ADVERTISEMENT

ಹೈಜಂಪ್‌: ಹ್ಯಾಟ್ರಿಕ್‌ ಪೂರೈಸಿದ ಮರಿಯಾ

ಏಜೆನ್ಸೀಸ್
Published 1 ಅಕ್ಟೋಬರ್ 2019, 19:26 IST
Last Updated 1 ಅಕ್ಟೋಬರ್ 2019, 19:26 IST

ದೋಹಾ: ಮರಿಯಾ ಲಸಿಟ್ಸ್‌ಕೇನ್‌ ಅವರು ಸತತ ಮೂರನೇ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನ ಹೈಜಂಪ್‌ನಲ್ಲಿ ಚಿನ್ನ ಗೆದ್ದು ಹ್ಯಾಟ್ರಿಕ್‌ ಪೂರೈಸಿದರು.

ತಟಸ್ಥ ಅಥ್ಲೀಟ್‌ ಆಗಿ ಭಾಗವಹಿಸಲು ಅವಕಾಶ ಪಡೆದಿರುವ ರಷ್ಯದ ಅಥ್ಲೀಟುಗಳಲ್ಲಿ ಮರಿಯಾ ಅವರುಒಬ್ಬರಾಗಿದ್ದಾರೆ. 2015 ಮತ್ತು 2017ರಲ್ಲಿ ಚಾಂಪಿಯನ್‌ ಆಗಿರುವ ಅವರು 2.04 ಮೀಟರ್ ಎತ್ತರ ಹಾರಿ ಚಿನ್ನದ ಪದಕ ಮುಡಿಗೇರಿಸಿಕೊಂಡರು.

ರಷ್ಯದಲ್ಲಿ ಉದ್ದೀಪನ ಮದ್ದು ಸೇವನೆ ಹಗರಣದಲ್ಲಿ ಬೆಳಕಿಗೆ ಬಂದ ನಂತರ ಮರಿಯಾ ಅವರಿಗೆ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ನಂತರದ ಕೂಟಗಳಲ್ಲಿ ಸಂದೇಹವಿಲ್ಲದ ಕೆಲವು ಅಥ್ಲೀಟುಗಳಿಗೆ ತಟಸ್ಥ ರಾಷ್ಟ್ರ ಬ್ಯಾನರ್‌ನಡಿ ಭಾಗವಹಿಸಲು ಐಎಎಎಫ್‌ ಅವಕಾಶ ನೀಡಿತು.

ADVERTISEMENT

ಉಕ್ರೇನ್‌ನ ಯರೊಸ್ಲಾವಾ ಮಹುಚಿಖ್‌ ಬೆಳ್ಳಿ, ಅಮೆರಿಕದ ವಸ್ತಿ ಕನ್ನಿಂಗ್‌ಹ್ಯಾಮ್‌ ಕಂಚಿನ ಪದಕ ಗೆದ್ದುಕೊಂಡರು.

ನಾರ್ವೆಯ ಕರ್ಸ್ಟೆನ್‌ ವಾರ್ಹೋಮ್‌, 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪಕದ ಗೆದ್ದುಕೊಂಡರು. ಅವರು 47.42 ಸೆ.ಗಳಲ್ಲಿ ಗುರಿತಲುಪಿದರೆ, ಅಮೆರಿಕದ ರಾಯ್‌ ಬೆಂಜಮಿನ್‌ (47.66 ಸೆ.) ಬೆಳ್ಳಿಯ ಪದಕ ಪಡೆದರೆ, ಆತಿಥೇಯ ಕತಾರ್‌ನ ಅಬ್ದುರೆಹಮಾನ್‌ ಸಂಬಾ ಮೂರನೇ ಸ್ಥಾನ ಪಡೆದು ಸ್ಥಳೀಯರಲ್ಲಿ ಸಂಭ್ರಮ ಮೂಡಿಸಿದರು.

ಸ್ಟೀಪಲ್‌ ಚೇಸ್‌: ಕೆನ್ಯಾದ ಬೀಟ್ರೈಸ್‌ ಚೆಪ್‌ಕೊಚ್‌, ಮಹಿಳೆಯರ 3,000 ಮೀಟ್‌ ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. 8ನಿ.57.84 ಸೆಕೆಂಡುಗಳಲ್ಲಿ ಗುರಿ ಮಟ್ಟಿದರು. ಮೊದಲ 400 ಮೀ. ಕ್ರಮಿಸುವಷ್ಟರಲ್ಲಿ ಉಳಿದವರಿಗಿಂತ 20 ಮೀ. ಲೀಡ್‌ ಪಡೆದಿದ್ದ ‌ಅವರು ನಂತರ ಮುನ್ನಡೆ ಬಿಟ್ಟುಕೊಡಲಿಲ್ಲ.

ಸಾಲಝಾರ್‌ಗೆ ಶಿಕ್ಷೆ:

ವಿಶ್ವ ಚಾಂಪಿಯನ್‌ಷಿಪ್‌ ಪ್ರತಿಷ್ಠೆಗೆ ಕರಿಚುಕ್ಕಿ ಎಂಬಂತೆ ಹಿರಿಯ ಕೋಚ್‌ ಆಲ್ಬರ್ಟೊ ಸಾಲಝರ್‌ ಅವರು ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘಿಸಿದ್ದಕ್ಕೆ ನಿಷೇಧಕ್ಕೆ ಒಳಗಾಗಿದ್ದಾರೆ. ನಾಲ್ಕು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಬ್ರಿಟನ್‌ನ ಮೊ ಫರಾ ಸೇರಿದಂತೆ ಕೆಲವು ಖ್ಯಾತ ಅಥ್ಲೀಟುಗಳಿಗೆ ತರಬೇತಿ ನೀಡಿರುವ ಸಾಲಝರ್‌ ಅವರನ್ನು ನಾಲ್ಕು ವರ್ಷ ಅವಧಿಗೆ ನಿಷೇಧಿಸಲಾಗಿದೆ.

ಕ್ಯೂಬಾ ಸಂಜಾತ ಅಮೆರಿಕದ ಕೋಚ್‌ ಆಗಿರುವ ಅವರನ್ನು ಅಮೆರಿಕದ ಆ್ಯಂಟಿ ಡೋಪಿಂಗ್‌ ಏಜನ್ಸಿ ಈ ನಿಷೇಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.