ಇಟಲಿಯ ಯಾನಿಕ್ ಸಿನ್ನರ್ ಆಟದ ಸೊಬಗು –
ಲಂಡನ್: ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. ರಷ್ಯಾದ ಹದಿಹರೆಯದ ತಾರೆ ಮಿರಾ ಆ್ಯಂಡ್ರೀವಾ ಅವರೂ ಪ್ರಯಾಸವಿಲ್ಲದೆ ಪ್ರಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.
ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೂರನೇ ಸುತ್ತಿನ ರೋಚಕ ಹಣಾಹಣಿಯಲ್ಲಿ ಬೆಲರೂಸ್‌ನ ಸಬಲೆಂಕಾ 7-6(6), 6-4ರಿಂದ ಬ್ರಿಟನ್‌ನ ಎಮ್ಮಾ ರಾಡುಕಾನು ಅವರನ್ನು ಸೋಲಿಸಿ ಅಂತಿಮ 16ರ ಘಟ್ಟ ತಲುಪಿದರು.
ಮೂರು ಗ್ರ್ಯಾನ್‌ಸ್ಲಾಮ್ ಕಿರೀಟಗಳಿಗೆ ಒಡತಿಯಾಗಿರುವ 27 ವರ್ಷ ವಯಸ್ಸಿನ ಸಬಲೆಂಕಾ ಅವರಿಗೆ ಮೊದಲ ಸೆಟ್‌ನಲ್ಲಿ 2021ರ ಅಮೆರಿಕ ಓಪನ್ ಚಾಂಪಿಯನ್ ರಾಡುಕಾನು ಅವರಿಂದ ಪ್ರಬಲ ಪೈಪೋಟಿ ಎದುರಾಯಿತು. 74 ನಿಮಿಷ ಹೋರಾಟ ಕಂಡ ಆರಂಭಿಕ ಸೆಟ್ ಅನ್ನು ಬೆಲರೂಸ್‌ನ ಆಟಗಾರ್ತಿ ಟೈಬ್ರೇಕರ್‌ನಲ್ಲಿ ಗೆದ್ದರು. ಎರಡನೇ ಸೆಟ್ ಅನ್ನು ಕೇವಲ 30 ನಿಮಿಷದಲ್ಲಿ ವಶಮಾಡಿಕೊಂಡ ಸಬಲೆಂಕಾ, ಇಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸುವತ್ತ ಹೆಜ್ಜೆಯಿಟ್ಟರು.
ಕೊನೆಯ ಮೂರು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಫೈನಲ್ ತಲುಪಿರುವ ಸಬಲೆಂಕಾ ಇಲ್ಲಿ ಪ್ರಶಸ್ತಿ ಗೆಲ್ಲುವ ಫೆವರೀಟ್ ಎನಿಸಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡರಿಂದ ಆರನೇ ಶ್ರೇಯಾಂಕದ ಆಟಗಾರ್ತಿಯರು ಈಗಾಗಲೇ ಹೊರಬಿದ್ದಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ 2021 ಮತ್ತು 2023ರ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಈವರೆಗಿನ ಅವರ ಉತ್ತಮ ಸಾಧನೆಯಾಗಿದೆ.
ಆ್ಯಂಡ್ರೀವಾ ಮುನ್ನಡೆ: ಏಳನೇ ಶ್ರೇಯಾಂಕದ ಆ್ಯಂಡ್ರೀವಾ 6-1, 6-3ರಿಂದ ಅಮೆರಿಕದ ಹೇಲಿ ಬ್ಯಾಪ್ಟಿಸ್ಟ್ ಅವರನ್ನು ಮಣಿಸಿ ಎರಡನೇ ಬಾರಿ ಇಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದರು. 55ನೇ ಕ್ರಮಾಂಕದ ಬ್ಯಾಪ್ಟಿಸ್ಟ್ ಹೆಚ್ಚಿನ ಪ್ರತಿರೋಧ ತೋರದೆ ಹೊರ ನಡೆದರು.
ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ 18 ವರ್ಷ ವಯಸ್ಸಿನ ಆ್ಯಂಡ್ರೀವಾ, ಇಲ್ಲಿ ಸಬಲೆಂಕಾ ಬಳಿಕ ಸ್ಪರ್ಧೆಯಲ್ಲಿ ಉಳಿದಿರುವ ಉನ್ನತ ಶ್ರೇಯಾಂಕದ ಆಟಗಾರ್ತಿಯಾಗಿದ್ದಾರೆ. ಅವರು ಮುಂದಿನ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಬಾರ್ಬೊರಾ ಕ್ರೆಜ್ಸಿಕೋವಾ ಅಥವಾ ಹತ್ತನೇ ಶ್ರೇಯಾಂಕದ ಎಮ್ಮಾ ನವರೊ ಅವರನ್ನು ಎದುರಿಸಲಿದ್ದಾರೆ.
ಸಿನ್ನರ್ ಮುನ್ನಡೆ: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಒಂದೇ ಒಂದು ಸೆಟ್ ಕಳೆದುಕೊಳ್ಳದೆ ಅಂತಿಮ 16ರ ಘಟ್ಟಕ್ಕೆ ಲಗ್ಗೆ ಹಾಕಿದರು. ಇಟಲಿಯ ಸಿನ್ನರ್ 6-1, 6-3, 6-1ರಿಂದ ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್ ಅವರನ್ನು ಮಣಿಸಿದರು.
ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ಸಿನ್ನರ್, ಭುಜದ ನೋವಿನಿಂದ ಬಳಲುತ್ತಿದ್ದ 52ನೇ ಕ್ರಮಾಂಕದ ಎದುರಾಳಿಯನ್ನು ಎರಡು ಗಂಟೆಗಳ ಅವಧಿಯಲ್ಲಿ ಹಿಮ್ಮೆಟ್ಟಿಸಿದರು. ನಾಲ್ಕನೇ ಸುತ್ತಿನಲ್ಲಿ ಅವರು 19ನೇ ಶ್ರೇಯಾಂಕದ ಗ್ರಿಗರ್ ಡಿಮಿಟ್ರೋವ್ (ಬಲ್ಗೇರಿಯಾ) ಅಥವಾ ಸೆಬಾಸ್ಟಿಯನ್ ಆಫ್ನರ್ (ಆಸ್ಟ್ರಿಯಾ) ಅವರನ್ನು ಎದುರಿಸಲಿದ್ದಾರೆ.
ಡೋಪಿಂಗ್ ನಿಷೇಧ ಮುಗಿಸಿ ಮೇ ತಿಂಗಳಲ್ಲಿ ವಾಪಸಾದ 23 ವರ್ಷ ವಯಸ್ಸಿನ ಸಿನ್ನರ್, ಇಟಾಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ವಿರುದ್ಧ ಸೋತಿದ್ದರು.
ಅಲ್ಕರಾಜ್ ಓಟ: ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿಯ ಛಲದಲ್ಲಿರುವ ಎರಡನೇ ಶ್ರೇಯಾಂಕದ ಅಲ್ಕರಾಜ್ 6-1, 3-6, 6-3, 6-4ರಿಂದ ಜರ್ಮನಿಯ ಜಾನ್-ಲೆನ್ನಾರ್ಡ್ ಸ್ಟ್ರಫ್ ವಿರುದ್ಧ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
22 ವರ್ಷ ವಯಸ್ಸಿನ ಅಲ್ಕರಾಜ್ ಇಲ್ಲಿ 2022ರಲ್ಲಿ ನಾಲ್ಕನೇ ಸುತ್ತಿನಲ್ಲಿ ಸಿನ್ನರ್ ವಿರುದ್ಧ ಕೊನೆಯ ಬಾರಿ ಸೋತಿದ್ದರು. ಕಳೆದ ಎರಡು ವಿಂಬಲ್ಡನ್ ಫೈನಲ್‌ಗಳಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು.
ಬಾಲಾಜಿ– ವರೆಲಾ ಜೋಡಿಗೆ ಸೋಲು: ಭಾರತದ ಶ್ರೀರಾಮ್ ಬಾಲಾಜಿ ಮತ್ತು ಮಿಗುಯೆಲ್ ಏಂಜೆಲ್ ರೆಯೆಸ್– ವರೆಲಾ (ಮೆಕ್ಸಿಕೊ) ಜೋಡಿಯು ವಿಂಬಲ್ಡನ್ ಪುರುಷರ ಡಬಲ್ಸ್‌ನ ಎರಡನೇ ಸುತ್ತಿನಲ್ಲಿ ಹೊರಬಿದ್ದಿತು.
ಶನಿವಾರ ನಡೆದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಬಾಲಾಜಿ– ವರೆಲಾ ಜೋಡಿಯು 4–6, 4–6ರಿಂದ ನಾಲ್ಕನೇ ಶ್ರೇಯಾಂಕದ ಸ್ಪೇನ್‌ನ ಮಾರ್ಸೆಲ್ ಗ್ರಾನೋಲ್ಲರ್ಸ್ ಹಾಗೂ ಅರ್ಜೆಂಟೀನಾದ ಹೊರಾಸಿಯೊ ಜೆಬಲ್ಲೋಸ್ ಅವರಿಗೆ ಮಣಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.