ADVERTISEMENT

ಸಾಧಕಿಯ ಮತ್ತೊಂದು ಮಜಲು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಸಾಧಕಿಯ ಮತ್ತೊಂದು ಮಜಲು
ಸಾಧಕಿಯ ಮತ್ತೊಂದು ಮಜಲು   

‘ಬಿಗ್‌ ಬಾಷ್‌ ಲೀಗ್‌ನಲ್ಲಿ ಆಡಲು ಅವಕಾಶ ಪಡೆದ ಕರ್ನಾಟಕದ ಮೊದಲ ಆಟಗಾರ್ತಿ ಎಂಬ ಹೆಮ್ಮೆ ಇದೆ.ವಿಶ್ವಕಪ್‌ನಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕೆ ಸಂದ ಫಲವಿದು. ಲಭಿಸಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವ ವಿಶ್ವಾಸವಿದೆ. ಟೂರ್ನಿಯಲ್ಲಿ ಆಡಲು ಕಾತರದಿಂದ ಕಾಯುತ್ತಿದ್ದೇನೆ’

–ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮಹಿಳಾ ಬಿಗ್‌ ಬಾಷ್‌ ಲೀಗ್‌ (ಬಿಬಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಆಡಲು ಅವಕಾಶ ಪಡೆದಿರುವ ರಾಜ್ಯದ ವೇದಾ ಕೃಷ್ಣಮೂರ್ತಿ ಅವರ ಮಾತಿದು.

ಈ ಸಾಧನೆಗೆ ಪಾತ್ರರಾಗಿರುವ ದೇಶದ ಮೂರನೇ ಆಟಗಾರ್ತಿ ಕೂಡ. ಈ ಹಿಂದೆ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಸ್ಮೃತಿ ಮಂದಾನಾ ಆಡಿದ್ದರು

ADVERTISEMENT

‘ಒಂದು ವರ್ಷದ ಅವಧಿಗೆ ಹೊಬಾರ್ಟ್‌ ಹರಿಕೇನ್‌ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಡಿಸೆಂಬರ್‌ನಲ್ಲಿ ಬಿಗ್‌ ಬಾಷ್‌ ಟೂರ್ನಿ ನಡೆಯಲಿದೆ. ಎಷ್ಟು ಹಣಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದನ್ನು ಹೇಳುವಂತಿಲ್ಲ’ ಎನ್ನುತ್ತಾರೆ 23 ವರ್ಷ ವಯಸ್ಸಿನ ವೇದಾ.

ವೇದಾ ಅವರು ಏಳು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ಸಾಂದರ್ಭಿಕ ಲೆಗ್ ಸ್ಪಿನ್ನರ್ ಆಗಿರುವ ಅವರು ಊತ್ತಮ ಫೀಲ್ಡರ್‌ ಕೂಡ. 2011ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ 6 ಪಂದ್ಯಗಳಿಂದ 153 ರನ್‌ ಗಳಿಸಿದ್ದರು. ಅಲ್ಲದೆ, ತಂಡವನ್ನು ಫೈನಲ್‌ ತಲುಪಿಸುವಲ್ಲಿ ಅವರ ಪಾತ್ರ ಮಹತ್ವದಾಗಿತ್ತು. ನ್ಯೂಜಿಲೆಂಡ್‌ ವಿರುದ್ಧ 45 ಎಸೆತಗಳಲ್ಲಿ 70 ರನ್‌ ಗಳಿಸಿದ್ದರು. ಈ ಟೂರ್ನಿ ಅವರ ಕ್ರೀಡಾ ಬದುಕಿಗೆ ಲಭಿಸಿದ ದೊಡ್ಡ ತಿರುವು ಕೂಡ.

ವೇದಾ ಅವರ ತಂದೆ ಎಸ್.ಜೆ.ಕೃಷ್ಣಮೂರ್ತಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಕೇಬಲ್ ಆಪರೇಟರ್. ತಾಯಿ ಚೆಲುವಾಂಬಾ ಗೃಹಿಣಿ.

‘ಬಿಗ್‌ ಬಾಷ್‌ ಲೀಗ್‌ ಆಸ್ಟ್ರೇಲಿಯಾದಲ್ಲಿ ಯಶಸ್ಸು ಕಂಡ ಟೂರ್ನಿ. ಈಗ ನಡೆಯಲಿರುವುದು ಮೂರನೇ ಆವೃತ್ತಿ. 45 ದಿನ ಅಲ್ಲಿ ಇರುತ್ತೇನೆ. ಬೇರೆ ಕಡೆ ಆಡುವುದು ಸವಾಲಿನ ವಿಷಯ. ಯಾವ ಸ್ವರೂಪದ ಟೂರ್ನಿ, ತಂಡದಲ್ಲಿ ನನ್ನ ಪಾತ್ರ ಏನು ಎಂಬುದು ಇನ್ನೂ ಗೊತ್ತಿಲ್ಲ’ ಎಂದು ಹೇಳುತ್ತಾರೆ ವೇದಾ.

ಫೆಬ್ರುವರಿವರೆಗೆ ಭಾರತ ಮಹಿಳಾ ತಂಡದವರು ಯಾವುದೇ ಟೂರ್ನಿಯಲ್ಲಿ ಆಡುತ್ತಿಲ್ಲ. ಹೀಗಾಗಿ, ಈ ಬಿಡುವಿನ ಸಮಯದಲ್ಲಿ ಬಿಬಿಎಲ್‌ನಲ್ಲಿ ಆಡಲು ಬಿಸಿಸಿಐ ಕೂಡ ಅನುಮತಿ ನೀಡಿದೆ. ಡಿಸೆಂಬರ್‌ 9ರಂದು ಬಿಬಿಎಲ್‌ ಶುರುವಾಗಲಿದೆ. ಮೊದಲ ಪಂದ್ಯದಲ್ಲಿಯೇ ಹೊಬರ್ಟ್‌ ಹರಿಕೇನ್‌ ತಂಡದವರು ಪರ್ತ್‌ ಸ್ಕಾಚರ್ಸ್‌ ಎದುರು ಆಡಲಿದ್ದಾರೆ. 10 ಪಂದ್ಯಗಳಲ್ಲಿ ವೇದಾ ಆಡಲಿದ್ದಾರೆ. ಆ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

‘ಐಪಿಎಲ್‌ ಮಾದರಿಯ ಕ್ರಿಕೆಟ್‌ ಟೂರ್ನಿ ಬಿಬಿಎಲ್‌. ಭಾರತದಲ್ಲೂ 2–3 ವರ್ಷಗಳಲ್ಲಿ ಈ ಮಾದರಿಯ ಟೂರ್ನಿ ನಡೆಯಲಿದೆ ಎಂಬ ವಿಶ್ವಾಸ ನಮ್ಮದು. ಏಕಾಏಕಿ ನಡೆಸಲು ಸಾಧ್ಯವಾಗುವುದಿಲ್ಲ. ಸಾಧ್ಯತೆಗಳನ್ನು ಪರಿಶೀಲಿಸಿ ಶುರು ಮಾಡಬೇಕು’ ಎಂದು ನುಡಿಯುತ್ತಾರೆ.

ಕಳೆದ ವರ್ಷ ಹರ್ಮನ್‌ಪ್ರೀತ್‌ ಕೌರ್‌ ಅವರು ಸಿಡ್ನಿ ಥಂಡರ್‌ ಪರ ಆಡಿದ್ದರು. ಸ್ಮೃತಿ ಮಂದಾನಾ ಅವರು ಬ್ರಿಸ್ಬೇನ್‌ ಹೀಟ್‌ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಭಾರತದ ಮಹಿಳಾ ಕ್ರಿಕೆಟ್‌ಗೆ ಮಹತ್ವದ ತಿರುವು ತಂದುಕೊಟ್ಟಿದೆ. ಆಟಗಾರ್ತಿಯರಿಗೆ ಗೌರವ, ಮನ್ನಣೆ ಜೊತೆಗೆ ಹೊಸ ಹೊಸ ಅವಕಾಶಗಳೂ ಲಭಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.