ADVERTISEMENT

ನೀವಾಗಬೇಕೆ ಫಿಟ್‌ನೆಸ್ ಟ್ರೈನರ್?

ಸುಷ್ಮಾರಾಣಿ ಎಂ.
Published 31 ಜುಲೈ 2011, 19:30 IST
Last Updated 31 ಜುಲೈ 2011, 19:30 IST
ನೀವಾಗಬೇಕೆ ಫಿಟ್‌ನೆಸ್ ಟ್ರೈನರ್?
ನೀವಾಗಬೇಕೆ ಫಿಟ್‌ನೆಸ್ ಟ್ರೈನರ್?   

ಇತ್ತೀಚಿನ ದಿನಗಳಲ್ಲಿ ಬಾಡಿ ಫಿಟ್‌ನೆಸ್ ಹಾಗೂ ಆರೋಗ್ಯದ ಕಾಳಜಿ ಸಾಮಾನ್ಯವಾಗಿ ಹದಿಹರೆಯದವರಿಂದ ಹಿಡಿದು ಗೃಹಿಣಿಯರು, ಅರವತ್ತು ವರ್ಷ ದಾಟಿದ ಇಳಿ ವಯೋಮಾನದ ಹಿರಿಯ ನಾಗರೀಕರಲ್ಲಿ ಕೂಡಾ ಕಾಣಿಸಿಕೊಳ್ಳುತ್ತಿದೆ. 

ಉತ್ತಮ ಆರೋಗ್ಯ ಹಾಗೂ ಉತ್ತಮ ಶಾರೀರಿಕ ಸ್ಥಿತಿ ಕಾಯ್ದುಕೊಳ್ಳುವ ಸಲುವಾಗಿ ಪ್ರತಿದಿನವೂ ನಿಯಮಿತವಾದ ವ್ಯಾಯಾಮ ದೇಹಕ್ಕೆ ಅತ್ಯಗತ್ಯ. 

ಇಂದಿನ ಆರೋಗ್ಯ ಕಾಳಜಿ ಮಾರ್ನಿಂಗ್ ವಾಕ್‌ಗಷ್ಟೇ ಸೀಮಿತವಾಗಿಲ್ಲ. ದೈಹಿಕ ಕಸರತ್ತಿನ ತಾಲೀಮಿಗಾಗಿ ಸುಸಜ್ಜಿತ ಜಿಮ್‌ಗಳು ನಗರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ.
 
ಈಗಿನ ಒತ್ತಡಯುಕ್ತ ಜೀವನ ಶೈಲಿಯಲ್ಲಿ, ತೂಕ ಇಳಿಸುವ ಸಲುವಾಗಿಯೋ, ತೂಕ ಪಡೆದುಕೊಳ್ಳುವ ಸಲುವಾಗಿಯೋ, ಇಲ್ಲವೇ ಆಕರ್ಷಕ ದೇಹ ಧಾರ್ಡ್ಯತೆ, ಉತ್ತಮ ಆರೋಗ್ಯ ಹೊಂದುವ ಸಲುವಾಗಿ ಇಂತಹ ಹೈಟೆಕ್ ವ್ಯಾಯಾಮ ಶಾಲೆಗಳಿಗೆ (ಜಿಮ್/ಹೆಲ್ತ್ ಕೇರ್ ಸೆಂಟರ್) ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ.  ಇದೊಂದು ಉದ್ಯಮವಾಗಿ ಬೆಳೆದಿದೆ.  ಅದೇ ರೀತಿ ಫಿಟ್‌ನೆಸ್ ಟ್ರೈನರ್ಸ್‌ (ವ್ಯಾಯಾಮ ತರಬೇತುದಾರರ) ಬೇಡಿಕೆಯೂ ಹುಟ್ಟಿಕೊಂಡಿದೆ. 

ವೃತ್ತಿಪರ ಜಿಮ್ ಇನ್‌ಸ್ಟ್ರಕ್ಟರ್ ಆಗಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಯುವಕ ಯುವತಿಯರಿಗೆ ಇದು ಒಳ್ಳೆಯ ಆಯ್ಕೆ. ವಿದ್ಯಾರ್ಥಿಗಳು ಇತರ ಉದ್ಯೋಗಸ್ಥರೂ ಸಹ ತಮ್ಮ ಬಿಡುವಿನ ಸಮಯದಲ್ಲಿ (ಬೆಳಿಗ್ಗೆ ಮತ್ತು ಸಂಜೆ) ಅರೆಕಾಲಿಕವಾಗಿ ಈ ವೃತ್ತಿಯನ್ನು ಮಾಡಬಹುದು. ಇದರಿಂದ ಗಳಿಕೆಯೊಂದಿಗೆ ನಿಮ್ಮ ಆರೋಗ್ಯ, ದೈಹಿಕ ಸ್ಥಿತಿ ಉತ್ತಮವಾಗಿ ಕಾಯ್ದುಕೊಳ್ಳಬಹುದು.

ಅರ್ಹ ಫಿಟ್‌ನೆಸ್ ವೃತ್ತಿಪರರಿಗೆ, ಪ್ರತಿಷ್ಠಿತ ಜಿಮ್, ಕ್ಲಬ್, ಸ್ಪಾ, ರೆಸಾರ್ಟ್, ಹೋಟೆಲ್, ಹೆಲ್ತ್ ಮತ್ತು ಫಿಟ್ನೆಸ್ ಸೆಂಟರ್, ಕಾರ್ಪೊರೆಟ್ ಫಿಟ್‌ನೆಸ್ ಟ್ರೈನಿಂಗ್ ಸೆಂಟರ್‌ಗಳಲ್ಲಿ  ಅಥವಾ ಪರ್ಸನಲ್, ಟ್ರೈನರ್ ಆಗಿ ಆಕರ್ಷಕ ವೇತನ ದೊರೆಯುವ ನೌಕರಿ ಲಭ್ಯ.

ಅದನ್ನು ಹೊರತುಪಡಿಸಿ, ಆಸಕ್ತಿ ಇದ್ದಲ್ಲಿ  ನೀವು ವೈಟ್ ಲಿಫ್ಟಿಂಗ್, ಏರೋಬಿಕ್ಸ್, ಕರಾಟೆ, ಕಿಕ್ ಬಾಕ್ಸಿಂಗ್, ಪೈಲೆಟ್ಸ್, ಸ್ಪಿನ್ನಿಂಗ್, ಯೋಗ, ಟಾಯ್ ಚೀ, ಸ್ಪೋರ್ಟ್ಸ್ ನ್ಯೂಟ್ರಿಷನ್ ಹೀಗೆ ಯಾವುದಾದರೂ ಒಂದು ಸೀಮಿತ ಪ್ರಕಾರಕ್ಕೆ ತರಬೇತುದಾರರಾಗಬಹುದು.

ಪ್ರಾರಂಭಿಕ ಹಂತದಿಂದಲೂ ಉತ್ತಮವಾಗಿ ಕಾರ್ಯ ನಿರ್ವಹಿಸುವುದರಿಂದ ನಿಮ್ಮನ್ನೇ ಈ ನಿಟ್ಟಿನಲ್ಲಿ ಅವಲಂಬಿಸುವ ಅಧಿಕ ಜನರ ಪಡೆಯೇ ಸೃಷ್ಟಿಗೊಳ್ಳುತ್ತದೆ. ನಿಮ್ಮ ಸಂಪರ್ಕ ಕೌಶಲ ಮತ್ತು ಕಾರ್ಯಪ್ರವೃತ್ತತೆಗಳು ಉತ್ತಮವಾಗಿದ್ದರೆ, ಮುಂದೆ ನೀವು ಸ್ವಂತವಾಗಿ ಫಿಟ್‌ನೆಸ್ ಕನ್ಸಲ್ಟಿಂಗ್, ಟ್ರೈನಿಂಗ್‌ಗಳನ್ನು ನಡೆಸಬಹುದು.

ಗೆಸ್ಟ್ ಸೆಶನ್ಸ್ ಫಿಟ್‌ನೆಸ್ ರೈಟಿಂಗ್, ಅಥ್ಲೆಟಿಕ್ಸ್ ಅಥವಾ ಸ್ಪೋರ್ಟ್ಸ್ ಕೋಚಿಂಗ್, ಗ್ರೂಪ್ ಫಿಟ್‌ನೆಸ್ ಇನ್‌ಸ್ಟ್ರಕ್ಷನ್ಸ್‌ಗಳನ್ನು ನಡೆಸಬಹುದು ಅಥವಾ ಸ್ವಲ್ಪ ಬಂಡವಾಳ ಹೂಡಿಕೆಯಿಂದ ನಿಮ್ಮದೇ ಆದ ಸ್ವಂತ ಜಿಮ್ ಒಂದನ್ನು ಕೂಡ ಸ್ಥಾಪಿಸಬಹುದು.

ಟೆಲಿವಿಷನ್ ಚಾನೆಲ್‌ನಲ್ಲಿ  ಪ್ರದರ್ಶನ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳನ್ನು ನೀಡಬಹುದು. ಫಿಟ್‌ನೆಸ್‌ಗೆ ಸಂಬಂಧಿಸಿದ ಸಿ.ಡಿ.ಗಳನ್ನು ತಯಾರಿಸಬಹುದು.

ಅರ್ಹತೆ: ಫಿಟ್‌ನೆಸ್ ಟ್ರೈನರ್ ಹುದ್ದೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ತರಬೇತಿ ಪಡೆದ ಬಗ್ಗೆ ಪ್ರಮಾಣಪತ್ರ. ಅತ್ಯವಶ್ಯ. ತರಬೇತಿಯ ನಂತರವೂ ಫಿಟ್‌ನೆಸ್‌ನ ಕೌಶಲಗಳ ಅನುಷ್ಠಾನ ಹಾಗೂ ಅಭಿವೃದ್ದಿ ಪಡಿಸಿಕೊಳ್ಳುವುದು ತರಬೇತುದಾರರ ಕರ್ತವ್ಯ.

ಅದರೊಂದಿಗೆ ಕಾಲ ಕಾಲಕ್ಕೆ ಹೊಸ ತರಬೇತಿಯ ವಿಧಾನಗಳನ್ನು ಮತ್ತು ಫಿಟ್‌ನೆಸ್ ಸಲಕರಣೆಗಳ ಬಳಕೆ ಕುರಿತು ವಿಶಿಷ್ಟ ಜ್ಞಾನ ಮತ್ತು ಕೌಶಲವನ್ನು ಅಭಿವೃದ್ಧಿಪಡಿಸಿಕೊಂಡು ಸ್ವತಃ ಫಿಟ್‌ನೆಸ್ ಟ್ರೈನರ್ ದೈಹಿಕವಾಗಿ ಹೆಚ್ಚು ಸಮರ್ಥರಾಗಿದ್ದರೆ ಟ್ರೈನಿಂಗ್ ಸೆಂಟರ್‌ನಲ್ಲಿ ಪ್ರವೇಶ ಪಡೆಯುವ ಸಾರ್ವಜನಿಕರು ತಮ್ಮ ತರಬೇತುದಾರರಿಂದ ಪ್ರೇರೇಪಿಸಲ್ಪಡುತ್ತಾರೆ.

ಹಲವಾರು ಸಂಸ್ಥೆಗಳು ಫಿಟ್‌ನೆಸ್‌ನ ಕೋರ್ಸ್‌ಗಳಿಗೆ ಥಿಯರಿ ಹಾಗೂ ಪ್ರಾಯೋಗಿಕ ತರಗತಿಗಳನ್ನು ನಡೆಸುತ್ತವೆ. ಕೆಲವು  ಕೋರ್ಸ್‌ಗಳಿಗೆ ಆನ್‌ಲೈನ್‌ನಲ್ಲಿ ಕೂಡ ತರಬೇತಿ ಪಡೆದುಕೊಳ್ಳಬಹುದು. ಎರಡರಿಂದ ಮೂರು ತಿಂಗಳ ಸಮಯಾವಧಿಯಿಂದ ಹಿಡಿದು ಎರಡರಿಂದ ಮೂರು ವರ್ಷಗಳ ತರಬೇತಿಗಳು ಲಭ್ಯ.
 
ಸಾಮಾನ್ಯ ಫಿಟ್‌ನೆಸ್ ಕೋರ್ಸ್‌ಗಳು, ಮಾನವರ ಅಂಗ ರಚನೆ (ಹ್ಯೂಮನ್ ಅನಾಟಮಿ) ಮಾಂಸಖಂಡಗಳ ರಚನೆ ಹಾಗೂ ಕಾರ್ಯವಿಧಾನ ಅಧ್ಯಯನ  (ಮಸಲ್ ಫಿಸಿಯಾಲಜಿ) ಕೈನೆಸಿಯಾಲಜಿ, ವ್ಯಾಯಾಮದ ತಂತ್ರ ಕೌಶಲಗಳು ಮತ್ತು ಪ್ರಥಮ ಚಿಕಿತ್ಸೆಯನ್ನೊಳಗೊಂಡಿದೆ.

ಕೋರ್ಸ್ ವಿವರ:  ಸ್ಪೆಶಾಲಿಟಿ ಸರ್ಟಿಫಿಕೇಶನ್    ಕೋರ್ಸ್ ಗಳಾದ ಪರ್ಸನಲ್ ಟ್ರೈನಿಂಗ್, ಸ್ಟ್ರೆಂತ್ ಟ್ರೈನಿಂಗ್, ಕಮ್ಯೋಂಡೋ ಟ್ರೈನಿಂಗ್, ಮಾರ್ಷಲ್ ಆರ್ಟ್ಸ್, ಏರೋಬಿಕ್ಸ್, ಯೋಗ, ಲೈಫ್‌ಸ್ಟೈಲ್ ಅಂಡ್ ವೈಯಿಟ್ ಮ್ಯೋನೇಜ್‌ಮೆಂಟ್, ನ್ಯೂಟ್ರಿಷನ್, ಸ್ಪೋರ್ಟ್ಸ್ ಕೋಚಿಂಗ್, ಪ್ರಿ / ಪೋಸ್ಟ್ ನೇಟಲ್ ಎಕ್ಸರ್  ಸೈಜಸ್, ಚಿಲ್ಡ್ರನ್ /ಸೀನಿಯರ್ ಸಿಟಿಜನ್ - ಸ್ಪೆಸಿಫಿಕ್ ಪ್ರೋಗ್ರಾಮ್ಸ, ಮಸಲ್ ಕಂಡೀಷನಿಂಗ್, ಪೋಸ್ಟ್ ರೀ ಹ್ಯಾಬಿಲಿಟೇಷನ್ ಫಾರ್ ಇಂಜ್ಯುರೀಸ್ ಇತ್ಯಾದಿಗಳು ಲಭ್ಯ.
ಮಸಾಜ್ ತೆರಪಿ, ರಿಫ್ಲೆಕ್ಸಾಲಜಿ ಅಥವಾ ಆಕ್ಯುಪ್ರೆಶರ್‌ನ ಕೋರ್ಸ್‌ಗಳಿಗೆ ಕೂಡ ತರಬೇತಿ ನೀಡಲಾಗುತ್ತದೆ.

ತರಬೇತಿ ಸಂಸ್ಥೆಗಳು:

* ರೀಬಾಕ್ ಫಿಟ್‌ನೆಸ್ ಸರ್ಟಿಫಿಕೇಷನ್ ಕೋರ್ಸ್ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ನವದೆಹಲಿಗಳಲ್ಲಿವೆ. www.rebok-training.com

* ಗೋಲ್ಡ್‌ಜಿಮ್ ಯೂನಿವರ್ಸಿಟಿ, ಮುಂಬೈ, ಬೆಂಗಳೂರು, ದೆಹಲಿ. www.goldsgymindia.com

* ಜಿ.ಎಫ್.ಎಫ್.ಐ. ಫಿಟ್‌ನೆಸ್ ಅಕಾಡೆಮಿ

* ಬೆಟರ್ ಫಿಟ್‌ನೆಸ್ ಫಾರ್ ಯು

* ತಲ್‌ಪಾರ್ಸ್‌ ಫಿಟ್‌ನೆಸ್ ಅಕಾಡೆಮಿ,

* ಎಸ್.ಪಿ.ಎ.ಆರ್.ಆರ್.ಸಿ.

* ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್.ಎ.ಐ)

* ಇಂದಿರಾಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಷನ್ ಅಂಡ್ ಸ್ಪೋರ್ಟ್ಸ್ ಸೈನ್ಸಸ್

* ಲಕ್ಷ್ಮಿ ಬಾಯಿ  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಷನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT