
ಪಿಟಿಐ
ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ)
ನವದೆಹಲಿ: ಝಾಗ್ರೆಬ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ತೂಕವನ್ನು ಕಾಪಾಡಿಕೊಳ್ಳಲು ವಿಫಲರಾಗಿದ್ದ ಅಮನ್ ಸೆಹ್ರಾವತ್ ಅವರ ಮೇಲೆ ವಿಧಿಸಿದ್ದ ಅಮಾನತು ಕ್ರಮವನ್ನು ಭಾರತ ಕುಸ್ತಿ ಫೆಡರೇಷನ್ ಶುಕ್ರವಾರ ಹಿಂಪಡೆದಿದೆ.
ಸೆಪ್ಟೆಂಬರ್‌ನಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನ 57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್ ಅವರು ಸ್ಪರ್ಧೆಯ ದಿನ 1.7 ಕೆ.ಜಿ. ಹೆಚ್ಚು ತೂಗಿದ್ದರು. ಇದರಿಂದ ತಂಡ ಮುಜುಗರ ಅನುಭವಿಸಬೇಕಾಯಿತು. ಹೀಗಾಗಿ, ಸೆ. 23 ರಿಂದ ಆರಂಭವಾಗುವಂತೆ ಒಂದು ವರ್ಷದ ಅಮಾನತು ವಿಧಿಸಲಾಗಿತ್ತು.
20 ವರ್ಷದೊಳಗಿನವರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ 600 ಗ್ರಾಂ ತೂಕ ಹೆಚ್ಚು ಇದ್ದ ಕಾರಣ ಅನರ್ಹಗೊಂಡಿದ್ದ ಮಹಿಳಾ ಕುಸ್ತಿಪಟು ನೇಹಾ ಸಂಗ್ವಾನ್ ಅವರ ಮೇಲಿನ ಅಮಾನತನ್ನೂ ಡಬ್ಲ್ಯುಎಫ್‌ಐ ಹಿಂಪಡೆದಿದೆ. ಹೀಗಾಗಿ ಈ ಇಬ್ಬರೂ ಕುಸ್ತಿಪಟುಗಳು ಮುಂಬರುವ ಪ್ರೊ ಕುಸ್ತಿ ಲೀಗ್‌ನ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಂತಾಗಿದೆ.