‘ಅದೊಮ್ಮೆ ಪುಣೆಯಿಂದ ಮುಂಬೈಗೆ ಹೋಗುವಾಗ ಊಟ ಮಾಡಲು ಢಾಬಾಕ್ಕೆ ತೆರಳಿದ್ದೆ. ನನ್ನಂತೆಯೇ ಹಲವು ಜನ ಅಲ್ಲಿ ಊಟಕ್ಕೆ ಕಾದು ಕುಳಿತಿದ್ದರು. ಢಾಬಾದಲ್ಲಿ ಕೆಲಸ ಮಾಡುವ ಒಬ್ಬರೂ ನಮ್ಮತ್ತ ಗಮನವೇ ಹರಿಸಲಿಲ್ಲ. ಸುಮಾರು ಒಂದು ಗಂಟೆ ಕಾದರೂ ಯಾರೂ ಬರಲಿಲ್ಲ. ಆಗ ಸಿಟ್ಟಾಗಿ ಢಾಬಾದ ಮಾಲೀಕನನ್ನು ಕರೆದು ರೇಗಿದೆ. ಆತ ಟಿವಿಯತ್ತ ಕೈ ತೋರಿಸಿದ. ಢಾಬಾದ ಸಿಬ್ಬಂದಿ ಕಬಡ್ಡಿ ಲೀಗ್‌ನ ಪಂದ್ಯಗಳನ್ನು ನೋಡುವುದರಲ್ಲಿ ತಲ್ಲೀನರಾಗಿದ್ದರು. ಅದನ್ನು ಕಂಡ ನನಗೆ ಎಲ್ಲಾ ಸಿಟ್ಟು ಮಾಯವಾಗಿತ್ತು. ಎರಡೇ ವರ್ಷಗಳಲ್ಲಿ ಲೀಗ್ ಮಾಡಿದ ಮೋಡಿ ಕಂಡು ಅಚ್ಚರಿಯಾಗಿತ್ತು...’
ಹೀಗೆ ತಮ್ಮ ಅನುಭವ ಹಂಚಿಕೊಂಡಿದ್ದು ಬಾಲಿವುಡ್ ನಟ ಅಭಿಷೇಕ್ ಬಚ್ಚನ್. ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಮಾಲೀಕರೂ ಆದ ಅಭಿಷೇಕ್ ದೇಶಿ ಕ್ರೀಡೆ ಟಿವಿ ಪರದೆಯ ಮೇಲೆ ಬಂದ ಬಳಿಕ ಆಗಿರುವ ಬದಲಾವಣೆಯನ್ನು ವಿವರಿಸಿದ್ದು ಹೀಗೆ.
ಮೊದಲ ಎರಡು ಆವೃತ್ತಿಗಳಲ್ಲಿ ಕಬಡ್ಡಿ ಲೀಗ್ ಸಾಕಷ್ಟು ಅಭಿಮಾನಿಗಳನ್ನು ಹುಟ್ಟು ಹಾಕಿದೆ. ಆಟಗಾರರು, ವಾಹಿನಿ ಮತ್ತು ಸಂಘಟಕರಿಗೆ
ಲೀಗ್ ಉತ್ತಮ ಆದಾಯವನ್ನೇ ತಂದುಕೊಟ್ಟಿದೆ. ಆದ್ದರಿಂದಲೇ 2016ರಿಂದ ವರ್ಷಕ್ಕೆ ಎರಡು ಬಾರಿ ಲೀಗ್ ನಡೆಸಲು ಸಂಘಟಕರಾದ ಮಷಾಲ ಸ್ಪೋರ್ಟ್ಸ್ ನಿರ್ಧರಿಸಿದೆ.
ಲೀಗ್‌ಗಳ ಜಗತ್ತಿಗೆ ಮೊದಲು ಮುನ್ನುಡಿ ಬರೆದಿದ್ದು ಐಪಿಎಲ್. ಬಳಿಕ ಬ್ಯಾಡ್ಮಿಂಟನ್ ಲೀಗ್, ವಾಲಿ ಲೀಗ್, ಕೆಪಿಎಲ್ ಹೀಗೆ ಅನೇಕ ಟೂರ್ನಿಗಳು ಆರಂಭವಾದವು. ಕೆಲ ಲೀಗ್‌ಗಳಂತೂ ಬಂದಷ್ಟೇ ವೇಗವಾಗಿ ಕಣ್ಮರೆಯಾದವು. ಹೆಚ್ಚು ಆದಾಯ ತಂದುಕೊಡುವ ಮತ್ತು ಟಿಆರ್‌ಪಿ ರೇಟಿಂಗ್ಸ್ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಐಪಿಎಲ್ ಟೂರ್ನಿಯನ್ನು ವರ್ಷಕ್ಕೆ ಎರಡು ಸಲ ನಡೆಸಲು ಸಾಧ್ಯವಾಗಿಲ್ಲ. ಆದರೆ ಕಬಡ್ಡಿ ಲೀಗ್ ವರ್ಷಕ್ಕೆ ಎರಡು ಬಾರಿ ಆಯೋಜಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಇದೇ ವರ್ಷದ ಜೂನ್‌ನಲ್ಲಿ ನಾಲ್ಕನೇ ಆವೃತ್ತಿ ಜರುಗಲಿದೆ. ಜನವರಿ 30ರಂದು ಮೂರನೇ ಆವೃತ್ತಿಗೆ ಚಾಲನೆ ದೊರೆಯಲಿದೆ. ಇದು ಕಬಡ್ಡಿ ಬಗ್ಗೆ ಭಾರತದ ಅಭಿಮಾನಿಗಳು ಹೊಂದಿರುವ ಪ್ರೀತಿಗೆ ಸಾಕ್ಷಿ.
ಹೀಗಾಗಿ ಆಟಗಾರರಿಗೂ ಭಾರಿ ಬೇಡಿಕೆ ಉಂಟಾಗಿದೆ. 2014ರಲ್ಲಿ ಲೀಗ್ ಆರಂಭವಾದಾಗ ಯಾವ ತಂಡವಾದರೇನು ಆಡಲು ಅವಕಾಶ ಸಿಕ್ಕರೆ ಸಾಕು ಎನ್ನುವಂಥ ಪರಿಸ್ಥಿತಿ ಇತ್ತು. ಆದರೆ ಈಗ ಹೆಚ್ಚು ‘ಬೆಲೆ’ ಕೊಡುವ ತಂಡಕ್ಕೆ ಆಟಗಾರರು ಹೋಗುತ್ತಿದ್ದಾರೆ.
ಮೊದಲ ಎರಡು ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಮುನ್ನಡೆಸಿದ್ದ ಮಂಜಿತ್ ಚಿಲಾರ್ ಈ ಬಾರಿ ಪುಣೇರಿ ಪಲ್ಟನ್ ತಂಡ ಸೇರಿದ್ದಾರೆ. ಚುರುಕಿನ ಪಾದಚಲನೆ ಮತ್ತು ಪಾದರಸದಂತ ವೇಗದ ಮೂಲಕ ಗಮನ ಸೆಳೆದಿದ್ದ ಸ್ಟಾರ್ ರೈಡರ್ ಅಜಯ್ ಠಾಕೂರ್ ಕೂಡ ಪಲ್ಟನ್ ತಂಡದಲ್ಲಿದ್ದಾರೆ. ಇವರಿಬ್ಬರೂ 2010ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿದ್ದರು. ಬುಲ್ಸ್ ತಂಡದ ಶಕ್ತಿಯೂ ಆಗಿದ್ದರು.
ಇವರ ಜತೆಗೆ ರಾಕೇಶ್ ಕುಮಾರ್, ದೀಪಕ್ ಹೂಡಾ, ಜಸ್ಮೀರ್ ಸಿಂಗ್, ಸುರ್ಜಿತ್ ನರ್ವಾಲ್, ಧರ್ಮರಾಜ್ ಚೇರಲಾತನ್, ವಾಸಿಮ್ ಸಜ್ಜದ್ ಮತ್ತು ಎಸ್. ರಾಜಗುರು ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಆದರೆ ಹಾಲಿ ಚಾಂಪಿಯನ್ ಯು ಮುಂಬಾ ಮತ್ತು 2014ರ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಪಿಂಕ್ ಪ್ಯಾಂಥರ್ಸ್ ಮಾತ್ರ ತಮ್ಮ ತಂಡದ ಬಲಿಷ್ಠ ಆಟಗಾರರನ್ನು ಬಿಟ್ಟುಕೊಟ್ಟಿಲ್ಲ.
ಪುಣೇರಿ ತಂಡ ಹೋದ ವರ್ಷ ಎಂಟನೇ ಸ್ಥಾನ ಪಡೆದಿತ್ತು. ಆದ್ದರಿಂದ ಈ ಬಾರಿ ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದೊಂದಿಗೆ ಪ್ರಬಲ ಆಟಗಾರರನ್ನು ತನ್ನತ್ತ ಸೆಳೆದುಕೊಂಡಿದೆ. ನಿರೀಕ್ಷೆಯಂತೆಯೇ ಮಂಜಿತ್ ನಾಯಕರಾಗಿದ್ದಾರೆ. ಅಜಯ್, ನಿಲೇಶ್ ಸಾಳುಂಕೆ, ರಾಮಕುಮಾರ್ ಸೆಲ್ವಮ್, ರವಿ, ಸಚಿನ್, ವಾಲೀದ್ ಅಲ್ ಹಸನಿ, ತುಷಾರ್ ಪಾಟೀಲ್ ಅವರನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ.
ಬುಲ್ಸ್‌ಗೆ ಪರೀಕ್ಷೆ
ಬಹುತೇಕ ಹೊಸ ಆಟಗಾರರನ್ನು ಹೊಂದಿರುವ ಬುಲ್ಸ್ ತಂಡಕ್ಕೆ ಮೂರನೇ ಆವೃತ್ತಿ ಅಗ್ನಿಪರೀಕ್ಷೆ ಎನಿಸಿದೆ. ಈ ತಂಡ ಮೊದಲ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಹಿಂದಿನ ವರ್ಷ ಫೈನಲ್ ತಲುಪಿತ್ತು. ಮಂಜಿತ್ ಮತ್ತು ಅಜಯ್ ಬುಲ್ಸ್‌ನ ಪ್ರಮುಖ ರೈಡರ್‌ಗಳಾಗಿದ್ದರು.
ಈ ಬಾರಿ ಮಂಜಿತ್ ಬದಲು ಸುರ್ಜಿತ್ ನರ್ವಾಲ್ ನಾಯಕರಾಗಿದ್ದಾರೆ. ರೈಡರ್‌ಗಳಾದ ಅಮಿತ್ ರಾಟಿ, ದೀಪಕ್ ಕುಮಾರ್ ದಹಿಯಾ, ವೈಭವ್ ಕಾಳೆ, ವಿನೋದ್ ಕುಮಾರ್, ಡಿಫೆಂಡರ್ ರೈಟ್ ಕಾರ್ನರ್ ಆಶಿಶ್ ಸಾಂಗ್ವಾನ್, ಸತೀಶ್ ಕುಮಾರ್, ಲೆಫ್ಟ್ ಕಾರ್ನರ್ ವಿಜೇಂದರ್ ಸಿಂಗ್ ಅವರು ಬುಲ್ಸ್ ತಂಡದಲ್ಲಿದ್ದಾರೆ.
ಹೊಸ ಆಟಗಾರರ ತಂಡದಿಂದ ಏನು ನಿರೀಕ್ಷೆ ಮಾಡಬಹುದು ಎನ್ನುವ ಪ್ರಶ್ನೆಯನ್ನು ಬುಲ್ಸ್ ತಂಡದ ಕೋಚ್ ರಣಧೀರ್ ಸಿಂಗ್ ಮುಂದಿಟ್ಟಾಗ ‘ಹೊಸ ಆಟಗಾರರು ನಿಜ. ಆದರೆ ಅದ್ಭುತ ಪ್ರತಿಭೆ ಇರುವವರು. ಸೆಮಿಫೈನಲ್ ಪ್ರವೇಶಿಸುವುದು ನಮ್ಮ ಮೊದಲ ಗುರಿ’ ಎಂದು ಉತ್ತರ ನೀಡಿದರು.
‘ನಮ್ಮ ತಂಡದಲ್ಲಿ ಅನುಭವಿ ಆಟಗಾರರು ಕಡಿಮೆ ಎಂದು ಎಲ್ಲರೂ ಹೇಳುತ್ತಾರೆ. ಅದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಅವಕಾಶ ಕೊಟ್ಟರೆ ತಾನೆ ಅನುಭವ ಆಗಲು ಸಾಧ್ಯ. ಮುಂದಿನ ಐದು ವರ್ಷಗಳಲ್ಲಿ ಬಲಿಷ್ಠ ತಂಡ ಕಟ್ಟುವ ಗುರಿ ನಮ್ಮದು. ಗ್ರಾಮೀಣ ಭಾಗದವರೇ ನಮ್ಮಲ್ಲಿ ಹೆಚ್ಚಿದ್ದಾರೆ. ಅವರ ಪ್ರತಿಭೆಗೆ ಬುಲ್ಸ್ ವೇದಿಕೆಯಾಗಲಿದೆ’ ಎಂದು ರಣಧೀರ್ ಹೇಳುತ್ತಾರೆ.
ಮುಂಬಾ ಮೇಲೆ ಕಣ್ಣು
ಟೂರ್ನಿಯಲ್ಲಿ ಸತತ ಎರಡು ವರ್ಷ ಫೈನಲ್ ತಲುಪಿದ ಏಕೈಕ ತಂಡ ಯು ಮುಂಬಾ ಮೇಲೆ ಎಲ್ಲರ ಚಿತ್ತವಿದೆ.
ನಾಯಕ ಅನೂಪ್ ಈ ತಂಡದ ಶಕ್ತಿ. ಎರಡನೇ ಆವೃತ್ತಿಯಲ್ಲಿ ರೈಡಿಂಗ್ ಮೂಲಕ 74 ಪಾಯಿಂಟ್ಸ್ ಕಲೆ ಹಾಕಿದ್ದರು.
ಹೋದ ವರ್ಷ ಬುಲ್ಸ್ ಎದುರಿನ ಫೈನಲ್‌ನಲ್ಲಿ ಮುಂಬಾ ಪ್ರಶಸ್ತಿ ಜಯಿಸಲು ಅನೂಪ್, ಸುರೇಂದರ್ ನಾಡಾ, ಶಬ್ಬೀರ್ ಬಾಪು, ವಿಶಾಲ್ ಪ್ರಭಾಕರ್ ಮಾನೆ ಮತ್ತು ರಿಷಾಂಕ್ ದೇವಾಡಿಗ ಕಾರಣರಾಗಿದ್ದರು. ಇವರೆಲ್ಲರೂ ಟ್ಯಾಕಲ್ ಪಾಯಿಂಟ್ಸ್ ಗಳಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಆದ್ದರಿಂದ ಮುಂಬಾ ಫ್ರಾಂಚೈಸ್ ಈ ಎಲ್ಲಾ ಆಟಗಾರರನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ.
‘ರಕ್ಷಣೆ ಮತ್ತು ದಾಳಿ ವಿಭಾಗದಲ್ಲಿ ಸಮತೋಲನ ಹೊಂದಿರುವ ತಂಡ ನಮ್ಮದು. ಮೊದಲ ವರ್ಷ ಫೈನಲ್‌ನಲ್ಲಿ ಸೋತಿದ್ದ ನಿರಾಸೆ ನಮ್ಮನ್ನು ಸಾಕಷ್ಟು ಕಾಡಿತ್ತು. ಹೋದ ವರ್ಷ ಪ್ರಶಸ್ತಿ ಗೆಲ್ಲಲು ಅದೇ ಅಂಶ ಸ್ಫೂರ್ತಿಯಾಯಿತು. ಹಾಲಿ ಚಾಂಪಿಯನ್ ಎನ್ನುವ ಕೀರ್ತಿಯೇ ಈಗಲೂ ಪ್ರೇರಣೆ’ ಎನ್ನುತ್ತಾರೆ ಮುಂಬಾ ತಂಡದ ನಾಯಕ ಅನೂಪ್.
ಭರವಸೆ ಉಳಿಸಿಕೊಳ್ಳುವ ಸವಾಲು
ನನ್ನ ಮೇಲೆ ಭರವಸೆಯಿಟ್ಟು ಪುಣೇರಿ ಫ್ರಾಂಚೈಸ್ ನನ್ನನ್ನು ಆಯ್ಕೆ ಮಾಡಿಕೊಂಡಿದೆ. ತಂಡವನ್ನು ಕನಿಷ್ಠ ಸೆಮಿಫೈನಲ್‌ವರೆಗೆ ಕೊಂಡೊಯ್ಯಬೇಕಾದ ಸವಾಲಿದೆ. ಕಬಡ್ಡಿಯಲ್ಲಿ ಅನುಭವ ಮತ್ತು ದೈಹಿಕ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಕೌಶಲಯುತವಾಗಿ ಆಡುವ ಅಗತ್ಯವಿದೆ. ಮಂಜಿತ್ ಚಿಲಾರ್, ಪುಣೇರಿ ತಂಡದ ನಾಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.