ಪ್ಯಾರಿಸ್: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆಯ ಆರನೇ ಪದಕದ ನಿರೀಕ್ಷೆಯಲ್ಲಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರಿಗೆ ಶುಕ್ರವಾರ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆಯಾಯಿತು. ಮೂರು ಗೇಮ್‌ಗಳ ರೋಚಕ ಹೋರಾಟದಲ್ಲಿ ಇಂಡೊನೇಷ್ಯಾದ ಪುತ್ರಿ ಕುಸುಮಾ ವರ್ದಾನಿ ಅವರಿಗೆ ಮಣಿದರು.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು 14-21, 21-13, 16-21ರಿಂದ ವಿಶ್ವದ ಒಂಬತ್ತನೇ ಕ್ರಮಾಂಕದ ವರ್ದಾನಿ ಅವರಿಗೆ ಶರಣಾದರು. ಈ ಸವಾಲಿನಲ್ಲಿ ಹೈದರಾಬಾದ್‌ನ ಆಟಗಾರ್ತಿ ಮೇಲುಗೈ ಸಾಧಿಸುತ್ತಿದ್ದರೆ ಆರನೇ ಪದಕ ಖಚಿತವಾಗುತ್ತಿತ್ತು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತವರಿಗೂ ಕಂಚಿನ ಪದಕ ದೊರೆಯುತ್ತದೆ. ಮಹಿಳೆಯ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ವರ್ದಾನಿ ಅವರಿಗೆ ಚೊಚ್ಚಲ ಪದಕ ಖಾತರಿಯಾಯಿತು.
ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದ 30 ವರ್ಷದ ಸಿಂಧು, ಎರಡನೇ ಗೇಮ್‌ನಲ್ಲಿ ಅಮೋಘವಾಗಿ ಪುನರಾಗಮನ ಮಾಡಿ ಸಮಬಲ ಸಾಧಿಸಿದ್ದರು. ಆದರೆ, ನಿರ್ಣಾಯಕ ಗೇಮ್‌ನ ಆರಂಭದಲ್ಲಿ ಉತ್ತಮ ಪೈಪೋಟಿ ನೀಡಿದ ಸಿಂಧು ನಂತರದಲ್ಲಿ 23 ವರ್ಷದ ವರ್ದಾನಿ ಅವರ ಚುರುಕಿನ ಆಟದ ಎದುರು ಮಂಕಾದರು. ಇದರೊಂದಿಗೆ ಇಂಡೊನೇಷ್ಯಾದ ಆಟಗಾರ್ತಿ ವಿರುದ್ಧದ ಗೆಲುವಿನ ದಾಖಲೆ 2–2ರಿಂದ ಸಮನಾಯಿತು.
15ನೇ ಕ್ರಮಾಂಕದ ಸಿಂಧು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ಎರಡನೇ ಕ್ರಮಾಂಕದ ವಾಂಗ್ ಝಿ ಯಿ (ಚೀನಾ) ಅವರಿಗೆ ಆಘಾತ ನೀಡಿ ಆರನೇ ಬಾರಿ ‘ಪೋಡಿಯಂ ಫಿನಿಷ್’ ಮಾಡುವ ಛಲದಲ್ಲಿದ್ದರು. ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 2013 ಮತ್ತು 14ರಲ್ಲಿ ಕಂಚು ಹಾಗೂ 2017 ಮತ್ತು 18ರಲ್ಲಿ ಬೆಳ್ಳಿ ಗೆದ್ದಿದ್ದರು. 2019ರಲ್ಲಿ ಬಾಸಿಲ್‌ನಲ್ಲಿ ನಡೆದ ಕೂಟದಲ್ಲಿ ಐತಿಹಾಸಿಕ ಚಿನ್ನದ ಸಾಧನೆ ಮೆರೆದಿದ್ದರು.
ಇದಕ್ಕೂ ಮುನ್ನ ಮಿಶ್ರ ಡಬಲ್ಸ್‌ನಲ್ಲಿ ಧ್ರುವ್ ಕಪಿಲಾ ಮತ್ತು ತನಿಶಾ ಕ್ರಾಸ್ಟೊ ಜೋಡಿಯ ಅಭಿಯಾನಕ್ಕೂ ಕ್ವಾರ್ಟರ್ ಫೈನಲ್‌ನಲ್ಲಿ ತೆರೆಬಿತ್ತು. ಚೊಚ್ಚಲ ಪದಕದ ಪ್ರಯತ್ನದಲ್ಲಿದ್ದ ಭಾರತದ ಜೋಡಿಯು 15-21 13-21ರ ನೇರ ಗೇಮ್‌ಗಳಲ್ಲಿ ವಿಶ್ವದ ನಾಲ್ಕನೇ ಕ್ರಮಾಂಕದ ಮಲೇಷ್ಯಾದ ಚೆನ್ ಟ್ಯಾಂಗ್ ಜೀ ಮತ್ತು ತೋ ಈ ವೀ ಅವರಿಗೆ ಸೋತರು.
ವಿಶ್ವದ 17ನೇ ರ‍್ಯಾಂಕ್‌ನ ಭಾರತದ ಜೋಡಿಯು 16ರ ಘಟ್ಟದ ಪಂದ್ಯದಲ್ಲಿ 15-21, 13-21ರಿಂದ ವಿಶ್ವದ ಐದನೇ ಕ್ರಮಾಂಕದ ಟ್ಯಾಂಗ್ ಚುನ್ ಮ್ಯಾನ್ ಮತ್ತು ತ್ಸೆ ಯಿಂಗ್ ಸೂಟ್ (ಹಾಂಗ್‌ಕಾಂಗ್) ಅವರಿಗೆ ಆಘಾತ ನೀಡಿತ್ತು.
ಪುರುಷರ ಡಬಲ್ಸ್‌ನ ತಾರಾ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು 19–21, 21–15, 21–17ರಿಂದ ಚೀನಾದ ಲಿ ಯಾಂಗ್ ವೀಕೆಂಗ್ ಮತ್ತು ವಾಂಗ್ ಚಾಂಗ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದೆ. ಈ ಜೋಡಿಯು ಟೂರ್ನಿಯಲ್ಲಿ ಉಳಿದಿರುವ ಭಾರತದ ಏಕೈಕ ಭರವಸೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.