ADVERTISEMENT

Paris Olympics: ಮಹಿಳಾ ಟೆನಿಸ್: ಶ್ವಾಂಟೆಕ್‌ಗೆ ಆಘಾತ ನೀಡಿದ ಚೀನಾದ ಝೆಂಗ್

ಪಿಟಿಐ
Published 1 ಆಗಸ್ಟ್ 2024, 15:52 IST
Last Updated 1 ಆಗಸ್ಟ್ 2024, 15:52 IST
<div class="paragraphs"><p>Paris olympics</p></div>

Paris olympics

   

- ರಾಯಿಟರ್ಸ್ ಚಿತ್ರ

ಪ್ಯಾರಿಸ್‌: ಚೀನಾದ ಆಟಗಾರ್ತಿ ಝೆಂಗ್‌ ಕ್ವಿನ್‌ವೆನ್‌ ಅವರು ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಇಗಾ ಶ್ವಾಂಟೆಕ್‌ ಅವರ ಆಧಿಪತ್ಯಕ್ಕೆ ತೆರೆಯೆಳೆದರು. ಒಲಿಂಪಿಕ್ಸ್‌ ಟೆನಿಸ್ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಗುರುವಾರ ನೇರ ಸೆಟ್‌ಗಳಿಂದ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಶ್ವಾಂಟೆಕ್‌ ಅವರನ್ನು ಹಿಮ್ಮೆಟ್ಟಿಸಿದರು.

ADVERTISEMENT

ಫಿಲಿಪ್‌ ಶಾಟಿಯೆ ಕ್ರೀಡಾಂಗಣದಲ್ಲಿ ಕ್ವಿನ್‌ವೆನ್‌ 6–2, 7–5 ರಿಂದ ಗೆದ್ದು ಸಿಂಗಲ್ಸ್ ಫೈನಲ್ ತಲುಪಿದ ಚೀನಾದ ಮೊದಲ ಆಟಗಾರ್ತಿ ಎನಿಸಿದರು. ನಾಲ್ಕು ಬಾರಿಯ ಫ್ರೆಂಚ್‌ ಓಪನ್ ಚಾಂಪಿಯನ್‌ ಆಗಿರುವ ಪೋಲೆಂಡ್‌ನ ಆಟಗಾರ್ತಿ ಈ ಕೆಮ್ಮಣ್ಣಿನ ಅಂಕಣದಲ್ಲಿ ಸತತವಾಗಿ 25 ಪಂದ್ಯಗಳಲ್ಲಿ ಜಯಗಳಿಸಿದ್ದರು. ಜೊತೆಗೆ ಈ ಹಿಂದೆ ಕ್ವಿನ್‌ವೆನ್‌ ಜೊತೆಗಿನ ಆರೂ ಮುಖಾಮುಖಿಯಲ್ಲಿ ಶ್ವಾಂಟೆಕ್‌ ಜಯಶಾಲಿ ಆಗಿದ್ದರು.

‘ನನ್ನ ಸಂತಸ ವ್ಯಕ್ತಪಡಿಸಲು ಪದಗಲೇ ನಿಲುಕುತ್ತಿಲ್ಲ’ ಎಂದು ಕ್ವಿನ್‌ವೆನ್‌ ಪ್ರತಿಕ್ರಿಯಿಸಿದರು. ಅವರು ಫೈನಲ್‌ನಲ್ಲಿ ಅನ್ನಾ ಕರೋಲಿನಾ ಷ್ಮಿಡ್ಲೊವಾ (ಸ್ಲೊವಾಕಿಯಾ) ಮತ್ತು ಡೊನಾ ವೆಕಿಕ್‌ (ಕ್ರೊವೇಷ್ಯಾ) ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಹಾಲಿ ಚಾಂಪಿಯನ್‌ಗೂ ಸೋಲು:

ಪುರುಷರ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಅಲೆಕ್ಸಾಂಡರ್‌ ಜ್ವರೇವ್ ಅವರು ಒಲಿಂಪಿಕ್ಸ್‌ ಟೆನಿಸ್‌ನಿಂದ ಗುರುವಾರ ಹೊರಬಿದ್ದರು. ಇಟಲಿಯ ಲೊರೆಂಝೊ ಮುಸೆಟ್ಟಿ ಅವರು ಕ್ವಾರ್ಟರ್‌ಫೈನಲ್‌ನಲ್ಲಿ 7–5, 7–5 ರಿಂದ ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಜ್ವರೇವ್‌ ಅವರನ್ನು ಹಿಮ್ಮೆಟ್ಟಿಸಿದರು.

ವಿಶ್ವದ ಮೂರನೇ ನಂಬರ್ ಆಟಗಾರ ಕಾರ್ಲೊಸ್‌ ಅಲ್ಕರಾಜ್ 6–3, 7–6 (9/7) ರಿಂದ ಅಮೆರಿಕದ ಟಾಮಿ ಪಾಲ್ (13ನೇ ಕ್ರಮಾಂಕ) ಅವರನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆದರು. 21 ವರ್ಷ ವಯಸ್ಸಿನ ಸ್ಪೇನ್‌ ಆಟಗಾರನಿಗೆ ಮುಂದಿನ ಸುತ್ತಿನಲ್ಲಿ ನೊವಾಕ್ ಜೊಕೊವಿಚ್‌ ಎದುರಾಗುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.