ADVERTISEMENT

ಕ್ಯಾಪಾಬ್ಲಾಂಕಾ ಕಿರೀಟ: ಶಶಿಕಿರಣ್‌

ಮಾನಸ ಬಿ.ಆರ್‌
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
ಕ್ಯಾಪಾಬ್ಲಾಂಕಾ ಕಿರೀಟ: ಶಶಿಕಿರಣ್‌
ಕ್ಯಾಪಾಬ್ಲಾಂಕಾ ಕಿರೀಟ: ಶಶಿಕಿರಣ್‌   

ಕ್ಯಾಪಾಬ್ಲಾಂಕಾ  ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ  ಕೃಷ್ಣನ್ ಶಶಿಕಿರಣ್‌ ಪಾತ್ರರಾಗಿದ್ದಾರೆ.

ಚೆನ್ನೈನಲ್ಲಿ 2013ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ ಪತ್ರಿಕಾಗೋಷ್ಟಿಯಲ್ಲಿ ವಿಶ್ವನಾಥ್ ಆನಂದ್‌ ತಮ್ಮ ‘ಸೆಕೆಂಡ್ಸ್‌’ ಆಟಗಾರರ ಪರಿಚಯ ಹೇಳಿದಾಗ ಮೊದಲ ಬಾರಿಗೆ ಕೃಷ್ಣನ್ ಶಶಿಕಿರಣ್ ಅವರ ಹೆಸರು ಕೇಳಿಬಂದಿತ್ತು.

ಈ ಟೂರ್ನಿಯಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಆಡಲು ಆನಂದ್ ಅವರಿಗೆ ಸಹಾಯ ಮಾಡುವ ಮಹತ್ವದ ಹೊಣೆ ಶಶಿಕಿರಣ್‌ ಅವರಿಗೆ ಸಿಕ್ಕಿತ್ತು.

ADVERTISEMENT

ತಮಿಳುನಾಡಿನ ಶಶಿಕಿರಣ್‌ 1999ರಲ್ಲಿ ಇಂಡಿಯನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ಇದೇ ವರ್ಷ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದ್ದು ಅವರಿಗೆ ಬ್ರೇಕ್‌ ನೀಡಿತು.

ಸತತ ಒಂದು ವರ್ಷದ ಪರಿಶ್ರಮದ ಬಳಿಕ ಅವರು ಗ್ರ್ಯಾಂಡ್‌ಮಾಸ್ಟರ್‌ ಆದರು. ಆ ನಂತರ ಅವರು ಹಿಂದಿರುಗಿ ನೋಡಲಿಲ್ಲ.

ಭಾರತ ಕಂಡ ಅತ್ಯುತ್ತಮ ಆಕ್ರಮಣಕಾರಿ ಚೆಸ್ ಆಟಗಾರರಲ್ಲಿ ಅವರೂ ಒಬ್ಬರಾಗಿ ಬೆಳೆದಿದ್ದಾರೆ.

‘ಶಶಿಕಿರಣ್ ಎದುರು ಆಡಬೇಕಾದರೆ  ಪಂದ್ಯದ ಮೊದಲಿನಿಂದಲೂ ಆಕ್ರಮಣಕಾರಿಯಾಗಿ ಆಡಬೇಕು. ಹೆಚ್ಚು ಜಾಗರೂಕರಾಗಿರಬೇಕು. ಪ್ರತಿಯೊಂದೂ ನಡೆಯಲ್ಲೂ ಅವರು ಯಾವ ರೀತಿ ಆಡಬಲ್ಲರು ಎಂಬುದನ್ನು ವಿಶ್ಲೇಷಣೆ ಮಾಡುವುದು ಕಷ್ಟ. ಅವರ ಆಲೋಚನೆಗಳು ಸಾಕಷ್ಟು ಆಳವಾಗಿ ಇರುತ್ತವೆ. ತಾಳ್ಮೆಯಿಂದ ಆಡುವ ಕಲೆಯನ್ನು ಅವರಿಂದ ಕಲಿತುಕೊಳ್ಳಬೇಕು’ ಎಂದು ಮೈಸೂರಿನ ಗ್ರ್ಯಾಂಡ್‌ಮಾಸ್ಟರ್‌ ತೇಜ್‌ಕುಮಾರ್‌ ‘ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.
ಕ್ಯೂಬಾದ ವರಾಡೆರೊದಲ್ಲಿ ನಡೆದ 52ನೇ ಕ್ಯಾಪಾಬ್ಲಾಂಕಾ ಚೆಸ್ ಟೂರ್ನಿ ಭಾರತದ ಆಟಗಾರನ ಮಟ್ಟಿಗೆ ಮಹತ್ವದ್ದಾಗಿತ್ತು.

ಹತ್ತು ಸುತ್ತುಗಳ ಪಂದ್ಯದಲ್ಲಿ ಅವರು  6.5 ಪಾಯಿಂಟ್‌ಗಳಿಂದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಟೂರ್ನಿಯಲ್ಲಿ ಶಶಿಕಿರಣ್ ಅಗ್ರಶ್ರೇಯಾಂಕದ ಉಕ್ರೇನ್‌ನ ಆಟಗಾರ ವೆಸಿಲೆ ಇವಾನ್‌ಚುಕ್ ಅವರನ್ನು ಹಿಂದಿಕ್ಕಿದ್ದರು. ಈ ಆಟಗಾರನ ಬಳಿ 5.5 ಪಾಯಿಂಟ್ಸ್‌ ಇದ್ದವು.

ಕ್ಯೂಬಾದ ಅತ್ಯಂತ ಹಳೆಯ ಟೂರ್ನಿ ಇದಾಗಿದೆ. ಮಾಜಿ ವಿಶ್ವ ಚಾಂಪಿಯನ್‌ ಜೋಸ್‌ ರಾಲ್‌ ಕ್ಯಾಪಾಬ್ಲಾಂಕಾ ಅವರ ಸ್ಮರಣಾರ್ಥ ಈ ಚಾಂಪಿಯನ್‌ಷಿಪ್‌  ನಡೆಯುತ್ತದೆ.

2669 ಫಿಡೆ ರೇಟಿಂಗ್ ಹೊಂದಿರುವ ಶಶಿಕಿರಣ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 83ನೇ ಸ್ಥಾನದಲ್ಲಿದ್ದಾರೆ.

‘ಸೆಕೆಂಡ್ಸ್‌’ ಆಟಗಾರ ಎಂದರೆ ಏನು?
ಚೆಸ್ ಮಾದರಿಯಲ್ಲಿ ಸೆಕೆಂಡ್ಸ್ ಆಟಗಾರರ ಪ್ರಾಮುಖ್ಯತೆ ಇಂದಿನ ದಿನಗಳಲ್ಲಿ ಸಾಕಷ್ಟು ಹೆಚ್ಚಿದೆ. ಮಹತ್ವದ ಟೂರ್ನಿಗಳಲ್ಲಿ ಆಡುವ ಆಟಗಾರರು ತಮ್ಮ ಸಹಾಯಕ್ಕಾಗಿ ಹೊಂದಿರುವ ತಂಡವನ್ನು ಹೀಗೆ ಕರೆಯುತ್ತಾರೆ.

ಸೆಕೆಂಡ್ಸ್ ಆಟಗಾರರು ಕೇವಲ ಸಹಾಯಕರಾಗಿರುವುದಿಲ್ಲ. ಬದಲಾಗಿ ಅವರು ಮಾರ್ಗದರ್ಶಕರು ಕೂಡ ಆಗಿರುತ್ತಾರೆ. ಇವರ ಸಲಹೆ ಸೂಚನೆಗಳ ಮೇರೆಗೆ ಪ್ರಮುಖ ಆಟಗಾರರು ಆಡುತ್ತಾರೆ.

ಚೆಸ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಅಂತರರಾಷ್ಟ್ರೀಯ  ಆಟಗಾರರು ಸೆಕೆಂಡ್ಸ್ ತಂಡದಲ್ಲಿ ಇರುತ್ತಾರೆ.

ಇದೇ ರೀತಿ ಆನಂದ್ ಅವರ ತಂಡದಲ್ಲಿಯೂ ಸಂದೀಪನ್ ಚಂದಾ, ಪೀಟರ್‌ ಲೆಕೊ, ರಾಡೊಸ್ಲಾವ್ ವೋಜ್ತಸ್‌ಜೆಕ್ ಇದ್ದರು.  ಆದರೆ ಶಶಿಕಿರಣ್ ವಿಶ್ವ ಚಾಂಪಿಯನ್‌ಷಿಪ್ ವೇಳೆ ಈ ತಂಡವನ್ನು ಸೇರಿಕೊಂಡಿದ್ದರು.

ಈ ಚಾಂಪಿಯನ್‌ಷಿಪ್‌ನಲ್ಲಿ ಆನಂದ್ ಅವರ ಗೆಲುವಿಗಾಗಿ ಈ ತಂಡ ಸಾಕಷ್ಟು ಕೆಲಸ ಮಾಡಿತ್ತು. ಎದುರಾಳಿಯ ಪ್ರತಿಯೊಂದು ನಡೆಯ ಬಗ್ಗೆಯೂ ಸಂಶೋಧನೆ ನಡೆಸಿ ಮಾಹಿತಿ ಕಲೆ ಹಾಕಲಾಗಿತ್ತು.

ಮ್ಯಾಗ್ನಸ್ ಕಾರ್ಲ್‌ಸನ್ ಅವರೊಂದಿಗೆ 2004ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಆಡಿದ ಅನುಭವ ಹೊಂದಿದ್ದ ಹಂಗೇರಿಯ ಲೆಕೊ ಸಾಕಷ್ಟು ನೂತನ ತಂತ್ರಗಳನ್ನು ಆನಂದ್ ಅವರಿಗೆ ಪರಿಚಯಿಸಿದ್ದರು.

**

ಪ್ರಮುಖ ಅಂಶಗಳು

* 2700 ಪೀಕ್‌ ರೇಟಿಂಗ್ ತಲುಪಿದ ಭಾರತದ ಎರಡನೇ ಆಟಗಾರ
* 2007ರಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 21ನೇ ಸ್ಥಾನಕ್ಕೆ ಏರಿದ್ದರು.

**

ಕೃಷ್ಣನ್ ಶಶಿಕಿರಣ್ ಸಾಧನೆ

2003ರಲ್ಲಿ ಏಷ್ಯನ್ ವೈಯಕ್ತಿಕ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸ್ಥಾನ

2006ರಲ್ಲಿ ಏರೊಫ್ಲೋಟ್ ಓಪನ್‌ನಲ್ಲಿ ಚಾಂಪಿಯನ್‌

2006ರ ಏಷ್ಯನ್ ಕ್ರೀಡಾಕೂಟದ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ

2010ರ ಏಷ್ಯನ್ ಕ್ರೀಡಾಕೂಟದ ಪುರುಷರ ತಂಡ ವಿಭಾಗದಲ್ಲಿ ಪ್ರಶಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.