ADVERTISEMENT

ಉಪ್ಪು ತಿಂದವರು ನೀರು ಕುಡಿಯಲೇಬೇಕು

ಗೋಪಾಲ ಹೆಗಡೆ
Published 15 ಮೇ 2011, 19:30 IST
Last Updated 15 ಮೇ 2011, 19:30 IST

ಭಾರತದಲ್ಲಿ ಈಗ ಭ್ರಷ್ಟಾಚಾರ ವಿರುದ್ಧ ಒಂದು ಅಲೆಯಂತೂ ಎದ್ದಿದೆ. ಜನ ಯೋಚನೆ ಮಾಡತೊಡಗಿದ್ದಾರೆ. ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ. ಈ ದೇಶದಲ್ಲಿ ಏನು ಆದರೂ ಭ್ರಷ್ಟ ರಾಜಕಾರಣಿಗಳಿಗೆ ಮಾತ್ರ ಶಿಕ್ಷೆಯಾಗುವುದಿಲ್ಲ ಎಂದು ಒಂದು ರೀತಿಯಲ್ಲಿ ನಿರಾಶಾವಾದಿಗಳಾಗಿದ್ದ ಹೋರಾಟಗಾರರಲ್ಲಿ ಮತ್ತೆ ಆಶಾಭಾವನೆ ಮೂಡಿದೆ.  ಒಬ್ಬ ಸುರೇಶ್ ಕಲ್ಮಾಡಿ ಜೈಲಿನಲ್ಲಿ ಕೊಳೆತರೆ ಸಾಕು, ಭಾರತ ಕ್ರೀಡಾರಂಗದಲ್ಲಿ ಉಳಿದಿರುವ ಇತರ ಭ್ರಷ್ಟರ ಚಡ್ಡಿಗಳು ಒದ್ದೆಯಾಗತೊಡಗುತ್ತವೆ. ಭ್ರಷ್ಟಾಚಾರ  ಸಂಪೂರ್ಣ ನಿರ್ಮೂಲವಾಗುತ್ತದೆ ಎಂದಲ್ಲ. ಆದರೆ ಹಣ ತಿನ್ನುವುದನ್ನೇ ಕಾಯಕ ಮಾಡಿಕೊಂಡಿರುವ ಕ್ರೀಡಾಪ್ರಭುಗಳು ಹೆದರಿಕೆಯಿಂದ ಎಚ್ಚರ ವಹಿಸುವುದಂತೂ ಖಂಡಿತ. ಇದು ಆಗಲೇಬೇಕಿತ್ತು.

ಕಳೆದ ವರ್ಷ ನವದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡೆಗಳು ಯಶಸ್ವಿಯಾಗಿ ನಡೆಯಲು ಕಲ್ಮಾಡಿ ಮತ್ತು ಅವರ ಕಳ್ಳರ ಗುಂಪು ಖಂಡಿತವಾಗಿಯೂ ಕಾರಣವಾಗಿರಲಿಲ್ಲ. ನೂರು ಪದಕ ಗೆದ್ದ ಭಾರತದ ಕ್ರೀಡಾಪಟುಗಳು ಕಾರಣರಾಗಿದ್ದರು. ಯಾವುದೇ ಗಲಾಟೆ ನಡೆಯದಂತೆ ನೋಡಿಕೊಂಡಿದ್ದ ಪೊಲೀಸರು, ಸೈನಿಕರು ಕಾರಣರಾಗಿದ್ದರು. ದಿನವಿಡೀ ನಗುನಗುತ್ತ ದುಡಿದ ಸ್ವಯಂಸೇವಕರು ಕಾರಣರಾಗಿದ್ದರು. ಕ್ರೀಡೆಗಳಿಗೆ ಮೊದಲು ಹಾಗೂ ನಂತರ ಕಲ್ಮಾಡಿ ಅವರ ಸಂಘಟನಾ ಸಮಿತಿ ಸುದ್ದಿ ಮಾಡಿದ್ದು ಉತ್ತಮ ಕೆಲಸಗಳಿಂದಲ್ಲ, ಭ್ರಷ್ಟಾಚಾರದ ಹಗರಣಗಳಿಂದ. ಅವರಿಗೆಲ್ಲ ಜೈಲು ಶಿಕ್ಷೆಯಾಗಬೇಕೆಂದು ಎಲ್ಲರೂ ಬರೆದರು. ಜನರೂ ಕೂಗಿದರು. ಆದರೆ ಈ ಭ್ರಷ್ಟ ರಾಜಕಾರಣಿಗಳು ತಮ್ಮ ಅಧಿಕಾರ ಹಾಗೂ ಹಣದ ಬಲದಿಂದ ಪಾರಾಗುತ್ತಾರೆ, ಒಂದಿಬ್ಬರು ಬಕರಾ ಅಧಿಕಾರಿಗಳು ತಲೆದಂಡ ತೆತ್ತುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಸುರೇಶ್ ಕಲ್ಮಾಡಿ ಅವರ ಕೆಲವು ಜೊತೆಗಾರರು ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದ್ದು ಆಶ್ಚರ್ಯದ ಜೊತೆ ಸಂತಸವನ್ನೂ ಮೂಡಿಸಿದೆ.

ಕಾಮನ್‌ವೆಲ್ತ್ ಕ್ರೀಡೆಗಳಿಗಾಗಿ ನಿರ್ಮಿಸಲಾಗಿದ್ದ ಅಥ್ಲೀಟುಗಳ ಗ್ರಾಮದಲ್ಲಿ ಹಾವು ಚೇಳುಗಳು ಕಾಟ ಕೊಟ್ಟಿದ್ದವು. ತಿಹಾರ್ ಜೈಲಿನಲ್ಲಿ ತಮಗಿಂತ ಹೆಚ್ಚು ಭಯಂಕರ ವಿಷಜಂತುಗಳು ಇರುವುದು ಹಾವು ಚೇಳುಗಳಿಗೆ ಗೊತ್ತಿರುವುದರಿಂದ ಅವು ಆ ಕಡೆ ಸುಳಿದಿರುವುದಿಲ್ಲ. ಆದರೆ ರಕ್ತ ಹೀರುವ ಸೊಳ್ಳೆ, ತಿಗಣೆಗಳ ಕಾಟದ ಅನುಭವ ಕಲ್ಮಾಡಿ ಅವರಿಗೆ ಈಗ ಆಗುತ್ತಿರಬಹುದು. ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರಾಗಿ, ವಿವಿಧ ಅಂತರರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಲ್ಲಿ ಪ್ರಮುಖರಾಗಿ ಅಧಿಕಾರದ ಸವಿ ಉಂಡಿರುವ ಅವರು ಕ್ರೀಡಾಪಟುಗಳಂತೆ ಎಂದೂ ಕೈಯಲ್ಲಿ ತಟ್ಟೆ ಹಿಡಿದುಕೊಂಡು ಊಟಕ್ಕೆ ಕ್ಯೂ ನಿಂತವರಲ್ಲ. ಈಗ ತಿಹಾರ್ ಜೈಲಿನಲ್ಲಿ ಕೈದಿಗಳ ಜೊತೆ ತಟ್ಟೆ ಕೈಲಿ ಹಿಡಿದುಕೊಂಡು ಕ್ಯೂನಲ್ಲಿ ಊಟ ಹಾಕಿಸಿಕೊಳ್ಳುತ್ತಿದ್ದಾರೆ. ಅವರು ‘ಗಣ್ಯ ಕೈದಿ’ಯೇನೂ ಅಲ್ಲವಲ್ಲ!

ADVERTISEMENT

ಇದು ಇಷ್ಟಕ್ಕೇ ನಿಲ್ಲಬಾರದು. ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಆಗಿರುವ ಅವ್ಯವಹಾರಗಳ ಸಂಪೂರ್ಣ ತನಿಖೆ ಆಗಬೇಕು. ದೆಹಲಿ ಆಡಳಿತವೂ ಇದರಲ್ಲಿ ಭಾಗಿಯಾಗಿದೆ. ಸುರೇಶ್ ಕಲ್ಮಾಡಿ ಅವರೆಲ್ಲರ ಹೆಸರು ಹೇಳುವ ಧೈರ್ಯ ಮಾಡಬೇಕು. ಹೇಗೂ ಅವರೀಗ ಮುಳುಗಿಯಾಗಿದೆ. ಎಲ್ಲರನ್ನೂ ಕರೆದುಕೊಂಡೇ ಮುಳುಗಲಿ. ಎಲ್ಲ ತಪ್ಪಿತಸ್ಥರಿಗೆ ಪೂರ್ಣಾವಧಿ ಶಿಕ್ಷೆಯಾಗಬೇಕು. ಅಂದರೆ ಯಾರೂ ಮೇಲೇಳದಂತೆ ಮುಳುಗಬೇಕು. ಕಲ್ಮಾಡಿ ಅವರನ್ನು ಪಕ್ಷದಿಂದಲೇ ಹೊರಹಾಕಿರುವ ಕಾಂಗ್ರೆಸ್, ತನ್ನ ನಿರ್ಧಾರ ಬದಲಿಸದೇ ಬಿಗಿ ಹಿಡಿದರೆ ಆಗ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳಿಗೆ ಕಾಂಗ್ರೆಸ್ ಮೇಲೆ ಒಲವು ಮೂಡುತ್ತದೆ. ಹಿಂದೊಮ್ಮೆ ಇದೇ ಅಂಕಣದಲ್ಲಿ ಹೇಳಿದಂತೆ ಈ ಭ್ರಷ್ಟರೆಲ್ಲ ತಾವು ತಿಂದಿರುವ ಹಣವನ್ನು ಒಂದು ರೂಪಾಯಿಯನ್ನೂ ಬಿಡದೆ ಕಕ್ಕುವಂತೆ ಮಾಡಬೇಕು. ಆ ಹಣ ಬಡ ಕ್ರೀಡಾಪಟುಗಳಿಗೆ ಸೌಕರ್ಯ ಒದಗಿಸಲು ಸಾಕಾಗುತ್ತದೆ.

ಭಾರತ ಕ್ರಿಕೆಟ್ ರಂಗದಲ್ಲೂ ಒಂದು ಪಕ್ಕಾ ತನಿಖೆ ಆಗಬೇಕಿದೆ. ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಈಗ ಯಾರೂ ಮಾತನಾಡುತ್ತಿಲ್ಲ. ಲಲಿತ್ ಮೋದಿ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಅವರ ಸ್ಥಾನದಲ್ಲಿ ಈಗ ಇರುವವರೂ ಜನರ ಹುಚ್ಚು ಬೆಂಬಲದಲ್ಲಿ ತೇಲಾಡುತ್ತಿದ್ದಾರೆ. ಈಗ ನಡೆದಿರುವ ಐಪಿಎಲ್‌ನಲ್ಲಿ ಭ್ರಷ್ಟಾಚಾರದ ವಾಸನೆ ಇನ್ನೂ ಬಡಿದಿಲ್ಲವಾದರೂ ಲೈಂಗಿಕ ಹಗರಣಗಳು ಹೊರಬೀಳುವ ಸಾಧ್ಯತೆಗಳಿವೆ. ಪಂದ್ಯಗಳ ಸಮಯದಲ್ಲಿ ಆಟಗಾರರನ್ನು, ಪ್ರೇಕ್ಷಕರನ್ನು ರಂಜಿಸಲು ಕುಣಿಯುತ್ತ ಮೈಮಾಟ ಮೆರೆಯುವ ಬೆಡಗಿಯರಲ್ಲಿ ಒಬ್ಬಳು ಆಟಗಾರರ ವರ್ತನೆ ಬಗ್ಗೆ ಹೇಳಿಕೊಂಡಿದ್ದಾಳೆ. ಜನರಿಗೂ ಈ ‘ಮೈ’ದಾನಗಳ ಬಗ್ಗೆ ಗೊತ್ತಿದ್ದರೂ ಹಣ ಕೊಟ್ಟು ಆಟ ನೋಡಲು ಹೋಗುತ್ತಿರುವುದು ಆಶ್ಚರ್ಯಕರ. ಜನರ ಕ್ರಿಕೆಟ್‌ಪ್ರೇಮದ ಲೆಕ್ಕವೇ ಸಿಗುತ್ತಿಲ್ಲ. ದೋನಿ ಮತ್ತು ಇತರ ಆಟಗಾರರು ರಾಜಯೋಗದಲ್ಲೇ ಹುಟ್ಟಿರಬೇಕು.

ಭಾರತ ಕ್ರಿಕೆಟ್ ತಂಡ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಕೈಕೊಳ್ಳಲಿದೆ. ನಂತರ ಇಂಗ್ಲೆಂಡ್‌ಗೆ ಹೋಗಲಿದೆ. ಭಾರತ ವಿಶ್ವ ಕಪ್ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ತರಬೇತುದಾರ ಗ್ಯಾರಿ ಕರ್ಸ್ಟೆನ್ ಅವರ ಸ್ಥಾನವನ್ನು ಈಗ ಜಿಂಬಾಬ್ವೆಯ ಡಂಕನ್ ಫ್ಲೆಚರ್ ತುಂಬಲಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ಕಾಯಕಲ್ಪ ನೀಡಿದ ತರಬೇತುದಾರ ಎಂದು ಹೆಸರು ಮಾಡಿರುವ ಫ್ಲೆಚರ್ ಅವರ ಹೆಸರನ್ನು ಕರ್ಸ್ಟೆನ್ ಅವರೇ ಸೂಚಿಸಿದ್ದರಂತೆ. ವಿಂಡೀಸ್ ಪ್ರವಾಸ ಮುಗಿಯುವುದರೊಳಗೆ ಭಾರತ ತಂಡವನ್ನು ಸೇರಿಕೊಳ್ಳಲಿರುವ ಫ್ಲೆಚರ್ ಅವರ ಹಿಡಿತ ಏನು ಎಂಬುದು ಇಂಗ್ಲೆಂಡ್ ಪ್ರವಾಸದಲ್ಲಿ ಗೊತ್ತಾಗಲಿದೆ. ಯಾಕೆಂದರೆ ಫ್ಲೆಚರ್ ಅವರಿಗೆ ಇಂಗ್ಲೆಂಡ್‌ನ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳೆರಡೂ ಚೆನ್ನಾಗಿ ಗೊತ್ತು. ಅದಕ್ಕಿಂತ ಹೆಚ್ಚಾಗಿ ಭಾರತ  ಟೆಸ್ಟ್ ನಲ್ಲಿ ನಂಬರ್-1 ಹಾಗೂ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿಶ್ವ ಚಾಂಪಿ ಯನ್. ಭಾರತದ ಆಟಗಾರರು ಇದೇ ಮಟ್ಟ ಉಳಿಸಿಕೊಳ್ಳುವಂತೆ ಮಾಡಿದರೆ ಸಾಕು, ಫ್ಲೆಚರ್ ಹೆಸರು ಕೆಡುವುದಿಲ್ಲ.

ಭಾರತ ಕ್ರಿಕೆಟ್ ತಂಡಕ್ಕೆ ವಿದೇಶೀ ತರಬೇತುದಾರ ಬೇಕೆ ಬೇಡವೇ ಎಂಬ ಬಗ್ಗೆ ಬಹಳ ವರ್ಷಗಳಿಂದ ಚರ್ಚೆ ನಡೆದಿದೆ. ಭಾರತೀಯರಿಗೆ ಬಿಳಿಚರ್ಮದ ಬಗ್ಗೆ ಯಾವಾಗಲೂ ಒಲವು ಜಾಸ್ತಿ. ಕ್ರಿಕೆಟ್‌ನಲ್ಲಂತೂ ಅದು ಇನ್ನಷ್ಟು ಹೆಚ್ಚು. ಇತರ ಕ್ರೀಡೆಗಳಲ್ಲೂ ಹಲವು ಮಂದಿ ವಿದೇಶೀ ತರಬೇತುದಾರರು ಕಾರ್ಯ ನಿರ್ವಹಿಸಿದ್ದಾರೆ. ಆದರೆ ಅವರೆಲ್ಲ ಭಾರತದಲ್ಲಿ ಸಿಗುವ ಹಣದ ಬಗ್ಗೆ ಯೋಚಿಸಿದ್ದಾರೆಯೇ ಹೊರತು, ಅವರಿಂದ ನಿರೀಕ್ಷಿತ ಫಲಿತಾಂಶಗಳೇನೂ ಬಂದಿಲ್ಲ. ಅಥ್ಲೆಟಿಕ್ಸ್‌ನಲ್ಲಿ, ವೇಟ್‌ಲಿಫ್ಟಿಂಗ್‌ನಲ್ಲಿ ಅಲ್ಪಸ್ವಲ್ಪ ಪ್ರಗತಿ ಸಾಧಿಸಿದ್ದರೂ ಉದ್ದೀಪನ ಮದ್ದು ಸೇವನೆಯ ಚಟವನ್ನೂ ಹಚ್ಚಿಹೋಗಿದ್ದಾರೆ.

ವಿಶ್ವ ಕ್ರೀಡಾರಂಗದಲ್ಲಿ ಭಾರತ ಇನ್ನೂ ಬಹಳ ಹಿಂದೆ ಇದೆ. ಕ್ರಿಕೆಟ್‌ನಲ್ಲಿ ಮಾತ್ರ ಸಂಭ್ರಮ ಇದೆ. ಯಾಕೆಂದರೆ ಅದರಲ್ಲಿ ಹಣ ಇದೆ, ಅದನ್ನು ಮೆರೆಸುವವರು ಇದ್ದಾರೆ. ಇಲ್ಲಿರುವ ಕಳ್ಳರು ಸಿಕ್ಕಿಬೀಳುವುದಿಲ್ಲ ಹಾಗೂ ಅವರನ್ನು ರಕ್ಷಿಸಲು ಎಲ್ಲ ಪಕ್ಷಗಳ ರಾಜಕೀಯ ಮುಖಂಡರೂ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.