ADVERTISEMENT

ಯುವತಿಯರಿಗೆ ಇಂಡಿಯನ್ ಏರ್‌ಫೋರ್ಸ್

ಸುಷ್ಮಾರಾಣಿ ಎಂ.
Published 6 ಫೆಬ್ರುವರಿ 2011, 19:30 IST
Last Updated 6 ಫೆಬ್ರುವರಿ 2011, 19:30 IST

ನೀಲ ಆಕಾಶದಲ್ಲಿ ಬುರ್ರನೇ ಸದ್ದು ಮಾಡುತ್ತಾ ಹಾರುವ ವಿಮಾನಗಳನ್ನು ಕಂಡಾಗ ಪೈಲೆಟ್ ಆಗಿ, ಆಕಾಶದಲ್ಲಿ ಹಾರಾಡಬೇಕೆಂದು ಅನಿಸುವುದು ಸಹಜವೇ ಆದರೂ ಈ ವಿಭಿನ್ನ ಹಾಗೂ ದಾಷ್ಟೀಕ  ವೃತ್ತಿ ಸೇರಲು  ನಿರ್ಧರಿಸುವವರು ವಿರಳ. ವಾಯುಸೇನೆಗೆ ಸೇರಿ ದೇಶಸೇವೆ ಮಾಡುವ ಉತ್ಕಟ ಹಂಬಲವಿದ್ದಲ್ಲಿ, ಪೈಲೆಟ್, ನೇವಿಗೇಟರ್, ಟೆಕ್ನಿಕಲ್ ಅಥವಾ ಗ್ರೌಂಡ್ ಡ್ಯೂಟಿ ಅಧಿಕಾರಿಯಾಗಿ ವಾಯು ಸೇನೆಯಲ್ಲಿ ಸಾಹಸ, ಸವಾಲುಗಳನ್ನೆದರಿಸುತ್ತಾ ಹೆಮ್ಮೆಯಿಂದ ವೃತ್ತಿ ಜೀವನದ ಮೆಟ್ಟಿಲುಗಳನ್ನು ಹತ್ತಿ ಸಾಧನೆಯ ಶಿಖರ ತಲುಪಲು ಅವಕಾಶವಿದೆ.

 ಕೇವಲ ಟಿವಿ ಯಲ್ಲಷ್ಟೇ ವೀಕ್ಷಿಸಿದ್ದ  ಫೈಟರ್ ವಿಮಾನಗಳಾದ ಎಸ್.ಯು-30, ಬೋಯಿಂಗ್, ಮಿಗ್ -21, ವಿಮಾನಗಳನ್ನು ಹಾರಿಸುವ, ವಾಯು ಸೇನೆಯ ಹೆಲಿಕಾಪ್ಟರ್‌ಗಳಾದ ಚೇತಕ್, ಎಂ.ಐ.8 ಗಳನ್ನೇರಿ, ಸಾಹಸ ಕೈಗೊಳ್ಳುವ ಮಹದಾಸೆ ಇರುವ ಡೈನಾಮಿಕ್ ವ್ಯಕ್ತಿತ್ವದ ಮಹಿಳೆ ನೀವಾಗಿದ್ದರೆ, ಇಂಡಿಯನ್ ಏರ್‌ಫೋರ್ಸ್ ನಿಮ್ಮನ್ನು ಕೈಬೀಸಿ ಕರೆಯುತ್ತದೆ. 

ಇಂಡಿಯನ್ ಏರ್‌ಫೋರ್ಸ್ ಜಗತ್ತಿನ ನಾಲ್ಕನೆಯ ದೊಡ್ಡದಾದ ವಾಯು ಸೇನೆಯಾಗಿದ್ದು, ವಾಯುಸೇನೆಗೆ ಸೇರ ಬಯಸುವ ಭಾರತೀಯ ಮಹಿಳಾ ಅಭ್ಯರ್ಥಿಗಳಿಂದ ವಿವಿಧ  ಕೋರ್ಸ್‌ಗಳಿಗೆ ಅರ್ಜಿ ಅಹ್ವಾನಿಸಿದೆ. ವಾಯು ಸೇನೆಯ ಎಲ್ಲಾ ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳಿದ್ದಾರೆ. ಕೋರ್ಸ್‌ಗಳು ಜನವರಿ 2012 ರಿಂದ ಆರಂಭವಾಗಲಿದ್ದು, ತರಬೇತಿಯ ನಂತರ ಶಾರ್ಟ್ ಸರ್ವೀಸ್ ಕಮಿಷನ್ ಮೂಲಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ.

ಏರ್‌ಫೋರ್ಸ್‌ಗೆ ಪ್ರವೇಶ ಪಡೆದು ವೃತ್ತಿಯಲ್ಲಿ ಬೆಳೆದಂತೆಲ್ಲಾ ನೂರಾರು ಸದವಕಾಶಗಳು ನಿಮ್ಮ ಹಾದಿಯಲ್ಲಿ ಹರಿದು ಬರುತ್ತವೆ. ಭಾರತ ಮತ್ತು ವಿದೇಶದಲ್ಲಿ ಹಲವು ವಿಶೇಷ ತರಬೇತಿಗಳಲ್ಲಿ  ಪಾಲ್ಗೊಳ್ಳ ಬಹುದಾದ ಸದವಕಾಶ ನಿಮ್ಮ ಕೈಗೆಟುಕಲಿದೆ, ಬಾನಿನಲ್ಲಿ ಎತ್ತರ ಹಾರುವ ವಿಮಾನಗಳನ್ನು ನಿಯಂತ್ರಿಸುವ ಮೈನವಿರೇಳುವ ವೃತ್ತಿಯನ್ನು ಹೆಮ್ಮೆಯಿಂದ ನಿರ್ವಹಿಸಬಹುದು.

ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆ ಹೊಂದಿರುವ ಮತ್ತು ಅರ್ಹತಾ ಪರೀಕ್ಷೆಯ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿಯರು ಅರ್ಜಿ ಸಲ್ಲಿಸಬಹುದು,

ಕನಿಷ್ಠ ಎತ್ತರ 162.5 ಸೆಂ.ಮಿ., ಮತ್ತು ಎತ್ತರಕ್ಕೆ ತಕ್ಕ ತೂಕ, ದೃಷ್ಟಿ ಇತ್ಯಾದಿ ದೈಹಿಕ ಅರ್ಹತೆಗಳು ಮತ್ತು ನಿಗದಿತ ವಯೋಮಿತಿಯನ್ನು ಅಭ್ಯರ್ಥಿಗಳ ಆಯ್ಕೆಗೆ ಪರಿಗಣಿಸಲಾಗುವುದು.

ಜನವರಿ 2012ಕ್ಕೆ ಏರ್‌ಫೋರ್ಸ್ ವತಿಯಿಂದ ಆರಂಭವಾಗಲಿರುವ ಕೋರ್ಸ್‌ಗಳಲ್ಲಿ ಫ್ಲೈಯಿಂಗ್ ಬ್ರ್ಯಾಂಚ್, ಟೆಕ್ನಿಕಲ್ ಬ್ರ್ಯಾಂಚ್, ಗ್ರೌಂಡ್ ಡ್ಯೂಟಿ ಕೋರ್ಸ್ -ಹೀಗೆ ಮೂರು ವಿಭಾಗಗಳಿವೆ.

ಫ್ಲೈಯಿಂಗ್ ಬ್ರ್ಯಾಂಚ್: ಏರ್‌ಫೋರ್ಸ್‌ನಲ್ಲಿ ಇದು ಮೊದಲನೆಯ ರ್ಯಾಂಕ್ ಆಗಿದ್ದು, ಸಂಪೂರ್ಣ ತರಬೇತಿಯ ನಂತರ ಅಧಿಕಾರಿಯನ್ನು ಸ್ಕ್ವಾಡ್ರನ್ ಪೈಲೆಟ್ ಅಥವಾ ಅಸಿಸ್ಟೆಂಟ್, ಸೆಕ್ಯುರಿಟಿ ಆಫೀಸರ್ ಆಗಿ ಯಾವುದೇ ಕಿರಿಯ ವಾಯು ಸೇನಾ ಪಡೆಗಳಿಗೆ ನೇಮಕ ಮಾಡುತ್ತಾರೆ.

ವಿದ್ಯಾರ್ಹತೆ - ಅಭ್ಯರ್ಥಿಗಳು ಮೂರು ವರ್ಷಗಳ ಯಾವುದೇ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಶೇ 60 ರಷ್ಟು ಅಂಕಗಳಿಸಿ ತೇರ್ಗಡೆಯಾಗಿದ್ದು,  ದ್ವಿತೀಯ ಪಿ.ಯು.ಸಿ.ಯಲ್ಲಿ ಭೌತಶಾಸ್ತ್ರ, ಗಣಿತಶಾಸ್ತ್ರ, ವಿಷಯಗಳನ್ನು ಅಧ್ಯಯನ ಮಾಡಿರತಕ್ಕದ್ದು. ಅಥವಾ, ಬಿ.ಇ. / ಬಿ. ಟೆಕ್. 4 ವರ್ಷಗಳ ಪದವಿಯನ್ನು ಮಾನ್ಯತೆ ಪಡೆದ ವಿವಿಯಿಂದ ಪಡೆದವರೂ  ಅರ್ಜಿ ಸಲ್ಲಿಸಬಹುದು.

ಟೆಕ್ನಿಕಲ್ ಬ್ರ್ಯಾಂಚ್:ಟೆಕ್ನಿಕಲ್ ಬ್ರ್ಯಾಂಚ್‌ನಲ್ಲಿ ವಾಯು ಸೇನೆಯ ಎಂಜಿನಿಯರ್‌ಗಳನ್ನು ರೂಪಿಸಲಾಗುತ್ತದೆ. ಅದರಲ್ಲಿ ಎಲೆಕ್ಟ್ರಾನಿಕ್ಸ್ ಏರೋನಾಟಿಕಲ್ ಎಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಏರೋನಾಟಿಕಲ್ ಎಂಜಿನಿಯರಿಂಗ್ ಎಂದು ಎರಡು ವಿಭಾಗಗಳಿವೆ.

ಎಲೆಕ್ಟ್ರಾನಿಕ್ಸ್ ಏರೋನಾಟಿಕಲ್ ಎಂಜಿನಿಯರಿಂಗ್: ವಾಯುಸೇನೆಯಲ್ಲಿನ ಯುದ್ದ ವಿಮಾನಗಳ ತಾಂತ್ರಿಕ ನಿರ್ವಹಣೆಯ ಹೊಣೆ ಹೊತ್ತ ಈ ವಿಭಾಗಕ್ಕೆ ಪ್ರವೇಶಾರ್ಹತೆಗೆ, ಕನಿಷ್ಠ ನಾಲ್ಕು ವರ್ಷಗಳ  ಎಂಜಿನಿಯರಿಂಗ್ ಪದವಿಯ ಎಲ್ಲಾ ಪತ್ರಿಕೆಗಳಲ್ಲಿ ಶೇ 60 ರಷ್ಟು ಅಂಕ ಗಳಿಸಿರಬೇಕು. ಅಥವಾ ಅಸೋಸಿಯೇಟ್ ಮೆಂಬರ್‌ಶಿಪ್ ಆಫ್ ಇನ್‌ಸ್ಟಿಟ್ಯೂಷ್‌ನ್ ಆಫ್ ಎಂಜಿನಿಯರ್ಸ್‌ (ಭಾರತೀಯ) ಆಥವಾ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಆಥವಾ ಗ್ರಾಜುಯೇಟ್ ಮೆಂಬರ್‌ಶಿಪ್ ಎಕ್ಸಾಮಿನೇಶನ್ ಆಫ್ ದಿ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯೂನಿಕೇಶನ್ ಎಂಜಿನಿಯರ್ಸ್‌ ಬೈ ಆಕ್ಚುಯಲ್ ಸ್ಟಡೀಸ್‌ಗಳು ನಡೆಸುವ ಸೆಕ್ಷನ್ ಎ ಮತ್ತು ಬಿ ಪರೀಕ್ಷೆಗಳಲ್ಲಿ ಎಲ್ಲಾ ವಿಷಯಗಳಲ್ಲಿ ಶೇ 60 ಅಂಕಗಳನ್ನು ಗಳಿಸಿರಬೇಕು.

ಮೆಕ್ಯಾನಿಕಲ್  ಏರೋನಾಟಿಕಲ್ ಎಂಜಿನಿಯರ್:(ಎ.ಇ. (ಎಂ)) ವಾಯುಸೇನೆಯಲ್ಲಿನ ಯುದ್ದ ವಿಮಾನಗಳ ವಿನ್ಯಾಸ, ವಿಮಾನದ ಬಿಡಿ ಭಾಗಗಳ ಜೋಡಣೆ, ಮತ್ತು ವಿಮಾನದಲ್ಲಿ ಬಳಸುವ ಯಂತ್ರಗಳ ಉತ್ಪಾದನೆಯ ಕಾರ್ಯ ನಿರ್ವಹಿಸುವ ಈ ವಿಭಾಗದ ಪ್ರವೇಶಾರ್ಹತೆಗೆ, ವಿಭಾಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಾಲ್ಕು ವರ್ಷದ ಬಿ.ಇ. / ಬಿ.ಟೆಕ್ ಪದವಿಯಲ್ಲಿ ಶೇ 60 ಅಂಕ ಗಳಿಸಿರಬೇಕು. 

ದೈಹಿಕ ಅರ್ಹತೆ:  1.52 ಸೆ.ಮೀ. ಎತ್ತರ, ಎತ್ತರಕ್ಕೆ ತಕ್ಕ ತೂಕ.   ಬೇರೆ ವೈದ್ಯಕೀಯ ಅರ್ಹತೆಗಳನ್ನು ವಾಯುಸೇನೆಯ ವೈದ್ಯಕೀಯ ಪ್ರಾಧಿಕಾರದ ಅಧಿಕಾರಿಗಳು ಮೌಲ್ಯಮಾಪನ ಮಾಡುತ್ತಾರೆ.

ಗ್ರೌಂಡ್ ಡ್ಯೂಟಿ ಬ್ರ್ಯಾಂಚಸ್: ಮಾನವ ಸಂಪನ್ಮೂಲ ಮತ್ತು ಗಣ್ಯವಾದ ಸಂಪನ್ಮೂಲದ ನಿರ್ವಹಣೆ ಭಾರತೀಯ ವಾಯುಸೇನೆಯ  ಆಡಳಿತದ ಚುಕ್ಕಾಣಿ ಹಿಡಿದಿರುವ  ಗ್ರೌಂಡ್ ಡ್ಯೂಟಿ ಬ್ರ್ಯಾಂಚ್‌ನಲ್ಲಿ, ಪುರುಷ ಹಾಗೂ ಮಹಿಳೆಯರು ಸಮನಾಗಿ ಸಾಹಸದ  ಹಾದಿಯಲ್ಲಿ ವೃತ್ತಿ ಆರಂಭಿಸ ಬಹುದು ಗ್ರೌಂಡ್ ಡ್ಯೂಟಿ ಬ್ರ್ಯಾಂಚ್‌ನಲ್ಲಿ,ಅಡ್ಮಿನಿಸ್ಟ್ರೇಶನ್ ಬ್ರ್ಯಾಂಚ್, ಅಕೌಂಟ್ಸ್ ಬ್ರ್ಯಾಂಚ್, ಲಾಜಿಸ್ಟಿಕ್ಸ್ ಬ್ರ್ಯಾಂಚ್‌ಗಳೆಂಬ ಮೂರು ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ.

ಅಡ್ಮಿನಿಸ್ಟ್ರೇಶನ್ ಬ್ರ್ಯಾಂಚ್‌ಗೆ ವಿದ್ಯಾರ್ಹತೆ: ಎಲ್.ಎಲ್.ಬಿ., ಎಂ.ಎಡ್.,  ಪಿ.ಹೆಚ್.ಡಿ.,  ಸಿ.ಎ., ಐ.ಸಿ.ಡಬ್ಲ್ಯೂ. ಲಾಜಿಸ್ಟಿಕ್ಸ್ ಬ್ರ್ಯಾಂಚ್‌ಗೆ ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಶೇ 60 ರಷ್ಟು ಅಂಕಗಳೊಂದಿಗೆ ಪದವಿ. ಅಥವಾ ಶೇ 50 ರಷ್ಟು ಅಂಕಗಳೊಂದಿಗೆ. ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು.

ಅಕೌಂಟ್ಸ್ ಬ್ರ್ಯಾಂಚ್‌ಗೆ:
ಬಿ.ಕಾಂ ನಲ್ಲಿ ಶೇ 60 ಅಂಕಗಳೊಂದಿಗೆ ಪದವಿ ಅಥವಾ ಎಂ.ಕಾಂ. , ಸಿ.ಎ., ಐ.ಸಿ.ಡಬ್ಲ್ಯೂ ನಲ್ಲಿ ಶೇ 50 ರಷ್ಟು ಅಂಕ ಗಳಿಸಿರಬೇಕು.

ಮೀಟಿಯಾರಾಲಜಿ ಬ್ರ್ಯಾಂಚ್‌ಗೆ:ಯಾವುದೇ ವಿಜ್ಞಾನದ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಉದಾ: ಗಣಿತಶಾಸ್ತ್ರ ಸ್ಟ್ಯಾಟಿಸ್ಟಿಕ್ಸ್, ಜಿಯೋಗ್ರಫಿ, ಕಂಪ್ಯೂಟರ್ ಅಪ್ಲಿಕೇಶ್‌ನ್ಸ್,  ಎನ್ವಿರಾನ್ಮೆಂಟಲ್ ಸೈನ್ಸ್,  ಅಪ್ಲೈ ಡ್,  ಫಿಸಿಕ್ಸ್, ಓಶನೊಗ್ರಫಿ, ಮೀಟಿಯಾರಾಲಜಿ, ಅಗ್ರಿಕಲ್ಚರಲ್, ಮೀಟಿಯಾರಾಲಜಿ, ಇಕೋಲಜಿ ಅಂಡ್ ಎನ್ವಿರಾನ್ಮೆಂಟ್,  ಜಿಯೋಫಿಸಿಕ್ಸ್,  ಎನ್ವಿರಾನ್ಮೆಂಟಲ್ ಬಯೋಲಜಿಯ ಪದವಿಯಲ್ಲಿ ಶೇ50 ರಷ್ಟು ಅಂಕ ಗಳಿಸಿದವರು ಅರ್ಜಿ ಸಲ್ಲಿಸಬಹುದು.ಪದವಿಯ ಅಂತಿಮ ವರ್ಷ ಅಥವಾ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು, ಆದರೆ  ಎಸ್.ಎಸ್.ಬಿ. ಟೆಸ್ಟಿಂಗ್ ವೇಳೆಗೆ ಯಾವುದೇ ವಿಷಯದಲ್ಲಿ ನಪಾಸಾಗಿರ ಬಾರದು,  ಡಿಸೆಂಬರ್ 2. 2011ರ ವೇಳೆಗೆ,  ವಿಶ್ವವಿದ್ಯಾನಿಲಯದ ಪದವಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಮಾರ್ಚ್ 23ರಂದು ಪ್ರವೇಶ ಪರೀಕ್ಷೆ:

ಅಭ್ಯರ್ಥಿಗಳ ಆಯ್ಕೆಗೆ 2011 ರ ಮಾರ್ಚ್ 23 ರಂದು ಪ್ರವೇಶ ಪರೀಕ್ಷೆಯನ್ನು ಭಾರತದಾದ್ಯಂತ ನಡೆಸಲಾಗುತ್ತದೆ, ಪ್ರವೇಶ ಪರೀಕ್ಷೆಯು ವಸ್ತುನಿಷ್ಠ  ಮಾದರಿಯದಾಗಿದ್ದು, ವರ್ಬಲ್ ಎಬಿಲಿಟಿ, ನ್ಯೂಮರಿಕಲ್ ಎಬಿಲಿಟಿ.  ರೀಸನಿಂಗ್,  ಜನರಲ್ ಅವೇರ್‌ನೆಸ್ ಮತ್ತು ಆಪ್ಟಿಟ್ಯೂಡ್ ಅನ್ನು ಒಳಗೊಂಡಿದ್ದು ಎರಡು ಗಂಟೆಯ ಸಮಯವನ್ನು ನಿಗದಿ ಪಡಿಸಲಾಗಿದೆ,ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಮತ್ತು ಇತರ ಮಾಹಿತಿಯನ್ನು ಏರ್ ಫೊರ್ಸ್ ವೆಬ್‌ಸೈಟ್(www.Careerairforcenic.in) ನಲ್ಲಿ ಪ್ರಕಟಿಸಲಾಗುತ್ತದೆ.

ಏರ್ ಫೋರ್ಸ್  ಕಾಮನ್ ಅಡ್ಮಿಶನ್ ಟೆಸ್ಟ್ (AFCAT) ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನಂತರ ಏರ್ ಫೋರ್ಸ್ ಸೆಲೆಕ್ಷನ್ ಬೋರ್ಡ್ (AFSB) ಡೆಹ್ರಾಡೂನ್, ಮೈಸೂರು ಅಥವಾ ವಾರಣಾಸಿಯಲ್ಲಿ ನಡೆಸುವ ಪರೀಕ್ಷೆಗೆ ಕರೆಯಲಾಗುವುದು.  ಈ ಪರೀಕ್ಷೆಯು ಮೂರು ಹಂತಗಳನ್ನು ಹೊಂದಿದೆ. ಸ್ಟೇಜ್-1 ಪ್ರಥಮ ಪರೀಕ್ಷೆಯು ಬುದ್ದಿ ಮತ್ತೆ, ಚಿತ್ರಗಳ ಗ್ರಹಿಕೆ ಮತ್ತು ಚರ್ಚೆಯನ್ನೊಳಗೊಂಡಿದ್ದು ಇದು ಸ್ಕ್ರೀನಿಂಗ್ ಟೆಸ್ಟ್ ಆಗಿದೆ. ಇದರಲ್ಲಿ ಆಯ್ಕೆಗೆ ಅರ್ಹರಾದವರನ್ನು ಮಾತ್ರ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಒಂದನೆಯ ಹಂತದಲ್ಲಿ ಆಯ್ಕೆಯ ಅರ್ಹತೆ ಪಡೆಯದ ಅಭ್ಯರ್ಥಿಗಳನ್ನು ಹಿಂದಕ್ಕೆ ಕಳುಹಿಸಲಾಗುವುದು.

ಸ್ಟೇಜ್-2 :ದ್ವಿತೀಯ ಸ್ಟೇಜ್‌ನ ಪರೀಕ್ಷೆಯು ಮನಶಾಸ್ತ್ರ ಪರೀಕ್ಷೆಯನ್ನು ಒಳಗೊಂಡಿದೆ, ಇದನ್ನು ಗುಂಪು ಪರೀಕ್ಷೆಗಳು ಮತ್ತು ಸಂದರ್ಶನದ  ಮೂಲಕ ನಡೆಸಲಾಗುತ್ತದೆ. ಈ ಪರೀಕ್ಷೆ ನಾಲ್ಕು ದಿನಗಳ ಕಾಲ ನಡೆಯುವುದು. 

ಸ್ಟೇಜ್ 3
: ಎರಡನೆಯ ಹಂತದಲ್ಲಿ ಅರ್ಹತಾ ಮಟ್ಟ ತಲುಪಿದ ಅಭ್ಯರ್ಥಿಗಳನ್ನು ಮಾತ್ರ ಮೂರನೆಯ ಹಂತಕ್ಕೆ ಆಯ್ಕೆ ಮಾಡಲಾಗುವುದು, ಈ ಹಂತದಲ್ಲಿ ಅಭ್ಯರ್ಥಿಯ ಸಾಮರ್ಥ್ಯವನ್ನು ಎರಡು ವಿಧಾನಗಳಲ್ಲಿಅಳೆಯಲಾಗುತ್ತದೆ. ಪೈಲಟ್ ಆಪ್ಟಿಟ್ಯೂಡ್ ಬ್ಯಾಟರಿ ಟೆಸ್ಟ್ (PABT) (ಫ್ಲೆ ಯಿಂಗ್‌ಬ್ಯ್ರಾಂಚ್)

ಎಂಜಿನಿಯರ್ ನಾಲೆಡ್ಜ್ ಟೆಸ್ಟ್ (ENT)  (ಟೆಕ್ನಿಕಲ್ ಬ್ರ್ಯಾಂಚ್) ನಂತರ ಈ ಎಲ್ಲಾ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ನವದೆಹಲಿಯ ಮತ್ತು ಬೆಂಗಳೂರಿನ ವಾಯುಸೇನಾ ನೆಲೆಯಲ್ಲಿ ನಡೆಸಲಾಗುತ್ತದೆ.  ಅಧಿಕ ಅಂಕಗಳು ಮತ್ತು ಏರ್ ಫೊರ್ಸ್ ಸರ್ವೀಸ್ ಬೋರ್ಡ್‌ನಿಂದ ವೈದ್ಯಕೀಯವಾಗಿ ಅರ್ಹರೆಂದು ಘೋಷಿಸಲ್ಪಟ್ಟ ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುವುದು.

ಇದು ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಹುದ್ದೆಗಳನ್ನು ಆಧರಿಸಿದೆ. ಇದರಲ್ಲಿನ ಶೇ 10 ರಷ್ಟು ಹುದ್ದೆಗಳು ಎನ್.ಸಿ.ಸಿ. ಅ ಸರ್ಟಿಫಿಕೇಟ್ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಮೀಸಲಿಡಲಾಗಿದೆ.  ತರಬೇತಿಯಾವಧಿಯು 74 ವಾರಗಳದ್ದಾಗಿದ್ದು ಗ್ರೌಂಡ್ ಡ್ಯೂಟಿ ಬ್ರ್ಯಾಂಚ್‌ಗಳಲ್ಲಿ ಮಾತ್ರ 52 ವಾರಗಳದ್ದಾಗಿದೆ, ತರಬೇತಿ ಏರ್‌ಫೋರ್ಸ್ ಟ್ರೈನಿಂಗ್ ಎಸ್ಟಾಬ್ಲಿಶ್‌ಮೆಂಟ್ಸ್ ವತಿಯಿಂದ ನಡೆಯುತ್ತದೆ.  ತರಬೇತಿಯ ನಂತರ ಅಭ್ಯರ್ಥಿಗಳು ಫ್ಲೈಯಿಂಗ್ ಆಫಿಸರ್, ಫ್ಲೈ ಟ್ ಲೆಫ್ಟಿನೆಂಟ್, ಸ್ಕ್ವಾಡ್ರನ್ ಲೀಡರ್, ವಿಂಗ್ ಕಮ್ಯಾಂಡರ್.  ಹುದ್ದೆಗಳಿಗೆ ನಿಯೋಜಿಸಲ್ಪಡುತ್ತಾರೆ  ಲೋಹದ ಹಕ್ಕಿಗಳನ್ನೇರಿ ನೀಲ ಆಕಾಶದಲ್ಲಿ ಎಲ್ಲಾ ಎಲ್ಲೆ ಮೀರಿ ಎತ್ತರೆತ್ತರಕ್ಕೇರುವ ತುಡಿತವಿರುವ ಯುವತಿಯರು ಅರ್ಜಿಯನ್ನು (www.Careerairforcenic.in) ವೆಬ್‌ಸೈಟ್‌ನಿಂದ ಪಡೆದು ಸಲ್ಲಿಸಬಹುದು.         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT