ADVERTISEMENT

ತೈಪೆ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪುರುಷರ ಡಬಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯ

ಪಿಟಿಐ
Published 20 ಜೂನ್ 2023, 19:18 IST
Last Updated 20 ಜೂನ್ 2023, 19:18 IST
   

ತೈಪೆ (ಪಿಟಿಐ): ಕೃಷ್ಣಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್‌ ಗೌಡ್‌ ಜೋಡಿಯು ಮಂಗಳವಾರ ಇಲ್ಲಿ ಆರಂಭವಾದ ತೈಪೆ ಓಪನ್‌ ಬಿಡಬ್ಲ್ಯುಎಫ್‌ ವರ್ಲ್ಡ್‌ ಸೂಪರ್‌ 300 ಟೂರ್ನಿಯ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಅಮೆರಿಕದ ವಿನ್ಸನ್ ಚಿಯು ಮತ್ತು ಜೋಶುವಾ ಯುವಾನ್ ಜೋಡಿಗೆ ಶರಣಾಯಿತು.

ಇಂಡೊನೇಷ್ಯಾ ಓಪನ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರ ಅನುಪಸ್ಥಿತಿಯಲ್ಲಿ ಎಂಟನೇ ಶ್ರೇಯಾಂಕದ ಈ ಜೋಡಿ ಡಬಲ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಬೇಕಿತ್ತು. ಈ ಜೋಡಿ 54 ನಿಮಿಷ ಹೋರಾಟ ನಡೆಸಿ 18–21, 22–20, 16–21ರಲ್ಲಿ ಸೋಲೊಪ್ಪಿಕೊಂಡಿತು. ಮೊದಲ ಗೇಮ್‌ ಸೋತರೂ, ಎರಡನೇ ಗೇಮ್‌ನಲ್ಲಿ ಭಾರತದ ಜೋಡಿ ಪುಟಿದೆದ್ದು ಸಮಬಲ ಸಾಧಿಸಿತು. ಆದರೆ, ಮೂರನೇ ಗೇಮ್‌ನಲ್ಲಿ ಅಮೆರಿಕದ ಜೋಡಿ ಮೈಲುಗೈ ಸಾಧಿಸಿತು.

ಮಹಿಳೆಯರ ಡಬಲ್ಸ್‌ನಲ್ಲಿ ಪಾಂಡಾ ಸಹೋದರಿಯರಾದ ರುತುಪರ್ಣ ಮತ್ತು ಶ್ವೇತಪರ್ಣ ಜೋಡಿಯು ಅತಿಥೇಯ ದೇಶದ ಚೆಂಗ್‌ ಯು ಪೈ ಮತ್ತು  ಸನ್‌ ವೆನ್‌ ಪೈ ವಿರುದ್ಧ 7–21, 30–28, 12–21ರಿಂದ ಪರಾಭವಗೊಂಡಿತು.

ADVERTISEMENT

ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ನೈನಾ ನೆಹ್ವಾಲ್‌, ಮಾಳವಿಕಾ ಬನ್ಸೋಡ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕೊಡೈ ನರವೊಕಾ ಕೂಡ ಹಿಂದೆ ಸರಿದಿದ್ದು, ಅವರ ಸ್ಥಾನಕ್ಕೆ ಪರುಪಳ್ಳಿ ಕಶ್ಯಪ್‌ ಆಯ್ಕೆಯಾಗಿದ್ದಾರೆ. ಅವರು ಜರ್ಮನಿಯ ಸ್ಯಾಮ್ಯುಯೆಲ್ ಹ್ಸಿಯಾವೊ ವಿರುದ್ಧ ಬುಧವಾರ ಸೆಣಸಲಿದ್ದಾರೆ.

ಇಂಡೊನೇಷ್ಯಾ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿದ್ದ ಮೂರನೇ ಶ್ರೇಯಾಂಕದ ಎಚ್‌.ಎಸ್‌. ಪ್ರಣಯ್‌ ಅವರು, ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಅತಿಥೇಯ ದೇಶದ ಲಿನ್ ಯು ಸಿಯೆನ್ ಅವರ ಸವಾಲನ್ನು ಬುಧವಾರ ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.