ADVERTISEMENT

2021: ಕುತೂಹಲ ಮೂಡಿಸಿರುವ ಮೆಡ್ವೆಡೆವ್‌, ಥೀಮ್‌

ಅಗ್ರಸ್ಥಾನಕ್ಕೆ ಲಗ್ಗೆಹಾಕಲು ಮುಂದಾಗಿರುವ ಯುವ ಪಡೆ

ಏಜೆನ್ಸೀಸ್
Published 24 ನವೆಂಬರ್ 2020, 8:37 IST
Last Updated 24 ನವೆಂಬರ್ 2020, 8:37 IST
ಮೆಡ್ವೆಡೆವ್‌
ಮೆಡ್ವೆಡೆವ್‌   

ಲಂಡನ್‌: ನೊವಾಕ್‌ ಜೊಕೊವಿಕ್‌, ರಫೇಲ್‌ ನಡಾಲ್‌, ರೋಜರ್‌ ಫೆಡರರ್‌ ಅವರ ವೈಭವದ ಕಾಲ ಮುಗಿಯಿತು ಎಂದು ಯಾರೂ ಭಾವಿಸುವುದಿಲ್ಲ. ಆದರೆ ವರ್ಷಾಂತ್ಯದ ಎಟಿಪಿ ಫೈನಲ್ಸ್‌ ಟೂರ್ನಿಯ ಫಲಿತಾಂಶಗಳು, 2021ರ ಪುರುಷರ ಟೆನಿಸ್‌ನಲ್ಲಿ ಕುತೂಹಲ ಹುಟ್ಟುವಂತೆ ಮಾಡಿವೆ.

ಡ್ಯಾನಿಲ್‌ ಮೆಡ್ವೆಡೆವ್, ಡೊಮಿನಿಕ್‌ ಥೀಮ್‌ ಅವರಂಥ ಪ್ರತಿಭಾಶಾಲಿ ಆಟಗಾರರು ಮುಂಚೂಣಿಗೆ ಬಂದಿದ್ದಾರೆ. ಇವರೆಲ್ಲಾ ಬಿಸಿರಕ್ತದ ತರುಣರು. ಅಗ್ರಪಟ್ಟಕ್ಕೆ ಲಗ್ಗೆಯಿಡಲು ಸಜ್ಜಾಗಿದ್ದಾರೆ.

ಎಟಿಪಿ ಟೂರ್ನಿಯ ವಿಜೇತರಾದ ಮೆಡ್ವೆಡೆವ್‌, ಅಲೆಕ್ಸಾಂಡರ್‌ ಜ್ವರೇವ್‌, ಸ್ಟೆಫಾನೊಸ್‌ ಸಿಸಿಪಸ್‌ ಮತ್ತು ಆ್ಯಂಡ್ರಿ ರುಬ್ಲೇವ್‌ ಉದಯೋನ್ಮುಖ ಆಟಗಾರರ ಪಟ್ಟಿಯಲ್ಲಿದ್ದಾರೆ. ಕೋವಿಡ್‌ ಪಿಡುಗು ತಾಂಡವವಾಡದೇ ಹೋದರೆ, ಮುಂದಿನ ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಮೂಲಕ ದೊಡ್ಡ ಮಟ್ಟದಲ್ಲಿ ಟೆನಿಸ್‌ ಚಟುವಟಿಕೆ ಚಾಲನೆ ಪಡೆಯಲಿದೆ.

ADVERTISEMENT

‘ಘಟಾನುಘಟಿ ಆಟಗಾರರ ಜೊತೆ ನಾವು ಸಮರ್ಥವಾಗಿ ಆಡಬಲ್ಲೆವು. ಅವರನ್ನು ಸೋಲಿಸಲು ಶಕ್ಯರು, ಅಷ್ಟೇ ಅಲ್ಲ, ದೊಡ್ಡ ಟೂರ್ನಿಗಳನ್ನೂ ಗೆಲ್ಲಬಲ್ಲೆವು ಎಂಬುದನ್ನು ನಾವು ಸಾಧಿಸಿತೋರಿಸಿದ್ದೇವೆ’ ಎಂದು ಥೀಮ್‌ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಷ್ಟೇ ಅವರು ಅಮೆರಿಕ ಓಪನ್‌ ಸಿಂಗಲ್ಸ್‌ ಫೈನಲ್‌ ಗೆಲ್ಲುವ ಮೊದಲ ಗ್ರ್ಯಾಂಡ್‌ಸ್ಲಾಮ್‌ ಟ್ರೋಫಿ ತಮ್ಮದಾಗಿಸಿಕೊಂಡಿದ್ದರು.

‘ಮುಂದಿನ ಕೆಲ ವರ್ಷಗಳಲ್ಲಿ ಟೆನಿಸ್‌ನ ಮಹಾತ್ರಯರು (ಜೊಕೊವಿಚ್‌, ನಡಾಲ್‌, ಫೆಡರರ್‌) ಪ್ರತಿ ದೊಡ್ಡ ಟೂರ್ನಿಗಳಲ್ಲಿ ಆಡಲಿದ್ದಾರೆ. ಅವರು ನಿವೃತ್ತಿಯಾಗುವ ಸಮಯವೂ ಬರಬಹುದು, ಅದು– ಮೂರೊ, ನಾಲ್ಕೊ ಅಥವಾ ಐದು ವರ್ಷ ಹೇಳಲಾಗದು’ ಎಂದಿದ್ದಾರೆ ಥೀಮ್‌.

ಮೆಡ್ವೆಡೆವ್‌ ಅವರೆದುರು ಭಾನುವಾರ ಲಂಡನ್‌ನಲ್ಲಿ ಎಟಿಪಿ ಫೈನಲ್ಸ್‌ ಪಂದ್ಯವನ್ನು ಮೂರು ಸೆಟ್‌ಗಳಲ್ಲಿ ಸೋತ ನಂತರ ಥೀಮ್‌ ಮೇಲ್ಕಂಡ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವ ಮೂರನೇ ಕ್ರಮಾಂಕದ ಥೀಮ್ ಸೆಮಿಫೈನಲ್ಸ್‌ನಲ್ಲಿ ಅಗ್ರ ಕ್ರಮಾಂಕದ ಜೊಕೊವಿಚ್‌ ಅವರನ್ನು ಹೊರದೂಡಿದರೆ, ನಾಲ್ಕನೇ ಕ್ರಮಾಂಕದ ಮೆಡ್ವೆಡೆವ್‌, ಎರಡನೇ ಕ್ರಮಾಂಕದ ನಡಾಲ್‌ ಅವರನ್ನು ಹಿಮ್ಮೆಟ್ಟಿಸಿದ್ದರು. ದಂತಕತೆಯಾಗಿರುವ ಆಟಗಾರರೆದುರು ಈ ಉತ್ಸಾಹಿಗಳು ಮೂರು ಸೆಟ್‌ಗಳ ಪಂದ್ಯಗಳನ್ನು ಆಡಿದ್ದರು.

‘ಇದು ನವಪೀಳಿಗೆಯ ಆಟಗಾರರ ಅಮೋಘ ಸಾಧನೆ’ ಎಂದು ಬಣ್ಣಿಸಿದವರು ಮೆಡ್ವೆಡೆವ್‌. ಅವರು ಟೂರ್ನಿಯ ರೌಂಡ್‌ರಾಬಿನ್‌ ಪಂದ್ಯದಲ್ಲೂ ಜೊಕೊವಿಚ್‌ ಮೇಲೆ ಜಯಗಳಿಸಿದ್ದರು. ಟೂರ್ನಿಯ 50 ವರ್ಷಗಳ ಇತಿಹಾಸದಲ್ಲಿ, ಮೊದಲ ಕ್ರಮಾಂಕದಿಂದ ಮೂರನೇ ಕ್ರಮಾಂಕದ ಮೂವರೂ ಆಟಗಾರರನ್ನು ಸೋಲಿಸಿದ ಮೊದಲ ಆಟಗಾರನೆಂಬ ಹಿರಿಮೆಯೂ ಅವರದಾಯಿತು.

27 ವರ್ಷದ ಥೀಮ್‌ ಈಗಾಗಲೇ ನಾಲ್ಕು ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಫೈನಲ್‌ ಆಡಿದ್ದಾರೆ. ಎರಡು ಬಾರಿ– ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ– ನಡಾಲ್‌ ಎದುರು ತಲೆಬಾಗಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಒಮ್ಮೆ ಜೊಕೊವಿಚ್‌ ಎದುರು ಸೋಲೊಪ್ಪಿಕೊಂಡಿದ್ದಾರೆ. ಅವರು ಎರಡು ಬಾರಿ ವರ್ಷಾಂತ್ಯದ ಎಟಿಪಿ ಫೈನಲ್‌ನಲ್ಲಿ ಆಡಿದಂತಾಗಿದೆ. ಕಳೆದ ವರ್ಷದ ಫೈನಲ್‌ನಲ್ಲಿ ಅವರು ಸಿಸಿಪಸ್‌ ಅವರಿಗೆ ಶರಣಾಗಿದ್ದರು.

ಬೇಸ್‌ಲೈನ್‌ನಲ್ಲಿ ಥೀಮ್‌ ಶಕ್ತಿಶಾಲಿ ಆಟ ಆಡಬಲ್ಲರು. ಆದರೆ ಪಂದ್ಯದ ಮಧ್ಯದ ಹಂತದಲ್ಲಿ ಅವರು ಅದೇ ಲಯಕ್ಕೆ ಒಗ್ಗಿಕೊಳ್ಳಲು ಯಶಸ್ವಿಯಾಗುತ್ತಿಲ್ಲ.

ಹೋದ ವರ್ಷ ಅಮೆರಿಕ ಓಪನ್‌ ಟೆನಿಸ್‌ ಫೈನಲ್‌ನಲ್ಲಿ ನಡಾಲ್‌ಗೆ ಮಣಿದಿದ್ದ ರಷ್ಯದ ಮೆಡ್ವೆಡೆವ್, ಈ ವರ್ಷದ ಸೆಮಿಫೈನಲ್‌ನಲ್ಲಿ ಥೀಮ್‌ ಎದುರು ಹಿಮ್ಮೆಟ್ಟಿದ್ದರು. ಹಾರ್ಡ್‌ಕೋರ್ಟ್‌ನಲ್ಲಿ ಅವರ ಆಟ ಗಮನಸೆಳೆದಿದೆ. ಆದರೆ ಹುಲ್ಲಿನಂಕಣದಲ್ಲಿ ಮತ್ತು ಆವೆ ಅಂಕಣದಲ್ಲಿ ಆಟ ಸುಧಾರಿಸಿದರೆ ಮಾತ್ರ ಅಗ್ರಪಟ್ಟಕ್ಕೇರುವ 24 ವರ್ಷದ ರಷ್ಯ ಆಟಗಾರನ ಕನಸು ನನಸಾಗಬಹುದು. ವಿಂಬಲ್ಡನ್‌ನಲ್ಲಿ ಅವರು ಒಮ್ಮೆಯೂ ಮೂರನೇ ಸುತ್ತಿಗಿಂತ ಮೇಲೆ ಹೋಗಿಲ್ಲ.

ಗ್ರೀಸ್‌ ದೇಶದ ಆಟಗಾರ ಸಿಸಿಪಸ್‌, ಜರ್ಮನಿಯ ಜ್ವರೇವ್‌ ಮತ್ತು ರಷ್ಯದ ರುಬ್ಲೇವ್‌ ಅವರೆಲ್ಲಾ 24 ವರ್ಷದೊಳಗಿನವರು. ಈ ಮೂವರು ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಗೆಲ್ಲದಿದ್ದರೂ, ಅಮೋಘ ಪ್ರದರ್ಶನಗಳಿಂದ ಕ್ರಮಾಂಕಪಟ್ಟಿಯ ಟಾಪ್‌ ಟೆನ್‌ನಲ್ಲಿ ವಿರಾಜಮಾನರಾಗಿದ್ದಾರೆ.

33 ವರ್ಷದ ಜೊಕೊವಿಚ್‌, 34 ವರ್ಷದ ನಡಾಲ್‌ ಅವರ ಪ್ರಶಸ್ತಿಯ ಹಸಿವು ಇಂಗಿದೆ ಎನ್ನುವಂತಿಲ್ಲ. ಎರಡು ಬಾರಿ ಮೊಣಕಾಲಿನ ಸರ್ಜರಿಗೆ ಒಳಗಾಗಿರುವ ಫೆಡರರ್‌ ಅವರು ಈ ವರ್ಷ ಹೆಚ್ಚಿನ ಟೂರ್ನಿಗಳಲ್ಲಿ ಆಡಿರಲಿಲ್ಲ. ಆದರೆ ಅವರ ಕಾಲ ಮುಗಿಯಿತು ಎಂದು ಕಡೆಗಣಿಸುವಂತಿಲ್ಲ.

ಟೆನಿಸ್‌ನ ಈ ಮೂವರು ಮಹಾನ್‌ ಆಟಗಾರರು ಕೊನೆಯ 62 ಪ್ರಮುಖ ಟೂರ್ನಿಗಳಲ್ಲಿ 57ರಲ್ಲಿ ತಮ್ಮೊಳಗೆ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಫೆಡರರ್‌ ಮತ್ತು ನಡಾಲ್‌ 20 ಟೂರ್ನಿಗಳಲ್ಲಿ ಟ್ರೋಫಿ ಎತ್ತಿ ಹಿಡಿದರೆ, ಜೊಕೊವಿಚ್‌ 17 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ವರ್ಷ ನಡೆದ ಮೂರು ಟೂರ್ನಿಗಳಲ್ಲಿ ಎರಡನ್ನು ಈ ಹಿರಿಯರು ಗೆದ್ದುಕೊಂಡಿದ್ದಾರೆ. ಕೋವಿಡ್‌ –19 ಪಿಡುಗಿನಿಂದ ಈ ವರ್ಷ ವಿಂಬಲ್ಡನ್‌ ಟೂರ್ನಿ ರದ್ದುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.