ADVERTISEMENT

ನಾಳೆ ಚಳಿಗಾಲದ ರೇಸ್‌ಗಳು ಮರು ಆರಂಭ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:38 IST
Last Updated 20 ನವೆಂಬರ್ 2019, 19:38 IST

ಬೆಂಗಳೂರು: ಇಲ್ಲಿಯ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಶುಕ್ರವಾರದಿಂದ ಚಳಿಗಾಲದ ರೇಸ್‌ಗಳು ಪುನರಾರಂಭವಾಗಲಿವೆ.

ಹೋದ ವಾರ ರೇಸ್‌ನ ಮೊದಲ ಸ್ಪರ್ಧೆಯಲ್ಲಿ ಕುದುರೆಯೊಂದು ಜಾರಿ ಬಿದ್ದು ಕಾಲು ಮುರಿದುಕೊಂಡಿತು. ಅದರ ಹಿಂದೆ ಇದ್ದ ಎರಡೂ ಕುದು ರೆಗಳೂ ಆಯ ತಪ್ಪಿದ್ದವು. ಫೆವರಿಟ್ ಅಲ್ಲದ ಕುದುರೆಗಳು ಗಮ್ಯ ತಲುಪಿ ವಿಜಯಿಯಾಗಿದ್ದವು. ರೇಸ್ ರದ್ದು ಮಾಡದ ಬಿಟಿಸಿಯ ವಿರುದ್ಧ ಆಕ್ರೋಶ ಗೊಂಡ ಪಂಟರ್‌ಗಳು ಉಗ್ರ ಪ್ರತಿಭಟನೆ ಮಾಡಿದ್ದರು. ಇದರಿಂದಾಗಿ ಹೋದ ಶುಕ್ರವಾರ ಮತ್ತು ಶನಿವಾರದ ರೇಸ್‌ ಗಳನ್ನು ರದ್ದುಪಡಿಸಲಾಗಿತ್ತು. ಟ್ರ್ಯಾಕ್‌ ಗುಣಮಟ್ಟ ಸರಿಯಿಲ್ಲ ಎಂದು ಜಾಕಿಗಳು ದೂರಿದ್ದರು.

ಬುಧವಾರ ಎರಡು ಬಾರಿ ಪ್ರಾಯೋಗಿಕ ರೇಸ್‌ಗಳನ್ನು ಸಂಘಟಿ ಸಲಾಗಿತ್ತು. ನಂತರ ಚಳಿಗಾಲದ ರೇಸ್‌ ಗಳನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಯಿತು.

ADVERTISEMENT

‘ಹೋದ ವಾರ ಆಗಿದ್ದು ಅಪಘಾತ. ತಾಂತ್ರಿಕ ಲೋಪಗಳು ಅದರಲ್ಲಿ ಇರಲಿಲ್ಲ. ಟ್ರ್ಯಾಕ್‌ನಲ್ಲಿ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದೇವೆ. ಪ್ರಾಯೋಗಿಕ ರೇಸ್‌ ನಲ್ಲಿ ಭಾಗವಹಿಸಿದ್ದ ಜಾಕಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಇದೇ ಶುಕ್ರವಾರ ಮತ್ತು ಶನಿವಾರ ರೇಸ್‌ಗಳು ಸಾಂಗವಾಗಿ ನಡೆಯುವ ಭರವಸೆ ಇದೆ’ ಎಂದು ಬಿಟಿಸಿ ಅಧ್ಯಕ್ಷ ವಿನೋದ್ ಶಿವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಕಿ ಸೂರಜ್ ಅಮಾನತು: ಹೋದವಾರದ ಪ್ರಕರಣಕ್ಕೆ ಸಂಬಂಧಿಸಿ ಅನುಭವಿ ಜಾಕಿ ಸೂರಜ್ ನರೇಡು ಅವರನ್ನು ಬಿಟಿಸಿಯು ಅಮಾನತು ಮಾಡಿದೆ. ಅಂದು ಮೊದಲ ರೇಸ್‌ನಲ್ಲಿ ಮುಗ್ಗರಿಸಿ ಬಿದ್ದ ವಿಲ್ ಟು ವಿನ್ ಕುದುರೆಯ ಸವಾರಿಯನ್ನು ಸೂರಜ್ ಮಾಡಿದ್ದರು. ನೆಲಕ್ಕೊರಗಿದ ಅವರ ಬೆನ್ನಿಗೂ ಗಾಯವಾಗಿತ್ತು. ಇಂಡಿಯನ್ ರೇಸ್‌ಗಳಲ್ಲಿ 2000 ವಿಜಯಗಳನ್ನು ಪೂರೈಸಲು ಸೂರಜ್ ಅವರಿಗೆ ಇನ್ನೂ ಎಂಟು ರೇಸ್‌ಗಳ ಜಯ ಅಗತ್ಯವಿತ್ತು.

ಆದರೆ ಈ ಅವಘಡದಿಂದ ಹತಾಶರಾಗಿದ್ದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಿಟಿಸಿ ವ್ಯವಸ್ಥೆ
ಯನ್ನು ಟೀಕಿಸಿದ್ದರು. ಇದನ್ನು ಖಂಡಿಸಿದ ಕ್ಲಬ್ ಅವರನ್ನು ಅಮಾನತು ಮಾಡಿದೆ. ಸೂರಜ್ ಕೂಡ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದು, ಬಿಟಿಸಿಯ
ಕ್ಷಮೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.