ADVERTISEMENT

ದಾಖಲೆ ಉತ್ತಮಪಡಿಸಿಕೊಂಡ ಶ್ರೀಹರಿ

ವಿಶ್ವ ಯೂನಿವರ್ಸಿಟಿ ಗೇಮ್ಸ್‌: 200 ಮೀಟರ್ ಫ್ರೀಸ್ಟೈಲ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 16:16 IST
Last Updated 18 ಜುಲೈ 2025, 16:16 IST
ಭಾರತದ ಶ್ರೀಹರಿ ನಟರಾಜ್‌
ಭಾರತದ ಶ್ರೀಹರಿ ನಟರಾಜ್‌   

ನವದೆಹಲಿ: ಎರಡು ಬಾರಿಯ ಒಲಿಂಪಿಯನ್‌ ಶ್ರೀಹರಿ ನಟರಾಜ್‌ ಅವರು ಜರ್ಮನಿಯಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನ ಪುರುಷರ 200 ಮೀಟರ್ ಫ್ರೀಸ್ಟೈಲ್‌ನಲ್ಲಿ ‘ಭಾರತದ ಶ್ರೇಷ್ಠ ಕಾಲಮಾನ’ದೊಂದಿಗೆ ಗುರಿ ತಲುಪಿ, ಸೆಮಿಫೈನಲ್‌ಗೆ ಮುನ್ನಡೆದರು.

ಕ್ರೀಡಾಕೂಟದ ಎರಡನೇ ದಿನವಾದ ಶುಕ್ರವಾರ ಕರ್ನಾಟಕದ 24 ವರ್ಷದ ಶ್ರೀಹರಿ ಅವರು 1ನಿಮಿಷ 48.22 ಸೆಕೆಂಡ್‌ಗಳಲ್ಲಿ ಗುರಿಯನ್ನು ತಲುಪಿ, ತಮ್ಮ ಹೀಟ್ಸ್‌ನಲ್ಲಿ ಅಗ್ರಸ್ಥಾನಿಯಾದರು. ಇದರೊಂದಿಗೆ ಕಳೆದ ತಿಂಗಳು ಸಿಂಗಪುರ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ತಾವೇ ನಿರ್ಮಿಸಿದ್ದ (1ನಿ.48.66ಸೆ) ದಾಖಲೆಯನ್ನು ಉತ್ತಮ ಪಡಿಸಿಕೊಂಡರು. ಅವರು ಒಟ್ಟಾರೆಯಾಗಿ ಐದನೇ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದರು.

ಕರ್ನಾಟಕದ ಮತ್ತೊಬ್ಬ ಈಜುಪಟು ಅನೀಶ್ ಗೌಡ 1 ನಿ.52.42 ಸೆಕೆಂಡುಗಳಲ್ಲಿ ಗುರಿ ತಲುಪಿ, ತಮ್ಮ ಹೀಟ್ಸ್‌ನಲ್ಲಿ ಐದನೇ ಸ್ಥಾನ ಪಡೆದರು. ಅವರು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾದರು. 

ADVERTISEMENT

ಮತ್ತೊಂದೆಡೆ ಭಾರತದ ಪುರುಷ ಮತ್ತು ಮಹಿಳೆಯರ ಟೇಬಲ್‌ ಟೆನಿಸ್‌ ತಂಡಗಳು ಪ್ರಿ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆದವು. ಮಹಿಳೆಯರ ತಂಡವು ಗುಂಪು ಹಂತದ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ 3–1ರಿಂದ ಗೆಲುವು ಸಾಧಿಸಿ 16ರ ಘಟ್ಟ ಪ್ರವೇಶಿಸಿತು. 

ಭಾರತದ ಪುರುಷರ ತಂಡವು ಗುಂಪು ಹಂತದ ಪಂದ್ಯದಲ್ಲಿ 3–2ರಿಂದ ಕೊಲಂಬಿಯಾ ತಂಡವನ್ನು ಮಣಿಸಿತು. 16ರ ಘಟ್ಟದ ಮುಖಾಮುಖಿಯಲ್ಲಿ ಪ್ರಬಲ ಚೀನಾ ತಂಡವನ್ನು ಎದುರಿಸಲಿದೆ. 

ಆದರೆ, ಭಾರತದ ಬ್ಯಾಡ್ಮಿಂಟನ್‌ ಮಿಶ್ರ ತಂಡವು ನಿರಾಸೆ ಮೂಡಿಸಿತು. ಗುಂಪು ಹಂತದ ಪಂದ್ಯದಲ್ಲಿ 2–3ರಿಂದ ಹಾಂಗ್‌ಕಾಂಗ್‌ ತಂಡಕ್ಕೆ ಮಣಿಯಿತು. ಇದಕ್ಕೂ ಮುನ್ನ ಭಾರತ ತಂಡವು 5–0 ಅಂತರದಿಂದ ಮಕಾವು ತಂಡವನ್ನು ಸೋಲಿಸಿತ್ತು. 

ಭಾರತದ ಟೆನಿಸ್‌ ಆಟಗಾರ್ತಿ ಅಂಜಲಿ ರಾಠಿ ಮಹಿಳೆಯರ ಸಿಂಗಲ್ಸ್‌ನಲ್ಲಿ  6-0, 6-0 ಸೆಟ್‌ಗಳಿಂದ ಉಗಾಂಡಾದ ಕ್ರಿಸ್ಟಿಯಾನಾ ಒವೊಮುಹಂಗಿ ಅವರನ್ನು ಮಣಿಸಿ 32ರ ಘಟ್ಟಕ್ಕೆ ಮುನ್ನಡೆದರು. ಮತ್ತೊಬ್ಬ ಆಟಗಾರ್ತಿ ವೈಷ್ಣವಿ ಅಡ್ಕರ್ 6-1, 6-0ರಿಂದ ನೆದರ್ಲೆಂಡ್ಸ್‌ನ ಜೋಲಿಯನ್ ಮಾರಿಯಾ ಕ್ಸೆನಿಯಾ ಗೀಲ್ಸ್ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.