025, 15:22 IST
ನೇಹಾ ಸಂಗ್ವಾನ್   –ಯುಡಬ್ಲ್ಯುಡಬ್ಲ್ಯು ಚಿತ್ರ
ನೇಹಾ ಸಂಗ್ವಾನ್   –ಯುಡಬ್ಲ್ಯುಡಬ್ಲ್ಯು ಚಿತ್ರ   

ನವದೆಹಲಿ: ಭಾರತದ ನೇಹಾ ಸಂಗ್ವಾನ್ ಅವರನ್ನು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ರಾಷ್ಟ್ರೀಯ ಸೀನಿಯರ್ ತಂಡದಿಂದ ಅಮಾನತುಗೊಳಿಸಲಾಗಿದೆ.

ಅವರು ದೇಹತೂಕ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಈಚೆಗೆ ನಡೆದ 20 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಿಂದ ಅನರ್ಹಗೊಳಿಸಲಾಗಿತ್ತು. ಅದೇ ಕಾರಣಕ್ಕಾಗಿ ಈಗ ವಿಶ್ವ ಕುಸ್ತಿಗೆ ತೆರಳುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ.

ಹರಿಯಾಣದ ಚಾರ್ಕಿ ದಾದ್ರಿಯ ನೇಹಾ ಅವರು ಹೋದವಾರ 20 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ 59 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು. ಈ ವಿಭಾಗದಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಯೂ ಅವರಾಗಿದ್ದರು. ಆದರೆ ಅವರ ದೇಹ ತೂಕವು ನಿಯಮಕ್ಕಿಂತ 600 ಗ್ರಾಮ್ ಹೆಚ್ಚಾಗಿದ್ದ ಕಾರಣ ಅನರ್ಹಗೊಳಿಸಲಾಯಿತು. 

ADVERTISEMENT

ಆ ಸ್ಪರ್ಧೆಯಲ್ಲಿ ಭಾರತದ ಮಹಿಳಾ ತಂಡವು (140 ಅಂಕ) ಏಳು ಪದಕಗಳನ್ನು ಗೆದ್ದು ರನ್ನರ್ಸ್ ಅಪ್ ಆಗಿತ್ತು. ಜಪಾನ್ (165 ಅಂಕ) ಮೊದಲ ಸ್ಥಾನ ಗಳಿಸಿತ್ತು.  ನೇಹಾ ಅವರು ಅನರ್ಹಗೊಳ್ಳದಿದ್ದರೆ ಹಾಗೂ ಒಂದೊಮ್ಮೆ ಚಿನ್ನದ ಪದಕ ಜಯಿಸಿದ್ದರೆ ಭಾರತವು ಚಾಂಪಿಯನ್ ಆಗುವ ಸಾಧ್ಯತೆ ಇತ್ತು. 

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್ ಸೆಪ್ಟೆಂಬರ್‌ 13 ರಿಂದ 21ರವರೆಗೆ ಕ್ರೊವೇಷ್ಯಾದಲ್ಲಿ ನಡೆಯಲಿದೆ. 

‘ತೂಕ ನಿರ್ವಹಣೆಯು ಆಯಾ ಕುಸ್ತಿಪಟುಗಳದ್ದೇ ಹೊಣೆ. ತಮ್ಮ ದೇಹತೂಕದ ಕುರಿತು ಕುಸ್ತಿಪಟುಗಳೇ ಎಚ್ಚರವಹಿಸಬೇಕು.  ಬಲ್ಗೇರಿಯಾದಲ್ಲಿ ಒಂದು ವಿಭಾಗದಲ್ಲಿ ಪದಕ ನಮ್ಮ ಕೈತಪ್ಪಿತು. ಸರ್ಕಾರದ ಅನುದಾನವನ್ನು ಕುಸ್ತಿಪಟುಗಳ ತರಬೇತಿ ಮತ್ತು ನಿರ್ವಹಣೆಗೆ ವಿನಿಯೋಗಿಸಲಾಗುತ್ತದೆ. ಆದ್ದರಿಂದ ನಮಗೂ ಉತ್ತರದಾಯಿತ್ವ ಇರುತ್ತದೆ. ತಲಾ ಒಬ್ಬ ಕುಸ್ತಿಪಟುವಿಗೆ ₹ 2 ರಿಂದ 3 ಲಕ್ಷ ವೆಚ್ಚ ಮಾಡಲಾಗುತ್ತದೆ.  ಇಷ್ಟಾದರೂ ತೂಕ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಹೇಗೆ?  ಆದ್ದರಿಂದ ಇನ್ನೊಬ್ಬ ಉತ್ತಮ ಕುಸ್ತಿಪಟುವಿಗೆ ಅವಕಾಶ ನೀಡುತ್ತೇವೆ’ ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.