
ವಡೋದರ: ಕೊನೆಯ ಎಸೆತದವರೆಗೆ ಕುತೂಹಲ ಕೆರಳಿಸಿದ್ದ ಮಹಿಳಾ ಪ್ರೀಮಿಯರ್ ಲೀಗ್‌ನ ರೋಚಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು ಮಂಗಳವಾರ ಮೂರು ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿತು.
ಈ ಗೆಲುವಿನೊಂದಿಗೆ ಜೈಂಟ್ಸ್ ತಂಡವು (8 ಅಂಕ) ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದು, ಪ್ಲೇ ಆಫ್‌ಗೆ ಹತ್ತಿರವಾಯಿತು. ಕ್ಯಾಪಿಟಲ್ಸ್ ತಂಡದ (6) ಪ್ಲೇ ಆಫ್ ಹಾದಿ ಕಠಿಣವಾಯಿತು.
175 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು ರಾಜೇಶ್ವರಿ ಗಾಯಕವಾಡ್ (20ಕ್ಕೆ 3) ಮತ್ತು ಸೋಫಿ ಡಿವೈನ್ (37ಕ್ಕೆ 4) ಅವರ ದಾಳಿಗೆ ಸಿಲುಕಿ 100 ರನ್‌ಗೆ 6 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕರ್ನಾಟಕದ ನಿಕಿ ಪ್ರಸಾದ್ (47;24ಎ, 4x9) ಮತ್ತು ಸ್ನೇಹಾ ರಾಣಾ (29;15ಎ,4x3, 6x2) ಅವರು ಏಳನೇ ವಿಕೆಟ್ ಜೊತೆಯಾಟದಲ್ಲಿ 70 (31ಎ) ರನ್ ಸೇರಿಸಿ ತಂಡಕ್ಕೆ ಮಹತ್ವದ ಚೇತರಿಕೆ ನೀಡಿದರು.
ಇವರಿಬ್ಬರು ಸೋಫಿ ಹಾಕಿದ 17ನೇ ಓವರ್‌ನಲ್ಲಿ 23 ರನ್ ಮತ್ತು ನಾಯಕಿ ಆ್ಯಶ್ಲೆ ಗಾರ್ಡನರ್ ಹಾಕಿದ 19ನೇ ಓವರ್‌ನಲ್ಲಿ 20 ರನ್ ಬಾಚಿದರು. ಹೀಗಾಗಿ, ಕೊನೆಯ ಓವರ್‌ನಲ್ಲಿ ಗೆಲುವಿಗೆ 9 ರನ್ ಅಗತ್ಯವಿತ್ತು. ಗಾರ್ಡನರ್ ಅವರು ಸೋಫಿ ಕೈಗೆ ಚೆಂಡನ್ನು ನೀಡಿದರು. ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ ಅವರು ಕೇವಲ ಐದು ರನ್ ನೀಡಿ, ಸ್ನೇಹಾ ಮತ್ತು ನಿಕಿ ಅವರ ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಇದಕ್ಕೂ ಮೊದಲು ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಗುಜರಾತ್ ಜೈಂಟ್ಸ್ ತಂಡವು ವಿಕೆಟ್ ಕೀಪರ್– ಬ್ಯಾಟರ್ ಬೆತ್ ಮೂನಿ (58;46ಎ, 4x7) ಅವರ ಅರ್ಧಶತಕದ ನೆರವಿನಿಂದ 9 ವಿಕೆಟ್‌ಗೆ 174 ರನ್ ದಾಖಲಿಸಿತ್ತು. ಅನುಷ್ಕಾ ಶರ್ಮಾ (39;25ಎ) ಅವರೂ ಉಪಯುಕ್ತ ಕಾಣಿಕೆ ನೀಡಿದರು.
ಎಡಗೈ ಸ್ಪಿನ್ನರ್ ಎನ್.ಶ್ರೀಚರಣಿ (31ಕ್ಕೆ 4) ಅವರ ದಾಳಿಗೆ ಸಿಲುಕಿದ ತಂಡವು 15.4 ಓವರುಗಳಾಗುವಷ್ಟರಲ್ಲಿ 131 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಕೊನೆಯಲ್ಲಿ ತನುಜಾ ಕನ್ವರ್ (21, 11 ಎಸೆತ) ಅವರು ತಂಡದ ಮೊತ್ತ 175ರ ಸನಿಹ ತಲುಪಿಸಿದರು.
ಸಂಕ್ಷಿಪ್ತ ಸ್ಕೋರು:
ಗುಜರಾತ್ ಜೈಂಟ್ಸ್: 20 ಓವರುಗಳಲ್ಲಿ 9ಕ್ಕೆ 174 (ಬೆತ್ ಮೂನಿ 58, ಅನುಷ್ಕಾ ಶರ್ಮಾ 39, ತನುಜಾ ಕನ್ವರ್ 21; ಶ್ರೀಚರಣಿ 31ಕ್ಕೆ4, ಚಿನೆಲ್ ಹೆನ್ರಿ 38ಕ್ಕೆ2).
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 171 (ಲಾರಾ ವೋಲ್ವಾರ್ಟ್ 24, ನಿಕಿ ಪ್ರಸಾದ್ 47, ಸ್ನೇಹಾ ರಾಣ 29; ರಾಜೇಶ್ವರಿ ಗಾಯಕವಾಡ್ 20ಕ್ಕೆ 3, ಸೋಫಿ ಡಿವೈನ್ 37ಕ್ಕೆ 4). ಫಲಿತಾಂಶ: ಗುಜರಾತ್ ಜೈಂಟ್ಸ್‌ಗೆ 3 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.