ಭಾರತದ ಫುಟ್‌ಬಾಲ್ ರಂಗದಲ್ಲಿ ಹಲವು ಮೊದಲುಗಳನ್ನು ಸ್ಥಾಪಿಸಿರುವ ಕ್ಲಬ್ ಮೋಹನ್ ಬಾಗನ್. 126 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಲಬ್ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಅರ್ಹತಾ ಟೂರ್ನಿಯಲ್ಲಿ ಎರಡನೇ ಹಂತ ಪ್ರವೇಶಿಸಿ ಚಾರಿತ್ರಿಕ ಸಾಧನೆ ಮಾಡಿದೆ.
‘ಹೋದ ಋತುವಿನ ಐ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ಮೋಹನ್ ಬಾಗನ್ ಬಲಿಷ್ಠ ತಂಡ. ಈ ತಂಡವನ್ನು ಮಣಿಸುವುದು ನಿರೀಕ್ಷಿಸಿದಷ್ಟು ಸುಲಭವಲ್ಲ. ಪವಾಡ ನಡೆದರಷ್ಟೇ ನಮಗೆ ಗೆಲುವು ಒಲಿಯಬಹುದು’...
ಹೋದ ವಾರ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಅರ್ಹತಾ ಫುಟ್‌ಬಾಲ್ ಟೂರ್ನಿಯ ಪಂದ್ಯ ಆಡಲು ಬಂದಿದ್ದ ಸಿಂಗಪುರದ ತಂಪಿನಸ್ ರೋವರ್ಸ್ ತಂಡದ ಮುಖ್ಯ ಕೋಚ್ ವಿ. ಸುಂದರ ಮೂರ್ತಿ ಹೇಳಿದ್ದ ಮಾತುಗಳಿವು. ಅವರ ನುಡಿ ಅಕ್ಷರಶಃ ಸತ್ಯ. ಭಾರತದ ಪುರಾತನ ಫುಟ್‌ಬಾಲ್ ಕ್ಲಬ್ ಎಂಬ ಗೌರವ ಹೊಂದಿರುವ ಮೋಹನ್ ಬಾಗನ್ ದೇಶಿಯ ಲೀಗ್‌ಗಳಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಫೆಡರೇಷನ್ ಕಪ್, ಐ ಲೀಗ್ ಸೇರಿದಂತೆ ಪ್ರಮುಖ ಚಾಂಪಿಯನ್‌ಷಿಪ್‌ಗಳಲ್ಲಿ ಬಾಗನ್ ಮುಡಿಗೇರಿಸಿಕೊಂಡಿರುವ ಟ್ರೋಫಿಗಳು ಈ ತಂಡದ ಸಾಮರ್ಥ್ಯವನ್ನು ಸಾರಿ ಹೇಳುತ್ತವೆ.
ಕಳೆದ ವಾರ ಈ ತಂಡದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ ಯಾಯಿತು. ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಸಿಂಗಪುರದ ತಂಪಿನಸ್ ರೋವರ್ಸ್ ತಂಡವನ್ನು ಮಣಿಸಿದ ಬಾಗನ್ ತಂಡ ಭಾರತಕ್ಕೆ ಎಡಬಿಡದೆ ಕಾಡುತ್ತಿದ್ದ ಬಹುದೊಡ್ಡ ಕೊರಗನ್ನು ದೂರ ಮಾಡಿದೆ.
ಕೋಲ್ಕತ್ತದ ಸಾಲ್ಟ್‌ಲೇಕ್ ಕ್ರಿಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 3–1 ಗೋಲುಗಳಿಂದ ರೋವರ್ಸ್ ತಂಡವನ್ನು ಮಣಿಸಿದ ಬಾಗನ್ ಭಾರತದ ಫುಟ್‌ಬಾಲ್ ಲೋಕದಲ್ಲಿ ಹೊಸ ಭಾಷ್ಯ ಬರೆಯಿತು. ಜತೆಗೆ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಅರ್ಹತಾ ಟೂರ್ನಿಯಲ್ಲಿ ಗೆಲುವು ಗಳಿಸಿ ಎರಡನೇ ಹಂತಕ್ಕೆ ಲಗ್ಗೆ ಇಟ್ಟ ಭಾರತದ ಮೊದಲ ಕ್ಲಬ್ ಎಂಬ ಶ್ರೇಯವನ್ನೂ ತನ್ನದಾಗಿಸಿಕೊಂಡಿತು.
ಬಾಗನ್ ತಂಡದ ಈ ಸಾಧನೆ ಫುಟ್‌ಬಾಲ್ ರಂಗದಲ್ಲಿ ತನ್ನ ಛಾಪು ಮೂಡಿಸಲು ಪರಿತಪಿಸುತ್ತಿರುವ ಭಾರತದ ಮಟ್ಟಿಗೆ ನವ ಚೈತನ್ಯ ತುಂಬಿದೆ. ಫುಟ್‌ಬಾಲ್‌ನಲ್ಲಿ ಜಪಾನ್, ಚೀನಾ, ಕೊರಿಯಾ ಮತ್ತು ಮಲೇಷ್ಯಾ ರಾಷ್ಟ್ರಗಳು ಏಷ್ಯಾದ ಶಕ್ತಿ ಕೇಂದ್ರಗಳಾಗಿ ಗುರುತಿಸಿಕೊಂಡಿವೆ. ಈ ರಾಷ್ಟ್ರದ ಕ್ಲಬ್‌ಗಳ ವಿರುದ್ಧ ಭಾರತದ ತಂಡಗಳು ಗೆಲುವು ಒತ್ತಟ್ಟಿಗಿರಲಿ ಕನಿಷ್ಠ ಡ್ರಾ ಮಾಡಿಕೊಂಡರೆ ಅದೇ ದೊಡ್ಡ ಸಾಧನೆ ಎಂಬ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಬಾಗನ್ ತಂಡ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿ ಈ ರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಏನಿದು ಎಎಫ್‌ಸಿ ಚಾಂಪಿಯನ್ಸ್ ಲೀಗ್
ಏಷ್ಯಾ ಫುಟ್‌ಬಾಲ್ ಕಾನ್ಫೆಡರೇಷನ್ (ಎಎಫ್‌ಸಿ) ಅಧೀನದಲ್ಲಿ ನಡೆಯುವ ಈ ಲೀಗ್ ಏಷ್ಯಾದ ರಾಷ್ಟ್ರಗಳ ಪಾಲಿಗೆ ಮಹತ್ವದ ಟೂರ್ನಿಯಾಗಿ ಪರಿಗಣಿತವಾ ಗಿದೆ. ಈ ಲೀಗ್‌ನಲ್ಲಿ ಚಾಂಪಿಯನ್ ಆಗುವ ತಂಡ ಫಿಫಾ ಕ್ಲಬ್ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಗಳಿಸುತ್ತದೆ. ಲೀಗ್‌ನಲ್ಲಿ ಆಡುವ ಎಎಫ್‌ಸಿ ಸದಸ್ಯ ರಾಷ್ಟ್ರಗಳನ್ನು ಪೂರ್ವ ಮತ್ತು ಪಶ್ಚಿಮ ವಲಯಗಳನ್ನಾಗಿ ವರ್ಗೀಕರಿಸಲಾಗಿರುತ್ತದೆ. ಆಯಾ ರಾಷ್ಟ್ರಗಳ ಪ್ರಮುಖ ಲೀಗ್‌ಗಳಲ್ಲಿ ಚಾಂಪಿಯನ್ ಮತ್ತು ರನ್ನರ್ಸ್ ಅಪ್ ಸ್ಥಾನ ಗಳಿಸಿರುವ ತಂಡಗಳು ಈ ಲೀಗ್‌ನ ಅರ್ಹತಾ ಸುತ್ತಿನಲ್ಲಿ ಆಡುತ್ತವೆ.
ಪ್ರಾಥಮಿಕ ಹಂತದ ಮೊದಲ ಸುತ್ತಿನಲ್ಲಿ ಗೆದ್ದಿರುವ ಬಾಗನ್ ಎರಡನೇ ಹಂತದ ಪಂದ್ಯದಲ್ಲಿ ಚೀನಾದ ಶಾನ್‌ಡಾಂಗ್ ಲುನೆಂಗ್ ತೈಶಾನ್ ಎದುರು ಪೈಪೋಟಿ ನಡೆಸಲಿದೆ. ಕೋಲ್ಕತ್ತ ಮೂಲದ ತಂಡ ಈ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್‌ಗೆ ಅರ್ಹತೆ ಗಳಿಸಲಿದೆ. ಪ್ಲೇ ಆಫ್‌ನಲ್ಲಿ ಯಾವ ತಂಡ ಉತ್ತಮ ಸಾಮರ್ಥ್ಯ ತೋರಲಿದೆಯೋ ಆ ತಂಡ ಗುಂಪು ಹಂತಕ್ಕೆ ಅರ್ಹತೆ ಪಡೆಯುತ್ತದೆ. ಆ ಬಳಿಕ ನಾಕೌಟ್, ಪ್ರೀ ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್ , ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಜರುಗಲಿವೆ.
ಬಾಗನ್ ತಂಡದ ಬಗ್ಗೆ
ಭಾರತದ ಮೊದಲ ಫುಟ್‌ಬಾಲ್ ಕ್ಲಬ್ ಎಂಬ ಶ್ರೇಯ ಹೊಂದಿರುವ ಮೋಹನ್ ಬಾಗನ್ ಜನ್ಮ ತಾಳಿದ್ದು 1889ರ ಆಗಸ್ಟ್ 15ರಂದು. ಈ ಕ್ಲಬ್ ಅನ್ನು ‘ಭಾರತದ ರಾಷ್ಟ್ರೀಯ ಕ್ಲಬ್’ ಎಂದೇ ಗುರುತಿಸಲಾಗುತ್ತದೆ.
ಪ್ರತಿಷ್ಠಿತ ಟೂರ್ನಿಯೊಂದರಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಕ್ಲಬ್ ಎಂಬ ಹೆಗ್ಗಳಿಕೆ ಬಾಗನ್ ತಂಡದ್ದು. ಈ ತಂಡ 1911ರಲ್ಲಿ ನಡೆದಿದ್ದ ಐಎಫ್‌ಎ ಶೀಲ್ಡ್ ಟೂರ್ನಿಯ ಫೈನಲ್‌ನಲ್ಲಿ 2–1 ಗೋಲುಗಳಿಂದ ಈಸ್ಟ್ ಯಾರ್ಕ್‌ಶೈರ್ ರೆಜಿಮೆಂಟ್ ತಂಡವನ್ನು ಮಣಿಸಿ ಈ ಸಾಧನೆ ಮಾಡಿತ್ತು. ಆ ಪಂದ್ಯದಲ್ಲಿ ಕ್ಲಬ್‌ನ ಆಟಗಾರರು ಬರಿಗಾಲಿನಲ್ಲಿ ಆಡಿ ಎದುರಾಳಿ ತಂಡಕ್ಕೆ ಆಘಾತ ನೀಡಿದ್ದು ಈಗ ಇತಿಹಾಸ. ಬಾಗನ್ ಭಾರತದ ಯಶಸ್ವಿ ಕ್ಲಬ್ ಎಂಬ ಶ್ರೇಯವನ್ನೂ ಹೊಂದಿದೆ. ಈ ಕ್ಲಬ್ ಐ ಲೀಗ್, ರೋವರ್ಸ್, ಫೆಡರೇಷನ್, ಡುರಾಂಡ್ ಕಪ್ ಟೂರ್ನಿಗಳಲ್ಲಿ ಪ್ರಶಸ್ತಿಗಳ ಬೇಟೆಯಾಡಿದೆ.
ಈ ಕ್ಲಬ್‌ನಲ್ಲಿ ಆಡಿ, ಬೆಳೆದ ಅನೇಕರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿ ಮಿಂಚಿದ್ದಾರೆ. 1951 ಮತ್ತು 1962ರ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತ ತಂಡದಲ್ಲಿ ಬಾಗನ್ ಕ್ಲಬ್‌ನ ಆಟಗಾರರೇ ಹೆಚ್ಚು ಇದ್ದದ್ದು ವಿಶೇಷ. 1989ರಲ್ಲಿ ಈ ಕ್ಲಬ್ ಶತಮಾನೋತ್ಸ ಆಚರಿಸಿಕೊಂಡಿತು. ಇದರ ನೆನಪಿಗಾಗಿ ಭಾರತ ಸರ್ಕಾರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.