ADVERTISEMENT

ಅವಳಿ ಸಹೋದರಿಯರ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:46 IST
Last Updated 19 ಜೂನ್ 2019, 19:46 IST
ಕ್ರಿಸ್ಟಿನಾ ಪ್ಲಿಸ್ಕೊವ– ಎಎಫ್‌ಪಿ ಚಿತ್ರ
ಕ್ರಿಸ್ಟಿನಾ ಪ್ಲಿಸ್ಕೊವ– ಎಎಫ್‌ಪಿ ಚಿತ್ರ   

ಬರ್ಮಿಂಗಂ: ಇಲ್ಲಿಯ ನೇಚರ್‌ ವ್ಯಾಲಿ ಕ್ಲಾಸಿಕ್‌ ಡಬ್ಲ್ಯುಟಿಎ ಟೆನಿಸ್‌ ಟೂರ್ನಿಯಲ್ಲಿ ಪ್ಲಿಸ್ಕೊವ ಸಹೋದರಿಯರ ಮಧ್ಯೆ ಸ್ಪರ್ಧೆ ನಡೆಯಲಿದೆ. ಕ್ರಿಸ್ಟಿನಾ ಹಾಗೂ ಕರೋಲಿನಾ ಪ್ಲಿಸ್ಕೊವ ಎದುರಾಳಿಗಳಾಗಿ ಕಣಕ್ಕಿಳಿಯಲಿದ್ದಾರೆ.

ಯುಎಸ್‌ ಓಪನ್ ಚಾಂಪಿಯನ್‌ ಆಗಿದ್ದ ಕರೋಲಿನಾ ಪ್ಲಿಸ್ಕೊವ ಅವರು ವೈಲ್ಡ್‌ ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶಿಸಿದ್ದು, ಮೊದಲ ಸುತ್ತಿನ ಪಂದ್ಯದಲ್ಲಿ ಮಿಹೆಲಾ ಬುಜರ್ನೆಸ್ಕು ಅವರನ್ನು ಸೋಲಿಸಿದ್ದರು. ಎರಡನೇ ಸುತ್ತಿನ ಪಂದ್ಯದಲ್ಲಿ ಸಹೋದರಿಯರ ಮುಖಾಮುಖಿ ನಡೆಯಲಿದೆ.

ಕರೋಲಿನಾಗಿಂತ ಎರಡು ನಿಮಿಷ ಹಿರಿಯರಾದ ಕ್ರಿಸ್ಸಿನಾ, ಮೂರು ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಟೂರ್ನಿ ಪ್ರವೇಶಿಸಿದ್ದಾರೆ. ಮುಖ್ಯ ಸುತ್ತಿನ ಮೊದಲ ಪಂದ್ಯದಲ್ಲಿ ಅವರು ವಿಕ್ಟೋರಿಯಾ ತೊಮೊವಾ ಅವರನ್ನು ಮಣಿಸಿದ್ದರು. ಆರು ವರ್ಷಗಳ ಹಿಂದೆ ನಡೆದ ಈಸ್ಟಬರ್ನ್‌ ಅರ್ಹತಾ ಸುತ್ತಿನಲ್ಲಿ ಈ ಅವಳಿ ಸಹೋದರಿಯರು ಪರಸ್ಪರ ಎದುರಾಳಿಗಳಾಗಿದ್ದರು.

ADVERTISEMENT

‘ಸಹೋದರಿಯೊಂದಿಗಿನ ಸ್ಪರ್ಧೆ ಪ್ರತಿಶತ ಕಠಿಣವಾದುದು. ನಾವು ಮಾನಸಿಕವಾಗಿ ಹತ್ತಿರವಾಗಿದ್ದೇವೆ. ಇಬ್ಬರೂ ಜೊತೆಯಾಗಿ ಅಭ್ಯಾಸ ನಡೆಸುತ್ತೇವೆ’ ಎಂದು ಕರೋಲಿನಾ ಹೇಳಿದರು.

ವಿಶ್ವ ಕ್ರಮಾಂಕದಲ್ಲಿ 112ನೇ ಸ್ಥಾನದಲ್ಲಿರುವ ಕ್ರಿಸ್ಟಿನಾ ತನ್ನ ಸಹೋದರಿಯಂತೆ ಟೆನಿಸ್‌ನಲ್ಲಿ ಯಶಸ್ಸು ಸಾಧಿಸಿಲ್ಲ. 2016ರಲ್ಲಿ ತಾಷ್ಕೆಂಟ್‌ ಓಪನ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ ಯಾವುದೇ ಪ್ರಮುಖ ಪ್ರಶಸ್ತಿ ಅವರಿಗೆ ಒಲಿದಿಲ್ಲ. ಆದರೆ ಕರೋಲಿನಾ ಅವರನ್ನು ಕೊನೆಯ ಬಾರಿ ಎದುರಿಸಿದ್ದ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.