ADVERTISEMENT

ಫಿಫಾ ವಿಶ್ವಕಪ್‌ ಚಾಂಪಿಯನ್ನರ ಹೆಜ್ಜೆ ಗುರುತು

ಜಿ.ಶಿವಕುಮಾರ
Published 10 ಡಿಸೆಂಬರ್ 2017, 19:30 IST
Last Updated 10 ಡಿಸೆಂಬರ್ 2017, 19:30 IST
ಫಿಫಾ ವಿಶ್ವಕಪ್‌ ಚಾಂಪಿಯನ್ನರ ಹೆಜ್ಜೆ ಗುರುತು
ಫಿಫಾ ವಿಶ್ವಕಪ್‌ ಚಾಂಪಿಯನ್ನರ ಹೆಜ್ಜೆ ಗುರುತು   

ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ 87 ವರ್ಷಗಳ ಇತಿಹಾಸವಿದೆ. ಮನುಕುಲವನ್ನು ಒಗ್ಗೂಡಿಸುವ ಸದಾಶಯದೊಂದಿಗೆ 1930ರಲ್ಲಿ ಫೆಡರೇಷನ್‌ ಇಂಟರ್‌ನ್ಯಾಷನಲ್‌ ಡಿ ಫುಟ್‌ಬಾಲ್‌ ಅಸೋಷಿಯೇಷನ್‌ (ಫಿಫಾ) ಮೊದಲ ಬಾರಿಗೆ ವಿಶ್ವಕಪ್‌ ಆಯೋಜಿಸಿತ್ತು.

ಎರಡನೇ ಮಹಾಯುದ್ಧದ ಕಾರಣ 1942 ಮತ್ತು 1946ರಲ್ಲಿ ಕೂಟ ನಡೆದಿರಲಿಲ್ಲ. ಇದನ್ನು ಹೊರತುಪಡಿಸಿ ನಾಲ್ಕು ವರ್ಷಗಳಿಗೊಮ್ಮೆ ಈ ಫುಟ್‌ಬಾಲ್‌ ಹಬ್ಬ ಜರುಗುತ್ತಿದೆ.

ಇದುವರೆಗೂ ಒಟ್ಟು 20 ಟೂರ್ನಿಗಳು ನಡೆದಿದ್ದು ಬ್ರೆಜಿಲ್‌ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಹಿರಿಮೆ ಹೊಂದಿದೆ. ಸಾಂಬಾ ನಾಡಿನ ತಂಡ ಒಟ್ಟು 5 ಸಲ ಟ್ರೋಫಿ ಎತ್ತಿಹಿಡಿದಿದೆ. ಜರ್ಮನಿ ಮತ್ತು ಇಟಲಿ ತಂಡಗಳು ತಲಾ ನಾಲ್ಕು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿವೆ.

ADVERTISEMENT

ಒಲಿಂಪಿಕ್ಸ್‌ನಲ್ಲಿ ಫುಟ್‌ಬಾಲ್‌ ಕ್ರೀಡೆಗೆ ಸಿಕ್ಕ ಜನಮನ್ನಣೆಯಿಂದ ಪ್ರೇರಿತಗೊಂಡ ಫಿಫಾ 1928ರಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಆರಂಭಿಸಿತು. ಎರಡು ವರ್ಷಗಳ ನಂತರ ವಿಶ್ವಕಪ್‌ಗೆ ಹಸಿರು ನಿಶಾನೆ ಸಿಕ್ಕಿತ್ತು. ಉರುಗ್ವೆಯಲ್ಲಿ ಚೊಚ್ಚಲ ವಿಶ್ವಕಪ್‌ ನಡೆದಿತ್ತು. ಜುಲೈ 13, 1930ರಂದು ನಡೆದಿದ್ದ ಪಂದ್ಯಗಳಲ್ಲಿ ಫ್ರಾನ್ಸ್‌ ತಂಡ 4–1 ಗೋಲುಗಳಿಂದ ಮೆಕ್ಸಿಕೊ ಎದುರೂ, ಅಮೆರಿಕ 3–0 ಗೋಲುಗಳಿಂದ ಬೆಲ್ಜಿಯಂ ತಂಡಗಳನ್ನು ಸೋಲಿಸಿದ್ದವು. ಫ್ರಾನ್ಸ್‌ನ ಲೂಸಿಯನ್‌ ಲೌರೆಂಟ್‌ ವಿಶ್ವಕಪ್‌ನಲ್ಲಿ ಮೊದಲ ಗೋಲು ಗಳಿಸಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಅಚ್ಚೊತ್ತಿದ್ದರು. ಫೈನಲ್‌ನಲ್ಲಿ ಆತಿಥೇಯ ಉರುಗ್ವೆ 4–2 ಗೋಲುಗಳಿಂದ ಅರ್ಜೆಂಟೀನಾವನ್ನು ಸೋಲಿಸಿ ಚೊಚ್ವಲ ಕಿರೀಟ ಮುಡಿಸಿಕೊಂಡಿತ್ತು.

ಎರಡನೇ ಮಹಾಯುದ್ಧದ ನಂತರ (1950) ಬ್ರೆಜಿಲ್‌ನಲ್ಲಿ ಕೂಟ ಆಯೋಜನೆಯಾಗಿತ್ತು. ಆ ಟೂರ್ನಿಯಲ್ಲಿ ಉರುಗ್ವೆ ಮತ್ತೆ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಈ ತಂಡ 1934 ಮತ್ತು 1938ರ ವಿಶ್ವಕಪ್‌ಗಳನ್ನು ಬಹಿಷ್ಕರಿಸಿತ್ತು. ಈ ಎರಡೂ ಟೂರ್ನಿಗಳಲ್ಲೂ ಇಟಲಿ ‍ಪ್ರಶಸ್ತಿ ಗೆದ್ದಿತ್ತು.

1934ರಿಂದ 1978ರ ಅವಧಿಯಲ್ಲಿ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು. ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕದ ತಂಡಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ 1982ರಲ್ಲಿ ಈ ಸಂಖ್ಯೆಯನ್ನು 32ಕ್ಕೆ ಏರಿಸಲಾಯಿತು. 2002ರ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಒಟ್ಟು 200 ತಂಡಗಳು ಭಾಗವಹಿಸಿದ್ದವು. 2006ರಲ್ಲಿ ಈ ಸಂಖ್ಯೆ 198ಕ್ಕೆ ಇಳಿಯಿತು. ಆದರೆ 2010ರಲ್ಲಿ ಒಟ್ಟು 204 ತಂಡಗಳು ಅರ್ಹತಾ ಹಂತದಲ್ಲಿ ಆಡಿದ್ದವು. ಇದು ದಾಖಲೆಯಾಗಿದೆ.

1930ರಿಂದ 2014ರ ಅವಧಿಯಲ್ಲಿ ನಡೆದ 20 ವಿಶ್ವಕಪ್‌ಗಳ ಲಾಂಛನ, ಕೂಟ ನಡೆದ ಸ್ಥಳ, ಟೂರ್ನಿಯಲ್ಲಿ ಬಳಸಿದ ಚೆಂಡು ಮತ್ತು ಚಾಂಪಿಯನ್‌ ತಂಡಗಳ ಬಗೆಗಿನ ಮಾಹಿತಿ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.