ADVERTISEMENT

ಮಹಿಳೆಯರ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ: ಭಾರತ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2023, 0:30 IST
Last Updated 6 ನವೆಂಬರ್ 2023, 0:30 IST
<div class="paragraphs"><p>ಜಪಾನ್ ಮತ್ತು ಭಾರತ ಆಟಗಾರ್ತಿಯರ ಪೈಪೋಟಿ&nbsp; </p></div>

ಜಪಾನ್ ಮತ್ತು ಭಾರತ ಆಟಗಾರ್ತಿಯರ ಪೈಪೋಟಿ 

   

ರಾಂಚಿ: ಸಂಘಟಿತ ಹೋರಾಟ ನಡೆಸಿದ ಭಾರತದ ತಂಡವು ಮಹಿಳೆಯರ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ 4–0ಯಿಂದ ಹಾಲಿ ಚಾಂಪಿಯನ್‌ ಜಪಾನ್‌ ತಂಡವನ್ನು ಸುಲಭವಾಗಿ ಮಣಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಲೀಗ್‌ ಹಂತದಲ್ಲಿ ಎಲ್ಲ ಐದೂ ಪಂದ್ಯಗಳನ್ನು ಗೆದ್ದು, ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ಸವಿತಾ ಪೂನಿಯಾ ನಾಯಕತ್ವದ ಆತಿಥೇಯ ತಂಡ ಎರಡನೇ ಬಾರಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿತು. ಭಾರತ ತಂಡವು 2016ರಲ್ಲಿ ಮೊದಲ ಬಾರಿ ಚಾಂಪಿಯನ್‌ ಆಗಿತ್ತು.

ADVERTISEMENT

ಬಹುಮಾನ ಘೋಷಣೆ: ಚಾಂಪಿಯನ್‌ ಆದ ಭಾರತ ತಂಡದ ಆಟಗಾರರಿಗೆ ತಲಾ ₹3 ಲಕ್ಷ ಮತ್ತು ನೆರವು ಸಿಬ್ಬಂದಿಗೆ ತಲಾ ₹ 1.5 ಲಕ್ಷ ಬಹುಮಾನವನ್ನು ಹಾಕಿ ಇಂಡಿಯಾ ಘೋಷಿಸಿದೆ.

ಚೀನಾಕ್ಕೆ ಕಂಚು: ದಕ್ಷಿಣ ಕೊರಿಯಾ ತಂಡದವರ ಸ್ಫೂರ್ತಿಯುತ ಸವಾಲನ್ನು ಮೀರಿನಿಂತ ಚೀನಾ ತಂಡ ಟೂರ್ನಿಯಲ್ಲಿ ಕಂಚು ಜಯಿಸಿತು.

ಮೂರು ಮತ್ತು ನಾಲ್ಕನೇ ಸ್ಥಾನವನ್ನು ನಿರ್ಣಯಿಸಲು ಭಾನುವಾರ ನಡೆದ ಪಂದ್ಯವನ್ನು ಚೀನಾ 2–1 ಗೋಲುಗಳಿಂದ ಜಯಿಸಿತು.

ಆಕ್ರಮಣಕಾರಿ ಆಟವಾಡಿದ ಚೀನಾ ತಂಡಕ್ಕೆ ಚೆನ್‌ ಯಿ ಅವರು 3ನೇ ನಿಮಿಷದಲ್ಲಿ ಮೇಲುಗೈ ತಂದಿತ್ತರು. ವಿರಾಮದವರೆಗೂ ಚೀನಾ ಮುನ್ನಡೆಯನ್ನು ಉಳಿಸಿಕೊಂಡಿತು.

ಮರುಹೋರಾಟ ನಡೆಸಿದ ಕೊರಿಯಾ ತಂಡಕ್ಕೆ ಮೂರನೇ ಕ್ವಾರ್ಟರ್‌ನಲ್ಲಿ ಆನ್‌ ಸುಜಿನ್‌ (38ನೇ ನಿ.) ಅವರು ಸಮಬಲದ ಗೋಲು ತಂದಿತ್ತರು.

ಜಿದ್ದಾಜಿದ್ದಿನ ಸೆಣಸಾಟ ನಡೆದ ಕೊನೆಯ ಕ್ವಾರ್ಟರ್‌ನಲ್ಲಿ ಲುವೊ ತಿಯಾನ್‌ತಿಯಾನ್ (47ನೇ ನಿ.) ಅವರು ಚೀನಾ ತಂಡಕ್ಕೆ ಗೆಲುವಿನ ಗೋಲು ಗಳಿಸಿಕೊಟ್ಟರು. ಕೊನೆಯ ನಿಮಿಷಗಳಲ್ಲಿ ಸಮಬಲದ ಗೋಲು ಗಳಿಸಲು ಕೊರಿಯಾ ನಡೆಸಿದ ಪ್ರಯತ್ನಗಳನ್ನು ಚೀನಾ ಡಿಫೆಂಡರ್‌ಗಳು ವಿಫಲಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.