ADVERTISEMENT

ಮಾರಕವಾಗದ ಮಾರ್ಜಕ!

ಕೆ.ಎಸ್.ಗಿರೀಶ್
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST
ಮಾರಕವಾಗದ ಮಾರ್ಜಕ!
ಮಾರಕವಾಗದ ಮಾರ್ಜಕ!   

ಸ್ಸೆಸ್ಸೆಲ್ಸಿ, ಪಿ.ಯು.ಸಿ.ಯಂತಹ ಯಾವುದೇ ಪ್ರಮುಖ ಪರೀಕ್ಷೆಗಳ ಫಲಿತಾಂಶ ನೋಡಿದರೂ ಗಂಡು ಮಕ್ಕಳಿಗಿಂತ ಒಂದು ಕೈ ಮಿಗಿಲಾಗಿಯೇ ಇರುತ್ತದೆ ಹೆಣ್ಣು ಮಕ್ಕಳ ಸಾಧನೆ. ಸದ್ಯದ ಸುದ್ದಿ ಎಂದರೆ ಗೂಗಲ್ ವಿಜ್ಞಾನ ಪ್ರದರ್ಶನ- 2013ರ ಅಂತಿಮ ಘಟ್ಟಕ್ಕೆ ಭಾರತದ ಬಾಲಕಿಯೊಬ್ಬಳು ಅರ್ಹತೆ ಗಿಟ್ಟಿಸಿದ್ದಾಳೆ.

ಪಂಜಾಬಿನ ಮೊಹಾಲಿಯ ಮಿಲೆನಿಯಂ ಶಾಲೆಯ ವಿದ್ಯಾರ್ಥಿನಿಯಾದ ಸೃಷ್ಟಿ ಆಸ್ಥಾನ ಎಂಬ 15 ವರ್ಷದ ಬಾಲಕಿ ಈ ಪ್ರತಿಷ್ಠಿತ ಸ್ಪರ್ಧೆಯ ಅಂತಿಮ 15 ಮಂದಿಯಲ್ಲಿ ಸ್ಥಾನ ಪಡೆದಿದ್ದಾಳೆ.

ಅಂತಿಮ ಸ್ಪರ್ಧೆಯು ಅಮೆರಿಕದಲ್ಲಿರುವ ಗೂಗಲ್ ಮೌಂಟನ್ ಪ್ರಧಾನ ಕಚೇರಿಯಲ್ಲಿ ಸೆಪ್ಟೆಂಬರ್ 23ರಂದು ನಡೆಯಲಿದೆ. ಅಂದು ಅಂತಿಮ ಸುತ್ತಿನಲ್ಲಿರುವ    ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ತಮ್ಮ ಪ್ರಾಜೆಕ್ಟ್‌ಗಳನ್ನು ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳ ಮುಂದೆ ಮಂಡಿಸಲಿದ್ದಾರೆ. ಸೃಷ್ಟಿ ಈ ಜಾಗತಿಕ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗುವುದಕ್ಕೆ ಆಕೆ ಸ್ವತಃ ಯೋಜಿಸಿದ ಪರಿಸರ ರಕ್ಷಣಾ ಯೋಜನೆ ಕಾರಣವಾಗಿದೆ.

ನಮ್ಮ ಪರಿಸರಕ್ಕೆ ಅತಿ ದೊಡ್ಡ ಮಾರಕಗಳಲ್ಲಿ ಒಂದು ನಾವು ಬಳಸುವ ಮಾರ್ಜಕಗಳು. ಅಂದರೆ ಬಟ್ಟೆ, ಪಾತ್ರೆ ತೊಳೆಯಲು, ಇಲ್ಲವೇ ಸ್ನಾನಕ್ಕೆ ಬಳಸುವ ಶಾಂಪೂ ಹಾಗೂ ಸೋಪುಗಳು. ಅವುಗಳಲ್ಲಿರುವ ಮಾರ್ಜಕಾಂಶಗಳು ನೀರನ್ನು ಕಲುಷಿತಗೊಳಿಸುತ್ತವೆ. ಇದನ್ನು ನೀರಿನಿಂದ ಪ್ರತ್ಯೇಕಿಸುವುದೇ ಬಹು ದೊಡ್ಡ ಸವಾಲು.

ಏನಿದು ಸೈನ್ಸ್ ಫೇರ್?

ವಿಜ್ಞಾನದ ಆವಿಷ್ಕಾರಗಳಿಗೆ ಸಂಬಂಧಿಸಿದಂತೆ ಜಗತ್ತಿನ ಎಲ್ಲೆಡೆ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ 2011ರಲ್ಲಿ ಪ್ರತಿಷ್ಠಿತ ಗೂಗಲ್ ಸಂಸ್ಥೆ ಆರಂಭಿಸಿದ ಸ್ಪರ್ಧೆಯೇ ಗೂಗಲ್ ಸೈನ್ಸ್ ಫೇರ್.

ಪ್ರಸಕ್ತ ಋತುವಿನಲ್ಲಿ 120ಕ್ಕೂ ಹೆಚ್ಚಿನ ದೇಶಗಳ ವಿದ್ಯಾರ್ಥಿಗಳು ಕಣದಲ್ಲಿದ್ದರು. ವಿಜೇತರಿಗೆ 50 ಸಾವಿರ ಅಮೆರಿಕನ್ ಡಾಲರ್ ಶಿಷ್ಯವೇತನ ಹಾಗೂ 10 ದಿನಗಳ ಕಾಲ ಪ್ರಪಂಚ ಪರ್ಯಟನಾ ಭಾಗ್ಯ ಲಭಿಸಲಿದೆ. ಹೆಚ್ಚಿನ ಮಾಹಿತಿಗೆ-ttps://www.googlesciencefair.com/en/2013/                                                             

ಸದ್ಯ ಇದಕ್ಕೆಂದೇ ಬೇರೆ ಬೇರೆ ವಿಧಾನಗಳಿವೆ. ಆದರೆ ಸೃಷ್ಟಿ ಪ್ರಸ್ತಾಪಿಸಿರುವ ಯೋಜನೆ ಮಾತ್ರ ಅತಿ ವಿಶಿಷ್ಟವಾದುದು. ಈ ಮಾರ್ಜಕಗಳನ್ನು ಸರಳ ಸಂಯುಕ್ತಗಳನ್ನಾಗಿ ಒಡೆದು ಅವುಗಳನ್ನು ನ್ಯಾನೊ ಕಣಗಳನ್ನಾಗಿ ಖನಿಜೀಕರಣ ಮಾಡಲು ಸೌರ ಶಕ್ತಿಯನ್ನು ಬಳಕೆ ಮಾಡುವುದು ಈಕೆಯ ಯೋಜನೆ.

ಇಂದು ಚಾಲ್ತಿಯಲ್ಲಿರುವ ವಿಧಾನದಲ್ಲಿ ಮಲಿನ ನೀರನ್ನು ಶುದ್ಧೀಕರಿಸಲು ಬೇಕಾಗುವಷ್ಟು ಸಮಯ ಸೌರಶಕ್ತಿಯ ಯೋಜನೆಗೆ ಬೇಕಾಗಿಲ್ಲ. ಅಷ್ಟೇ ಅಲ್ಲ ಸೃಷ್ಟಿ ಹೇಳುವಂತೆ ಸಮಯದ ಜತೆಗೆ ಹಣವೂ ಉಳಿತಾಯವಾಗುತ್ತದೆ. ಮಾರ್ಜಕಗಳನ್ನು ಬೇರ್ಪಡಿಸುವ ಕಾರ್ಯ ಅತಿ ವೇಗವಾಗಿ ಆಗುವುದರಿಂದ ಶ್ರಮಿಕರ ಶ್ರಮ ಸಹ ಉಳಿತಾಯವಾಗುತ್ತದೆ.

ಒಮ್ಮೆ ಈಕೆ ಶಾಲಾ ಪ್ರವಾಸದಲ್ಲಿ, ಪಂಜಾಬಿನ ಕೈಗಾರಿಕಾ ನಗರ ಎಂದೇ ಖ್ಯಾತಿವೆತ್ತ ಲೂಧಿಯಾನಕ್ಕೆ ಬಂದಳಂತೆ. ಅಲ್ಲಿ ಬಟ್ಟೆ ಹಾಗೂ ಅದಕ್ಕೆ ಬಣ್ಣ ಹಾಕುವ ಕೈಗಾರಿಕೆಗಳೇ ಹೆಚ್ಚಾಗಿವೆ. ಜವಳಿ ಉದ್ಯಮವೊಂದಕ್ಕೆ ಭೇಟಿಯಿತ್ತಾಗ ಕಾರ್ಖಾನೆ ಮಾಲೀಕ ಹೇಗೆ ಬಟ್ಟೆಗೆ ಬಣ್ಣ ಹಾಕಲಾಗುತ್ತದೆ ಎಂಬುದನ್ನು ವಿವರಿಸಿದ. ಆದರೆ ಸೃಷ್ಟಿಯ ಗಮನವೆಲ್ಲಾ ಬಣ್ಣ ಹಾಕಿದ ನಂತರ ಬರುವ ಮಾರ್ಜಕಯುಕ್ತ ಕಲುಷಿತ ನೀರನ್ನು ಏನು ಮಾಡುತ್ತಾರೆ ಎಂಬುದರತ್ತಲೇ ಕೇಂದ್ರೀಕೃತವಾಗಿತ್ತು.

ADVERTISEMENT

ಈ ಸಂಬಂಧ ಈಕೆ ಮಾಲೀಕನನ್ನು `ಕಲುಷಿತ ನೀರನ್ನು ಮಾರ್ಜಕದಿಂದ ಬೇರ್ಪಡಿಸಿ ಹೊರ ಬಿಡುವುದಿಲ್ಲವೇ' ಎಂದು ಪ್ರಶ್ನಿಸಿದಾಗ, ಆತ ಘೊಳ್ಳನೆ ನಕ್ಕು `ನಿಮ್ಮ ಮನೆಯಲ್ಲಿ ಬಟ್ಟೆ ತೊಳೆದ ನೀರನ್ನು ನೀವು ಶುದ್ಧೀಕರಿಸಿ ಚರಂಡಿಗೆ ಬಿಡುತ್ತೀರಾ' ಎಂದು ಮರು ಪ್ರಶ್ನಿಸಿದನಂತೆ.
ಪ್ರವಾಸಕ್ಕೆ ಬಂದಿದ್ದ ಎಲ್ಲ ವಿದ್ಯಾರ್ಥಿಗಳೂ ಅತೀವ ಸಂತಸದಿಂದ ಇದ್ದರೆ ಸೃಷ್ಟಿಗೆ ಮಾತ್ರ ಕಾರ್ಖಾನೆ ಮಾಲೀಕನ ಪ್ರಶ್ನೆಯೇ ನೆನಪಾಗುತ್ತಿತ್ತು.

`ಪ್ರತಿ ನಿತ್ಯ ಪ್ರತಿ ಮನೆಯಲ್ಲೂ ಎಷ್ಟೊಂದು ಮಾರ್ಜಕಯುಕ್ತ ನೀರು ಹೊರಹೋಗುತ್ತದೆ, ಎಷ್ಟೊಂದು ನದಿಗಳಿಗೆ ಸೇರುತ್ತದೆ, ಅವುಗಳಿಂದ ಅದೆಷ್ಟು ಬಗೆಯ ಜಲಚರಗಳು ಸಾವಿಗೀಡಾಗುತ್ತವೆ. ಇದಕ್ಕೆ ಪರಿಹಾರ ಏನು' ಎಂದು ಯೋಚಿಸುತ್ತಾ ಇದ್ದಾಗ ಹೊಳೆದದ್ದೇ ಈ ಯೋಜನೆಯಂತೆ.

ಇದರಿಂದ ಕಡಿಮೆ ವೆಚ್ಚ, ಕಡಿಮೆ ಶ್ರಮ ವ್ಯಯವಾಗುವುದರ ಜೊತೆಗೆ ಸೌರ ಶಕ್ತಿ ಬಳಕೆಯಿಂದ ತೈಲ ಇಂಧನದ ಮೇಲಿನ ಅವಲಂಬನೆಯೂ ತಗ್ಗಿ ಸುಲಭದಲ್ಲಿ ಎಲ್ಲರ ಕೈಗೆಟುಕುವಂತೆ ಆಗುತ್ತದೆ ಎಂಬುದು ಈಕೆಯ ವಾದ. ಅಷ್ಟೇ ಅಲ್ಲ, ಪ್ರತಿ ಮನೆಯಲ್ಲೂ ಇದನ್ನು ಅಳವಡಿಸುವಂತಾಗಿ ನಮ್ಮ ಮನೆಯಿಂದ ಹೊರ ಹೋಗುವ ಕೊಳಚೆ ನೀರಿನಿಂದ ಮಾರ್ಜಕಗಳನ್ನು ತೆಗೆದು ಬಿಡುವಂತೆ ಆಗಬೇಕು ಎಂಬುದು ಈಕೆಯ ಕನಸು. 
-ಕೆ.ಎಸ್.ಗಿರೀಶ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.