ADVERTISEMENT

ಚೆಸ್‌ ರಾಣಿ ಪಟ್ಟಕ್ಕೆ ಪೈಪೋಟಿ

ಭಾನುವಾರದಿಂದ ವೆನ್‌ಜುನ್‌– ಅಲೆಕ್ಸಾಂಡ್ರಾ ನಡುವೆ ಹಣಾಹಣಿ

ಏಜೆನ್ಸೀಸ್
Published 8 ಜನವರಿ 2020, 18:28 IST
Last Updated 8 ಜನವರಿ 2020, 18:28 IST

ಶಾಂಗೈ: ಚೆಸ್‌ನ ರಾಣಿಯರಾಗಲು ಹಾಲಿ ವಿಶ್ವ ಚಾಂಪಿಯನ್‌ ಜು ವೆನ್‌ಜುನ್‌ ಮತ್ತು ಅಲೆಕ್ಸಾಂಡ್ರಾ ಗೊರ್ಯಾಚ್‌ಕಿನಾ ನಡುವೆ ಇದೇ 12 (ಭಾನುವಾರ) ರಿಂದ ಹಣಾಹಣಿ ನಡೆಯಲಿದೆ. ಬಹುಮಾನ ಮೊತ್ತದಲ್ಲಿ ದಾಖಲೆ ಏರಿಕೆ ಆಗಿದೆ.

ಪುರುಷ ಮತ್ತು ಮಹಿಳಾ ವಿಜೇತರಿಗೆ ನೀಡುವ ಬಹುಮಾನ ಮೊತ್ತದ ಅಂತರ ಈಗ ಕಡಿಮೆಯಾಗಿದೆ. ಬಹುಮಾನ ಮೊತ್ತ ಒಟ್ಟು ₹ ಕೋಟಿ (5 ಲಕ್ಷ ಯೂರೊ) ಆಗಿದ್ದು, ನೂರು ವರ್ಷಗಳ ಚಾಂಪಿಯನ್‌ಷಿಪ್‌ ಇತಿಹಾಸದಲ್ಲೇ ಮೊದಲ ಬಾರಿ ಶೇ 150ರಷ್ಟು ಏರಿಕೆ ಆಗಿದೆ.

ಪ್ರಚಾರ, ಬಹುಮಾನ ಮೊತ್ತದಲ್ಲಿ ಹಿಂದೆಯಿದ್ದ ಮಹಿಳಾ ಚೆಸ್‌ ಇತಿಹಾಸದಲ್ಲಿ ಈ ನಿರ್ಧಾರ ಮಹತ್ವದ್ದು ಎಂದು ಫಿಡೆ (ಅಂತರರಾಷ್ಟ್ರೀಯ ಚೆಸ್‌ ಫೆಡರೇಷನ್‌) ಹೇಳಿದೆ.

ADVERTISEMENT

ವಿಜೇತರು ₹ 2.40 ಕೋಟಿ ಜೇಬಿಗಿಳಿಸಲಿದ್ದಾರೆ. ಹಣಾಹಣಿಯಲ್ಲಿ 12 ಪಂದ್ಯಗಳಿದ್ದು ಶಾಂಗೈ ಮತ್ತು ವ್ಲಾಡಿವೊಸ್ಟಾಕ್‌ನಲ್ಲಿ ನಡೆಯಲಿದೆ. ಚಾಂಪಿಯನ್‌ ಪಟ್ಟಕ್ಕೆ ವೆನ್‌ಜುನ್‌ ಅವರಿಗೆ ಸವಾಲಿಗರಾಗಿರುವ 21 ವರ್ಷದ ಅಲೆಕ್ಸಾಂಡ್ರಾ, ಬಹುಮಾನ ಹೆಚ್ಚಳ ಕ್ರಮವನ್ನು ‘ಸಕಾರಾತ್ಮಕ’ ಎಂದು ಬಣ್ಣಿಸಿದ್ದಾರೆ.

‘ಮಹಿಳಾ ಚೆಸ್‌ ಪ್ರತಿಷ್ಠೆ ಹೆಚ್ಚಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಬಹುಮಾನ ನಿಧಿಯಲ್ಲಿರುವ ವ್ಯತ್ಯಾಸವನ್ನೂ ಕಡಿಮೆ ಮಾಡುತ್ತಿದ್ದೇವೆ’ ಎಂದು ಫಿಡೆ ಉಪಾಧ್ಯಕ್ಷ ಆಗಿರುವ ನೈಜೆಲ್‌ ಶಾರ್ಟ್‌ ಹೇಳಿದ್ದಾರೆ. ಶಾರ್ಟ್‌ ಒಂದು ಕಾಲದಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರರಲ್ಲಿ ಒಬ್ಬರಾಗಿದ್ದರು.

ಅರ್ಕಾಡಿ ಡ್ವೊರ್ಕೊವಿಚ್‌, 2018ರ ಅಕ್ಟೋಬರ್‌ನಲ್ಲಿ ಫಿಡೆ ಅಧ್ಯಕ್ಷರಾದ ನಂತರ ಮಹಿಳಾ ಚೆಸ್‌ ಶಕ್ತಿ ತುಂಬಲು ಮುಂದಾದರು. ಅರ್ಕಾಡಿ ಈ ಹಿಂದೆ ರಷ್ಯದ ಉಪಪ್ರಧಾನಿ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.