ADVERTISEMENT

ಕಳಂಕ ತೊಳೆಯುವ ಸವಾಲು...

ಪ್ರಮೋದ ಜಿ.ಕೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ಮಹೇಂದ್ರ ಸಿಂಗ್‌ ದೋನಿ      – ಪ್ರಜಾವಾಣಿ ಚಿತ್ರಗಳು
ಮಹೇಂದ್ರ ಸಿಂಗ್‌ ದೋನಿ – ಪ್ರಜಾವಾಣಿ ಚಿತ್ರಗಳು   

ಅಭಿಮಾನಿಗಳ ಪ್ರೀತಿಗಿಂತ ಮೋಸದಾಟವೇ ಮುಖ್ಯವಾಯಿತೇ?

2013ರ ಐಪಿಎಲ್‌ ಟೂರ್ನಿ ಮುಗಿದ ಬಳಿಕ ಬೆಟ್ಟಿಂಗ್ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ ಹೊರಬಿದ್ದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲ ಕ್ರಿಕೆಟ್‌ ಪ್ರೇಮಿಗಳು ಎತ್ತಿದ್ದ ಪ್ರಶ್ನೆಯಿದು.

‘ಮಿಲಿಯನ್‌ ಡಾಲರ್‌ ಬೇಬಿ’ ಎನ್ನುವ ಐಪಿಎಲ್‌ ಕುದುರೆ ಲಗಾಮು ಇಲ್ಲದೇ ಓಡುತ್ತಿತ್ತು. ಟೂರ್ನಿಯ ಯಶಸ್ವಿ ತಂಡ ಎನಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ನೆಚ್ಚಿನ ತಂಡವಾಗಿತ್ತು. ಈ ತಂಡದ ಮಾಲೀಕರಾಗಿದ್ದ ಎನ್‌. ಶ್ರೀನಿವಾಸನ್‌ ಅವರ ಅಳಿಯ ಗುರುನಾಥ ಮೇಯಪ್ಪನ್‌ ಫಿಕ್ಸಿಂಗ್‌ಗೆ ನೆರವಾಗಿದ್ದು ತನಿಖಾ ವರದಿಯಿಂದ ಸಾಬೀತಾಗಿತ್ತು.

ADVERTISEMENT

ಐಪಿಎಲ್‌ ಟೂರ್ನಿಯ ಮೊದಲ ವರ್ಷದ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್ ತಂಡದ ಎಸ್‌. ಶ್ರೀಶಾಂತ್‌, ಅಜಿತ್‌ ಚಾಂಡಿಲ ಮತ್ತು ಅಂಕಿತ್‌ ಚವ್ಹಾಣ ಕೂಡ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಆದ್ದರಿಂದ ಸುಪ್ರೀಂಕೋರ್ಟ್‌ ಈ ಎರಡೂ ತಂಡಗಳ ಮೇಲೆ ಎರಡು ವರ್ಷ ನಿಷೇಧ ಶಿಕ್ಷೆ ಹೇರಿತ್ತು.

ಆಗ ಕೆಲ ಕ್ರಿಕೆಟ್ ಪ್ರೇಮಿಗಳು ‘ಮೋಸಗಾರರ ಆಟವನ್ನು ಏಕೆ ನೋಡಬೇಕು’ ಎಂದು ಜರಿದರು. ಇನ್ನೂ ಕೆಲವರು ‘ಸೂಪರ್‌ ಕಿಂಗ್ಸ್‌ ತಂಡದ ಆಟಗಾರರು ಯಾವ ತಪ್ಪೂ ಮಾಡಿಲ್ಲ, ಯಾರೋ ಮಾಡಿದ ತಪ್ಪಿಗೆ ತಂಡಗಳಿಗೆ ನಿಷೇಧ ಶಿಕ್ಷೆ ಯಾಕೆ’ ಎನ್ನುವ ಪ್ರಶ್ನೆಗಳನ್ನು ಎತ್ತಿದ್ದರು.

ಐಪಿಎಲ್‌ ಬಂದ ಬಳಿಕ ಕ್ರಿಕೆಟ್‌ನ ಸ್ವರೂಪವೇ ಬದಲಾಗಿದೆ. ಚುಟುಕು ಕ್ರಿಕೆಟ್‌ನ ಪರಿಣಿತ ಬ್ಯಾಟ್ಸ್‌ಮನ್‌ ಸುರೇಶ್ ರೈನಾ, ಮಹೇಂದ್ರ ಸಿಂಗ್ ದೋನಿ ಅವರಿಂದ ಸೂಪರ್‌ ಕಿಂಗ್ಸ್ ತಂಡಕ್ಕೆ ತಾರಾ ಕಳೆ ಬಂದಿತ್ತು. ಮೊದಲ ಎಂಟು ಆವೃತ್ತಿಗಳಲ್ಲಿ ತಂಡವನ್ನು ದೋನಿ ಮುನ್ನಡೆಸಿದ್ದರು. ‘ಕೂಲ್‌ ಕ್ಯಾಪ್ಟನ್‌’ ಮುಂದಾಳತ್ವದಲ್ಲಿ ಸೂಪರ್‌ ಕಿಂಗ್ಸ್‌ ಎರಡು ಬಾರಿ ಚಾಂಪಿಯನ್‌, ನಾಲ್ಕು ಸಲ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿತ್ತು.

ಎರಡು ವರ್ಷ ನಿಷೇಧ ಇದ್ದ ಕಾರಣ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್ಸ್ ತಂಡಗಳ ಬದಲು ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ಹಾಗೂ ಗುಜರಾತ್‌ ಲಯನ್ಸ್ ತಂಡಗಳಿಗೆ ಅವಕಾಶ ಕೊಡಲಾಗಿತ್ತು. ಮೊದಲ ಎಂಟು ವರ್ಷ ಒಂದೇ ತಂಡದಲ್ಲಿ ಆಡಿದ್ದ ದೋನಿ, ರೈನಾ, ರವೀಂದ್ರ ಜಡೇಜ ಬೇರೆ ತಂಡಗಳಿಗೆ ಹಂಚಿಹೋಗಿದ್ದರು.

ಉತ್ತಮ ನಾಯಕತ್ವಕ್ಕೆ ಹೆಸರಾಗಿರುವ ದೋನಿ ಅವರನ್ನು ಕಡೆಗಣಿಸಿ ಪುಣೆ ತಂಡ ಸ್ಟೀವ್‌ ಸ್ಮಿತ್‌ಗೆ ನಾಯಕ ಸ್ಥಾನದ ಜವಾಬ್ದಾರಿ ನೀಡಿತ್ತು. ಈಗ ನಿಷೇಧ ಮುಗಿದಿದ್ದು ಈ ಮೂವರೂ ಆಟಗಾರರು ಸೂಪರ್‌ ಕಿಂಗ್ಸ್‌ಗೆ ಮರಳಿದ್ದಾರೆ. ರಾಜಸ್ಥಾನ ರಾಯಲ್ಸ್‌ ಸ್ಮಿತ್‌ ಅವರನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ. ಐಪಿಎಲ್‌ ನಿಯಮದ ಪ್ರಕಾರ ಪ್ರತಿ ತಂಡ ಮೂವರು ಆಟಗಾರರನ್ನು ಉಳಿಸಿಕೊಳ್ಳಬಹುದು. ಉಳಿದ ಆಟಗಾರರನ್ನು ಹರಾಜಿನ ಮೂಲಕ ಪಡೆದುಕೊಳ್ಳಬೇಕು.

ತಂಡ ಕಟ್ಟುವ ಸವಾಲು

ಸೂಪರ್‌ ಕಿಂಗ್ಸ್ ತಂಡಕ್ಕೆ ಮತ್ತೆ ನಾಯಕರಾಗಲಿರುವ ದೋನಿ ಅವರ ಮುಂದೆ ಹೊಸ ತಂಡ ಕಟ್ಟುವ ಸವಾಲಿದೆ. 2015ರಲ್ಲಿ ಆಡಿದ್ದ ಟೂರ್ನಿಯಲ್ಲಿ ಸ್ಯಾಮುಯಲ್‌ ಬದ್ರಿ, ಡ್ವೆನ್‌ ಬ್ರಾವೊ, ಮೈಕ್ ಹಸ್ಸಿ, ಬ್ರೆಂಡನ್‌ ಮೆಕ್ಲಮ್‌, ಸುರೇಶ್ ರೈನಾ, ಆಂಡ್ರ್ಯೂ ಟೈ, ಡ್ವೆನ್ ಸ್ಮಿತ್, ಪವನ್‌ ನೇಗಿ, ಮ್ಯಾಟ್‌ ಹೆನ್ರಿ, ಫಾಫ್‌ ಡು ಪ್ಲೆಸಿ, ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರಿದ್ದ ಚೆನ್ನೈನ ತಂಡದಲ್ಲಿನ ಉಳಿದ ಆಟಗಾರರನ್ನು ಹರಾಜಿನ ಮೂಲಕ ಆಯ್ಕೆ ಮಾಡಿಕೊಳ್ಳಬೇಕು. ಆದ್ದರಿಂದ ಹೊಸ ಆಟಗಾರರ ತಂಡವನ್ನು ಕಟ್ಟುವ ಜೊತೆಗೆ ತಂಡಕ್ಕೆ ಮೊದಲಿದ್ದ ‘ಬ್ರ್ಯಾಂಡ್‌’ ಕಟ್ಟಿಕೊಡುವ ಸವಾಲು ದೋನಿ ಮುಂದಿದೆ.

ಸೂಪರ್‌ ಕಿಂಗ್ಸ್ ತಂಡ ಎಂದರೆ ದೋನಿ ಎನ್ನುವಷ್ಟರ ಮಟ್ಟಿಗೆ ಅವರ ಜನಪ್ರಿಯತೆ ಹೆಚ್ಚಿದೆ. ಉತ್ತಮ ಫಿನಿಷರ್‌ ಎನಿಸಿರುವ ದೋನಿ ಅವರ ಬ್ಯಾಟಿಂಗ್ ಸೊಬಗು ಸವಿಯಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ.

ಕ್ರಿಕೆಟ್‌ ಲಿಮಿಟೆಡ್‌ ಒಡೆತನ

2008ರಲ್ಲಿ ಐಪಿಎಲ್‌ ಆರಂಭವಾದಾಗ ಸೂಪರ್ ಕಿಂಗ್ಸ್ ತಂಡಕ್ಕೆ ಇಂಡಿಯಾ ಸಿಮೆಂಟ್ಸ್‌ ಲಿಮಿಟೆಡ್‌ ಮಾಲೀಕತ್ವ ಹೊಂದಿತ್ತು. ಈ ಲಿಮಿಟೆಡ್‌ನ ಆಡಳಿತ ಮಂಡಳಿ ನಿರ್ದೇಶಕರಾಗಿದ್ದ ಶ್ರೀನಿವಾಸನ್‌ ಒಡೆತನದಲ್ಲಿ ತಂಡವಿತ್ತು. ಮಾಲೀಕತ್ವದ ಕುರಿತು ಹತ್ತು ವರ್ಷಗಳ ಅವಧಿಯ ಒಪ್ಪಂದ ಕೂಡ ಆಗಿತ್ತು.

ಆದರೆ ಶ್ರೀನಿವಾಸನ್‌ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಮುಖ್ಯಸ್ಥರಾದರು. ಆಗ ಕ್ರಿಕೆಟ್‌ ಆಡಳಿತದಲ್ಲಿ ಇರುವವರು ಐಪಿಎಲ್‌ನಲ್ಲಿ ಯಾವುದೇ ತಂಡ ಹೊಂದಿರಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರಿಂದ ಶ್ರೀನಿವಾಸನ್‌ ಹೆಸರನ್ನು ತೆಗೆದು ‘ಚೆನ್ನೈ ಸೂಪರ್‌ ಕ್ರಿಕೆಟ್‌ ಲಿಮಿಟೆಡ್‌’ ಎಂದು ಬದಲಿಸಲಾಯಿತು. ಇಂಡಿಯಾ ಸಿಮೆಂಟ್ಸ್‌ ಒಡೆತನ ಈಗಲೂ ಶ್ರೀನಿವಾಸನ್‌ ಹೆಸರಿನಲ್ಲಿ ಇರುವುದರಿಂದ ಸೂಪರ್‌ ಕಿಂಗ್ಸ್‌ ತಂಡದ ಆಡಳಿತಾತ್ಮಕ ನಿರ್ಧಾರಗಳನ್ನು ತೆರೆಯ ಹಿಂದೆ ಅವರೇ ತೆಗೆದುಕೊಳ್ಳುತ್ತಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.


ಸ್ಟೀವ್‌ ಸ್ಮಿತ್‌
 

ರಾಜನಾಗುವುದೇ ರಾಯಲ್ಸ್‌?

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ಒಡೆತನದಲ್ಲಿದ್ದ ರಾಜಸ್ಥಾನ ರಾಯಲ್ಸ್ ತನ್ನ ತಂಡಕ್ಕೆ ಅಂಟಿಕೊಂಡಿರುವ ಫಿಕ್ಸಿಂಗ್‌ ಕಳಂಕ ತೊಳೆಯಬೇಕಿದೆ. ಮಾಲೀಕತ್ವ ಕೂಡ ಬದಲಾಗಿದ್ದು ಜೈಪುರ ಐಪಿಎಲ್‌ ಕ್ರಿಕೆಟ್‌  ಪ್ರೈವೇಟ್‌ ಲಿಮಿಟೆಡ್‌ ಒಡೆತನದಲ್ಲಿ ತಂಡವಿದೆ. ಮನೋಜ ಬದಾಲೆ ಮಾಲೀಕರಾಗಿದ್ದಾರೆ.

ಶೇನ್‌ ವಾಟ್ಸನ್‌, ಬೆನ್‌ ಕಟಿಂಗ್‌, ಜೇಮ್ಸ್‌ ಫಾಕ್ನರ್‌, ಕ್ರಿಸ್‌ ಮಾರಿಸ್‌, ಟಿಮ್‌ ಸೌಥಿ, ಕೇನ್‌ ರಿಚರ್ಡ್‌ಸನ್‌, ಕರುಣ್‌ ನಾಯರ್‌ ಅವರನ್ನು ಒಳಗೊಂಡಿದ್ದ ರಾಯಲ್ಸ್‌ ತಂಡವಿತ್ತು. ಈಗ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಅವರನ್ನು ಮಾತ್ರ ತಂಡ ಉಳಿಸಿಕೊಂಡಿದೆ.

ಕಳೆದ ಆವೃತ್ತಿಯಲ್ಲಿ ಸ್ಮಿತ್‌ ಪುಣೆ ತಂಡವನ್ನು ಮುನ್ನಡೆಸಿ ಉತ್ತಮ ಸಾಮರ್ಥ್ಯ ತೋರಿದ್ದರು. ಹರಾಜಿನಲ್ಲಿ ಲಭಿಸುವ ಹೊಸ ಆಟಗಾರರ ನೆರವಿನೊಂದಿಗೆ ರಾಯಲ್ಸ್ ತಂಡಕ್ಕೆ ಮೊದಲಿನ ಕಳೆ ತಂದುಕೊಡಬೇಕಾದ ಸವಾಲು  ಸ್ಮಿತ್‌ ಅವರ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.