ADVERTISEMENT

ವಿಶ್ವ ಬ್ಯಾಡ್ಮಿಂಟನ್‌: ಪ್ರಣೀತ್‌ಗೆ ಜಯ, ಪ್ರಣಯ್‌ಗೆ ನಿರಾಸೆ

ಪಿಟಿಐ
Published 22 ಆಗಸ್ಟ್ 2019, 19:47 IST
Last Updated 22 ಆಗಸ್ಟ್ 2019, 19:47 IST
ಸಾಯಿ ಪ್ರಣೀತ್‌ –ಎಎಫ್‌ಪಿ ಚಿತ್ರ
ಸಾಯಿ ಪ್ರಣೀತ್‌ –ಎಎಫ್‌ಪಿ ಚಿತ್ರ   

ಬಾಸೆಲ್, ಸ್ವಿಟ್ಜರ್ಲೆಂಡ್: ಅಮೋಘ ಆಟದ ಮೂಲಕ ಎದುರಾಳಿಯನ್ನು ದಂಗುಬಡಿಸಿದ ಬಿ.ಸಾಯಿ ಪ್ರಣೀತ್‌ ಇಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು. ಆದರೆ ಪ್ರಬಲ ಪೈಪೋಟಿ ನಡೆಸಿಯೂ ಎಚ್‌.ಎಸ್.ಪ್ರಣಯ್‌ ಸೋತು ಹೊರಬಿದ್ದರು.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಪ್ರಣೀತ್ ಬಲಿಷ್ಠ ಎದುರಾಳಿ, ವಿಶ್ವ ಕ್ರಮಾಂಕದಲ್ಲಿ 8ನೇ ಸ್ಥಾನದಲ್ಲಿರುವ ಇಂಡೊನೇಷ್ಯಾದ ಆ್ಯಂಟನಿ ಸಿನಿಸುಕ ಜಿಂಟಿಂಗ್ ಎದುರು 21–19, 21–13ರಲ್ಲಿ ಗೆಲುವು ಸಾಧಿಸಿದರು. ವಿಶ್ವ ಕ್ರಮಾಂಕದಲ್ಲಿ ಪ್ರಣೀತ್‌ 19ನೇ ಸ್ಥಾನದಲ್ಲಿದ್ದಾರೆ.

ಪಂದ್ಯದ ಆರಂಭದಲ್ಲಿ ಪ್ರಣೀತ್ 0–3ರ ಹಿನ್ನಡೆಯಲ್ಲಿದ್ದರೂ ಎದೆಗುಂದಲಿಲ್ಲ. ಚಾಕಚಕ್ಯತೆಯ ಆಟವಾಡಿ 8–5ರ ಮುನ್ನಡೆ ಸಾಧಿಸಿದರು. 11–8ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಭಾರತದ ಆಟಗಾರನಿಗೆ ನಂತರ ಆ್ಯಂಟನಿ ತಿರುಗೇಟು ನೀಡಿದರು. ಆದರೂ ತಾಳ್ಮೆಯಿಂದ ಆಡಿದ ಪ್ರಣೀತ್ 18–19ರ ಹಿನ್ನಡೆಯಲ್ಲಿದ್ದಾಗ ಸತತ ಮೂರು ಪಾಯಿಂಟ್‌ಗಳನ್ನು ಗಳಿಸಿ ಗೇಮ್ ಗೆದ್ದರು.

ADVERTISEMENT

ಪ್ರಣೀತ್ ಆಧಿಪತ್ಯ: ದ್ವಿತೀಯ ಗೇಮ್‌ನಲ್ಲಿ ಪ್ರಣೀತ್‌ ಪೂರ್ಣ ಆಧಿಪತ್ಯ ಸ್ಥಾಪಿಸಿದರು. ಮೊದಲು 6–2ರ ಮುನ್ನಡೆ ಸಾಧಿಸಿದ ಅವರು ನಂತರ ಇದನ್ನು 11–8ಕ್ಕೆ ಏರಿಸಿದರು. ವಿರಾಮದ ನಂತರ ಸತತ ಪಾಯಿಂಟ್‌ಗಳನ್ನು ಹೆಕ್ಕಿ ಎದುರಾಳಿಯನ್ನು ಕಂಗೆಡಿಸಿದರು. ಹೀಗಾಗಿ ಸುಲಭ ಜಯ ಸಾಧಿಸಿದರು.

ಮೊಮೊಟಾಗೆ ಮಣಿದ ಪ್ರಣಯ್‌: ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಪ್ರಣಯ್‌ 19–21, 12–21ರಲ್ಲಿ ಕೆಂಟೊ ಮೊಮೊಟೊಗೆ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.