ADVERTISEMENT

ಅಂಧ ವಿದ್ಯಾರ್ಥಿಗಳಿಗೆ ಅಂತರ್‌ದೃಷ್ಟಿ

ಈರಪ್ಪ ಹಳಕಟ್ಟಿ
Published 12 ಜೂನ್ 2011, 19:30 IST
Last Updated 12 ಜೂನ್ 2011, 19:30 IST
ಅಂಧ ವಿದ್ಯಾರ್ಥಿಗಳಿಗೆ ಅಂತರ್‌ದೃಷ್ಟಿ
ಅಂಧ ವಿದ್ಯಾರ್ಥಿಗಳಿಗೆ ಅಂತರ್‌ದೃಷ್ಟಿ   

ಇಂದು ಎಲ್ಲೆಡೆ ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣಗೊಂಡಿದೆ. ಇದಕ್ಕೆ ಅಪವಾದವೆನ್ನುವಂತೆ  ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಪ್ರೇಮಾಂಜಲಿ ಎಜುಕೇಷನ್  ಟ್ರಸ್ಟ್ ಅಂಧ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ  `ಅಂತರ್ ದೃಷ್ಟಿ~ ಎಂಬ ಡಿಜಿಟಲ್ ಗ್ರಂಥಾಲಯ ನಿರ್ಮಿಸಿ ಉಚಿತ ಜ್ಞಾನ ದಾಸೋಹ ನಡೆಸುತ್ತಿದೆ.

ಸಮಾಜದಿಂದ ಪಡೆದುಕೊಂಡಿರುವುದಕ್ಕೆ ಪ್ರತಿಯಾಗಿ ಏನಾದರೂ ಸೇವೆ ಸಲ್ಲಿಸಬೇಕೆಂದು ಕೆಲವು ಸಮಾನ ಮನಸ್ಕರಲ್ಲಿ ಮೂಡಿದ ತುಡಿತದ ಫಲವೇ `ಪ್ರೇಮಾಂಜಲಿ ಎಜುಕೇಷನ್ ಟ್ರಸ್ಟ್~ ಎನ್ನುತ್ತಾರೆ ಟ್ರಸ್ಟ್‌ನ ಅಧ್ಯಕ್ಷ ಬಾಲಕೃಷ್ಣ ಹೆಗಡೆ.

ಪ್ರೇಮಾಂಜಲಿಯಲ್ಲಿ ಇಂದು ಪ್ರಮುಖವಾಗಿ ನೆಲೆ, ಸನಿಹ, ಪ್ರಸಾದ, ಅಂತರ್ ದೃಷ್ಟಿಯೆಂಬ ನಾಲ್ಕು ನೆಲೆಗಳಿದ್ದು, ಅವುಗಳ ಮೂಲಕ ಅನಾಥ, ಅಸಹಾಯಕ, ಅಂಧ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಇಲ್ಲಿ ಎಲ್ಲವೂ ಉಚಿತ.

ಪ್ರಾರಂಭದಲ್ಲಿ ಅನಾಥ ಮಕ್ಕಳ ಪಾಲನೆಗೆ ಚಾಲನೆ ನೀಡಿದ ಟ್ರಸ್ಟ್ 2006 ರಲ್ಲಿ `ಅಂತರ್ ದೃಷ್ಟಿ~ ಎಂಬ ಯೋಜನೆಯಡಿ ಉನ್ನತ ಶಿಕ್ಷಣ ಪಡೆಯ ಬಯಸುವ ಅಂಧ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಅತ್ಯಾಧುನಿಕ  `ಡಿಜಿಟಲ್ ಲೈಬ್ರರಿ~ ನಿರ್ಮಿಸಿದೆ.

ಗ್ರಂಥಾಲಯದ ಸೌಲಭ್ಯದ ಜತೆಗೆ ಉನ್ನತ ಶಿಕ್ಷಣ ಪಡೆಯಲು ಬಯಸುವ ಅಂಧ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಹಾಗೂ ಅಂಧ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸ್ಥಾಪಿಸಿ ಅಂಧಕಾರದ ಬಾಳಿನಲ್ಲಿ ಆಶಾಕಿರಣ ಮೂಡಿಸುವ ಕಾರ್ಯ ಮಾಡುತ್ತಿದೆ.

ಈ ಗ್ರಂಥಾಲಯದಲ್ಲಿ ಒಟ್ಟು ಹತ್ತು ಕಂಪ್ಯೂಟರ್‌ಗಳಿದ್ದು, ಪ್ರತಿಯೊಂದು ಕಂಪ್ಯೂಟರ್‌ನಲ್ಲಿ ಅಂಧರ ಬಳಕೆಗೆಂದು ತಯಾರಿಸಲಾದ `ಜ್ವಾಸ್~ ಎಂಬ  `ಬರಹ ದೃಶ್ಯವನ್ನು ಓದುವ ತಂತ್ರಾಂಶ~ (ಸ್ಕ್ರೀನ್ ರೀಡಿಂಗ್ ಸಾಫ್ಟವೇರ್) ಅಳವಡಿಸಲಾಗಿದೆ. ಈ ತಂತ್ರಾಂಶದ ಮೂಲಕ ಅಂಧ ವಿದ್ಯಾರ್ಥಿಗಳು ಇಲ್ಲಿ ತಮ್ಮ ಶಿಕ್ಷಣಕ್ಕೆ ಅಗತ್ಯವಾದ ಪಠ್ಯಕ್ರಮವನ್ನು ಅಭ್ಯಸಿಸುತ್ತಾರೆ.

ಈ ಗ್ರಂಥಾಲಯದಲ್ಲಿ ಅಂಧ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ಮಾಧ್ಯಮಿಕ ಶಿಕ್ಷಣ, ಐಸಿಎಸ್‌ಸಿ, ಸಿಬಿಎಸ್‌ಸಿ, ಪಿಯುಸಿ, ಬಿ.ಎ, ಬಿ.ಕಾಂ, ಬಿಬಿಎಂ, ಎಂಬಿಎ, ರಾಜ್ಯ ಪಠ್ಯಕ್ರಮ (ಸ್ಟೇಟ್ ಸಿಲಬಸ್) ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಸುಮಾರು 1500 ಕ್ಕೂ  ಅಧಿಕ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್‌ಗಳಲ್ಲಿ ಸಂಗ್ರಹಿಸಿಡಲಾಗಿದೆ.

ಜತೆಗೆ ಈ ಗ್ರಂಥಾಲಯದಲ್ಲಿ ಹೆಸರು ನೊಂದಾಯಿಸಿಕೊಂಡ ಅಂಧ ವಿದ್ಯಾರ್ಥಿಗಳು ಹಾಗೂ ನಾಗರೀಕರು ನಿತ್ಯ ಇ-ಪೇಪರ್ ಓದುವ ಮೂಲಕ ಪ್ರಚಲಿತ ಸಂಗತಿಗಳನ್ನು ತಿಳಿದುಕೊಳ್ಳುತ್ತಾರೆ. ಅಲ್ಲದೆ ಅವರಿಗೆ ಇಷ್ಟವಾದ  ಕಾದಂಬರಿಗಳನ್ನು ಇಲ್ಲಿ ಸ್ಕ್ಯಾನ್‌ಮಾಡಿಸಿಕೊಂಡು ಓದುತ್ತಾರೆ  ಎನ್ನುತ್ತಾರೆ ಗ್ರಂಥಾಲಯದ ಉಸ್ತುವಾರಿ ನೋಡಿಕೊಳ್ಳುವ ಅಂಧ ಚಂದ್ರಶೇಖರ್.

ಸುಲಭದ ನೋಂದಾವಣೆ:  `ಉಚಿತ ಸೇವೆ ಒದಗಿಸುವ ಈ ಗ್ರಂಥಾಲಯಕ್ಕೆ ಹೆಸರು ನೊಂದಾಯಿಸಲು ಇಚ್ಛಿಸುವ ಅಂಧ ವಿದ್ಯಾರ್ಥಿಗಳು ಮತ್ತು ನಾಗರೀಕರು ತುಂಬ ಕಷ್ಟ ಪಡಬೇಕಾಗಿಲ್ಲ. ವೈದ್ಯರಿಂದ  ಪಡೆದ ಪ್ರಮಾಣ ಪತ್ರದ ಜತೆಗೆ ಒಂದೆರಡು ಭಾವಚಿತ್ರ ಕೊಟ್ಟರೆ ಸಾಕು ಇಲ್ಲಿ ಪ್ರವೇಶ ದೊರೆಯುತ್ತದೆ~ ಎನ್ನುತ್ತಾರೆ ಗ್ರಂಥಾಲಯದ ನಿರ್ದೇಶಕಿ ಸುಕನ್ಯಾ ರಮಣಿ.

ಟ್ರಸ್ಟ್‌ನಿಂದ ಸಹಾಯ: ಈ ಗ್ರಂಥಾಲಯದ ಉಪಯೋಗ ಪಡೆಯುತ್ತ ಉನ್ನತ ಶಿಕ್ಷಣ ಪಡೆಯುವ ಬಡ ಅಂಧ ವಿದ್ಯಾರ್ಥಿಗಳಿಗೆ  ಟ್ರಸ್ಟ್ ದಾನಿಗಳ ಮೂಲಕ ಆರ್ಥಿಕ ಸಹಾಯವನ್ನು ಒದಗಿಸುವಲ್ಲಿ ನೆರವಾಗುತ್ತದೆ. ಮತ್ತು  ಗ್ರಂಥಾಲಯದಿಂದ ದೂರ ಪ್ರದೇಶಗಳಲ್ಲಿ ವಾಸಿಸುವ ಅಂಧ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬಯಸಿ ಸಹಾಯ ಯಾಚಿಸಿದರೆ ಅಂತಹ ವಿದ್ಯಾರ್ಥಿಗಳಿಗೆ ದಾನಿಗಳ ಸಹಾಯದಿಂದ  ಕಂಪ್ಯೂಟರ್ ಇಲ್ಲವೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುತ್ತದೆ. ಈವರೆಗೆ  ಈ ಗ್ರಂಥಾಲಯದ ವತಿಯಿಂದ 10ಕ್ಕೂ ಅಧಿಕ ಕಂಪ್ಯೂಟರ್‌ಗಳನ್ನು ಮತ್ತು 5 ಲ್ಯಾಪ್‌ಟಾಪ್‌ಗಳನ್ನು ವಿತರಿಸಿದ್ದೇವೆ ಎನ್ನುತ್ತಾರೆ ಸುಕನ್ಯಾ.

ತರಬೇತಿ ಮತ್ತು ವಸತಿ:  ಅಧ್ಯಯನ ನಡೆಸುತ್ತ ಈ ಗ್ರಂಥಾಲಯದ ಉಪಯೋಗ ಪಡೆಯುವ ವಿದ್ಯಾರ್ಥಿಗಳಿಗೆ ಅಗತ್ಯವಾದ ಪಠ್ಯಕ್ರಮ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ಸಂಬಂಧಿಸಿದಂತೆ ಇಲ್ಲಿ ಸ್ವಯಂ ಪ್ರೇರಣೆಯಿಂದ ಬರುವ ಕೆಲ ನಿವೃತ್ತ ಶಿಕ್ಷಕರು ತರಬೇತಿ ನೀಡುತ್ತಾರೆ. ಜತೆಗೆ ಪ್ರತಿ ಭಾನುವಾರ ಆಸಕ್ತ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಸ್ನಾತ್ತಕೋತ್ತರ ಶಿಕ್ಷಣ ಪಡೆಯುತ್ತಿರುವ ಐದು ಜನ ವಿದ್ಯಾರ್ಥಿಗಳಿಗೆ ದಾನಿಗಳ ಸಹಾಯದಿಂದ ವಸತಿ ನಿಲಯ ವ್ಯವಸ್ಥೆ ಒದಗಿಸಲಾಗಿದೆ.

 ಗ್ರಂಥಾಲಯದ ಸದುಪಯೋಗ ಪಡೆದುಕೊಂಡಿರುವ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಜತೆಗೆ  ಕೇಂದ್ರ ಸರ್ಕಾರ `ಸಿಬ್ಬಂದಿ ಆಯ್ಕೆ ಆಯೋಗ~ (ಸ್ಟಾಫ್ ಸೆಲೆಕ್ಷನ್ ಕಮಿಷನ್) ನಡೆಸಿದ ಪರೀಕ್ಷೆಗೆ ಗ್ರಂಥಾಲಯದ ಉಪಯೋಗ ಪಡೆದ ಒಟ್ಟು 20 ಜನ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದು, ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಕೆಲವರು ಐಎಎಸ್‌ನಂತಹ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಈವರೆಗೆ ಸುಮಾರು 100 ಮಂದಿ ಅಂಧರು ಈ `ಅಂತರ್‌ದೃಷ್ಟಿ~ಯ ಉಪಯೋಗವನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.