ವಿಜ್ಞಾನಿಯಾಗುವ ಕನಸು ಹೆಣೆಯುತ್ತ ಕೈಯಲ್ಲೊಂದು ಕೋಲು ಹಿಡಿದು ಗಾಳಕ್ಕೆ ಮೀನು ಬೀಳಬೇಕು, ಮೀನಿನ ಜೊತೆಗೇ ಮನೆಗೆ ಮರಳಬೇಕು ಎಂಬ ಛಲದಿಂದ ದಿನವಿಡೀ ಕೆರೆ ದಂಡೆಯಲ್ಲಿ ಕೂರುತ್ತಿದ್ದ ಆ ಬಾಲಕ. ಅದೇ ಛಲ ಆತನ ಬದುಕಿಗೆ ಹೊಸ ದಿಕ್ಕು ತೋರಿತು. ಅಂದು ಮೀನು ಬೇಟೆಗೆ ಹೋಗುತ್ತಿದ್ದ ಬಾಲಕ ಇಂದು ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್)ಯ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮನಾಗಿದ್ದಾನೆ.
ಜಾರ್ಖಂಡ್ ರಾಜ್ಯದ ಮೂನಿಢಿ ಎಂಬ ಪುಟ್ಟ ಹಳ್ಳಿಯ ಶಬಾ ಆಲಮ್ ಅನ್ಸಾರಿ ಕಳೆದ ಜುಲೈನಲ್ಲಿ ಯುಪಿಎಸ್‌ಸಿ ನಡೆಸಿದ ಐಎಫ್‌ಎಸ್ ಪರೀಕ್ಷೆಯಲ್ಲಿ ಭಾರತಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಈ ಪರೀಕ್ಷೆಯ ಅಂತಿಮ ಫಲಿತಾಂಶಗಳು ಫೆಬ್ರುವರಿಯಲ್ಲಿ ಪ್ರಕಟವಾಗಿವೆ. ಪ್ರಸ್ತುತ ಮಲೇಷ್ಯಾ ಮೂಲದ ಎಪಿಪಿ ಟಿಂಬರ್ ಕಂಪನಿಯ ನವದೆಹಲಿ ಕಚೇರಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ಅವರು ಮೇ 30ರಿಂದ ಅರಣ್ಯ ಇಲಾಖೆಯ ಪ್ರೊಬೇಷನರಿ ಅಧಿಕಾರಿಯಾಗಿ ಸೇರ್ಪಡೆಗೊಳ್ಳುವರು.
2010ರ ಮಾರ್ಚ್ 28ಕ್ಕೆ ಐಎಫ್‌ಎಸ್ ಪರೀಕ್ಷೆ ಸಿದ್ಧತೆಗಾಗಿ ತಾವು ಶಿಕ್ಷಣ ಪಡೆದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಅರಣ್ಯ ಕಾಲೇಜಿಗೆ ಬಂದಿದ್ದ ಅವರು 2011ರ ಮಾರ್ಚ್ 28ರಂದು ಮೊದಲ ರ್ಯಾಂಕ್ ಪಡೆದ ಹೆಮ್ಮೆಯೊಂದಿಗೆ ಕಾಲೇಜಿನ ಸಂಮಾನ ಸ್ವೀಕರಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೆಲಕಾಲ ಮಾತುಕತೆಗೆ ಸಿಕ್ಕರು.
*ಯಾವ ಶೈಕ್ಷಣಿಕ ಹಿನ್ನೆಲೆಯಲ್ಲಿ ನೀವು ಬೆಳೆದು ಬಂದಿದ್ದು ?
ತಂದೆ ಮಹಮ್ಮದ್ ಶಮೀಮ್‌ರ ಸಣ್ಣ ನೌಕರಿಯೇ ಮೂವರು ಪುತ್ರಿಯರು, ಇಬ್ಬರು ಪುತ್ರರ ತುಂಬು ಕುಟುಂಬಕ್ಕೆ ಆಧಾರ. ತಾಯಿ ಅಕ್ತಾರಿ ಬಾನು ಗೃಹಿಣಿ, ಆದರ್ಶ ತಾಯಿ. ಸಾಮಾನ್ಯ ಶಾಲೆಯಲ್ಲಿ ದ್ವಿತೀಯ ಪಿಯುಸಿವರೆಗಿನ ಶಿಕ್ಷಣ ಪೂರೈಸಿದೆ. ಪಿಯುಸಿ ನಂತರ ಮುಂದೇನು ಎಂದು ಯೋಚಿಸುತ್ತಿರುವಾಗಲೇ ಕರ್ನಾಟಕದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಂಬಿಬಿಎಸ್‌ಗೆ ಸೀಟ್ ಸಿಕ್ಕಿತು. ಆದರೆ ಆರ್ಥಿಕ ಮುಗ್ಗಟ್ಟು ವೈದ್ಯನಾಗುವ ಕನಸನ್ನು ಹೊಸಕಿ ಹಾಕಿತು. ಆಗ ಬೆಳಕಿನ ಎಳೆ ಕಂಡಿದ್ದು ಅರಣ್ಯ ಪದವಿಯಲ್ಲಿ. ವರ್ಷಕ್ಕೆ ಕೇವಲ ಐದು ಸಾವಿರ ರೂಪಾಯಿ ಶುಲ್ಕ ಹೊರೆಯಾಗದು ಎಂದು ಶಿರಸಿಯ ಅರಣ್ಯ ಕಾಲೇಜಿನಲ್ಲಿ ಅರಣ್ಯ ಪದವಿಗೆ ಪ್ರವೇಶ ಪಡೆದೆ. ಬಿಎಸ್‌ಸಿ ಅರಣ್ಯ ಪದವಿಯಲ್ಲಿ ಬಂಗಾರದ ಪದಕ ಗಿಟ್ಟಿಸಿದೆ. ಕೈಯಲ್ಲಿ ದುಡ್ಡಿಲ್ಲ, ಮತ್ತೆ ಕೈಚೆಲ್ಲಿ ಕುಳಿತೆ. ಡೆಹರಾಡೂನ್‌ನ ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ಗೆಳೆಯರಾದ ನಾಗರಾಜ ಹೆಗಡೆ, ಹರ್ಷ ಮತ್ತಿತರರು ಫೀ ಹಣ ನೀಡಿ ಬೆನ್ನುತಟ್ಟಿ ಕಳುಹಿಸಿದರು. ಎಂಎಸ್‌ಸಿ ಪದವಿ ಪೂರ್ಣಗೊಂಡಾಗ ಸಹೋದರಿ ಲಗ್ನಕ್ಕೆ ತಂದೆಗೆ ಬಲವಾಗಿ ನಿಲ್ಲಬೇಕಾದ ಅನಿವಾರ್ಯತೆ ಬಂತು. ಟಿಂಬರ್ ಟ್ರೇಡಿಂಗ್ ಕಂಪೆನಿಯಲ್ಲಿ ಸಾಮಾನ್ಯ ನೌಕರಿಗೆ ಸೇರಿದೆ. ಗೆಳೆಯರ ಸೆಳೆತ ಐಎಫ್‌ಎಸ್ ಪರೀಕ್ಷೆ ಸಿದ್ಧತೆಗೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಶಿರಸಿಗೆ ಬಂದೆ. ಶಿರಸಿ ನನ್ನ ಎರಡನೇ ತಾಯ್ನೆಲ. ಇಲ್ಲಿನ ಅರಣ್ಯ ಕಾಲೇಜಿನ ಪ್ರಾಧ್ಯಾಪಕರು, ವಾಚನಾಲಯದ ಸಂಪೂರ್ಣ ಸದುಪಯೋಗ ಪಡೆದುಕೊಂಡೆ.
4ಐಎಫ್‌ಎಸ್ ಪರೀಕ್ಷೆಗೆ ಎಲ್ಲಿ ಕೋಚಿಂಗ್ ಪಡೆದಿರಿ? ಪ್ರತಿನಿತ್ಯ ಎಷ್ಟು ತಾಸು ಅಧ್ಯಯನ ನಡೆಯುತ್ತಿತ್ತು?
ಪ್ರಾಥಮಿಕ ಶಿಕ್ಷಣದಿಂದ ಐಎಫ್‌ಎಸ್ ತನಕ ಎಲ್ಲ ಹಂತದಲ್ಲೂ ಸ್ವ ಶ್ರಮವೇ ನನ್ನ ಬಂಡವಾಳ. ಟ್ಯೂಷನ್, ಕೋಚಿಂಗ್ ಇವು ನನ್ನ ಅನುಭವಕ್ಕೇ ಬಂದಿಲ್ಲ. ಬಿಎಸ್‌ಎಸಿ ಮಾಡುವಾಗಲೇ ಐಎಫ್‌ಎಸ್ ಪರೀಕ್ಷೆಗೆ ಬರೆಯುವ ಮನಸ್ಸು ಇತ್ತು. ಬದುಕಿನ ತಿರುವುಗಳು ನಿರಂತರ ಅಧ್ಯಯನಕ್ಕೆ ತಡೆಯೊಡ್ಡಿದವು. ಅಂತಿಮ ಪರೀಕ್ಷೆಗೆ ಕೇವಲ ಮೂರು ತಿಂಗಳು ಬಾಕಿ ಇತ್ತು. 10-12 ಗಂಟೆ ಅಧ್ಯಯನ, ಆರು ತಾಸು ನಿದ್ರೆ, ಮೂರು ಗಂಟೆ ಇನ್ನುಳಿದ ಕೆಲಸ -ಇದು ದಿನಚರಿಯಾಗಿತ್ತು. ಪ್ರಥಮ ರ್ಯಾಂಕ್ ನಿರೀಕ್ಷಿಸಿರಲಿಲ್ಲ. ಆದರೆ ಐಎಫ್‌ಎಸ್ ಗೆಲ್ಲುವ ಆತ್ಮವಿಶ್ವಾಸ ಇತ್ತು. ಮೊದಲ ರ್ಯಾಂಕ್ ಘೋಷಣೆಯಾದಾಗ ನಿಜಕ್ಕೂ ಭಾವುಕನಾದೆ.
* ಸಾಮಾನ್ಯ ಪ್ರತಿಭೆಯ ವಿಜ್ಞಾನ ಪದವೀಧರ ಅಥವಾ ಅರಣ್ಯ ಪದವೀಧರನಿಗೆ ಐಎಫ್‌ಎಸ್ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯವೇ?
ಖಂಡಿತ ಸಾಧ್ಯ. ಪರಿಶ್ರಮ ಮತ್ತು ಪ್ರಾಮಾಣಿಕತೆ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯಬಲ್ಲದು. ಐಎಫ್‌ಎಸ್‌ನಲ್ಲಿ ಐದನೇ ರ್ಯಾಂಕ್ ಪಡೆದಿರುವ ರಾಜಸ್ಥಾನದ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಸುಗ್ನಾ ರಾಮ್ ಜಾಟ್ ನನ್ನ ಆತ್ಮೀಯ ಗೆಳೆಯ. ಸುಗ್ನಾ ರಾಮ್ ಊರಿನಲ್ಲಿ ಸರ್ಕಾರಿ ನೌಕರಿ ಪಡೆದ ಮೊದಲ ವ್ಯಕ್ತಿ ಈತನೇ. ಪ್ರಾರಂಭದಲ್ಲಿ ಆತನಿಗೆ ಇಂಗ್ಲಿಷ್ ಭಾಷೆಯ ಜ್ಞಾನ ಇರಲಿಲ್ಲ. 85ನೇ ರ್ಯಾಂಕ್ ಗಳಿಸಿದ ಹರ್ಷಕುಮಾರ ಕನ್ನಡದವನು. ಕಠಿಣ ಶ್ರಮ ಅವರಿಬ್ಬರನ್ನು ಅತ್ಯುಚ್ಛ ಸ್ಥಾನಕ್ಕೆ ಏರಿಸಿದೆ.
* ಅರಣ್ಯ ಪದವಿ ಕಲಿಕೆ ಕಾಡಿನ ಪ್ರೀತಿ ಬೆಳೆಸಿದೆಯೇ ?
ನಮ್ಮ ಮನೆ ಪಕ್ಕದಲ್ಲಿ ಕಾಡು ಇತ್ತು. ಬಹುಶಃ ಐದನೇ ತರಗತಿಯಲ್ಲಿ ಇದ್ದಾಗ ಕಾಡಿಗೆ ಹೋಗಿ ಗುಹೆ ಮಾಡಬೇಕು ಎಂಬ ಹುಮ್ಮಸ್ಸಿನಲ್ಲಿ ನೆಲದಲ್ಲಿ ಒಂದು ಅಡಿಯ ಅಗೆದು ಗುಹೆ ನಿರ್ಮಿಸಿದ್ದೆ. ಕಾಡಿನ ಪ್ರೀತಿ ಇಂದಿನದಲ್ಲ. ಕಾಡಿನೊಂದಿಗೆ ಭಾವನಾತ್ಮಕ ನಂಟಿದೆ. ವನ್ಯಜೀವಿ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕೆಂಬ ಆಸೆ ಇದೆ.
*ಉನ್ನತ ಅಧಿಕಾರಿಗಳ ವಲಯದಲ್ಲಿ ಇಂದು ಭ್ರಷ್ಟಾಚಾರದ ಆಪಾದನೆ ತೀವ್ರವಾಗಿದೆ. ಇದಕ್ಕೆ ನಿಮ್ಮ ಅಭಿಪ್ರಾಯ..?
ಬಡ ಕುಟುಂಬದಲ್ಲಿ ಬೆಳೆದು ಕಷ್ಟಸಹಿಷ್ಣುವಾಗಿ ಮೇಲಕ್ಕೇರಿದ ವ್ಯಕ್ತಿ ಭ್ರಷ್ಟನಾಗಲಾರ. ಮಗ ಮೊದಲ ರ್ಯಾಂಕ್ ಬಂದಾಗ ಹೆಮ್ಮೆಪಟ್ಟುಕೊಳ್ಳುವ ಅಪ್ಪ-ಅಮ್ಮರಿಗೆ ಮಗನಿಗೆ ಭ್ರಷ್ಟನೆಂಬ ಹಣೆಪಟ್ಟಿ ಬಂದರೆ ಅದು ಅತ್ಯಂತ ನೋವಿನ ಸಂಗತಿ. ಅತ್ಯಂತ ಪ್ರಾಮಾಣಿಕ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗೆ ನನ್ನ ಆದ್ಯತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.