ಸಾಂದರ್ಭಿಕ ಚಿತ್ರ
ಟೋಕಿಯೊ: ಫೇತ್ ಕಿಪ್ಯೆಗಾನ್ ಎಂದಿನಂತೆ ಕೊನೆಯ ಲ್ಯಾಪ್‌ನಲ್ಲಿ ಅತ್ಯಮೋಘ ವೇಗ ಸಾಧಿಸಿ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ 1500 ಮೀ. ಓಟದಲ್ಲಿ ಅಭೂತಪೂರ್ವ ನಾಲ್ಕನೇ ಸಲ ಚಿನ್ನ ಗೆದ್ದುಕೊಂಡರು.
ಮೂರು ಬಾರಿ ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ ಕಿಪ್ಯೆಗಾನ್ ಮಂಗಳವಾರ 3ನಿ.52.15 ಸೆ.ಗಳಲ್ಲಿ ಓಟವನ್ನು ಪೂರೈಸಿ ಸಂಭ್ರಮಿಸಿದರು. ಆ ಹಾದಿಯಲ್ಲಿ ವಿಶ್ವದ ಅತಿ ಶ್ರೇಷ್ಠ ಮಧ್ಯಮ ದೂರದ ಓಟಗಾರ್ತಿ ಎಂಬ ಸ್ಥಾನಮಾನವನ್ನೂ ಪಡೆದರು.
ಇದೇ ದೇಶದ ದೋರ್ಕಸ್ ಇವೊಯಿ 3ನಿ.54.02 ಸೆ.ಗಳಲ್ಲಿ ಗುರಿತಲುಪಿ ಬೆಳ್ಳಿ ಗೆದ್ದರೆ, ಆಸ್ಟ್ರೇಲಿಯಾದ ಜೆಸಿಕಾ ಹಲ್ (3:55.16) ಕಂಚಿನ ಪದಕ ತಮ್ಮದಾಗಿಸಿಕೊಂಡರು.
31 ವರ್ಷ ವಯಸ್ಸಿನ ಕಿಪ್ಯೆಗಾನ್ ನಾಲ್ಕು ಪದಕಗಳನ್ನು ಪಡೆಯುವ ಮೂಲಕ, ಪುರುಷರ ವಿಭಾಗದಲ್ಲಿ ಮೊರಾಕೊದ ಹಿಶಮ್ ಎಲ್ ಗೆರೂಝ್ ಅವರು 1997–2003ರ ಅವಧಿಯಲ್ಲಿ ಗೆದ್ದ ಪದಕಗಳ ಸಾಧನೆ ಸರಿಗಟ್ಟಿದರು.
ಕಾರ್ಡೆಲ್‌ಗೆ ಚಿನ್ನ:
ಈ ಋತುವಿನಲ್ಲಿ ಉತ್ತಮ ಲಯದಲ್ಲಿರುವ ಅಮೆರಿಕದ ಕಾರ್ಡೆಲ್ ಟಿಂಚ್ ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದರು. ಜಮೈಕಾದ ಇಬ್ಬರು ಓಟಗಾರರ ಪೈಪೋಟಿ ಎದುರಿಸಿದ ಅವರು 12.99 ಸೆ.ಗಳಲ್ಲಿ ದೂರ ಕ್ರಮಿಸಿ ಮೊದಲಿಗರಾದರು.
ಒರ್ಲಾಂಡೊ ಬೆನೆಟ್ (13.08 ಸೆ) ಮತ್ತು ಟೈಲರ್ ಮ್ಯಾಸನ್ (13.12 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ನಾಲ್ಕನೇ ಬಾರಿ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದ ಅಮೆರಿಕದ ಗ್ರಾಂಟ್ ಹೊಲೊವೆ ವರ ಕನಸು ನುಚ್ಚುನೂರಾಯಿತು. ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ 27 ವರ್ಷ ವಯಸ್ಸಿನ ಗ್ರಾಂಟ್ ಸೆಮಿಫೈನಲ್‌ನಲ್ಲಿ ಆರನೇ ಸ್ಥಾನಕ್ಕೆ ಸರಿದು ನಿರಾಶರಾದರು.
400 ಮೀ. ಓಟ: ಮೆಕ್‌ಲಾಗ್ಲಿನ್ ವಿಶ್ವದಾಖಲೆ
ಅಮೆರಿಕದ ಮೆಕ್‌ಲಾಗ್ಲಿನ್–ಲೆವ್ರೋನ್ ಅವರು ಮಂಗಳವಾರ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀ. ಓಟದ ಸೆಮಿಫೈನಲ್‌ನಲ್ಲಿ ನೂತನ ವಿಶ್ವದಾಖಲೆ ಬರೆದರು. 400 ಮೀ. ಹರ್ಡಲ್ಸ್‌ನಲ್ಲಿ ವಿಶ್ವದಾಖಲೆ ಹೊಂದಿರುವ 26 ವರ್ಷ ವಯಸ್ಸಿನ ಮೆಕ್‌ಲಾಗ್ಲಿನ್ ಟೋಕಿಯೊದಲ್ಲಿ ಹರ್ಡಲ್ಸ್ ಬದಲು ಬರೇ 400 ಮೀ. ಓಟದಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. ಅವರು 48.29 ಸೆ.ಗಳಲ್ಲಿ ಗುರಿತಲುಪಿದರು. ಇದರಿಂದಾಗಿ 2006ರಷ್ಟು ಹಿಂದೆ ಸಾನ್ಯಾ ರಿಚರ್ಡ್ಸ್–ರಾಸ್ ಹೆಸರಿನಲ್ಲಿದ್ದ ಹಳೆಯ ದಾಖಲೆ (48.70 ಸೆ.) ಭಗ್ನಗೊಂಡಿತು. ಮೆಕ್‌ಲಾಗ್ಲಿನ್ ಅವರು ಗುರುವಾರ ನಡೆಯುವ ಫೈನಲ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಅಥ್ಲೀಟ್ ಆಗಿದ್ದಾರೆ. 2021ರ ಕೋವಿಡ್ ವೇಳೆ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು 400 ಮೀ. ಹರ್ಡಲ್ಸ್ ಓಟವನ್ನು 51.46 ಸೆ.ಗಳಲ್ಲಿ ಕ್ರಮಿಸಿ ವಿಶ್ವದಾಖಲೆ ಸ್ಥಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.