ADVERTISEMENT

ಪದಕ ಮರಳಿಸಲು ಮುಂದಾದ ಕುಸ್ತಿಪಟುಗಳು

​ಪ್ರಜಾವಾಣಿ ವಾರ್ತೆ
Published 4 ಮೇ 2023, 18:42 IST
Last Updated 4 ಮೇ 2023, 18:42 IST
   

ನವದೆಹಲಿ: ಜಂತರ್‌ ಮಂತರ್‌ನ ಧರಣಿ ಸ್ಥಳದಲ್ಲಿ ಬುಧವಾರ ರಾತ್ರಿ ಘರ್ಷಣೆಯ ವೇಳೆ ಪೊಲೀಸ್ ವರ್ತನೆಯಿಂದ ನೊಂದ ಕುಸ್ತಿಪಟುಗಳಾದ ವಿನೇಶಾ ಫೋಗಟ್ ಹಾಗೂ ಬಜರಂಗ್‌ ಪೂನಿಯಾ ಅವರು ತಮ್ಮ ಪದಕಗಳು ಹಾಗೂ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇಂತಹ ಅವಮಾನಕ್ಕೆ ಒಳಗಾದ ಬಳಿಕ ಈ ಗೌರವಗಳನ್ನು ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದೂ ಅವರು ಹೇಳಿದ್ದಾರೆ.  ‘ಪೊಲೀಸರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಗೆದ್ದ ಪದಕಗಳಿಗೆ ಬೆಲೆ ಎಲ್ಲಿದೆ. ನಾವು ಸಾಮಾನ್ಯ ಜೀವನ ನಡೆಸುತ್ತೇವೆ. ಎಲ್ಲ ಪದಕ ಹಾಗೂ ಪ್ರಶಸ್ತಿಗಳನ್ನು ಭಾರತ ಸರ್ಕಾರಕ್ಕೆ ಹಿಂತಿರುಗಿಸುತ್ತೇವೆ’ ಎಂದು ಬಜರಂಗ್‌ ಹೇಳಿದರು. 

‘ನಾವು ಪದ್ಮಶ್ರೀ ಪುರಸ್ಕೃತರು ಎಂಬುದನ್ನು ಗಮನಿಸದೆಯೇ ಪೊಲೀಸರು ನಮ್ಮನ್ನು ತಳ್ಳಿದರು, ನಿಂದಿಸಿದರು ಮತ್ತು ಕೆಟ್ಟದಾಗಿ ವರ್ತಿಸಿದರು. ಸಾಕ್ಷಿ ಮಲಿಕ್ ಅವರಿಗೂ ಈ ಅನುಭವ ಆಗಿದೆ’ ಎಂದು ಅವರು ತಿಳಿಸಿದರು. 

ADVERTISEMENT

ವಿನೇಶಾ, ಸಾಕ್ಷಿ ಮತ್ತು ಬಜರಂಗ್ ಈ ಮೂವರೂ ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವವಾದ ಖೇಲ್‌ರತ್ನ ಪಡೆದಿದ್ದಾರೆ. 2017ರಲ್ಲಿ ಸಾಕ್ಷಿ ಮತ್ತು 2019ರಲ್ಲಿ ಬಜರಂಗ್ ಅವರು ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ನಡೆದಿದ್ದೇನು

ದೆಹಲಿಯಲ್ಲಿ ಬುಧವಾರ ಭಾರಿ ಮಳೆಯಾಗಿತ್ತು. ಇದರಿಂದ ಧರಣಿನಿರತರ ಹಾಸಿಗೆಗಳು ಒದ್ದೆಯಾಗಿದ್ದವು. ಅವರಿಗೆ ನೆರವಾಗಲು ರಾತ್ರಿ 11 ಗಂಟೆ ಸುಮಾರಿಗೆ ಎಎಪಿಯ ಶಾಸಕ ಸೋಮನಾಥ ಭಾರ್ತಿ ಅವರು ಮಡಚುವ ಹಾಸಿಗೆಯೊಂದಿಗೆ ಜಂತರ್‌ ಮಂತರ್‌ಗೆ ಬಂದರು. ಹಾಸಿಗೆ ತರಲು ಅನುಮತಿ ಪಡೆದಿಲ್ಲ ಎಂದು ಪೊಲೀಸರು ಆಕ್ಷೇಪಿಸಿದರು. ಈ ವೇಳೆ, ಮಾತಿನ ಚಕಮಕಿ ಆರಂಭವಾಯಿತು. ಧರಣಿನಿರತರೂ ಕೂಡಿಕೊಂಡರು. ನಂತರ ತಳ್ಳಾಟ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.