ADVERTISEMENT

ದಸರಾ ಕುಸ್ತಿ ರೋಮಾಂಚನ...

ಕೆ.ಓಂಕಾರ ಮೂರ್ತಿ
Published 9 ಅಕ್ಟೋಬರ್ 2016, 19:30 IST
Last Updated 9 ಅಕ್ಟೋಬರ್ 2016, 19:30 IST
ದಸರಾ ಕುಸ್ತಿ ರೋಮಾಂಚನ...
ದಸರಾ ಕುಸ್ತಿ ರೋಮಾಂಚನ...   

‘ನಮ್ಮದು ತೀರಾ ಬಡ ಕುಟುಂಬ. ಕೂಲಿ ಮಾಡಿ ಬದುಕುತ್ತಿದ್ದೇವೆ. ಆದರೆ, ಕುಸ್ತಿ ಎಂದರೆ ಪಂಚಪ್ರಾಣ. ರಕ್ತದಲ್ಲಿಯೇ ಕುಸ್ತಿ ಅಡಗಿದೆ. ಎಲ್ಲಿಯೇ ನಡೆಯಲಿ ಹೋಗಿ ಕುಸ್ತಿ ಆಡುತ್ತೇನೆ. ಹೀಗಾಗಿ, ನಾಲ್ಕಾರು ಜನ ಗುರುತಿಸುತ್ತಿದ್ದಾರೆ, ಪೈಲ್ವಾನ್‌ ಎಂಬ ಗೌರವ ಸಿಗುತ್ತಿದೆ. ಕುಟುಂಬದ ಹಿರಿಯರು ಕುಸ್ತಿಯಲ್ಲಿ ತೊಡಗಿಸಿಕೊಂಡಿದ್ದರು’
–ಹೀಗೆಂದು ಹೇಳಿದ್ದು ಕೆ.ಆರ್‌.ನಗರ ತಾಲ್ಲೂಕಿನ ಗಂಧನಹಳ್ಳಿಯ ಪೈಲ್ವಾನ್‌ ನಿಂಗರಾಜು. ಗಂಧನಹಳ್ಳಿಯ ಪ್ರತಿ ಮನೆಯಲ್ಲೊ ಒಬ್ಬ ಪೈಲ್ವಾನ್‌ ಇದ್ದಾರೆ. ಹಿಂದೆ ಪೈಲ್ವಾನ್ ಇದ್ದರೆಂದರೆ ಅದು ಊರಿಗೆ ಹೆಮ್ಮೆಯ ಸಂಗತಿ. ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಿ ಕಳುಹಿಸುತ್ತಿದ್ದರು.

49 ವರ್ಷ ವಯಸ್ಸಿನ ನಿಂಗರಾಜು ಬಾಲ್ಯದಿಂದಲೇ ದಸರಾ ನಾಡಕುಸ್ತಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೈಸೂರಿನಲ್ಲಿ ಎಲ್ಲಿಯೇ ಕುಸ್ತಿ ನಡೆಯಲಿ ಅವರು ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಬಂದು ಪಾಲ್ಗೊಳ್ಳುತ್ತಾರೆ.

‘ನಮ್ಮೂರಿನಿಂದ ಮೈಸೂರಿಗೆ ಬಂದು ಹೋಗಲು ಹಾಗೂ ಊಟಕ್ಕೆಂದು 200 ರೂಪಾಯಿ ಖರ್ಚಾಗುತ್ತದೆ. ಜೊತೆಗೆ ಅಂದಿನ ಕೂಲಿಗೂ ಕುತ್ತು ಬರುತ್ತದೆ. ಆದರೆ, ಕುಸ್ತಿ ಬಿಟ್ಟು ಬದುಕಿರಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಖರ್ಚು ಮಾಡಿಕೊಂಡು ಬರುತ್ತೇನೆ. ಹಿಂದೆಲ್ಲಾ ಊರಿನ ಯಜಮಾನರು ಕಳಿಸಿಕೊಡುತ್ತಿದ್ದರು’ ಎಂದು ಅವರು ಹೇಳುತ್ತಾರೆ.

ಮೈಸೂರು ಭಾಗದಲ್ಲಿನ ಜನರ ಕುಸ್ತಿ ಮೇಲಿನ ಪ್ರೀತಿಯೇ ಅಮೋಘ. ರಮ್ಮನಹಳ್ಳಿ, ಗಂಜಾಂ, ಶ್ರೀರಂಗಪಟ್ಟಣ, ನಂಜನ ಗೂಡು, ಕಳಲೆ, ಪಡುವಾರಹಳ್ಳಿ, ಕ್ಯಾತಮಾರನಹಳ್ಳಿ, ಉದ್ಬೂರು, ಬನ್ನೂರು, ಮೆಲ್ಲಹಳ್ಳಿ, ಇಟ್ಟಿಗೆಗೂಡು, ಬೆಳವಾಡಿ ಪೈಲ್ವಾನರದ್ದೇ ಮೇಲುಗೈ. ಗೆದ್ದರೆ ಒಂದಿಷ್ಟು ಹಣ ಸಿಗುತ್ತದೆ. ಇಲ್ಲ ದಿದ್ದರೆ ಕುಸ್ತಿಯಲ್ಲಿ ಪಾಲ್ಗೊಂಡ ಖುಷಿ ಲಭಿಸುತ್ತದೆ.

ಈ ಭಾಗದಲ್ಲಿ ಪೈಲ್ವಾನರಿಗೆ ವಿಶೇಷ ಗೌರವ. ಪೈಲ್ವಾನರಿಗೆ ಹಿರಿಯ ಕುಸ್ತಿಪಟುಗಳೆಂದರೆ ಅಪಾರ ಭಕ್ತಿಭಾವ. ಅಖಾಡಕ್ಕಿಳಿ ಯುವ ಮುನ್ನ ಹಾಗೂ ನಂತರ ಸುತ್ತಮುತ್ತ ಕುಳಿತಿರುವವರ ಕಾಲಿಗೆ ನಮಿಸಲು ಮರೆಯುವುದಿಲ್ಲ. ಕುಸ್ತಿ ಸ್ಪರ್ಧೆಯು ಹಿಂದೆ ರಾಜಪ್ರತಿಷ್ಠೆ, ನಾಡಿನ ಗೌರವದ ಸಂಕೇತವಾಗಿತ್ತು. ದಸರಾ ಸಂದರ್ಭ ನಡೆಯುವ ಕಾರ್ಯಕ್ರಮಗಳ ನಡುವೆ ನಾಡಕುಸ್ತಿಗೆ ಮಹತ್ವದ ಸ್ಥಾನ. ಇದಕ್ಕೆ ದೊಡ್ಡ ಇತಿಹಾಸವೇ ಇದೆ.

ರಾಜರ ಆಳ್ವಿಕೆ ಕಾಲದಲ್ಲಿ ವಿವಿಧ ರಾಜ್ಯಗಳಿಂದ ಪೈಲ್ವಾನ್‌ರನ್ನು ಕರೆಸಿ ಕುಸ್ತಿ ನಡೆಸಲಾಗುತ್ತಿತ್ತು. ಪೈಲ್ವಾನರಿಗೆ ರಾಜರೇ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಮೈಸೂರಿನಲ್ಲಿ ಎಲ್ಲಿ ನೋಡಿದರಲ್ಲಿ ಗರಡಿಮನೆಗಳು. ಈಶ್ವರರಾಯನ ಗರಡಿ, ಫಕೀರ್ ಅಹಮ್ಮದ್ ಸಾಹೇಬರ ಗರಡಿ ತುಂಬಾ ಪ್ರಸಿದ್ಧಿ. ಪೈಲ್ವಾನರ ನಿತ್ಯದ ದಿನಚರಿ, ಅವರ ಊಟ, ತಾಲೀಮು ಎಲ್ಲವೂ ವಿಭಿನ್ನ.

ದಸರಾ ಮಹೋತ್ಸವದ ವೇಳೆ ರಾಜ್ಯ ಮತ್ತು ಅಖಿಲ ಭಾರತ ಮ್ಯಾಟ್‌ ಕುಸ್ತಿ ಹಾಗೂ ನಾಡಕುಸ್ತಿ ಆಯೋಜಿಸಲಾಗುತ್ತದೆ. ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಯವರು ನಾಡಕುಸ್ತಿ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಮ್ಯಾಟ್‌ ಕುಸ್ತಿಯಲ್ಲಿ ಉತ್ತರ ಕರ್ನಾಟಕ ಭಾಗದವರದ್ದೇ ಪ್ರಾಬಲ್ಯ. ಇವರಿಗೆ ದಸರಾ ಕಂಠೀರವ, ಕೇಸರಿ, ಕಿಶೋರ, ಕುಮಾರ ಪ್ರಶಸ್ತಿ ಕಟ್ಟಿಟ್ಟಬುತ್ತಿ. ಈ ವರ್ಷವೂ ಅದೇ ರೀತಿ ಆಯಿತು. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ ಕುಸ್ತಿಪಟುಗಳದ್ದೇ ಪಾರಮ್ಯ.

ರಾಷ್ಟ್ರಮಟ್ಟದ ಕುಸ್ತಿಯಲ್ಲಿ ದೆಹಲಿ, ಪಂಜಾಬ್‌, ಹರಿಯಾಣ, ಮಹಾರಾಷ್ಟ್ರದಿಂದ ಬಂದು ಕುಸ್ತಿ ಮಾಡಿ ಹೋಗುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕುಸ್ತಿಪಟು    ₹ 2ರಿಂದ 3 ಲಕ್ಷ ಹಣ ಪಡೆಯುತ್ತಾರೆ.

‘ಸಾಂಪ್ರದಾಯಿಕ ಕುಸ್ತಿ ಉಳಿಸಲು ಮಣ್ಣಿನ ಅಖಾಡದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಹೆಚ್ಚು ಇಷ್ಟಪಡುತ್ತೇನೆ. ಆದರೆ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಹೆಸರು ತರಲು ಮ್ಯಾಟ್‌ ಮೇಲೆ ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳು ತ್ತೇನೆ’ ಎನ್ನುತ್ತಾರೆ ದೆಹಲಿಯ ಪೈಲ್ವಾನ್‌ ಜೋಗಿಂದರ್‌ ಸಿಂಗ್‌.

ಮಣ್ಣಿನ ಅಖಾಡದ ಮೇಲಿನ ಪ್ರೀತಿಯ ಸೆಳೆತ ನಿಧಾನವಾಗಿ ಮಾಸುತ್ತಿದೆ. ಆ ವೈಭೋಗ, ಅದ್ಧೂರಿ, ಸಂಪ್ರದಾಯ ನಿಧಾನವಾಗಿ ಕಣ್ಮರೆಯಾಗುತ್ತಿದೆ.
‘ಕುಸ್ತಿಯ ವೈಭವ ಈಗ ಬರೀ ಮಾತುಗಳಲ್ಲಿ ಅಥವಾ ಪುಸ್ತಕಗಳಲ್ಲಿ ಉಳಿದಂತಿದೆ. ಮಟ್ಟಿಯ ಅಖಾಡದೊಳಗಿನ ಆ ಖದರ್‌ ನಿಧಾನವಾಗಿ ಕರಗುತ್ತಿದೆ. ಕುಸ್ತಿ ಮೇಲಿನ ಪ್ರೀತಿ, ಅಕ್ಕರೆ, ಒಲವು ನಿಧಾನವಾಗಿ ಕಡಿಮೆಯಾಗುತ್ತಿದೆ. ಜಿಮ್ನಾಷಿಯಂ, ಏರೋಬಿಕ್ಸ್, ಸಿಕ್ಸ್‌ ಪ್ಯಾಕ್‌ನ ಆಧುನಿಕ ಭರಾಟೆಯಲ್ಲಿ ಕುಸ್ತಿಯು ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ. ಗರಡಿ ಮನೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ ಪೈಲ್ವಾನ್‌ ಛೋಟಾ ರಫೀಕ್‌.

ಈಶ್ವರರಾಯರ 10 ಜನಗಳ ಗರಡಿಯ ಛೋಟಾ ರಫೀಕ್‌ 70ರ ದಶಕದಿಂದಲೇ ದಸರಾ ನಾಡಕುಸ್ತಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆಯಷ್ಟೇ ಸ್ಪರ್ಧೆ ನಿಲ್ಲಿಸಿ ಮಾರ್ಗದರ್ಶಕರಾಗಿ ದುಡಿಯುತ್ತಿದ್ದಾರೆ.

ರಫೀಕ್‌ ಹೇಳುವಂತೆ ಮೈಸೂರು ನಗರಿಯಲ್ಲಿ 100ಕ್ಕೂ ಹೆಚ್ಚು ಗರಡಿ ಮನೆ, 2000 ಸಾವಿರಕ್ಕೂ ಹೆಚ್ಚು ಪೈಲ್ವಾನರು ಇದ್ದರಂತೆ. ಆ ಸಂಖ್ಯೆ ಈಗ ತೀರಾ ಕುಸಿದಿದೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಸ್ವತಃ ರಫೀಕ್‌ ಅವರು ಕೆಸರೆಯಲ್ಲಿ ‘ಸೈಯದ್‌ ನೂರುಲ್ಲಾ ಛೋಟಾ ರಫೀಕ್‌’ ಎಂಬ ಗರಡಿ ನಡೆಸುತ್ತಿದ್ದಾರೆ.

‘ಶ್ರೀಮಂತರು ಕುಸ್ತಿಯತ್ತ ಆಸಕ್ತಿ ತೋರಿಸುತ್ತಿಲ್ಲ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವವರು, ರೈತರ ಮಕ್ಕಳು ಮಾತ್ರ ಈ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾರೆ. ಈಗ ತರಬೇತಿ ನೀಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪೈಲ್ವಾನವರಿಗೆ ಬೇಕಾದ ಹಾಲು, ಬೆಣ್ಣೆ, ತುಪ್ಪ, ಬಾದಾಮಿ ಬೆಲೆ ಗಗನಕ್ಕೇರಿದೆ. ಇತ್ತೀಚಿನ ದಿನಗಳಲ್ಲಿ ಗೆದ್ದಾಗ ಕುಸ್ತಿಪಟುಗಳಿಗೆ ನೀಡುತ್ತಿರುವ ಬಹುಮಾನ ಮೊತ್ತ ತೀರಾ ಕಡಿಮೆ. ಮಸಾಜ್‌ಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಹುಣಸೂರಿನ ಪೈಲ್ವಾನ್‌ ಹರ್ಷ 10 ವರ್ಷಗಳಿಂದ ನಾಡಕುಸ್ತಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ‘ಈಗ ಪ್ರತಿಭೆ ಇದ್ದರೂ ಬೆಳೆಯಲು ಬಿಡಲ್ಲ. ಕುಸ್ತಿಯೊಳಗೆ ರಾಜಕೀಯ ನುಸುಳಿದೆ’ ಎಂದು ಅವರು ದೂರುತ್ತಾರೆ. ‘ಹಿಂದೆ ಜೋಡಿ ಕಟ್ಟುವ ಕಾರ್ಯದ ವೇಳೆ ಇಡೀ ಆವರಣವೇ ಭರ್ತಿಯಾಗುತಿತ್ತು. ನೂಕುನುಗ್ಗಲು ಸಂಭವಿಸುತಿತ್ತು. ದಿನವಾದರೂ ಜೋಡಿಕಟ್ಟುವ ಕಾರ್ಯ ಮುಗಿಯುತ್ತಿರಲಿಲ್ಲ. ಅಷ್ಟೊಂದು ಉತ್ಸಾಹ. ಈಗ ನಾವೇ ಊರೂರಿಗೆ ಹೋಗಿ ನಾಡಕುಸ್ತಿಯಲ್ಲಿ ಪಾಲ್ಗೊಳ್ಳಿ ಎನ್ನಬೇಕಾ ಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪೈಲ್ವಾನ್‌ ಗಂಜಾಂ ರವಿ.

ಸೇನಾಪಡೆಯ ಪೈಲ್ವಾನ್‌ರ ಪ್ರಾಬಲ್ಯ...
ಈ ಬಾರಿಯ ದಸರಾ ಕುಸ್ತಿ ರಾಜ್ಯ ಹಾಗೂ ಅಖಿಲ ಭಾರತ ಚಾಂಪಿಯನ್‌ಷಿಪ್‌ನಲ್ಲಿ ಸೇನಾಪಡೆಯ ಕುಸ್ತಿಪಟುಗಳದ್ದೇ ಮೇಲುಗೈ. ಸೇನಾಪಡೆಯ ವಿವಿಧ ವಿಭಾಗಗಳಾದ ಬೆಂಗಳೂರಿನ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ (ಎಂಇಜಿ), ಎಎಸ್‌ಸಿ ಸೆಂಟರ್‌ ಹಾಗೂ ಬೆಳಗಾವಿಯ ಮರಾಠಾ ಲೈಟ್‌ ಇನ್ಫೆಂಟ್ರಿ ಪ್ರತಿನಿಧಿಸಿರುವ ಕುಸ್ತಿಪಟುಗಳು ವಿವಿಧ ವಿಭಾಗಗಳಲ್ಲಿ ಪದಕ ಜಯಿಸಿದರು.

ADVERTISEMENT

‘ಕುಸ್ತಿ ನಮ್ಮ ಪಂಚಪ್ರಾಣ. ಬದುಕು ಕಟ್ಟಿಕೊಳ್ಳಲು ಸ್ಫೂರ್ತಿ ಆಗಿರುವ ಸ್ಪರ್ಧೆ. ರಾಷ್ಟ್ರದ ಹಿತಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ. ಈಗಾಗಲೇ ತರಬೇತಿ ಪಡೆದಿರುವ ನಾವು ಗಡಿಯಲ್ಲಿ ಹೋರಾಡಲು ಸಜ್ಜಾಗಿದ್ದೇವೆ’ ಎಂದಿದ್ದು ಪೈಲ್ವಾನ್‌ ಆನಂದ ಹೊಳೆಹಡಗಲಿ.

ಧಾರವಾಡ ಜಿಲ್ಲೆಯ ಮಾದನಬಾವಿಯ ಆನಂದ ಬೆಳಗಾವಿಯ ಲೈಟ್‌ ಇನ್ಫೆಂಟ್ರಿಯಲ್ಲಿದ್ದಾರೆ. ಅವರು 2007 ಹಾಗೂ 2013ರಲ್ಲಿ ‘ದಸರಾ ಕಂಠೀರವ’ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಬಾರಿಯೂ ‘ದಸರಾ ಕಂಠೀರವ’ ವಿಭಾಗದ ಕುಸ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಫೈನಲ್‌ನಲ್ಲಿ ಪಾಂಡುರಂಗ ಶಿಂಧೆ ಎದುರು ಪೈಪೋಟಿ ನಡೆಸಿದರು.

‘ನಮ್ಮ ಪೋಷಕರು ರೈತರು. ನಮ್ಮದು ಕುಸ್ತಿ ಕುಟುಂಬ. ಹಿಂದಿನಿಂದಲೂ ಕುಸ್ತಿಯೇ ನಮ್ಮೆಲ್ಲರ ಜೀವಾಳ. ಇವತ್ತು ಸೇನಾಪಡೆಯಲ್ಲಿ ಉದ್ಯೋಗ ಸಿಗಲು ಕುಸ್ತಿಯಲ್ಲಿ ಮಾಡಿದ ಸಾಧನೆಯೇ ಕಾರಣ’ ಎಂದು ಆನಂದ್‌ ನುಡಿಯುತ್ತಾರೆ.

ಕೂಡಿಟ್ಟ ಹಣದಲ್ಲಿ ಊರಿನಲ್ಲಿ ಗರಡಿ ಮನೆ ಕಟ್ಟಲು ಇವರು ಸಿದ್ಧತೆ ನಡೆಸಿದ್ದಾರೆ. ಕುಸ್ತಿ ಪರಂಪರೆ ಮುಂದುವರಿಯಬೇಕು ಎಂಬುದು ಇವರ ಉದ್ದೇಶ. ಜಮಖಂಡಿಯ ಪಾಂಡುರಂಗ ಶಿಂಧೆ, ಗೋಪಾಲ ಕೋಳಿ (ದಸರಾ ಕೇಸರಿ ಫೈನಲ್‌), ಮುಧೋಳದ ರಮೇಶ್‌ ಹೊಸಕೋಟೆ (ದಸರಾ ಕಿಶೋರ), ಬೆಳಗಾವಿಯ ಸುಲ್ತಾನಪುರದ ಸಿದ್ದಣ್ಣ ಪಾಟೀಲ್‌ (ದಸರಾ ಕುಮಾರ) ಕೂಡ ಬೆಂಗಳೂರಿನ ಎಂಇಜಿಯವರು. ರಮೇಶ್‌ ಹೊಸಕೋಟೆ 2013ರಲ್ಲಿ ‘ದಸರಾ ಕಿಶೋರ’ ಗೌರವ ಪಡೆದಿದ್ದರು.

‘ಏಳನೇ ತರಗತಿಯಲ್ಲಿ ಓದುವಾಗ ಕುಸ್ತಿ ಆಡಲು ಮುಂದಾದೆ. ತಾತ, ಮುತ್ತಾತನ ಕಾಲದಿಂದಲೂ ನಮ್ಮ ಕುಟುಂಬ ಕುಸ್ತಿ ಸ್ಪರ್ಧೆಗಳಲ್ಲಿ ನಿರತವಾಗಿದೆ. ನಮಗೆ ಕುಸ್ತಿಯೇ ಜೀವಾಳ’ ಎಂದು ನುಡಿದಿದ್ದು ಪಾಂಡುರಂಗ ಶಿಂಧೆ.

*
ರಾಜ ಮಹಾರಾಜರ ಕಾಲದಿಂದಲೂ ಕುಸ್ತಿ ನಡೆಯುತ್ತಿದೆ. ಹಿಂದೆ ಅರಮನೆ ಮುಂಭಾಗದಲ್ಲೇ ಕುಸ್ತಿ ಆಯೋಜಿಸಲಾಗುತಿತ್ತು. ಕುಸ್ತಿ ನಡೆಯದಿದ್ದರೆ ದಸರಾ ಮಹೋತ್ಸವಕ್ಕೆ ಹೊಳಪು ಬರುವುದಿಲ್ಲ. ಈ ಸಂಪ್ರದಾಯ ಉಳಿಸಿ ಬೆಳೆಸುವುದು ಯುವ ಜನಾಂಗದ ಕೈಯಲ್ಲಿದೆ.
–ಪೈಲ್ವಾನ್‌ ಕೆ.ಆರ್‌.ರಂಗಯ್ಯ, ಮೈಸೂರು

*
ಕುಸ್ತಿಯಿಂದ ಬಂದ ಹಣದಿಂದಲೇ ನಾನೀಗ ಹಳ್ಳಿಯಲ್ಲಿ ಮನೆ ಕಟ್ಟಿಸಿದ್ದೇನೆ. ಕಾರು ಖರೀದಿಸಿದ್ದೇನೆ. ಕುಟುಂಬದವರಿಗೆ ಸಹಾಯ ಮಾಡಿದ್ದೇನೆ. ಕುಟುಂಬದ ಕುಸ್ತಿ ಪರಂಪರೆ ಮುಂದುವರಿಸಿದ್ದೇನೆ.
-ಜೋಗಿಂದರ್‌ ಸಿಂಗ್‌,
ದೆಹಲಿ ಕುಸ್ತಿಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.