ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಬ್ರಿಸ್ಟೇನ್: ಬ್ಯಾಟಿಂಗ್ ಅಸ್ಥಿರತೆಗೆ ಪರಿಹಾರ ಕಂಡುಕೊಂಡು ಮುಂದಿನ ವಿಶ್ವಕಪ್ ಕ್ರಿಕೆಟ್ ವೇಳೆಗೆ ಕ್ರಮಾಂಕ ಸಂಯೋಜನೆ ಅಂತಿಮಗೊಳಿಸುವ ಗುರಿಯೊಡನೆ ಭಾರತ ತಂಡ, ಗುರುವಾರ ಆಸ್ಟ್ರೇಲಿಯಾ ವಿರುದ್ಧ ಮಹಿಳೆಯರ ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ.
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 2–1 ಗೆಲುವು ಪಡೆದ ನಂತರ ಭಾರತ ತಂಡ ಈಗ ಆಸ್ಟ್ರೇಲಿಯಾಕ್ಕೆ ಬಂದಿಳಿದಿದೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ತಂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ ಎಂಬುದು ಕಳೆದ ಕೆಲವು ಪಂದ್ಯಗಳಲ್ಲಿ ವ್ಯಕ್ತವಾಗಿದೆ. ಲಯಕ್ಕೆ ಪರದಾಡುತ್ತಿರುವ ಅನುಭವಿ ಆರಂಭ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ತಂಡದಿಂದ ಕೈಬಿಟ್ಟಿದೆ.
ಇತಿಹಾಸ ಗಮನಿಸಿದರೆ 50 ಓವರುಗಳ ಪಂದ್ಯದಲ್ಲಿ ಆಸ್ಟ್ರೇಲಿಯಾ, ಭಾರತದ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದೆ ಹೀಗಾಗಿ, ಆ ತಂಡದ ವಿರುದ್ಧ ಗೆಲುವು ಸುಲಭವಲ್ಲ ಎಂಬುದು ಹರ್ಮನ್‌ಪ್ರೀತ್ ಕೌರ್ ಬಳಗಕ್ಕೆ ಗೊತ್ತಿಲ್ಲದ ವಿಷಯವೇನಲ್ಲ. ಆಸ್ಟ್ರೇಲಿಯಾ ನೆಲದಲ್ಲಂತೂ ಭಾರತದ ಪ್ರದರ್ಶನ ಕಳಪೆಯಾಗಿದೆ.
ಕಾಂಗರೂ ನಾಡಿನಲ್ಲಿ ಆಡಿರುವ 16 ಏಕದಿನ ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಷ್ಟೇ ಭಾರತ ಜಯಗಳಿಸಿದೆ. 2021ರಲ್ಲಿ ಆಸ್ಟ್ರೇಲಿಯಾ, ಪ್ರವಾಸಿ ತಂಡದ ವಿರುದ್ಧ 2–1 ರಿಂದ ಜಯಗಳಿಸಿತ್ತು.
ಸದವಕಾಶ: ಮುಂದಿನ ವರ್ಷ ತವರಿನಲ್ಲಿ ನಡೆಯುವ ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಈ ಪ್ರವಾಸವು ನಾಯಕಿ ಹರ್ಮನ್‌ಪ್ರೀತ್ ಮತ್ತು ಕೋಚ್ ಅಮೋಲ್ ಮಜುಂದಾರ್ ಅವರಿಗೆ ಪರಿಪೂರ್ಣ ಅವಕಾಶ ಒದಗಿಸಿದ ಆಸ್ಟ್ರೇಲಿಯಾ ತಂಡವು, ಪೂರ್ಣಾವಧಿ ನಾಯಕಿ ಅಲಿಸಾ ಹೀಲಿ ಅವರಿಲ್ಲದೇ ಆಡಬೇಕಾಗಿದೆ. ಅಲಿಸಾ ಮೊಣಗಂಟಿನ ನೋವಿನಿಂದ ಬಳಲುತ್ತಿದ್ದಾರೆ.
ತಾಹಿಲಾ ಮೆಕ್‌ಗ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮಾರ್ಚ್ ನಂತರ ಆತಿಥೇಯರು ಈ ಮಾದರಿಯಲ್ಲಿ ಆಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.