ADVERTISEMENT

ಪ್ರಶ್ನೆ – ಉತ್ತರ

ಡಾ.ಎಚ್ ಎನ್ ಸುಬ್ರಹ್ಮಣ್ಯಂ, ಪ್ರೊ.ಬೇಸ್ ಎಜುಕೇಶನ್ ಸರ್ವೀಸ್ ಸಂಸ್ಥೆ
Published 12 ಜನವರಿ 2014, 19:30 IST
Last Updated 12 ಜನವರಿ 2014, 19:30 IST

ಪಾರ್ವತಿ, ತಾಳಗುಪ್ಪ
ನಾನು ಬಿ.ಎಸ್ಸಿ. ಪದವೀಧರೆ. ನನ್ನ ಪ್ರಮಾಣಪತ್ರದಲ್ಲಿ ಪದವಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಎಂದು ನಮೂದಿಸಿದ್ದಾರೆ. ಈಗ ಐ.ಬಿ.ಪಿ.ಎಸ್. ಪರೀಕ್ಷೆ ತೆಗೆದುಕೊಳ್ಳಬಹುದೇ? ಆ ಅರ್ಹತೆ ಇದೆಯೇ? ಇದು ಆನ್‌ಲೈನ್‌ ಪರೀಕ್ಷೆಯೇ? ಗ್ರಾಮೀಣ ವಿದ್ಯಾರ್ಥಿಗಳಾದ ನಮಗೆ ಇದು ಸಾಧ್ಯವೇ? ಇದಕ್ಕೆ ಲ್ಯಾಪ್‌ಟಾಪ್ ಅಗತ್ಯವಿದಯೇ? ತಿಳಿಸಿ.

– ಪದವೀಧರರಾಗಿರುವವರೆಲಲ್ಲರೂ ಐ.ಬಿ.ಪಿ.ಎಸ್ ಪರೀಕ್ಷೆ ತೆಗೆದುಕೊಳ್ಳಬಹುದು. ನೀವು ಪ್ರಥಮ ದರ್ಜೆಯಲ್ಲಿಯೇ ಬಿ.ಎಸ್ಸಿ. ಮುಗಿಸಿರುವುದರಿಂದ ಈ ಪರೀಕ್ಷೆಯಲ್ಲಿ ಸುಲಭವಾಗಿ ಉತ್ತೀರ್ಣರಾಗಬಹುದು. ಗ್ರಾಮೀಣ ವಿದ್ಯಾರ್ಥಿಗಳಿಗೂ ಕಂಪ್ಯೂಟರ್‌ನ ಕನಿಷ್ಠ ಜ್ಞಾನ ಅಗತ್ಯ. ನಿಮ್ಮ ಹಳ್ಳಿಯ ಹತ್ತಿರದ ಪಟ್ಟಣದಲ್ಲಿರುವ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಈ ಜ್ಞಾನವನ್ನು ಪಡೆಯಬಹುದು. ಮುಂದೆ ಬ್ಯಾಂಕುಗಳಲ್ಲಿ ನೀವು ನೌಕರಿ ಪಡೆದ ಮೇಲೂ ಕಂಪ್ಯೂಟರ್ ಜ್ಞಾನ ಬೇಕಾಗುತ್ತದೆ. ಐ.ಬಿ.ಪಿ.ಎಸ್ ಆನ್ ಲೈನ್ ಪರೀಕ್ಷೆ ಬರೆಯಲು ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳಿಗೇ ಹೋಗಬೇಕಾಗುತ್ತದೆ. ಲ್ಯಾಪ್ ಟಾಪ್ ತೆಗೆದುಕೊಳ್ಳುವ ಅಗತ್ಯವಿಲ್ಲ.

ಚೈತ್ರಾ
ನಾನು ಪ್ರಥಮ ಬಿ.ಎಸ್ಸಿ. (ಪಿ.ಸಿ.ಎಂ)ಯಲ್ಲಿ ಓದುತ್ತಿದ್ದೇನೆ. ಎಸ್ಸೆಸೆಲ್ಸಿಯಲ್ಲಿ 92% ಮತ್ತು ಪಿ.ಯು.ನಲ್ಲಿ 83% ಬಂದಿದೆ. ನನಗೆ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಬೇಕೆಂಬ ಆಸೆ ಇದೆ. ಆದರೆ ಏನು ಮಾಡಲೂ ತೋಚುತ್ತಿಲ್ಲ. ಸೂಕ್ತ ಸಲಹೆ ನೀಡಿ.

– ಎಸ್ಸೆಸೆಲ್ಸಿ ಮತ್ತು ಪಿ.ಯು.ಸಿಯಲ್ಲಿ ಅತ್ಯುತ್ತಮ ಅಂಕಗಳಿಸಿ ಈಗ ಬಿ.ಎಸ್ಸಿ ಓದುತ್ತಿರುವ ನಿಮಗೆ ಅಭಿನಂದನೆಗಳು. ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳೆಲ್ಲ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಕೋರ್ಸುಗಳ ಕಡೆ ಮುಖಮಾಡಿರುವಾಗ, ಶುದ್ಧ ವಿಜ್ಞಾನದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿರುವ ನೀವು ವಿರಳಾತಿವಿರಳರು. ಮುಂದೆ ಉಪನ್ಯಾಸಕಿಯಾಗಬೇಕೆಂಬ ನಿಮ್ಮ ಹಂಬಲವೂ ಪ್ರಶಂಸಾರ್ಹ. ಇದಕ್ಕಾಗಿ ನೀವು ಈಗ ಮಾಡಬೇಕಾಗಿರುವುದು ನಿಮ್ಮ ವಿದ್ಯಾರ್ಥಿ ಜೀವನದ ಸದುಪಯೋಗ. ಪರೀಕ್ಷೆಗಾಗಿ ಮಾತ್ರ ಓದದೇ ವಿಷಯಗಳನ್ನು ವಿಶದವಾಗಿ ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಓದಿ.

ಅತ್ಯುತ್ತಮ ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ. ಬಿ.ಎಸ್ಸಿ ಯಲ್ಲಿಯೂ ಅತ್ಯುತ್ತಮ ಅಂಕಗಳನ್ನು ಪಡೆದು ಆನಂತರ ನಿಮ್ಮ ಮೆಚ್ಚಿನ ವಿಷಯದಲ್ಲಿ ಎಂ.ಎಸ್ಸಿ ಮಾಡಿ ಎಂ.ಎಸ್ಸಿ ನಂತರ ಬಿ.ಎಡ್ ಮಾಡಿಕೊಂಡರೆ ನೀವು ಜ್ಯೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಬಹುದು ಅಥವಾ ಯು.ಜಿ.ಸಿ ನಂತರ ಎನ್.ಇ.ಟಿ ಆಯ್ಕೆ ಪರೀಕ್ಷೆ ತೆಗೆದುಕೊಂಡು ಪ್ರಥಮ ದರ್ಜೆ ಕಾಲೇಜಿನಲ್ಲಿ ನೀವು ಉಪನ್ಯಾಸಕಿಯಾಗಬಹುದು. ಎಂ.ಎಸ್ಸಿ ನಂತರ ಪಿಎಚ್.ಡಿ ಮಾಡಿದರೆ ನೀವು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಬಹುದು.

ಈಶ್ವರನಾಥ ಪೈ
ನಾನು 2002 ರಲ್ಲಿ ಪಿ.ಯು.ಸಿ ಮುಗಿಸಿ ಬಿ.ಇ ಸೇರಿಕೊಂಡೆ. ಆದರೆ ಅಂತಿಮ ವರ್ಷದಲ್ಲಿದ್ದಾಗ ಮನೆಯಲ್ಲಿನ ಕಠಿಣ ಸಮಸ್ಯೆಗಳಿಂದಾಗಿ ಓದನ್ನು ನಿಲ್ಲಿಸಬೇಕಾಯಿತು. ಈಗ ನಾನು ಪದವೀಧರನಾಗಿಲ್ಲ. ಮತ್ತೆ ಓದು ಮುಂದುವರೆಸಲು ಕಾಲೇಜಿನಲ್ಲಿ ವಿಚಾರಿಸಿದಾಗ ಅದು ಸಾಧ್ಯವಿಲ್ಲ ಎಂದರು. ನನಗೆ ಕೇವಲ ಒಂದು ಅವಕಾಶ ಕೊಟ್ಟರೆ ಉಳಿದಿರುವ ನಾಲ್ಕು ವಿಷಯ­ಗಳನ್ನು ಮುಗಿಸಿಕೊಳ್ಳುತ್ತೇನೆ. ಏನು ಮಾಡುವುದೋ ತೋಚುತ್ತಿಲ್ಲ.

– ನೀವು ಬಿ.ಇ ಓದನ್ನು ಅಂತಿಮ ವರ್ಷದಲ್ಲಿ ಮನೆಯ ಸಮಸ್ಯೆಗಳಿಗಾಗಿ ನಿಲ್ಲಿಸಬೇಕಾಗಿ ಬಂದದ್ದು ವಿಷಾದನೀಯ. ಆದರೆ ಈ ಬಗ್ಗೆ ನಿಮಗೆ ಸಲಹೆ ನೀಡಲು ಇನ್ನೂ ಕೆಲವು ಮಾಹಿತಿಗಳು ಅಗತ್ಯ. ನೀವು ಕೊನೆಯ ವರ್ಷದ ಯಾವ ಸೆಮಿಸ್ಟರ್ ಪರೀಕ್ಷೆಗಳನ್ನು ಈಗ ತೆಗೆದುಕೊಳ್ಳಬೇಕಾಗಿದೆ. ಈ ಸೆಮಿಸ್ಟರ್‌ಗೆ ಅಗತ್ಯವಾದಷ್ಟು ತರಗತಿಗಳಿಗೆ ನೀವು ಹಾಜರಾಗಿದ್ದಿರಾ. ಹಾಜರಾತಿಯ ಅಗತ್ಯವನ್ನು ಪೂರೈಸಿದ್ದರೆ ವಿ.ಟಿಯು ಅನುಮತಿಯೊಂದಿಗೆ ನೀವು ಅಂತಿಮ ವರ್ಷದ ಪರೀಕ್ಷೆ ಬರೆಯಬಹುದು. ಹಾಜರಾತಿಯ ಕೊರತೆ ಇದ್ದರೆ ಆ ವರ್ಷಕ್ಕೆ ನೀವು ಪುನಃ ಹಾಜರಾತಿ ನೀಡಬೇಕು. ಈ ಬಗ್ಗೆ ಹಿಂದೆ ಓದಿದ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿಯವರ ಮನವೊಲಿಸಬೇಕು.

ADVERTISEMENT

ವಿನಯಪ್ರಸಾದ, ತುಮಕೂರು
ನಾನು ಕಂಪ್ಯೂಟರ್ ಡಿಪ್ಲೊಮಾ ಮಾಡಿ ನಂತರ ದೂರಶಿಕ್ಷಣದ ಮೂಲಕ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಬಿ.ಎಸ್ಸಿ ಮಾಡಿಕೊಂಡಿದ್ದೇನೆ. ಈಗ ತರಗತಿಗೆ ತೆರಳಿ ಎಂ.ಸಿ.ಎ ಪಡೆಯಬಹುದೇ? ದಯಮಾಡಿ ಸಲಹೆ ಕೊಡಿ.

– ಮುಕ್ತ ವಿಶ್ವವಿದ್ಯಾಲಯ ನೀಡಿದ ಪದವಿಯ ಆಧಾರದ ಮೇಲೆ ಮುಂದಿನ ವಿದ್ಯಾಭ್ಯಾಸವನ್ನು ತರಗತಿಯಲ್ಲಿ ಪಡೆಯಲಾಗುವುದಿಲ್ಲ. ಅದಕ್ಕೆ ಮುಕ್ತ ವಿಶ್ವವಿದ್ಯಾನಿಲಯಗಳನ್ನೇ ಆಶ್ರಯಿಸಬೇಕು. ನೀವು ಎಂ.ಸಿ.ಎ ಯನ್ನೂ ಮುಕ್ತ ವಿಶ್ವವಿದ್ಯಾಲಯದ ಮುಖಾಂತರವೇ ಮಾಡಬಹುದು.

ಶ್ವೇತಾ, ಬೆಂಗಳೂರು
ನಾನು ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಚಾರದಲ್ಲಿ ಬಿ.ಇ ಮುಗಿಸಿದ್ದೇನೆ. ಎಲೆಕ್ಟ್ರಿಕಲ್ ವಿಭಾಗದಲ್ಲಿ ಉದ್ಯೋಗವನ್ನು ಅರಸುವುದಾದರೆ ಇತರ ಯಾವೂದಾದರೂ ತರಬೇತಿ ಪಡೆದುಕೊಳ್ಳಬೇಕೆ? ಅತ್ಯುತ್ತಮ ಕಂಪೆನಿಗಳಿಗೆ ಪ್ರವೇಶ ಪಡಯಲು ಪರೀಕ್ಷೆ ಬರೆಯಬೇಕೆ? ಗೇಟ್ ಪರೀಕ್ಷೆ ತೆಗೆದುಕೊಂಡರೆ ಸೂಕ್ತವೇ? ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ.

– ಎಲೆಕ್ಟ್ರಿಕಲ್ ವಿಭಾಗದಲ್ಲಿ ಉದ್ಯೋಗ ಮಾಡಲು ನೀವು ಈಗ ಗಳಿಸಿರುವ ವಿದ್ಯಾರ್ಹತೆ ಸಾಕು. ಇದರ ಆಧಾರದ ಮೇಲೆ ಉದ್ಯೋಗಕ್ಕೆ ಪ್ರಯತ್ನಿಸಿ. ಉದ್ಯೋಗಕ್ಕೆ ಸೇರಿಕೊಂಡ ಮೇಲೆ ಅದಕ್ಕೆ ಪೂರಕವಾದ ಕೌಶಲ್ಯಗಳನ್ನು ಪಡೆಯಲು ತರಬೇತಿಗಳ ಬಗ್ಗೆ ಯೋಚಿಸಬಹುದು. ನಿಮ್ಮ ಉದ್ಯೋಗಕ್ಕೆ ಪೂರಕವಾದ ಪಿ.ಜಿ.ಡಿಪ್ಲೊಮಾ ಕೋರ್ಸುಗಳನ್ನು ಮಾಡಬಹುದು. ನಿಮಗೆ ವಿದ್ಯಾಭ್ಯಾಸವನ್ನು ಮುಂದುವರಿಸುವ, ಎಂ.ಟೆಕ್ ಮಾಡುವ ಯೋಚನೆ ಇದ್ದರೆ ಗೇಟ್ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಚೇತನ್ ಕುಮಾರ್
ಬೆಂಗಳೂರಿನ ಯು.ವಿ.ಸಿ.ಇ ಯಲ್ಲಿ ಬಿ.ಇ  ಮಾಡುತ್ತಿದ್ದೇನೆ. ಸಿವಿಲ್ ಎಂಜನಿಯರಿಂಗ್‌ಗೆ ಮಾನ್ಯತೆ, ಭವಿಷ್ಯ ಇದೆಯೇ? ಸೂಕ್ತ ಸಲಹೆ ಕೊಡಿ.

– ಸಿವಿಲ್ ಎಂಜಿನಿಯರಿಂಗ್ ಯಾವತ್ತೂ ಬೇಡಿಕೆ ಹೊಂದಿರುವ ವಿಭಾಗ. ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಇರುವಂತಹ ಏಳು-ಬೀಳುಗಳು ಈ ವಿಭಾಗದಲ್ಲಿ ಇಲ್ಲ. ಮೂಲ ಸೌಲಭ್ಯಗಳಾದ ರಸ್ತೆ, ಸೇತುವೆ, ಮನೆ ಮುಂತಾದುವುಗಳ ಬಗೆಗಿನ ಕೆಲಸಗಳು ಎಂದೆಂದೂ ಇರುತ್ತವೆ. ಹೊಸ ಹೊಸ ಸಾಮಗ್ರಿಗಳು ಮತ್ತು ವಿಧಾನಗಳು ಈ ವಿಭಾಗವನ್ನು ಚಿರ ಯೌವನದಲ್ಲಿರಿಸಿವೆ. ನೀವು ಶ್ರದ್ಧೆಯಿಂದ ಓದಿ ವಿಶ್ವೇಶ್ವರಯ್ಯನವರಂತಹ ಉತ್ತಮ ಸಿವಿಲ್ ಎಂಜಿನಿಯರಿಂಗ್ ಆಗಿ ಎಂದು ಹಾರೈಸುತ್ತೇನೆ. 

ನವೀನ್ ಕುಮಾರ್ ಎಸ್.ಎಂ.
ನಾನು ಈಗ 6ನೇ ಸೆಮಿಸ್ಟರ್ ಬಿ.ಇ ಓದುತ್ತಿದ್ದೇನೆ. ಐ.ಎ.ಎಸ್ ಪರೀಕ್ಷೆ ಬರೆಯಬೇಕೆಂಬ ಆಸೆ ಇದೆ. ಜೊತೆಗೆ ಒಮ್ಮೊಮ್ಮೆ ಗೇಟ್ ಪರೀಕ್ಷೆ ಬರೆಯಬೇಕಂತಲೂ ಅನಿಸುತ್ತಿದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳ­ಬೇಕು? ಯಾವುದಕ್ಕೆ ತರಬೇತಿ ಪಡೆದುಕೊಳ್ಳಬೇಕು ಎಂಬ ಗೊಂದಲಗಳಿವೆ.

– ಬಿ.ಇ ನಂತರ ಯಾವ ಪರೀಕ್ಷೆ ಬರೆಯಬೇಕೆಂಬುದು ಭವಿಷ್ಯದ ಬಗೆಗಿನ ನಿಮ್ಮ ಕನಸುಗಳೇನು ಎಂಬುದನ್ನು ಆಧರಿಸಿವೆ. ಗೇಟ್ ಪರೀಕ್ಷೆ ಬರೆದು, ಎಂ.ಟೆಕ್ ಮಾಡಿ ಉತ್ತಮ ಎಂಜಿನಿಯರ್ ಆಗಲು ಬಯಸುವಿರಾ? ಅಥವಾ ಐ.ಎ.ಎಸ್ ಪರೀಕ್ಷೆ ಬರೆದು ಉತ್ತಮ ಆಡಳಿತಗಾರರಾಗಲು ಬಯಸುವಿರಾ? ಈ ಬಗ್ಗೆ ಆಳವಾಗಿ ಯೋಚಿಸಿ ಸ್ಪಷ್ಟತೆಯನ್ನು ಹೊಂದಿ. ಗುರಿ ನಿಶ್ಚಿತವಾದರೆ ಅದಕ್ಕೆ ಸೂಕ್ತ ಮಾರ್ಗ ತನ್ನಿಂದ ತಾನೆ ತೆರೆದುಕೊಳ್ಳುತ್ತದೆ.

ಮಂಜು ರಕ್ಷಿತ್
ನಾನು 2009ರಲ್ಲಿ ಸಿವಿಲ್ ಡಿಪ್ಲೊಮಾ ಮುಗಿಸಿದೆ. ಆದರೆ 5 ವಿಷಯಗಳಲ್ಲಿ ಇನ್ನೂ ಉತ್ತೀರ್ಣನಾಗಿಲ್ಲ. ಈಗ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದೇನೆ. ಈಗ ನಾನು ಉಳಿದಿರುವ ವಿಷಯಗಳ ಪರೀಕ್ಷೆ ತೆಗೆದುಕೊಳ್ಳಬಹುದೇ? ಮನೆಯಲ್ಲಿ ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ. ಮಾರ್ಗದರ್ಶನ ಕೊಡಿ.

– ಸಿವಿಲ್ ಡಿಪ್ಲೊಮಾ ತರಗತಿಗಳಿಗೆ ಅಗತ್ಯ ಹಾಜರಾತಿ ನೀಡಿದ್ದರೆ ಉತ್ತೀರ್ಣ­ರಾಗದಿರುವ ವಿಷಯಗಳಲ್ಲಿ ಪರೀಕ್ಷೆಗಳನ್ನು ಈಗಲೂ ತೆಗೆದುಕೊಳ್ಳಬಹುದು. ಇದಕ್ಕೆ ತಾಂತ್ರಿಕ ವಿದ್ಯಾ ಇಲಾಖೆಯನ್ನು ಸಂಪರ್ಕಿಸಿ ಅನುಮತಿ ಪಡೆದು­ಕೊಳ್ಳಬೇಕು. ಜೊತೆಗೆ ನಿಮ್ಮ ಉದ್ಯೋಗದ ಮಧ್ಯೆಯೇ ಈ ವಿಷಯಗಳ ಅಧ್ಯ­ಯ­ನವನ್ನು ಮಾಡಬೇಕು. ಪಠ್ಯಕ್ರಮದಲ್ಲಿ ಬದಲಾವಣೆಗಳಾಗಿದ್ದರೆ, ಹೊಸ ಪಠ್ಯಕ್ರಮದ ಪರೀಕ್ಷೆಗೆ ಸಿದ್ಧವಾಗಬೇಕು. ಮದುವೆಯ ಮೊದಲೇ ಡಿಪ್ಲೊಮಾ ಮುಗಿಸುವ ಯೋಚನೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.