ADVERTISEMENT

ರೀನಾ ಜಾರ್ಜ್‌ ಗೆಲ್ಲುವ ಛಲ ಮೂಡಿದೆ...

ಕೆ.ಓಂಕಾರ ಮೂರ್ತಿ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
ರೀನಾ ಜಾರ್ಜ್‌ ಗೆಲ್ಲುವ ಛಲ ಮೂಡಿದೆ...
ರೀನಾ ಜಾರ್ಜ್‌ ಗೆಲ್ಲುವ ಛಲ ಮೂಡಿದೆ...   

‘ಭಾರತ ತಂಡವನ್ನು ಪ್ರತಿನಿಧಿಸಬೇಕು, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಕನಸು ಎಲ್ಲಾ ಕ್ರೀಡಾಪಟುಗಳಿಗೆ ಇರುತ್ತದೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ನನಗೂ ಇಂಥ ಕನಸು ಇತ್ತು. ಹೀಗಾಗಿಯೇ, ಚೀನಾದಲ್ಲಿ ನಡೆದ ಸ್ಪರ್ಧೆಗೆ ಹೆಸರು ಪ್ರಕಟವಾದಾಗ ರೋಮಾಂಚನಕ್ಕೆ ಒಳಗಾದೆ.ವಿಮಾನವೇರುವಾಗ ಖುಷಿ ಇದ್ದರೂ ಒಂಥರಾ ಒತ್ತಡವಿತ್ತು’

– ಚೀನಾದಲ್ಲಿ ಈಚೆಗೆ ನಡೆದ ಏಷ್ಯನ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಅಥ್ಲೀಟ್‌ ರೀನಾ ಜಾರ್ಜ್‌ ಅವರ ಮಾತಿಗಳಿವು. ರೀನಾ ಒಂದು ದಶಕದಿಂದ ಅಥ್ಲೆಟಿಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಪೋಷಕರು ವರ್ಗಿಸ್‌ ಜಾರ್ಜ್‌ ಹಾಗೂ ಕ್ಯಾಥರಿನ್‌.

ರೀನಾ ಅವರು ಕ್ರೀಡಾ ಹಾಸ್ಟೆಲ್‌ಗಳಲ್ಲಿಯೇ ತಮ್ಮ ಬಹುತೇಕ ವರ್ಷಗಳನ್ನು ಕಳೆದಿದ್ದಾರೆ.ಆರಂಭದಲ್ಲಿ ಬೆಂಗಳೂರಿನ ವಿದ್ಯಾನಗರ ಕ್ರೀಡಾ ಹಾಸ್ಟೆಲ್‌ನಲ್ಲಿದ್ದ ಅವರು ಬಳಿಕ ಮೈಸೂರಿನ ಕ್ರೀಡಾ ಹಾಸ್ಟೆಲ್‌ ಸೇರಿದರು.

ADVERTISEMENT

ಮೈಸೂರಿನ ಹಾಸ್ಟೆಲ್‌ನಲ್ಲಿ ಬರೋಬ್ಬರಿ ಐದು ವರ್ಷ ವಾಸ್ತವ್ಯ ಹೂಡಿದ್ದ ಅವರು ಟೆರೇಷಿಯನ್‌ ಕಾಲೇಜಿನಲ್ಲಿ ಬಿ.ಕಾಂ ಮುಗಿಸಿದರು.ಲಖನೌದಲ್ಲಿ ನಡೆದ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 100 ಹಾಗೂ 200ಮೀಟರ್ಸ್‌ ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಸದ್ಯ ಮೈಸೂರಿನಲ್ಲಿಯೇ ಕೇಂದ್ರೀಯ ಅಬಕಾರಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

ಚೀನಾದ ಜಿಯಾಕ್ಸಿಂಗ್‌, ಜಿನ್‌ಹುವಾ ಹಾಗೂ ಚೀನಾ ತೈಪೆಯಲ್ಲಿ ಈಚೆಗೆ ನಡೆದ ಏಷ್ಯನ್‌ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ನ ವಿವಿಧ ಲೆಗ್‌ಗಳಲ್ಲಿ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಅನುಭವ ಅವರದ್ದು. ಅದಕ್ಕೂ ಮುನ್ನ ಪಟಿಯಾಲದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ನಲ್ಲಿ ತಾಲೀಮು ನಡೆಸಿದ್ದರು. ರೀನಾ ಅವರು  ಏಷ್ಯನ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಸಂಬಂಧಿಸಿದಂತೆಹಲವು ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

* ಏಷ್ಯನ್ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ನ ಅನುಭವ ಹೇಗಿತ್ತು?
ಇಂಥ ವಾತಾವರಣವೇ ನನಗೆ ಹೊಸದು. ಹೆಸರಾಂತ ಅಥ್ಲೀಟ್‌ಗಳನ್ನು ನೋಡುವ, ಅವರ ಅಭ್ಯಾಸ ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿತು. ಅಲ್ಲಿನ ಕ್ರೀಡಾ ಸೌಲಭ್ಯಗಳು, ಕ್ರೀಡಾ ಸಂಸ್ಕೃತಿ, ಎಲ್ಲಕ್ಕಿಂತ ಮುಖ್ಯವಾಗಿ ಅವರ ಆಸಕ್ತಿ ಕಂಡು ದಂಗಾದೆ. ಚಾಂಪಿಯನ್‌ಷಿಪ್‌ ವೇಳೆ ನಮಗೆ ಲಭಿಸಿದ ಅತ್ಯುತ್ತಮ ಸೌಲಭ್ಯ, ಸತ್ಕಾರವು ಸಾಧಿಸುವ ಛಲ ಹುಟ್ಟಿಸಿದೆ.

* ಈ ಚಾಂಪಿಯನ್‌ಷಿಪ್‌ನಿಂದ ಏನನ್ನು ಹೊಸದಾಗಿ ಕಲಿತಿದ್ದೀರಿ?
ಚಾಂಪಿಯನ್‌ಷಿಪ್‌ನ ವಾತಾವರಣವೇ ನನಗೆ ಹಲವು ಹೊಸ ವಿಚಾರ ಕಲಿಸಿದೆ. ಜೊತೆಗೆ ವಿಶ್ವಾಸ, ಸ್ಫೂರ್ತಿ ತುಂಬಿದೆ. ತಾಂತ್ರಿಕ ವಿಚಾರಗಳನ್ನು ಕಲಿಯಲು ಸಾಧ್ಯವಾಯಿತು.ಅಥ್ಲೀಟ್‌ಗಳ ಸಿದ್ಧತೆಯನ್ನು ಸನಿಹದಿಂದ ವೀಕ್ಷಿಸಿದೆ. ಅವರ ಫಿಟ್‌ನೆಸ್‌ ವೈಖರಿಯನ್ನು ಗಮನಿಸಿದೆ. ವ್ಯಾಯಾಮದಲ್ಲಿ ವಿಭಿನ್ನತೆ ಇತ್ತು. ಹಾಗೆಯೇ, ಬೇರೆ ಸ್ಪರ್ಧಿಗಳನ್ನು ಕ್ರೀಡಾಂಗಣದಲ್ಲಿ ಕುಳಿತು ನೋಡಿದೆ.

* ನೀವು ಪಾಲ್ಗೊಂಡ 100 ಮೀಟರ್‌ ಓಟ ವಿಭಾಗದ ಸ್ಪರ್ಧೆ ಬಗ್ಗೆ ಹೇಳಿ?
ಮೊದಲ ಬಾರಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ನಾನು ಸಹಜವಾಗಿಯೇ ಒತ್ತಡಕ್ಕೆ ಒಳಗಾದೆ. ಅದು ಸ್ಪರ್ಧೆಯ ಆರಂಭದಲ್ಲಿಯೇ ಅನುಭವಕ್ಕೆ ಬಂತು. ಏಕೆಂದರೆ ಸ್ಪರ್ಧೆಯ ‘ಸ್ಟಾರ್ಟಿಂಗ್‌’ ವಿಧಾನವೇ ಅಲ್ಲಿ ವಿಭಿನ್ನವಾಗಿತ್ತು. ನನ್ನ ವಿಭಾಗದ ಸ್ಪರ್ಧೆಯಲ್ಲಿ ದ್ಯುತಿ ಕೂಡ ಇದ್ದರು.

* ನಿಮ್ಮ ಪ್ರದರ್ಶನ ಮಟ್ಟ ಹೇಗಿತ್ತು?
ಚೀನಾದ ವಿವಿಧೆಡೆ ನಡೆದ ಮೂರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದೆ. 100 ಮೀಟರ್ಸ್‌ ಓಟದ ಮೂರನೇ ಹೀಟ್ಸ್‌ನಲ್ಲಿ ಓಡಿ ನಾಲ್ಕನೇ ಸ್ಥಾನ ಪಡೆದೆ. ಹೀಟ್ಸ್‌ಗಳಲ್ಲಿ ಸ್ಪರ್ಧಿಗಳು ತೆಗೆದುಕೊಂಡ ಸಮಯದ ಮೇಲೆ ವಿಜೇತರನ್ನು ನಿರ್ಧರಿಸಲಾಯಿತು. ಮೊದಲ ಹೀಟ್ಸ್‌ನಲ್ಲಿ ಹೆಚ್ಚು ಪೈಪೋಟಿ ಇತ್ತು. ನಾನು ಈ ಹಿಂದೆ 400 ಮೀಟರ್ಸ್‌ ಓಟದ ವಿಭಾಗದಲ್ಲಿ ಪಾಲ್ಗೊಳ್ಳುತ್ತಿದ್ದೆ. ಕೆಲ ವರ್ಷಗಳಿಂದ 100 ಮೀಟರ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದೇನೆ. ನನ್ನ ಪ್ರದರ್ಶನ ಮಟ್ಟದಲ್ಲಿ ದಿನೇದಿನೇ ಸುಧಾರಣೆಯಾಗುತ್ತಿದೆ.

* ಫಲಿತಾಂಶದ ಕುರಿತು ನಿಮ್ಮ ಪ್ರತಿಕ್ರಿಯೆ?
ನಮ್ಮ ಅಭ್ಯಾಸ, ಸಿದ್ಧತೆ, ಸ್ಪರ್ಧಾ ಮಟ್ಟ ಯಾವುದಕ್ಕೂ ಸಾಲುವುದಿಲ್ಲ. ನಾವು ತುಂಬಾ ಹಿಂದೆ ಇದ್ದೇವೆ ಅನಿಸುತ್ತದೆ. ಹೆಚ್ಚು ಶ್ರಮ ಹಾಕಿ ಅಭ್ಯಾಸ ನಡೆಸಬೇಕು.

* ಮುಂದಿನ ಸ್ಪರ್ಧೆ..?
ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಅದಕ್ಕೆ ಸಿದ್ಧತೆ ನಡೆಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.