ADVERTISEMENT

ಬ್ರಿಜ್‌ಭೂಷಣ್ ಬಂಧನಕ್ಕೆ ಕುಸ್ತಿಪಟುಗಳ ಪಟ್ಟು

ಪ್ರತಿಭಟನೆಗೆ ರಾಜಕೀಯ ಪಕ್ಷಗಳ ಬೆಂಬಲ

ಪಿಟಿಐ
Published 25 ಏಪ್ರಿಲ್ 2023, 16:24 IST
Last Updated 25 ಏಪ್ರಿಲ್ 2023, 16:24 IST
ವಿನೇಶಾ ಪೋಗಟ್‌ ಮತ್ತು ಸಾಕ್ಷಿ ಮಲಿಕ್‌– ಪಿಟಿಐ ಚಿತ್ರ
ವಿನೇಶಾ ಪೋಗಟ್‌ ಮತ್ತು ಸಾಕ್ಷಿ ಮಲಿಕ್‌– ಪಿಟಿಐ ಚಿತ್ರ   

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ (ಡಬ್ಲ್ಯುಎಫ್‌ಐ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೇಶದ ಪ್ರಮುಖ ಕುಸ್ತಿಪಟುಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ವಿವಿಧ ರಾಜಕೀಯ ಪಕ್ಷಗಳ ನಾಯಕರು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಪ್ರತಿಭಟನೆ ತೀವ್ರತೆ ಪಡೆದುಕೊಂಡಿದ್ದು, ಬ್ರಿಜ್‌ಭೂಷಣ್‌ ಬಂಧಿಸುವವರೆಗೆ ತಾವು ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನನಿರತರು ಪಟ್ಟುಹಿಡಿದಿದ್ದಾರೆ.

ಬ್ರಿಜ್‌ಭೂಷಣ್ ಅವರು ತೋಳ್ಬಲ ಪ್ರದರ್ಶನ ಮತ್ತು ಲಂಚ ನೀಡು ಮೂಲಕ ಸಂತ್ರಸ್ತರನ್ನು ಕುಗ್ಗಿಸುವ ಯತ್ನ ನಡೆಸಿದ್ದಾರೆ ಎಂದು ಕುಸ್ತಿಪಟುಗಳಾದ ವಿನೇಶಾ ಪೋಗಟ್‌, ಸಾಕ್ಷಿ ಮಲಿಕ್‌ ಮತ್ತು ಬಜರಂಗ್ ಪೂನಿಯಾ ಆಪಾದಿಸಿದ್ದಾರೆ.

ADVERTISEMENT

‘ಸಂತ್ರಸ್ತರ ಹೆಸರುಗಳನ್ನು ದೆಹಲಿ ಪೊಲೀಸರು ಬ್ರಿಜ್‌ಭೂಷಣ್ ಅವರಿಗೆ ಗೊತ್ತಾಗುವಂತೆ ಸೋರಿಕೆ ಮಾಡಿದ್ದಾರೆ. ಹರಿಯಾಣ ಕುಸ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಮತ್ತು ಕೋಚ್‌ ಮನವೀರ್ ಪ್ರಸಾದ್‌ ಬಿಷ್ಣೋಯಿ ಅವರನ್ನು ಬಳಸಿಕೊಂಡು ಬ್ರಿಜ್‌ಭೂಷಣ್‌, ದೂರು ನೀಡಿರುವ ಮಹಿಳಾ ಕುಸ್ತಿಪಟುಗಳ ಕುಟುಂಬಗಳನ್ನು ಹೆದರಿಸುತ್ತಿದ್ದಾರೆ‘ ಎಂದು ವಿನೇಶಾ ಆರೋಪಿಸಿದ್ದಾರೆ.

ಆದರೆ ಮಹಾವೀರ್ ಪ್ರಸಾದ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ.

‘ಕೇವಲ ಎಫ್‌ಐಆರ್‌ ದಾಖಲಿಸಿದ ಮಾತ್ರಕ್ಕೆ ನಾವು ಇಲ್ಲಿಂದ ಹೋಗುವುದಿಲ್ಲ. ಆತನನ್ನು (ಬ್ರಿಜ್‌ಭೂಷಣ್‌) ಬಂಧಿಸಬೇಕು. ಆತ ಹೊರಗಿದ್ದರೆ ನಾವು ಸುರಕ್ಷಿತವಾಗಿರುವುದಿಲ್ಲ. ಆತ ರಾಜಾರೋಷವಾಗಿ ಓಡಾಡಿಕೊಂಡಿದ್ದರೆ ನಾವು ಹೇಗೆ ತರಬೇತಿ ನಡೆಸುವುದು‘ ಎಂದು ವಿನೇಶಾ ಪ್ರಶ್ನಿಸಿದ್ದಾರೆ.

ರಾಜಕೀಯ ಬೆಂಬಲ: ಹರಿಯಾಣದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಮುಖಂಡರಾದ ಭೂಪಿಂದರ್ ಸಿಂಗ್ ಹೂಡಾ, ಉದಿತ್ ರಾಜ್‌, ಸಿಪಿಎಂ ನಾಯಕಿ ಬೃಂದಾ ಕಾರಟ್‌, ಭಾರತ ಕಿಸಾನ್‌ ಯೂನಿಯನ್‌ (ಬಿಕೆಯು) ಪ್ರತಿನಿಧಿ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ ಪ್ರಮುಖರಲ್ಲಿ ಸೇರಿದ್ದಾರೆ.

ಸಿಂಗ್ ತಮಗೆ ಕಿರುಕುಳ ನೀಡಿದ್ದಾರೆಂದು ಏಳು ಮಂದಿ ಮಹಿಳಾ ಕುಸ್ತಿಪಟುಗಳು ನೀಡಿರುವ ದೂರು ಕುರಿತು ಎಫ್‌ಐಆರ್ ದಾಖಲಿಸಿಕೊಳ್ಳದಿರುವುದಕ್ಕೆ ದೆಹಲಿ ಸರ್ಕಾರ ಹಾಗೂ ಇತರರಿಗೆ ಸುಪ್ರೀಂ ಕೋರ್ಟ್‌ ನೋಟಿಸ್ ಜಾರಿ ಮಾಡಿದೆ. ಇವುಗಳನ್ನು ‘ಗಂಭೀರ ಆರೋಪಗಳೆಂದು‘ ಪರಿಗಣಿಸಬೇಕು ಎಂದು ಕೋರ್ಟ್‌ ಹೇಳಿದೆ.

ಮಹಿಳಾ ಕುಸ್ತಿಟುಗಳ ದೂರಿನ ವಿಚಾರಣೆಯನ್ನು ಶುಕ್ರವಾರ ನಡೆಸುವುದಾಗಿ ಕೋರ್ಟ್‌ ಈ ಮೊದಲು ಪಟ್ಟಿ ಮಾಡಿತ್ತು. ಆದರೆ ವಿಷಯ ಪ್ರಸ್ತಾಪಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಆಲಿಸಿದ ಕೋರ್ಟ್‌ ತಕ್ಷಣವೇ ವಿಚಾರಣೆಯನ್ನು ಕೈಗೆತ್ತಿಕೊಂಡಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.