ADVERTISEMENT

ಫೆನ್ಸಿಂಗ್ ಪ್ರತಿಭೆ ವೆಂಕಟೇಶ್ ಬಾಬು

ಮಾನಸ ಬಿ.ಆರ್‌
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಎನ್‌. ವೆಂಕಟೇಶ್‌ ಬಾಬು
ಎನ್‌. ವೆಂಕಟೇಶ್‌ ಬಾಬು   

ಆರನೇ ವಯಸ್ಸಿನಲ್ಲಿಯೇ ಅಪಘಾತದಲ್ಲಿ ಬಲಗಾಲು ಕಳೆದುಕೊಂಡಿದ್ದ ಎನ್‌. ವೆಂಕಟೇಶ್‌ ಬಾಬು ಅವರು ತಮ್ಮ ಮಾವನ  ಪ್ರೋತ್ಸಾಹದಿಂದ ಅಂತರರಾಷ್ಟ್ರೀಯ ಮಟ್ಟದ ಫೆನ್ಸಿಂಗ್‌ ಆಟಗಾರರಾಗಿ ಬೆಳೆದಿದ್ದಾರೆ.

ವೆಂಕಟೇಶ್‌ ಅವರು ಗೌರಿಬಿದನೂರು ತಾಲ್ಲೂಕಿನ ನಾಗಸಂದ್ರದವರು. ಇವರದು ರೈತ ಕುಟುಂಬ. ಕಾಲು ಕಳೆದುಕೊಂಡು ಕಂಗಾಲಾಗಿದ್ದ ಪುಟ್ಟ ಬಾಲಕನಿಗೆ ಅವರ ಸೋದರ ಮಾವ ರಾಮಾಂಜನ್ ರೆಡ್ಡಿ ಆಸರೆಯಾದರು. ಕೃತಕ ಕಾಲಿನ ಸಹಾಯ ಒದಗಿಸಿದ ಅವರು ವೆಂಕಟೇಶ್‌ ಅವರಿಗೆ ಕ್ರೀಡೆಯಲ್ಲಿದ್ದ ಆಸಕ್ತಿಗೆ ನೀರೆರೆದರು. ಇದೀಗ ಅವರು ವ್ಹೀಲ್ ಚೇರ್ ಫೆನ್ಸಿಂಗ್ ನಲ್ಲಿ ಏಷ್ಯಾದಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಕೃತಕ ಕಾಲಿನ ಸಹಾಯದಿಂದ ಅವರು ಶಾಲೆಯಲ್ಲಿ ಬೇರೆ ಮಕ್ಕಳಂತೆ ಸೈಕಲ್‌, ಬೈಕ್‌ ಕೂಡ ಓಡಿಸಿ ಸಂಭ್ರಮ ಪಟ್ಟರು. ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡರು.

ADVERTISEMENT

‘ಬೆಂಗಳೂರಿನಲ್ಲಿ ನನಗೆ ಫೆನ್ಸಿಂಗ್ ಕೋಚ್‌ ಇರೋಮ್ ದೇವನ್ ಸಿಂಗ್‌ ಅವರ ಪರಿಚಯ ಆಯಿತು. ಅಲ್ಲಿಂದ ಮುಂದೆ ನನ್ನ ಬದುಕಿನಲ್ಲಿ ಸಾಕಷ್ಟು ತಿರುವುಗಳಾದವು. ಆ ಬಳಿಕ ನಾನು ವ್ಹೀಲ್‌ಚೇರ್‌ ಫೆನ್ಸಿಂಗ್‌ ಆಯ್ಕೆಮಾಡಿಕೊಂಡು ಅಭ್ಯಾಸ ಮಾಡಿದೆ. ಭಾರತದಲ್ಲಿ ಈ ಕ್ರೀಡೆಯ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲ. ಹಾಗಿದ್ದರೂ ಭವಿಷ್ಯದಲ್ಲಿ ಇದೇ ಆಟದಲ್ಲಿ ಮುಂದುವರಿಯುವ ಕನಸು ಕಟ್ಟಿದೆ. ದಿನನಿತ್ಯ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತೇನೆ’ ಎಂದು ತಮ್ಮ ಕ್ರೀಡಾ ಪಯಣದ ಬಗ್ಗೆ ಹೇಳಿದರು.

‘2013ರಲ್ಲಿ ಫೆನ್ಸಿಂಗ್ ಆಡಲು ಪ್ರಾರಂಭಿಸಿದೆ. ಅಲ್ಲಿಂದ ಹಿಂತಿರುಗಿ ನೋಡಲಿಲ್ಲ. ಸಾಕಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದೇನೆ. ಪದಕಗಳನ್ನೂ ಗೆದ್ದುಕೊಂಡಿದ್ದೇನೆ. ಆದರೆ ಪ್ಯಾರಾ ಏಷ್ಯನ್ ಹಾಗೂ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಆಡುವ ಕನಸಿದೆ’ ಎಂದು ತಮ್ಮ ಬದುಕಿನ ಹಾದಿಯನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.