ADVERTISEMENT

ಆಕಾಂಕ್ಷಾಗೆ ಮಣಿದ ಸಾತ್ವಿಕಾ

ಐಟಿಎಫ್‌ ವಿಶ್ವ ಮಹಿಳಾ ಟೆನಿಸ್‌ ಟೂರ್‌: ಸೌಜನ್ಯಾ, ಋತುಜಾ ಜಯದ ಓಟ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 14:08 IST
Last Updated 2 ಡಿಸೆಂಬರ್ 2021, 14:08 IST
ಸೌಜನ್ಯಾ ಬಾವಿಸೆಟ್ಟಿ ಆಟದ ಪರಿ– ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌
ಸೌಜನ್ಯಾ ಬಾವಿಸೆಟ್ಟಿ ಆಟದ ಪರಿ– ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌   

ಬೆಂಗಳೂರು: ಎಂಟನೇ ಶ್ರೇಯಾಂಕದ ಸಾತ್ವಿಕಾ ಸಮಾ ಅವರಿಗೆ ಸೋಲುಣಿಸಿದ ಆಕಾಂಕ್ಷಾ ನಿಟ್ಟೂರೆ ಐಟಿಎಫ್‌ ವಿಶ್ವ ಟೆನಿಸ್‌ ಟೂರ್‌ ಚಾಂಪಿಯನ್‌ಷಿಪ್‌ನಲ್ಲಿ ಎಂಟರಘಟ್ಟಕ್ಕೆ ಪ್ರವೇಶಿಸಿದರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಲ್ಸ್‌ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಗುರುವಾರ ಆಕಾಂಕ್ಷಾ 6-4, 2-6, 6-2ರಿಂದ ಅನುಭವಿ ಆಟಗಾರ್ತಿ ಸಾತ್ವಿಕಾ ಸವಾಲು ಮೀರಿದರು.

ಎರಡು ತಾಸುಗಳಿಗಿಂತ ಹೆಚ್ಚು ಕಾಲ ನಡೆದ ಜಿದ್ದಾಜಿದ್ದಿನ ಈ ಹಣಾಹಣಿಯಲ್ಲಿ ಮೊದಲ ಸೆಟ್‌ಅನ್ನು, ಆಕಾಂಕ್ಷಾ ತಮ್ಮದಾಗಿಸಿಕೊಂಡರು. ತಿರುಗೇಟು ನೀಡಿದ ಸಾತ್ವಿಕಾ ಎರಡನೇ ಸೆಟ್‌ನಲ್ಲಿ ಪಾರಮ್ಯ ಮೆರೆದರು. ನಿರ್ಣಾಯಕ ಸೆಟ್‌ಅನ್ನು ಉತ್ತಮ ಪೈಪೋಟಿ ನೀಡಿದರೂ ಸಾತ್ವಿಕಾ ಅವರಿಗೆ ನಿರಾಸೆ ತಪ್ಪಲಿಲ್ಲ. ಆಕಾಂಕ್ಷಾ ಅವರು ಅರ್ಹತಾ ಸುತ್ತಿನಿಂದ ಗೆದ್ದುಬಂದಿದ್ದರು.

ADVERTISEMENT

ಅಗ್ರಶ್ರೇಯಾಂಕದ ಋತುಜಾ ಭೋಸ್ಲೆ ಹಾಗೂ ಮೂರನೇ ಶ್ರೇಯಾಂಕದ ಸೌಜನ್ಯಾ ಬಾವಿಸೆಟ್ಟಿ ಕೂಡ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಋತುಜಾ 6-3, 6-3ರಿಂದ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದ ರೇಷ್ಮಾ ಮುರಾರಿ ಎದುರು ಗೆದ್ದರೆ, ಸೌಜನ್ಯಾ ಅವರಿಗೆ 6-2, 6-2ರಿಂದ ಸೋಹಾ ಸಾದಿಕ್ ವಿರುದ್ಧ ಗೆಲುವು ಒಲಿಯಿತು.

16ರಘಟ್ಟದ ಇನ್ನುಳಿದ ಪಂದ್ಯಗಳಲ್ಲಿ ಪ್ರಾಂಜಲಾ ಯಡಪಲ್ಲಿ 6-3, 6-3ರಿಂದ ಯುಬಾರಾಣಿ ಬ್ಯಾನರ್ಜಿ ಎದುರು, ವೈದೇಹಿ ಚೌಧರಿ 6-3, 6-2ರಿಮದ ಸಾಯಿ ಸಂಹಿತಾ ಚಮರ್ತಿ ವಿರುದ್ಧ, ಕೊರಿಯಾದ ಸೋ ರಾ ಲೀ 6-2, 6-0ರಿಂದ ರಷ್ಯಾದ ಜ್ಲಾಟಾ ಯಂಕೊವ್‌ಸ್ಕಯಾ ವಿರುದ್ಧ, ಶ್ರೀವಲ್ಲಿ ರಶ್ಮಿಕಾ 6-2, 6-1ರಿಂದ ಪ್ರತಿಭಾ ನಾರಾಯಣ್‌ ಪ್ರಸಾದ್‌ ಎದುರು, ಪ್ರತ್ಯೂಷಾ ರಾಚಪುಡಿ 2-6, 6-2, 6-4ರಿಂದ ಜಗಮೀತ್ ಕೌರ್ ಗೇರ್ವಾಲ್ ಎದುರು ಜಯ ಸಾಧಿಸಿದರು.

ಸೆಮಿಫೈನಲ್‌ಗೆ ಶರ್ಮದಾ– ಶ್ರವ್ಯಾ: ಡಬಲ್ಸ್‌ ವಿಭಾಗದಲ್ಲಿ ಶರ್ಮದಾ ಬಾಲು– ಶ್ರಾವ್ಯಾ ಶಿವಾನಿ ಚಿಲಕಪುಡಿ 6-4, 6-3ರಿಂದ ಶ್ರೀಯಾ ಅಟ್ಟೂರು–ನಿದಿತ್ರಾ ರಾಜ್‌ಮೋಹನ್ ಎದುರು ಜಯಿಸಿ ನಾಲ್ಕರ ಘಟ್ಟ ತಲುಪಿದರು. ಇನ್ನುಳಿದ ಸೆಮಿಫೈನಲ್‌ ಪಂದ್ಯಗಳಲ್ಲಿ ವೈದೇಹಿ ಚೌಧರಿ– ಮಿಹಿಕಾ ಯಾದವ್‌ 6-3, 7-6 (6)ರಿಂದ ಸೋ ರಾ ಲೀ–ಸಾತ್ವಿಕಾ ಸಮಾ ವಿರುದ್ಧ, ಸಾಯಿ ಸಂಹಿತಾ ಚಮರ್ತಿ– ಸೋಹಾ ಸಾದಿಕ್ 6-4, 7-5ರಿಂದ ರಮ್ಯಾ ನಟರಾಜನ್‌– ಸೌಮ್ಯಾ ವಿಜ್‌ ವಿರುದ್ಧ, ಸೌಜನ್ಯಾ ಬಾವಿಸೆಟ್ಟಿ– ಋತುಜಾ ಭೋಸ್ಲೆ 6-0, 6-0ರಿಂದ ಹುಮೇರಾ ಬಹ್ರಾಮಸ್‌– ಶ್ರೀವಲ್ಲಿ ರಷ್ಮಿಕಾ ಎದುರು ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.