ADVERTISEMENT

ಮಕ್ಕಳ ಮೆದುಳಿಗೆ ವಿಶೇಷ ತರಬೇತಿ

ಸುಶೀಲಾ ಡೋಣೂರ
Published 13 ಮೇ 2012, 19:30 IST
Last Updated 13 ಮೇ 2012, 19:30 IST
ಮಕ್ಕಳ ಮೆದುಳಿಗೆ ವಿಶೇಷ ತರಬೇತಿ
ಮಕ್ಕಳ ಮೆದುಳಿಗೆ ವಿಶೇಷ ತರಬೇತಿ   

ಮಕ್ಕಳ ಭಾವನೆ ಮತ್ತು ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು, ಅವರ ಸುಪ್ತ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡುವುದು, ಕೀಳರಿಮೆ ಹೋಗಲಾಡಿಸಿ ಆತ್ಮವಿಶ್ವಾಸ ಹಾಗೂ ಮನೋಸ್ಥೈರ್ಯ ತುಂಬುವುದು, ಸೂಕ್ತ ಪ್ರೋತ್ಸಾಹ ನೀಡಲು ಪಾಲಕರಲ್ಲಿ ಜಾಗೃತಿ ಮೂಡಿಸುವುದು...

ಹೀಗೆ 15 ವರ್ಷಗಳಿಂದ ಮಕ್ಕಳ ಮನೋವಿಕಾಸ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ ಬೆಂಗಳೂರಿನ ಹನುಮಂತ ನಗರದ `ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೈಂಡ್ ಡೈನಾಮಿಕ್ಸ್~ (IIMD) ಸಂಸ್ಥಾಪಕ ಅಧ್ಯಕ್ಷ ಡಿ.ಕೃಷ್ಣಮೂರ್ತಿ.

 

3-DMS (3-dimensional Memory-system) ಎಂಬ ಸೂತ್ರವನ್ನು ಅಭಿವೃದ್ಧಿಪಡಿಸಿ ಮಕ್ಕಳ ಮೆದುಳಿಗೆ ತರಬೇತಿ ನೀಡುತ್ತಿರುವ `ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೈಂಡ್ ಡೈನಾಮಿಕ್ಸ್~ ಸಂಸ್ಥಾಪಕ ಡಿ.ಕೃಷ್ಣಮೂರ್ತಿ ಅವರಿಗೆ ಇಂಗ್ಲೆಂಡ್‌ನ ಗ್ಲೋಬಲ್ ಅಚೀವರ್ಸ್‌ ಫೌಂಡೇಶನ್ ‘memory training Excellency award’ ನೀಡಿದೆ.

ಮಕ್ಕಳ ಮನಸ್ಸು ಹಾಗೂ ಮೆದುಳಿಗೆ ವಿಶೇಷ ತರಬೇತಿ ನೀಡಿ ಅವರಲ್ಲಿನ ನ್ಯೂನತೆ ಗುರುತಿಸಿ ಸರಿಪಡಿಸುವ ಕಾರ್ಯದಲ್ಲಿ ತೊಡಗಿರುವ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಕಾರ್ಯಾಗಾರ ನಡೆಸಿದ್ದಾರೆ.

ಮಕ್ಕಳ ಮನೋವಿಕಾಸಕ್ಕಾಗಿ 3-DMS (3-dimensional Memory-system)ಎಂಬ ವಿಶೇಷ ಸೂತ್ರ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮೊದಲು ಪ್ರಯೋಗಿಸಿದ್ದು ತಮ್ಮ ಮಗಳು ಪೂಜಾ ಮೇಲೆ. ಇದರ ಪರಿಣಾಮ ಎಂದರೆ ಮೆದುಳಿನ ವಿಶೇಷ ಸಾಮರ್ಥ್ಯ ಪ್ರದರ್ಶಿಸಿದ್ದಕ್ಕಾಗಿ ಆಕೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ತಂದೆ ನೀಡಿದ ಜ್ಞಾನವನ್ನು ಪೂಜಾ ಬಡ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ಸಾರ್ಥಕಗೊಳಿಸಿಕೊಳ್ಳುತ್ತಿದ್ದಾಳೆ.

ಈ ಸೂತ್ರದ ಯಶಸ್ವಿಗಾಗಿ ಕೃಷ್ಣಮೂರ್ತಿ ಅವರಿಗೆ ಇಂಗ್ಲೆಂಡ್‌ನ ಗ್ಲೋಬಲ್ ಅಚೀವರ್ಸ್‌ ಫೌಂಡೇಶನ್ ವತಿಯಿಂದ ‘21 century mind and memory training Excellency award 2012’  ಪ್ರಶಸ್ತಿಯೂ ದೊರೆತಿದೆ. 

ಮಕ್ಕಳ ಮನಸ್ಸು ಹಾಗೂ ಮನೋವಿಕಾಸದ ಬಗ್ಗೆ ಕೃಷ್ಣಮೂರ್ತಿ ಇಲ್ಲಿ ಮಾತನಾಡಿದ್ದಾರೆ-

- ಏನಿದು 3&DMS ತರಬೇತಿ?
ಇದು ಪ್ರತಿಭೆ, ಕೌಶಲ ಹಾಗೂ ಸಾಮರ್ಥ್ಯ ಎಂಬ ಮೂರು ಮಾನದಂಡಗಳನ್ನು ಆಧಾರವಾಗಿ ಇಟ್ಟುಕೊಂಡ ತರಬೇತಿ ವಿಧಾನ. ಒಂದು ಅಥವಾ ಎರಡು ಗಂಟೆ ಅವಧಿಯ 30 ಸಿಟ್ಟಿಂಗ್‌ಗಳಲ್ಲಿ ತರಬೇತಿ ಪೂರ್ಣಗೊಳ್ಳುವ ಹೊತ್ತಿಗೆ ಮಗುವಿನ ಮನೋಭಾವ, ಆಲೋಚನಾ ಕ್ರಮ, ವ್ಯಕ್ತಿತ್ವ ಎಲ್ಲವೂ ಶೇ 80ರಷ್ಟು ಅಭಿವೃದ್ಧಿ ಹೊಂದಿರುತ್ತದೆ.

ADVERTISEMENT

 ಮಕ್ಕಳ ಮನಸ್ಸನ್ನು ಮಾತಿಗೆಳೆಯುವುದು ಹೇಗೆ?
ಮಕ್ಕಳ ಮನಸ್ಸನ್ನು ಸೆಳೆಯುವ ಏಕೈಕ ಸೂತ್ರ ಎಂದರೆ ಪ್ರೀತಿ ಮತ್ತು ಮಮತೆ. ಪ್ರೀತಿಯಿಂದ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರು ಮನಸ್ಸು ಬಿಚ್ಚಿ ಮಾತನಾಡುವಂತೆ ಮಾಡುವುದು, ಅಲ್ಲಿರುವ ಕಳವಳ, ಭಯ, ಆತಂಕ ಹೋಗಲಾಡಿಸುವುದು ಹಾಗೂ ಆ ಜಾಗದಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬುವುದು ನಮ್ಮ ಕೆಲಸ.

 ಇಂದಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ಕೊರತೆ ಯಾವುದು?
ಮಾರ್ಗದರ್ಶನದ ಕೊರತೆ. ಇಂದಿನ ಮಕ್ಕಳ ಬುದ್ಧಿಮಟ್ಟ ಹೆಚ್ಚು, ಪ್ರತಿಭೆಯೂ ಅಧಿಕ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ತಮ್ಮ ಮಕ್ಕಳು ಏನು ಎನ್ನುವುದನ್ನು ತಿಳಿದುಕೊಳ್ಳಲು ಪಾಲಕರು ಮನಸ್ಸು ಮಾಡುತ್ತಿಲ್ಲ. ಮನೆಯಲ್ಲಿ ಅಜ್ಜ- ಅಜ್ಜಿಯಂತಹ ಹಿರಿಯ ಜೀವಗಳು ಇಲ್ಲದಿರುವುದು, ದುಡಿಯುವ ಅಪ್ಪ-ಅಮ್ಮ, ಬರೀ ಅಂಕಗಳನ್ನೇ ಗುರಿಯಾಗಿಸಿ ಓದಿಸುವ ಶಿಕ್ಷಕರು...

ಇದರ ನಡುವೆ ಬದುಕನ್ನು ಕಟ್ಟಿಕೊಳ್ಳಬಲ್ಲ ಶಿಕ್ಷಣ ಅವರಿಗೆ ಸಿಗುತ್ತಿಲ್ಲ. ಯಾವುದು ಬೇಕು-ಯಾವುದು ಬೇಡ ಎಂಬ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ತಂದೆ-ತಾಯಿಯೇ ಮೊದಲ ಗುರು. ಮಕ್ಕಳಿಗೆ ಸರಿಯಾದ ಗುರಿ ತೋರಿಸಿ ಮಾರ್ಗದರ್ಶನ ನೀಡಬೇಕಾದುದು ಅವರ ಕರ್ತವ್ಯ. ಹಾಗೆಯೇ ಶಿಕ್ಷಕರೂ ಕೂಡ `ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳು ಮಾತ್ರ ಜಾಣರು; ಉಳಿದವರು ದಡ್ಡರು~ ಎನ್ನುವ ಮನೋಭಾವಬದಲಿಸಿಕೊಳ್ಳಬೇಕು.

 ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಮಕ್ಕಳನ್ನು ಸ್ಪರ್ಧೆಗೆ ಸಿದ್ಧಗೊಳಿಸುವುದು ಹೇಗೆ?
ಶ್ರೇಣಿಗಳು ಯಾವತ್ತೂ ಭವಿಷ್ಯವನ್ನು ನಿರ್ಧರಿಸಲಾರವು. ಅವರು ಗಳಿಸುವ ಅಂಕಗಳೇ ಅವರ ಪ್ರತಿಭೆ ಗುರುತಿಸುವ ಮಾನದಂಡ ಅಲ್ಲ. ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಮತ್ತು ಹೇಗೆ ಎದುರಿಸುತ್ತಾರೆ ಎಂಬುದು ಮುಖ್ಯ. ಪ್ರತಿ ಮಗುವಿನಲ್ಲೂ ಸ್ಪರ್ಧೆ ಎದುರಿಸುವ ವಿಭಿನ್ನ ಕೌಶಲವಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು.

 ಮಕ್ಕಳು ಪಠ್ಯವನ್ನು ಸಂತೋಷದಿಂದ ಕಲಿಯುವಂತೆ ಮಾಡುವುದು ಹೇಗೆ?
ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಕಲಿಕೆಯಲ್ಲಿ ಆಸಕ್ತಿ ಮೂಡಿಸಬಹುದು. ಬೋಧನೆಯಲ್ಲಿ ನವೀನತೆ ಬೇಕು. ಶಿಕ್ಷಕರು ಲವಲವಿಕೆಯಿಂದ ಪಾಠ ಮಾಡಬೇಕು. ವಿದ್ಯಾರ್ಥಿಗೆ ಅವಮಾನ ಮಾಡುವುದು, ಒಬ್ಬನನ್ನು ಜಾಣನೆಂದು ಇನ್ನೊಬ್ಬನನ್ನು ದಡ್ಡನೆಂದು ಪ್ರತಿಬಿಂಬಿಸುವುದು ಬೇಡ.

 ಮಕ್ಕಳಲ್ಲಿ ಕಲಿಕೆಯ ವಿಕಲತೆ ಹೆಚ್ಚುತ್ತಿದೆ. ಪರಿಹಾರವೇನು?
ಪಾಠಗಳನ್ನು ಸರಿಯಾಗಿ ಗ್ರಹಿಸದೇ ಇರುವುದು, ತಪ್ಪು ಉಚ್ಛಾರಣೆ ಮಾಡುವುದು, ಓದಿನಲ್ಲಿ ನಿರಾಸಕ್ತಿ, ಏಕಾಗ್ರತೆಯ ಕೊರತೆ, ಪರೀಕ್ಷೆಯಲ್ಲಿ ಅತಿ ಕಡಿಮೆ ಅಂಕ, ಗಮನದ ಕೊರತೆ ಇಂತಹ ಯಾವುದೇ ಸಮಸ್ಯೆಯನ್ನು ಕಲಿಕೆಯ ವಿಕಲತೆ ಎನ್ನಬಹುದು.

ಇದಕ್ಕೆ ಆತ್ಮವಿಶ್ವಾಸದ ಕೊರತೆ, ನಿಧಾನ ಬರವಣಿಗೆ, ಗ್ರಹಿಸುವಿಕೆಯಲ್ಲಿ ವಿಳಂಬ, ಭಯ, ಹತಾಶೆ, ಕೋಪ ಆತಂಕ ಇತ್ಯಾದಿ ಹಲವು ಕಾರಣಗಳಿರಬಹುದು. ಅಲ್ಲದೇ ಅವರಿಗೆ ದೃಷ್ಟಿದೋಷ, ಕಿವುಡುತನ, ಬಳಲಿಕೆಯಂತಹ ದೈಹಿಕ ಸಮಸ್ಯೆಗಳೂ ಇರಬಹುದು. ಬುದ್ಧಿಶಕ್ತಿ ಹಾಗೂ ಕಲಿಕೆಯ ಸಾಮರ್ಥ್ಯದ ಪರೀಕ್ಷೆ ಮಾಡಿಸಬೇಕು.
 
ಇಂತಹ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ಹಾಗೂ ಕೌನ್ಸೆಲಿಂಗ್‌ನ ಅಗತ್ಯವಿರುತ್ತದೆ. ಇನ್ನೂ ಕೆಲವರಿಗೆ ಬುದ್ಧಿಶಕ್ತಿಯೇ ಕಡಿಮೆ ಇರುತ್ತದೆ. ಅಂಥವರಿಗೆ ವಿಶೇಷ ತರಬೇತಿ ನೀಡಬೇಕು. ಯಾವ ದೋಷವಿದೆ ಎಂಬುದನ್ನು ತಿಳಿದ ನಂತರ ವಿಶೇಷ ತರಬೇತಿಯನ್ನು ಆರಂಭಿಸಬಹುದು.

- ದಡ್ಡ ಮಕ್ಕಳಿಗೆ ಕಿವಿಮಾತು...
ಯಾವ ಮಕ್ಕಳೂ ದಡ್ಡರಲ್ಲ. ಅವರನ್ನು ಅರ್ಥೈಸಿಕೊಳ್ಳುವಲ್ಲಿ, ಅವರ ಪ್ರತಿಭೆಯನ್ನು ಗುರುತಿಸುವಲ್ಲಿ, ಪ್ರೋತ್ಸಾಹ ನೀಡುವಲ್ಲಿ ದೊಡ್ಡವರಾದ ನಾವು ಮಾಡುವ ತಪ್ಪಿಗೆ `ದಡ್ಡ ಮಗು~ ಎಂಬ ಹಣೆಪಟ್ಟಿ ಹಚ್ಚಬಾರದು. ಪ್ರತಿ ಮಗುವಿನಲ್ಲೂ ಒಂದು ವಿಶೇಷ ಶಕ್ತಿ ಅಡಗಿರುತ್ತದೆ. ಪಾಲಕರು, ಶಿಕ್ಷಕರು ಅದನ್ನು ಗುರುತಿಸಿ ಪೋಷಿಸಬೇಕು.

- ಪಾಲಕರಿಗೆ ನಿಮ್ಮ ಸಲಹೆ...
ನಿಮ್ಮ ಮಗುವನ್ನು ಮೊದಲು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಅದು ನಿಮ್ಮನ್ನು ಅರ್ಥ ಮಾಡಿಕೊಳ್ಳಲಿ ಎಂದು ಬಯಸಬೇಡಿ. ನಿಮ್ಮ ಮಕ್ಕಳ ಭವಿಷ್ಯ ಕೇವಲ ಶಿಕ್ಷಕರ ಕೈಯಲ್ಲಿದೆ ಎಂಬ ಆಲೋಚನೆ ತಪ್ಪು. ಕಲಿಕಾ ಸಾಮಗ್ರಿ ಹಾಗೂ ಅನುಕೂಲ ಒದಗಿಸಿದರೆ ಜವಾಬ್ದಾರಿ ಮುಗಿಯಲಿಲ್ಲ. ಟ್ಯೂಷನ್‌ಗೆ ಕಳುಹಿಸಿದರೆ ಚೆನ್ನಾಗಿ ಕಲಿಯುತ್ತಾರೆ ಎಂಬುದು ಇನ್ನೂ ತಪ್ಪು ಗ್ರಹಿಕೆ.

-ಸಂಸ್ಥೆಯ ಮುಂದಿನ ಯೋಜನೆ?
ನಮ್ಮ ಸಂಸ್ಥೆಯ ಸೇವೆ ಬೆಂಗಳೂರು- ಮೈಸೂರಿನಂತಹ ನಗರಗಳಿಗೆ ಮಾತ್ರ ಸೀಮಿತವಾಗಿರಬಾರದು. ನಮ್ಮ ಸಣ್ಣ ಸಣ್ಣ ನಗರ, ಪಟ್ಟಣ, ತಾಲ್ಲೂಕು ಪ್ರದೇಶಗಳ ಮಕ್ಕಳನ್ನು ತಲುಪುವುದು ನಮ್ಮ ಮುಂದಿನ ಗುರಿ. ಆಯಾ ಹಂತದ ಶಿಕ್ಷಣ ಸಂಸ್ಥೆಗಳ ಪ್ರೋತ್ಸಾಹ ದೊರೆತರೆ  ಕಾರ್ಯಾಗಾರ ನಡೆಸಿ ಬಡ ಮಕ್ಕಳ ಕಲಿಕಾ ನ್ಯೂನತೆ ಸರಿಪಡಿಸುವ ಯೋಜನೆ ಇದೆ.
 
ಶಿಕ್ಷಣ ಸಂಸ್ಥೆಗಳು ಆಸಕ್ತಿ ತೋರಿಸಿದಲ್ಲಿ ಆಯಾ ಶಿಕ್ಷಕರಿಗೆ ತರಬೇತಿ ನೀಡಿ ಐಐಈ ಕೇಂದ್ರಗಳನ್ನು ಸ್ಥಾಪಿಸಲು ಸಹಕರಿಸಲಾಗುವುದು. ಶಿಕ್ಷಕ ತರಬೇತಿ ಹೊಂದಿರುವ ನಿರುದ್ಯೋಗ ಯುವಕರು ಮುಂದೆ ಬಂದರೆ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು. ಮಾಹಿತಿಗೆ ಅವರ ಸಂಪರ್ಕ ಸಂಖ್ಯೆ 98867 03172
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.