ಇತ್ತೀಚಿಗೆ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯ (ವಿ.ವಿ.) ಹಣಕಾಸಿನ ಕೊರತೆಯಿಂದ ರ್ಯಾಂಕ್ ವಿಜೇತರಿಗೆ ಪದಕದ ಬದಲು ನಗದು ಹಣ ನೀಡಿ ವಿವಾದಕ್ಕೆ ಗುರಿಯಾಗಿದ್ದು ಸುದ್ದಿಯಾಗಿತ್ತು. ಸರ್ಕಾರಗಳಿಗೆ ಹೊಸ ವಿ.ವಿಗಳನ್ನು ತೆರೆಯುವಲ್ಲಿನ ಉತ್ಸಾಹ, ಅಸ್ತಿತ್ವದಲ್ಲಿ ಇರುವ ವಿ.ವಿಗಳಿಗೆ ಸೂಕ್ತ ಅನುದಾನ ನೀಡುವುದರಲ್ಲಿ ಇಲ್ಲ. ಕೇಂದ್ರ ಸರ್ಕಾರ ಹೊಸ ವಿದೇಶಿ ವಿ.ವಿಗಳಿಗೆ ಅನುಮತಿ ನೀಡಿದರೆ ದೇಶೀಯ ವಿ.ವಿಗಳ ಸ್ಥಿತಿ ಇನ್ನಷ್ಟು ಅಧೋಗತಿಗೆ ಇಳಿಯುವುದಂತು ಸತ್ಯ. ಶಿಕ್ಷಣ ಇಂದು ತೀವ್ರಗತಿಯಲ್ಲಿ ಬೆಳೆಯುತ್ತಿರುವ ಉದ್ಯಮವಾಗಿ ಬದಲಾಗಿದ್ದು, ಸರಾಸರಿ 70 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ ಎಂದು ಒಂದು ಅಂದಾಜಿದೆ.
ಸದ್ಯ ಭಾರತದಲ್ಲಿ ಸುಮಾರು 338 ವಿ.ವಿಗಳಿದ್ದು 26-28 ಸಾವಿರ ಪದವಿಗಳ ಕಾಲೇಜುಗಳು ಅಸ್ತಿತ್ವದಲ್ಲಿವೆ. ಕಳೆದ 10 ವರ್ಷಗಳ ಅವಧಿಯಲ್ಲಿ ವಿ.ವಿಗಳಿಗೆ ಸರ್ಕಾರ ಸಾಕಷ್ಟು ದುಡ್ಡು ಸುರಿಯುತ್ತಿದ್ದರೂ ಅದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅಂತಾಗಿದೆ. ಇಂದು ದೇಶದ ಯಾವ ವಿ.ವಿಯು ಸಹ ಹಣಕಾಸಿನ ವಿಚಾರದಲ್ಲಿ ಸ್ವಾವಲಂಬಿಯಾಗಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅವುಗಳು ರಾಜ್ಯ/ಕೇಂದ್ರ ಸರ್ಕಾರದ ಮೇಲೆ ಅವಲಂಬಿತವಾಗಿವೆ. ಹೆಚ್ಚುತ್ತಿರುವ ಖರ್ಚುವೆಚ್ಚ ಮತ್ತು ಆದಾಯದ ಕೊರತೆ ಇಂದು ದೇಶೀಯ ವಿ.ವಿಗಳ ಮುಖ್ಯ ಸಮಸ್ಯೆಯಾಗಿ ನಿಂತಿದೆ. ಆದಾಯ ಹೆಚ್ಚಿಸುವ ಯೋಜನೆ ಮತ್ತು ಸರ್ಕಾರಿ ವಿ.ವಿ.ಗಳ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಬೇಕಾದ ತಜ್ಞರು ಇಂದು ಯಾವುದಕ್ಕೂ ತಲೆಕೆಡಿಸಿಕೊಳ್ಳದಿರುವುದು ಶಿಕ್ಷಣ ವ್ಯವಸ್ಥೆಯ ಒಂದು ದುರಂತವೇ ಸರಿ.
ಸ್ವಾತಂತ್ರ್ಯದ ನಂತರ ದೇಶದಲ್ಲಿನ ವಿ.ವಿ.ಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಪ್ರತಿ ವಿಷಯದ ಅಧ್ಯಯನಕ್ಕೆಂದೇ ಇಂದು ಹಲವಾರು ಪ್ರತ್ಯೇಕ ಸರ್ಕಾರಿ ವಿ.ವಿಗಳು ತಲೆ ಎತ್ತುತ್ತಿವೆ. ಕಿಲೋಮೀಟರಿಗೊಂದು ಪ್ರಾಥಮಿಕ ಶಾಲೆಯಂತೆ ಇಂದು ದೇಶದಲ್ಲಿ ಖಾಸಗಿ ವಿ.ವಿಗಳು ಅಣಬೆಯಂತೆ ರಾತ್ರೋರಾತ್ರಿ ಹುಟ್ಟಿಕೊಳ್ಳುತ್ತಿವೆ ಮತ್ತು ಇವುಗಳು ಹೇಗೋ ತಮ್ಮ ಆದಾಯದ ಮೂಲವನ್ನು ಕಂಡುಕೊಳ್ಳುತ್ತಿವೆ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ದೇಶದ ಸರಾಸರಿ ಶೇ 43ರಷ್ಟು ರಾಜಕಾರಣಿಗಳು ಖಾಸಗಿ ವಿ.ವಿಗಳನ್ನು ನಡೆಸುತ್ತಿದ್ದಾರೆ ಎಂದರೆ ಇಲ್ಲಿನ ಲಾಭವನ್ನು ಊಹಿಸಿಕೊಳ್ಳಬಹುದು. ಆದರೆ ಸರ್ಕಾರ ವಿ.ವಿಗಳಿಗೆ ಇಂತಹ ಭಾಗ್ಯವಿಲ್ಲ. ಇಂದು ಹಲವಾರು ಸರ್ಕಾರಿ ವಿ.ವಿಗಳು ಗುಣಾತ್ಮಕ ಶಿಕ್ಷಣಕ್ಕೆ ಹೆಸರಾಗಿದ್ದರೂ ಸಾಕಷ್ಟು ಮೂಲಭೂತ ಸೌಲಭ್ಯಗಳಿಂದ ಅವುಗಳು ನರಳುತ್ತಿವೆ. ಹಲವು ವಿ.ವಿಗಳು ಕೆಲವು ವಿಭಾಗಗಳಿಗೆ ವಿದ್ಯಾರ್ಥಿಗಳ ಲಭ್ಯವಿಲ್ಲದೆ ವಿಭಾಗಗಳನ್ನು ಮುಚ್ಚುವ ಹಂತಕ್ಕೆ ಬಂದಿದೆ ಎಂದು ಇತ್ತೀಚಿನ ಯುಜಿಸಿ (2001) ವರದಿ ಹೇಳುತ್ತಿದೆ. ಸೂಕ್ತ ಅನುದಾನ ಇಲ್ಲದೆ ವಿ.ವಿಗಳಿಗೆ ನೇಮಕಾತಿ ನಡೆದು ದಶಕಗಳೇ ಕಳೆದಿವೆ ಎಂದರೆ ಅದು ಅತಿಶಯೋಕ್ತಿಯಲ್ಲ. ಎಲ್ಲಾ ಸರ್ಕಾರಿ ವಿ.ವಿಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ರಮೇಣ ಕಡಿಮೆಯಾಗಿ ವಿದ್ಯಾರ್ಥಿಗಳು ಸ್ವಾಯತ್ತ ವಿ.ವಿಗಳತ್ತ ಮುಖಮಾಡುತ್ತಿರುವುದು ಸಮಸ್ಯೆಗೆ ಹಿಡಿದ ಕೈಗನ್ನಡಿ ಎಂದು ಹೇಳಬಹುದು. ವಿದೇಶಿ ವಿ.ವಿಗಳ ಆಗಮನದ ನಂತರ ಅವುಗಳು ನೀಡುವ ಅತ್ಯಾಕರ್ಷಕ ವೇತನ ಮತ್ತು ಸೌಲಭ್ಯಗಳಿಗೆ ಮಾರುಹೋಗಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಲಸೆ ಹೋದರೆ, ಸರ್ಕಾರಿ ವಿ.ವಿಗಳ ಸ್ಥಿತಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಮಧ್ಯೆ ಸ್ಯಾಮ್ ಪಿತ್ರೋಡ ಕಮಿಟಿಯು 730 ಹೊಸ ಸರ್ಕಾರಿ ವಿ.ವಿಗಳ ಸ್ಥಾಪನೆಗೆ ಶಿಫಾರಸ್ಸು ಮಾಡಿರುವುದು ಒಂದು ಕುಚೋದ್ಯವೇ ಸರಿ.
ಇಂದು ವಿ.ವಿಗಳಿಗೆ ವಿದ್ಯಾರ್ಥಿಗಳ ನಿರ್ವಹಣೆಗಿಂತ ಹಣಕಾಸಿನ ಕೊರತೆಯನ್ನು ನಿರ್ವಹಿಸುವುದು ಮುಖ್ಯ ಸಮಸ್ಯೆ ಮತ್ತು ಸವಾಲಾಗಿ ಪರಿಣಮಿಸಿದೆ. ಗುಣಾತ್ಮಕ ಶಿಕ್ಷಣವನ್ನು ನೀಡುವ ಅವಶ್ಯಕತೆ ಹಿಂದಿಗಿಂತಲೂ ಈಗ ಹೆಚ್ಚಾಗುತ್ತಿದೆ. ದೇಶದ ಹಲವೆಡೆ ವಿ.ವಿಗಳ ಶಿಕ್ಷಣಕ್ಕೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗುತ್ತಿದ್ದಂತೆ ವಿ.ವಿ.ಗಳ ಸಂಖ್ಯೆಯೂ ಅಷ್ಟೇ ವೇಗವಾಗಿ ಬೆಳೆಯುತ್ತಿದೆ. ಸರ್ಕಾರಿ ವಿ.ವಿಗಳಿಗೆ ಮತ್ತು ಕಾಲೇಜುಗಳಿಗೆ ಅನುದಾನ ನೀಡುವ ಹೊಣೆಯನ್ನು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ)ಕ್ಕೆ ಹೊರಿಸಲಾಗಿದೆ. ಯುಜಿಸಿಯು ತನ್ನ ಯೋಜಿತ ಮತ್ತು ಯೋಜಿತವಲ್ಲದ ಎಂಬ ಎರಡು ವಿಧಗಳಲ್ಲಿ ದೇಶದಲ್ಲಿನ ವಿ.ವಿಗಳಿಗೆ ಹಣಕಾಸಿನ ಸೌಲಭ್ಯ ನೀಡುತ್ತದೆ. ಇದರಲ್ಲಿ ವಿ.ವಿಗಳು ಅಧ್ಯಾಪಕರ ಸಂಬಳ, ವಿಸ್ತರಣೆ ಮತ್ತು ಇತರೆ ಮೂಲಭೂತ ಸೌಕರ್ಯಗಳ ಒದಗಿಸುವಿಕೆಗೆ ಬೇಕಾದ ಹಣಕಾಸಿನ ಸೌಲಭ್ಯವನ್ನು ಒಳಗೊಂಡಿರುತ್ತದೆ. 1990-91ರವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಯುಜಿಸಿಗೆ ಯೋಜಿತವಲ್ಲದ (ನಾನ್-ಪ್ಲಾನ್) ಅನುದಾನದ ಅಡಿಯಲ್ಲಿ ಸಾಕಷ್ಟು ಹಣ ನೀಡುತ್ತಿತ್ತು ಮತ್ತು ಅದನ್ನು ಯುಜಿಸಿಯು ವಿ.ವಿಗಳಿಗೆ ಮತ್ತು ಕಾಲೇಜುಗಳಿಗೆ ಅವಶ್ಯಕತೆಗೆ ತಕ್ಕಂತೆ ಹಸ್ತಾಂತರಿಸುತ್ತಿತ್ತು. ಆದರೆ 1990-91ರಿಂದ ಯುಜಿಸಿಗೆ ಯೋಜಿತವಲ್ಲದ ಅಡಿಯಲ್ಲಿ ಬರುತ್ತಿದ್ದ ಹಣಕಾಸಿನ ಸೌಲಭ್ಯ ಕ್ರಮೇಣ ಕಡಿಮೆಯಾಗತೊಡಗಿತು. ಇದರಿಂದ ವಿ.ವಿಗಳು ಹಮ್ಮಿಕೊಂಡಿದ್ದ ವಿಸ್ತರಣೆ ಯೋಜನೆ, ಹೊಸ ಸಂಶೋಧನೆಗಳು, ನೇಮಕಾತಿಗೆ ಹಿನ್ನಡೆಯಾಗತೊಡಗಿತು. ಒಂದೆಡೆ ಜಾಗತೀಕರಣ, ಖಾಸಗೀಕರಣ ಪ್ರಭಾವದಿಂದ ವಿ.ವಿ.ಗಳಿಗೆ ಸೇರಬಯಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಿ.ವಿಗಳಲ್ಲಿ ಮೂಲಭೂತ ಸೌಲಭ್ಯ, ಉಪಕರಣಗಳು, ಅಧ್ಯಯನ ಫೆಲೋಶಿಪ್ ಮುಂತಾದವುಗಳ ಕೊರತೆ ಕ್ರಮೇಣ ಹೆಚ್ಚಾಗತೊಡಗಿತು. ಇತ್ತೀಚಿನ ಕೆಲವು ವರ್ಷಗಳಿಂದ ಯುಜಿಸಿಯು ವಿ.ವಿಗಳಿಗೆ ನೀಡುತ್ತಿರುವ ಅನುದಾನ ಕಡಿಮೆಯಾಗ ತೊಡಗಿದೆ. ಇದಕ್ಕೆ ಮುಖ್ಯ ಕಾರಣ ಕಾಲೇಜು ವಿ.ವಿಗಳ ಅಧ್ಯಾಪಕರ ಸಂಬಳ ಮತ್ತು ಇತರೆ ಸೌಲಭ್ಯಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ವಿ.ವಿಗಳಿಗೆ ಅಗತ್ಯವಾಗಿ ಬೇಕಾದ ನಿಯತಕಾಲಿಕೆಗಳು,
ರಸಾಯನಿಕ ವಸ್ತು ಮತ್ತು ಉಪಕರಣಗಳು ಹಾಗೂ ಇತರೆ ಅವಶ್ಯಕ ವಸ್ತುಗಳ ಮೂಲ ಬೆಲೆಯಲ್ಲಾದ ಗಣನೀಯ ಹೆಚ್ಚಳ. ಅಲ್ಲದೆ ಡೀಮ್ಡ್ ವಿ.ವಿಗಳು ಸರ್ಕಾರಿ ವಿ.ವಿಗಳಿಗೆ ಸವಾಲಾಗಿ ನಿಲ್ಲುತ್ತಿರುವುದು. ಇಂತಹ ಹಲವಾರು ಕಾರಣಗಳಿಂದ ಯುಜಿಸಿಯ ಅನುದಾನ ವಿ.ವಿಗಳಿಗೆ ಸಾಕಾಗುತ್ತಿಲ್ಲ. ಇಂತಹ ಸಮಸ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಇಂದು ಹಲವಾರು ದೇಶೀಯ ವಿ.ವಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಯಾವುದೇ ವಿ.ವಿ.ಯ ಹಣಕಾಸಿನ ಸಂಪನ್ಮೂಲವು ಮುಖ್ಯವಾಗಿ ಮೂರು ತತ್ವಗಳ ಮೇಲೆ ಅವಲಂಬಿತವಾಗಿರುತ್ತದೆ.
*ಸಾಕಷ್ಟು ಪ್ರಮಾಣದಲ್ಲಿ ಸಂಪನ್ಮೂಲ ಲಭ್ಯತೆ.
*ಸಂಪನ್ಮೂಲಗಳನ್ನು ಬಳಸಿಕೊಳ್ಳುವುದಕ್ಕೆ ಇರುವ ಮೂಲ ಸಮಸ್ಯೆಗಳು.
*ಸಂಪನ್ಮೂಲ ಕ್ರೋಡೀಕರಣದಲ್ಲಿ ವಿ.ವಿಗಳಿಗೆ ಇರುವ ಸ್ವಾಯತ್ತತೆ ಮತ್ತು ಆಸಕ್ತಿ.
ಇವತ್ತಿಗೂ ದೇಶದ ಹಲವಾರು ಸರ್ಕಾರ ವಿ.ವಿಗಳು ಕೊರತೆ ಬಜೆಟ್ ಸುಳಿಯಲ್ಲಿ ಸಿಲುಕಿಕೊಂಡಿವೆ. ಇದರೊಂದಿಗೆ ವಿ.ವಿಗಳಿಗೆ ಅತಿಯಾಗಿ ಹೊರೆಯಾಗುತ್ತಿರುವುದು ಪರೀಕ್ಷೆಗಳು. ಇತ್ತೀಚಿನ ಒಂದು ವರದಿಯ ಪ್ರಕಾರ ವಿ.ವಿಗಳ ಆದಾಯದಲ್ಲಿ ಶೇಕಡ 23ರಷ್ಟು ಹಣ ಪರೀಕ್ಷೆಗಳು ನಡೆಸುವುದಕ್ಕೆ ವ್ಯಯವಾಗುತ್ತಿದೆ.
ಆರ್ಥಿಕ ಸಮಸ್ಯೆಗೆ ಏನು ಕಾರಣ?
*ಪ್ರತಿ ವಿದ್ಯಾರ್ಥಿಗೆ ತಗುಲುವ ಖರ್ಚು ಹೆಚ್ಚಾಗುತ್ತಿದ್ದು, ಬರುತ್ತಿರುವ ಒಟ್ಟು ಆದಾಯ ಕಡಿಮೆಯಾಗುತ್ತಿದೆ.
*ಪ್ರತಿ ವಿ.ವಿಯು ಸರ್ಕಾರದ ಹಿಡಿತದಲ್ಲಿರುವುದರಿಂದ ಹಣಕಾಸಿನ ಸಂಗ್ರಹಕ್ಕೆ ಹಲವು ಸರ್ಕಾರಿ ನಿಯಮಗಳು ಅಡ್ಡಿ ಬರುತ್ತಿವೆ.
*ಎಲ್ಲರನ್ನು ಒಳಗೊಂಡ ಸಾಮಾಜಿಕ ಬೆಳವಣಿಗೆ ನೀತಿಯನ್ನು ಸರ್ಕಾರ ಅನುಸರಿಸುತ್ತಿದ್ದು ಸಂಗ್ರಹವಾಗುವ ವಿದ್ಯಾರ್ಥಿ ಶುಲ್ಕ ಕಡಿಮೆಯಾಗುತ್ತಿದೆ.
*ಹೊಸ ವಿ.ವಿಗಳ ಆರಂಭದಿಂದ ವಿ.ವಿಗಳ ಅಭಿವೃದ್ಧಿ ಅನುದಾನ ಅಸಮಾನ ರೀತಿಯಲ್ಲಿ ಹಂಚಿಕೆಯಾಗುತ್ತಿದೆ.
*ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ವಿ.ವಿಗಳು ಒಲವು ತೋರುತ್ತಿಲ್ಲ.
*ವಿ.ವಿಗಳಿಗೆ ದಾನಿಗಳ ಕೊರತೆ ಅಗಾಧವಾಗಿದೆ ಮತ್ತು ರಾಜಕೀಯ ಹಸ್ತಕ್ಷೇಪ ಇದೆ.
ಪ್ರಾಥಮಿಕ ಶಿಕ್ಷಣ ಮತ್ತು ಅನುದಾನ
ಸರ್ಕಾರ ನೀಡುತ್ತಿರುವ ಒಟ್ಟು ಅನುದಾನದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಕೆಲವು ತಜ್ಞರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಏಕೆಂದರೆ ಪ್ರಾಥಮಿಕ ಶಿಕ್ಷಣದಿಂದ ಬರುವ ಲಾಭ ಉನ್ನತ ಶಿಕ್ಷಣದಿಂದ ಬರುತ್ತಿಲ್ಲ! ಪ್ರತಿಯೊಬ್ಬರಿಗೂ ಕನಿಷ್ಠ ಪ್ರಾಥಮಿಕ ಶಿಕ್ಷಣ ನೀಡಿದರೆ ದೇಶ ಅಷ್ಟರಮಟ್ಟಿಗೆ ಸಾಕ್ಷರತೆ ಸಾಧಿಸಿದಂತೆ ಎಂಬುದು ಅವರ ವಾದ. ಇದು ಒಂದು ಕೋನದಲ್ಲಿ ಸರಿ ಎನಿಸಿದರೂ ವಿ.ವಿಗಳ ಉನ್ನತ ಶಿಕ್ಷಣವನ್ನು ಕಡೆಗಣಿಸಿ ಮೂಲ ಶಿಕ್ಷಣ ಸುಧಾರಣೆಗೆ ಒತ್ತು ನೀಡುವುದು ಜಾಣತನದ ನಿರ್ಧಾರವಲ್ಲ ಎಂಬುದು ತಜ್ಞರ ಅನಿಸಿಕೆ. ದೇಶದ ದೀರ್ಘಕಾಲಿನ ಯೋಜನೆ, ಆರ್ಥಿಕ ಬೆಳವಣಿಗೆ ಮತ್ತು ಹೊಸ ಆವಿಷ್ಕಾರ ವಿಚಾರಕ್ಕೆ ಬಂದರೆ ಉನ್ನತ ಶಿಕ್ಷಣಕ್ಕೂ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಹಣಕಾಸಿನ ನೆರವು ನೀಡಬೇಕಾಗುತ್ತದೆ. ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುವುದಕ್ಕೆ ಸಮಾಜದ ಒತ್ತಡ ಹೆಚ್ಚಿದೆ. ಆದರೆ ಉನ್ನತ ಶಿಕ್ಷಣಕ್ಕೆ ವಿಶೇಷವಾಗಿ ವಿ.ವಿಗಳಿಗೆ ಹೆಚ್ಚಿನ ಅನುದಾನ ನೀಡಲು ಯಾವುದೇ ಒತ್ತಡ ಗುಂಪುಗಳು ಇಲ್ಲದಿರುವುದು ದುರದೃಷ್ಟಕರ.
ಇಂದು ವಿಶ್ವದಲ್ಲಿ ಭಾರತ 4ನೇ ಅತಿ ದೊಡ್ಡ ಮಾನವ ಸಂಪನ್ಮೂಲ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ, ಅದು ವಿ.ವಿಗಳ ಉನ್ನತ ಶಿಕ್ಷಣದಿಂದ ಮಾತ್ರ ಎಂಬುದನ್ನು ಎಲ್ಲರೂ ನೆನಪಿಡಬೇಕು. ಇದರಿಂದ ದೇಶಕ್ಕೆ ಸಾಕಷ್ಟು ವಿದೇಶಿ ವಿನಿಮಯ ಮತ್ತು ಹೆಸರು ಸಿಗುತ್ತದೆ. ಉನ್ನತ ಶಿಕ್ಷಣಕ್ಕೆ ಕಡಿಮೆ ಹಣವನ್ನು ನೀಡಿದರೆ ಎಲ್ಲಾ ರೀತಿಯಲ್ಲಿ ನಷ್ಟವಾಗುವುದಲ್ಲದೇ, ಅಮೂಲ್ಯ ಮಾನವ ಸಂಪನ್ಮೂಲ ಕ್ಷೀಣಿಸುವುದಲ್ಲದೇ ದೇಶದ ಅರ್ಥಿಕತೆಗೆ ಪೆಟ್ಟುಬೀಳುವ ಸಾಧ್ಯತೆ ನಿಚ್ಚಳವಾಗಿದೆ ಎಂಬುದು ತಜ್ಞರ ಅನಿಸಿಕೆ. ಪ್ರಾಥಮಿಕ ಶಿಕ್ಷಕರಿಗೆ ಸೂಕ್ತ ಉನ್ನತ ಶಿಕ್ಷಣ ಇರದಿದ್ದರೆ ಅವರು ಶಾಲಾ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ ಅಲ್ಲವೇ?
ಆದಾಯ ಹೆಚ್ಚಿಸಿಕೊಳ್ಳಲು ದಾರಿಗಳೇನು?
* ಪ್ರತಿ ವಿ.ವಿ. ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಹಣಕಾಸಿನ ಸ್ವಾಯತ್ತತೆಯನ್ನು ಸರ್ಕಾರ ನೀಡಬೇಕು. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಸಂಪೂರ್ಣವಾಗಿ ಭರ್ತಿ ಮಾಡಬೇಕು. ಶುಲ್ಕ ನಿಗದಿ ವಿಚಾರದಲ್ಲಿ ವಿ.ವಿಗಳಿಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸಬೇಕು. ಪ್ರತಿ ವಿ.ವಿ ಏಕರೂಪ ದಾಖಲಾತಿ ನಿಯಮ, ಕೇಂದ್ರೀಕೃತ ಮೌಲ್ಯಮಾಪನ ಮತ್ತು ಶುಲ್ಕ ನಿಗದಿಯತ್ತ ಚಿಂತಿಸಬೇಕಾಗಿದೆ.
* ವಿ.ವಿಗಳು ಸಾಧ್ಯವಾದಷ್ಟು ತಮ್ಮ ಆದಾಯದ ಮೂಲವನ್ನು ತಾವೇ ಹುಡುಕಿಕೊಳ್ಳಬೇಕು. ದಾನಿಗಳು ಮತ್ತು ದತ್ತಿ ನಿಧಿಯನ್ನು ಹೆಚ್ಚಾದ ರೀತಿಯಲ್ಲಿ ಪಡೆಯಲು ಯತ್ನಿಸಬೇಕು. ವಿ.ವಿಯಲ್ಲಿ ಕಲಿತು ಉನ್ನತ ಹುದ್ದೆಯಲ್ಲಿ ಇರುವ ಹಳೇ ವಿದ್ಯಾರ್ಥಿಗಳು ತಮ್ಮ ವಿ.ವಿ.ಗಳಿಗೆ ಸಾಧ್ಯವಾದಷ್ಟು ನೆರವಾಗಬೇಕು. ಕಾರ್ಪೊರೇಟ್ ಮುಖ್ಯಸ್ಥರು ವಿದೇಶ ವಿ.ವಿ.ಗಳಿಗೆ ದೇಣಿಗೆ ನೀಡುವ ಬದಲು ದೇಶೀಯ ವಿ.ವಿಗಳಿಗೆ ಹಣಕಾಸಿನ ನೆರವು ನೀಡಬೇಕು.
*ವಿ.ವಿಗಳು ತಮ್ಮಲ್ಲಿ ನಡೆಯುವ ಉಪಯುಕ್ತ ಸಂಶೋಧನೆಯ ಹಕ್ಕು ಸ್ವಾಮ್ಯತೆ (ಪೇಟೆಂಟ್) ಪಡೆಯಲು ಯತ್ನಿಸಬೇಕು. ಇದರಿಂದ ಖಾಸಗಿ ವಲಯದಿಂದ ಕೋಟ್ಯಂತರ ರೂಪಾಯಿ ಹಣವನ್ನು ಪಡೆಯಲು ಸಾಧ್ಯ. ಹೆಚ್ಚಿನ ವಿದೇಶಿ ವಿ.ವಿಗಳು ಇಂಥ ತಂತ್ರವನ್ನು ಬಳಸುತ್ತಿವೆ. ಇಂತಹ ಹಣವನ್ನು ವಿ.ವಿ. ಪಾರದರ್ಶಕವಾಗಿ ನಿರ್ವಹಿಸಬೇಕು.
* ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರಗಳು ಸಹ ವಿಶ್ವವಿದ್ಯಾನಿಲಯ ಆಯೋಗವನ್ನು ರಚಿಸಬೇಕು. ಸರ್ಕಾರಗಳು ಉನ್ನತ ಶಿಕ್ಷಣಕ್ಕೆ ಸಾಧ್ಯವಾದಷ್ಟು ಹಣಕಾಸಿನ ನೆರವು ನೀಡಲೇಬೇಕು.
* ಹೆಚ್ಚು ಸಂಶೋಧನೆ, ಗುಣಾತ್ಮಕ ಶಿಕ್ಷಣ, ಪ್ರತಿಷ್ಠೆ ಆಧಾರದ ಮೇಲೆ ನಿರ್ದಿಷ್ಟ ವಿ.ವಿಗಳಿಗೆ ಸರ್ಕಾರ ಪ್ರತಿ ವರ್ಷ ವಿಶೇಷ ಅನುದಾನ ನೀಡಬೇಕು. ವಿ.ವಿಗಳ ವ್ಯಾಪ್ತಿಯಲ್ಲಿ ಬರುವ ಕಂಪ್ಯೂಟರ್ ಸೆಂಟರ್, ಪ್ರಿಂಟಿಂಗ್ ಪ್ರೆಸ್ ಸದಾ ಬಳಕೆಯಲ್ಲಿ ಇರುವುದಿಲ್ಲ. ಇವುಗಳನ್ನು ಅವಶ್ಯಕವಿದ್ದಲ್ಲಿ ಖಾಸಗಿ ಬಳಕೆಗೆ ತೆರೆದಿಡಬಹುದು. ಅಲ್ಲದೆ ವಿ.ವಿಯಲ್ಲಿ ಇರುವ ಮಾನವ ಸಂಪನ್ಮೂಲ, ಕ್ಯಾಂಪಸ್ ಆಯ್ಕೆಯ ಮೂಲಕವು ವಿ.ವಿ. ಸಾಕಷ್ಟು ಆದಾಯ ಗಳಿಸಬಹುದು.
* ವಿ.ವಿಗಳು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಜಂಟಿ ಸಂಶೋಧನೆ, ತರಬೇತಿ ಮುಂತಾದ ಕಾರ್ಯಕ್ರಮಗಳಿಂದ ವಿ.ವಿಯ ಹಣಕಾಸಿನ ಸ್ಥಿತಿಗತಿ ಸುಧಾರಿಸಲು ಸಾಧ್ಯ. ವಿದೇಶಕ್ಕೆ ತೆರಳುವ ವಿ.ವಿಯ ವಿದ್ಯಾರ್ಥಿಗಳು ತಮ್ಮ ಆದಾಯದಲ್ಲಿ ಸ್ವಲ್ಪ ಭಾಗವನ್ನು ವಿ.ವಿ.ಯ ಅಭಿವೃದ್ಧಿಗೆ ನೀಡುವ ಯೋಚನೆ ಮಾಡಬೇಕಿದೆ.
* ಮುಖ್ಯವಾಗಿ ವಿ.ವಿಗಳು ಸದ್ಯ ಇರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕಿದೆ. ಇತ್ತೀಚೆಗೆ ಯುಜಿಸಿ ಯು ಸಹ ತನ್ನ ವರದಿಯಲ್ಲಿ ಇದನ್ನು ಉಲ್ಲೆೀಖಿಸಿದೆ. ಅನವಶ್ಯಕ ಖರ್ಚು ವೆಚ್ಚಗಳನ್ನು ಕಡಿವಾಣ ಹಾಕಬೇಕು. ಹೆಚ್ಚುವರಿ ಅಧ್ಯಾಪಕರನ್ನು ವಿ.ವಿ ತನ್ನ ಆಡಳಿತ ಕೆಲಸಕ್ಕೆ ಬಳಸಿಕೊಳ್ಳಬಹುದು. ಸಂಶೋಧನಾ ಯೋಜನೆಗಳಿಗೆ ಬರುವ ಉಪಕರಣ ಮತ್ತು ಪುಸ್ತಕಗಳನ್ನು ಕೊನೆಗೆ ವಿ.ವಿಯು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು.
* ಸರ್ಕಾರ ಹಲವಾರು ರೀತಿಯಲ್ಲಿ ವಿ.ವಿಗಳಿಗೆ ಅನುದಾನ ನೀಡುತ್ತದೆ. ಯೋಜಿತ, ಯೋಜಿತವಲ್ಲದ, ವಿವೇಚನ ಅನುದಾನ, ಕೊರತೆ ಅನುದಾನ, ವೇತನ ಅನುದಾನ, ವಿಶೇಷ ಅನುದಾನ ಇತ್ಯಾದಿ. ಆದರೆ ಇವುಗಳನ್ನು ಸರಿಯಾಗಿ ನಿರ್ವಹಿಸಲು, ಇದನ್ನು ಹೇಗೆ ಬಳಸಬೇಕು ಎಬುದರ ಬಗ್ಗೆ ನಿರ್ದಿಷ್ಟವಾದ ರೀತಿನೀತಿಗಳು ಕಡಿಮೆ. ಆದುದರಿಂದ ಇಂತಹ ಅನುದಾನಗಳನ್ನು ಸೂಕ್ತವಾಗಿ ಬಳಸಲು ವಿ.ವಿಗಳು ಯೋಜನೆ, ಜಾರಿ ಮತ್ತು ಮಾನಿಟರಿಂಗ್ ವ್ಯವಸ್ಥೆ ಹೊಂದುವುದು ಸೂಕ್ತ.
* ಕೊಠಾರಿ ಆಯೋಗ, ರಾಷ್ಟ್ರೀಯ ಶಿಕ್ಷಣ ಆಯೋಗ ಮತ್ತು ರಾಮಮೂರ್ತಿ ಆಯೋಗ(1990)ದ ಶಿಫಾರಸ್ಸಿನಂತೆ ವಿ.ವಿಗಳು ನಡೆಸುವ ಪರೀಕ್ಷೆಗಳಿಗೆ ಪ್ರತ್ಯೇಕ ವ್ಯವಸ್ಥೆ ರಚಿಸುವುದು ಸೂಕ್ತ. ಇದರಿಂದ ವಿ.ವಿಗಳಿಗೆ ಸಾಕಷ್ಟು ಸಮಯ ಮತ್ತು ಹಣವು ಉಳಿತಾಯ ಆಗುತ್ತದೆ.
ಸರ್ಕಾರಗಳ ಜವಾಬ್ದಾರಿ ಏನು?
*ಉನ್ನತ ಶಿಕ್ಷಣ ಮತ್ತು ವಿವಿ ಗಳಿಗೆ ಧನ ಸಹಾಯವನ್ನು ಸರ್ಕಾರಗಳು ಆದ್ಯತಾ ವಲಯವಾಗಿ ಪರಿಗಣಿಸಬೇಕು.
*ಖಾಸಗಿ ವಿ.ವಿಗಳಲ್ಲಿ, ವಿದೇಶಿ ವಿ.ವಿ.ಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಮೀಸಲಾತಿ ನೀಡಲು ಕಾನೂನು ತರುವ ಅವಶ್ಯವಿದೆ.
*ವಿದೇಶಿ ವಿ.ವಿಗಳು ಉನ್ನತ ಶಿಕ್ಷಣದಲ್ಲಿ ಬಂಡವಾಳ ಹೂಡಿಕೆಯ ಮಿತಿಯನ್ನು ಕಡಿತಗೊಳಿಸಬೇಕು. ಇವುಗಳಿಂದ ಸರ್ಕಾರಿ ವಿ.ವಿಗಳ ಭವಿಷ್ಯಕ್ಕೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು.
*ವಿ.ವಿಗಳಲ್ಲ್ಲಿ ನಡೆಯುವ ಅಕ್ರಮ ನೇಮಕ, ಹಣಕಾಸು ಅವ್ಯವಹಾರ ಮುಂತಾದವುಗಳ ತಡೆಗೆ ವಿಶೇಷ ಘಟಕವನ್ನು ಸರ್ಕಾರಗಳು ತೆರೆಯಬೇಕು.
*ಹೊಸ ವಿ.ವಿಗಳ ತೆರೆಯುವ ಮೊದಲು, ಇರುವ ವಿ.ವಿಗಳ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು.
*ಯುಜಿಸಿ ಮಾದರಿಯಲ್ಲಿ ಪ್ರತಿ ರಾಜ್ಯದಲ್ಲಿ ರಾಜ್ಯ ವಿ.ವಿ ಧನ ಸಹಾಯ ಆಯೋಗ ರಚಿಸುವುದರತ್ತ ಸರ್ಕಾರ ಚಿಂತಿಸಬೇಕು.
*ಕಾಟಾಚಾರಕ್ಕೆ ನ್ಯಾಕ್ ಕಮಿಟಿಯು ನಡೆಸುವ ಮೌಲ್ಯಮಾಪನ ಕೈಬಿಟ್ಟು ವಿದೇಶಿ ತಜ್ಞರಿಂದ ಪ್ರತಿ ವಿ.ವಿಯ ಕಾರ್ಯಸಾಧನೆಯ ಮೌಲ್ಯಮಾಪನ ನಡೆಸಲು ಚಿಂತಿಸಬೇಕು.
ಖಾಸಗೀಕರಣ ಹಾವಳಿಯಿಂದ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಡೊನೇಷನ್ ಹಾವಳಿ ಮಿತಿಮೀರುತ್ತಿದೆ. ಖಾಸಗಿ ವಿ.ವಿಗಳು ಕೇವಲ ಶ್ರೀಮಂತರಿಗೆ ಮಾತ್ರ ಎಂಬ ಮಾತಿದೆ. ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ನೀಡುವ ಜವಾಬ್ದಾರಿ ಇಂದು ಸರ್ಕಾರಗಳಿಗೆ ಸೇರಿದೆ. ಆದರೆ ರಾಷ್ಟ್ರದ ಒಟ್ಟು ಜಿಡಿಪಿ ಯಲ್ಲಿ ಉನ್ನತ ಶಿಕ್ಷಣಕ್ಕೆ ಸರ್ಕಾರ ಮೀಡಲಿಡುತ್ತಿರುವ ಅನುದಾನ ಸಾಲುತ್ತಿಲ್ಲ.
ಸಂಶೋಧನಾ ಕ್ಷೇತ್ರಕ್ಕೆ ಬೇಕಾಗುತ್ತಿರುವ ಹಣಕಾಸಿನ ಸೌಲಭ್ಯ ಸಾಲದೆ ಪ್ರತಿಭಾವಂತ ವಿಜ್ಞಾನಿಗಳು ವಿದೇಶಕ್ಕೆ ತೆರಳುತ್ತಿದ್ದಾರೆ. ಡಾಕ್ಟರೇಟ್ ನಂತರ ಅಧ್ಯಯನಕ್ಕೆ ವಿ.ವಿಗಳಲ್ಲಿ ಯಾವುದೇ ಫೆಲೋಶಿಪ್ ಅಥವಾ ಆಧುನಿಕ ಸೌಲಭ್ಯಗಳು ತೀರಾ ಕಡಿಮೆಯಾಗುತ್ತಿದೆ.
ವಿ.ವಿಗಳು ಸದಾ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೋರ್ಸ್‌ಗಳಿಗೆ ಗಮನ ನೀಡಿದರೆ ಮೂಲವಿಜ್ಞಾನ, ಮೂಲ ಸಮಾಜ ವಿಜ್ಞಾನ ಮೂಲೆ ಸೇರುವ ಅಪಾಯ ಇರುತ್ತದೆ. ಸರ್ಕಾರಿ ವಿ.ವಿಗಳಿಗೆ ಹಣಕಾಸಿನ ಅಲಭ್ಯತೆ ಹೆಚ್ಚಾದಷ್ಟು ಖಾಸಗಿ ವಿ.ವಿಗಳು ಪ್ರಾಬಲ್ಯತೆ ಸಾಧಿಸುತ್ತದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಗಗನ ಕುಸುಮವಾಗುತ್ತದೆ. ಶಿಕ್ಷಣ ಕ್ಷೇತ್ರವು ಕ್ರಮೇಣ ಖಾಸಗಿ ಕ್ಷೇತ್ರದ ಹಿಡಿತಕ್ಕೆ ಬರುವ ಅಪಾಯ ಇರುತ್ತದೆ.
ಉನ್ನತ ಶಿಕ್ಷಣ ಕೈಗೊಳ್ಳಲು ಅಪೇಕ್ಷಿಸುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಬ್ಯಾಂಕ್ ಮತ್ತು ಇನ್ನಿತರ ಮೂಲಗಳಿಂದ ಹಣಕಾಸಿನ ಸಹಾಯ ಮಾಡುವ ಅವಶ್ಯಕತೆ ಇದೆ. ಉನ್ನತ ಶಿಕ್ಷಣ ಎಲ್ಲರಿಗೂ ತಲುಪುವ ಅಭಿಲಾಷೆ ಸರ್ಕಾರಗಳಿಗೆ ಇದ್ದರೆ ಮೊದಲು ಸರಕಾರಿ ವಿ.ವಿಗಳ ಎಲ್ಲಾ ಸಮಸ್ಯೆ ದೂರವಾಗಬೇಕು. ವಿ.ವಿಗಳಿಗೆ ಸಾಕಷ್ಟು ಅನುದಾನ ನಿರಂತರವಾಗಿ ದೊರೆಯುವಂತಾಗಬೇಕು. ವಿ.ವಿಗಳು ನಡೆಸುವ ನೇಮಕಾತಿ ಮತ್ತು ವಿದ್ಯಾರ್ಥಿಗಳ ದಾಖಲಾತಿಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳದಿದ್ದರೆ ವಿ.ವಿಗಳಿಗೆ ಎಷ್ಟೇ ಹಣ ನೀಡಿದರೂ ಅದು ಸಾಲದು. ವಿದ್ಯಾರ್ಥಿಗಳ ದಾಖಲಾತಿಯನ್ನು ಕಡಿಮೆ ಮಾಡಲು ಯೋಚಿಸಿದರೆ ಅದು ಸಾಮಾಜಿಕ ನ್ಯಾಯಕ್ಕೆ ವಿರೋಧವಿದ್ದಂತೆ, ಇದರಿಂದ ಸಮಾಜ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪ್ರಜೆಗಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಲು ಸರ್ಕಾರಗಳು ವಿ.ವಿಗಳಿಗೆ ಸಂಪೂರ್ಣ ಬೆಂಬಲ ನೀಡಬೇಕಾಗುತ್ತದೆ. ಸರ್ಕಾರಗಳು ಮತ್ತು ವಿ.ವಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ತಜ್ಞರು ಇದಕ್ಕೊಂದು ಸೂಕ್ತ ಪರಿಹಾರ ಹುಡುಕಲು ಚಿಂತಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.