
ಪಣಜಿ (ಪಿಟಿಐ): ಭಾರತದ ಅಗ್ರ ಆಟಗಾರರಾದ ಅರ್ಜುನ್ ಇರಿಗೇಶಿ, ಆರ್.ಪ್ರಜ್ಞಾನಂದ ಮತ್ತು ಪಿ.ಹರಿಕೃಷ್ಣ ಅವರು ವಿಶ್ವಕಪ್‌ನಲ್ಲಿ ಸ್ಫೂರ್ತಿಯುತ ಓಟ ಮುಂದುವರಿಸಲು ಕಾತರರಾಗಿದ್ದಾರೆ. ಸೋಮವಾರ ಮೊದಲ ವಿಶ್ರಾಂತಿ ದಿನವಾಗಿದ್ದು, ಮಂಗಳವಾರ ನಾಲ್ಕನೇ ಸುತ್ತಿನೊಡನೆ ಟೂರ್ನಿ ಮುಂದುವರಿಯಲಿದೆ.
ಭಾರತದ ಐವರಷ್ಟೇ 32ರ ಸುತ್ತಿಗೆ ತಲುಪಿದ್ದಾರೆ. ಅಗ್ರ ರ್‍ಯಾಂಕಿನ ಆಟಗಾರರಾದ ಅರ್ಜುನ್, 32ರ ಸುತ್ತಿನಲ್ಲಿ ಹಂಗೆರಿಯ ಅನುಭವಿ ಆಟಗಾರ ಪೀಟರ್ ಲೆಕೊ ಎದುರು ಆಡಲಿದ್ದು, ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದಾರೆ.
ಪ್ರಜ್ಞಾನಂದ ಅವರು ಫಿಡೆಯನ್ನು ಪ್ರತಿನಿಧಿಸುತ್ತಿರುವ ರಷ್ಯಾದ ಆಟಗಾರ ಡೇನಿಯಲ್ ದುಬೋವ್ ಅವರನ್ನು ಎದುರಿಸಲಿದ್ದಾರೆ. ಇವರೆಲ್ಲರಿಗಿಂತ ಅನುಭವಿ ಪೆಂಟಾಲ ಹರಿಕೃಷ್ಣ ಅವರು ಸ್ವೀಡನ್‌ನ ನಿಲ್ಸ್ ಗ್ರಂಡೆಲಿಯಸ್ ಅವರಿಗೆ ಮುಖಾಮುಖಿಯಾಗಿದ್ದಾರೆ. ಭಾರತದ ಈ ಮೂವರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು.
ಮೇಲಿನ ಮೂವರ ಜೊತೆ ವಿಶ್ವ ಜೂನಿಯರ್ ಚಾಂಪಿಯನ್ ವಿ.ಪ್ರಣವ್ ಮತ್ತು 109ನೇ ಶ್ರೇಯಾಂಕದ ಕಾರ್ತಿಕ್ ವೆಂಕಟರಾಮನ್ ಸಹ ನಾಲ್ಕನೇ ಸುತ್ತು ಆಡಲಿದ್ದಾರೆ.
ಸುಮಾರು 20 ವರ್ಷ ಹಿಂದೆ ಪ್ರಬಲ ಆಟಗಾರನಾಗಿ ಗುರುತಿಸಿಕೊಂಡಿದ್ದ ಲೆಕೊ ಈ ಟೂರ್ನಿಯಲ್ಲಿ ತಮ್ಮ ಉತ್ತುಂಗದ ದಿನಗಳನ್ನು ನೆನಪಿಸುವಂತೆ ಆಡಿದ್ದಾರೆ. ಆದರೆ ಆಟವನ್ನು ಸಂಕೀರ್ಣ ಸ್ಥಿತಿಗೆ ಒಯ್ಯಬಲ್ಲ ಅರ್ಜುನ್ ಎದುರು 46 ವರ್ಷದ ಆಟಗಾರನಿಗೆ ಗೆಲುವು ಸುಲಭವಲ್ಲ.
ಅರೆನಿವೃತ್ತಿಯಲ್ಲಿರುವ ಲೆಕೊ ಅವರ ಶಿಷ್ಯ ವಿನ್ಸೆಂಟ್ ಕೀಮರ್ (ಜರ್ಮನಿ) ಅವರೂ ಇಲ್ಲಿ ನಾಲ್ಕನೇ ಸುತ್ತಿಗೆ ತಲುಪಿರುವುದು ವಿಶೇಷ.
ಅರ್ಜುನ್ ಸಹ ತಮ್ಮೆರಡೂ ಪಂದ್ಯಗಳನ್ನು ಟೈಬ್ರೇಕರ್ ನೆರವಿಲ್ಲದೇ ಜಯಿಸಿದ್ದಾರೆ. ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಿಸಿರುವುದು ಲಯವನ್ನು ಸೂಚಿಸಿದೆ.
ಪ್ರೇಕ್ಷಕರ ನೆಚ್ಚಿನ ಆಟಗಾರ ಪ್ರಜ್ಞಾನಂದ ಅವರ ಎದುರಾಳಿ ದುಬೋವ್ ಅವರು ಸಿದ್ಧಾಂತಕ್ಕೆ ತಕ್ಕಂತೆ ಆಡುವುದಕ್ಕೆ ಹೆಸರುವಾಸಿ. ವೇಗ ಮತ್ತು ಕರಾರುವಾಕ್ ಆಟದಿಂದಾಗಿ ಅವರು ಈ ಹಿಂದಿನ ಸುತ್ತಿನ ದೀರ್ಘ ಟೈಬ್ರೇಕರ್ ಪಂದ್ಯಗಳಲ್ಲಿ ಬೈ ಜಿನ್ಶಿ (ಚೀನಾ) ಮತ್ತು ಉರುಗ್ವೆಯ ಜಾರ್ಜ್ ಮಿಯರ್ ಅವರನ್ನು ಸೋಲಿಸಿದ್ದಾರೆ.
ಪ್ರಜ್ಞಾನಂದ ಎರಡನೇ ಸುತ್ತಿನಲ್ಲಿ ಗೆಲ್ಲುವ ಮೊದಲ ಉಜ್ಬೇಕ್ ಮೂಲದ ಆಸ್ಟ್ರೇಲಿಯನ್ ಆಟಗಾರ ತೆಮೂರ್ ಕುಯ್ಬಕೋವ್ ಎದುರು ಆತಂಕದ ಕ್ಷಣಗಳನ್ನು ಎದುರಿಸಿದ್ದರು.
ಇದುವರೆಗೆ ಹರಿಕೃಷ್ಣ ಮಾತ್ರ 32ರ ಸುತ್ತಿಗೆ ಸಲೀಸಾಗಿ ಮುನ್ನಡೆದಿದ್ದಾರೆ. ಅವರು ರಷ್ಯಾದ ಅರ್ಸೆನಿ ನೆಸ್ಟೆರೋವ್ ಮತ್ತು ಬೆಲ್ಜಿಯಂನ ಡೇನಿಯ್ ದರ್ಧಾ ಅವರನ್ನು ಅಧಿಕಾರಯುತವಾಗಿ ಸೋಲಿಸಿದ್ದಾರೆ.
ಆಯ್ದ ಮುಖಾಮುಖಿಗಳು:
ಮಥಾಯಸ್ ಬ್ಲೂಬಾಮ್ (ಜರ್ಮನಿ)– ಅಲೆಕ್ಸಾಂಡರ್ ಡೊಮ್ಚೆಂಕೊ (ಜರ್ಮನಿ); ಫ್ರೆಡೆರಿಕ್ ಸ್ವೇನ್ (ಜರ್ಮನಿ)– ಶಾಂತ್ ಸೆರ್ಗಸಿಯನ್ (ಅರ್ಮೇನಿಯ); ಆ್ಯಂಡ್ರಿ ಇಸಿಪೆಂಕೊ (ಫಿಡೆ)– ವಿನ್ಸೆಂಟ್ ಕೀಮರ್ (ಜರ್ಮನಿ); ವಿ. ಪ್ರಣವ್– ನದಿರ್ಬಕ್ ಯಾಕುಬೊಯೆವ್ (ಉಜ್ಬೇಕಿಸ್ತಾನ), ವೀ ಯಿ (ಚೀನಾ– ಪರ್ಹಾಮ್ ಮಘಸೂಡ್ಲೂ (ಇರಾನ್); ಲಿ ಕ್ವಾಂಗ್ ಲೀಮ್ (ವಿಯೆಟ್ನಾಂ)– ಕಾರ್ತಿಕ್ ವೆಂಕಟರಾಮನ್; ಸ್ಯಾಮ್ ಶಂಕ್ಲಾಂಡ್ (ಅಮೆರಿಕ)– ರಿಚರ್ಡ್ ರ‍್ಯಾಪೋರ್ಟ್ (ಹಂಗೆರಿ); ಲೆವೋನ್ ಅರೋನಿಯನ್ (ಅಮೆರಿಕ)– ರಾಡೊಸ್ಲಾವ್ ವೊಜ್ತಸ್‌ಝೆಕ್ (ಪೋಲೆಂಡ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.