ADVERTISEMENT

ಟೆನಿಸ್‌ ಅಗ್ರಪಟ್ಟ: ಬಾರ್ಟಗೆ ಪ್ಲಿಸ್ಕೋವಾ ಪೈಪೋಟಿ

ಎಟಿಪಿ ಕ್ರಮಾಂಕಪಟ್ಟಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:38 IST
Last Updated 16 ಸೆಪ್ಟೆಂಬರ್ 2019, 20:38 IST

ಪ್ಯಾರಿಸ್‌ (ಎಎಫ್‌ಪಿ): ಭಾನುವಾರ ಝೆಂಗ್‌ಝೌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಕರೋಲಿನಾ ಪ್ಲಿಸ್ಕೋವಾ ಅವರು ಈಗ ಟೆನಿಸ್‌ ಮಹಿಳಾ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಶ್ಲೆ ಬಾರ್ಟಿ ಅವರಿಗಿಂತ ಕೇವಲ 86 ಪಾಯಿಂಟ್‌ಗಳಷ್ಟು ಹಿಂದೆಯಿದ್ದಾರೆ.

ಸೋಮವಾರ ಬಿಡುಗಡೆಯಾದ ಕ್ರಮಾಂಕಪಟ್ಟಿಯಲ್ಲಿ 6,501 ಪಾಯಿಂಟ್‌ಗಳೊಡನೆ ಬಾರ್ಟಿ ಅಗ್ರಪಟ್ಟದಲ್ಲಿ ಮುಂದುವರಿದಿದ್ದಾರೆ. 27 ವರ್ಷದ ಆಟಗಾರ್ತಿ ಪ್ಲಿಸ್ಕೋವಾ(ಝೆಕ್‌ ಗಣರಾಜ್ಯ) 6,415 ಪಾಯಿಂಟ್‌ಗಳೊಡನೆ ಎರಡನೇ ಸ್ಥಾನದಲ್ಲಿದ್ದಾರೆ. ಭಾನುವಾರ ಝೆಂಗ್‌ಝೌ ಓಪನ್‌ ಫೈನಲ್‌ನಲ್ಲಿ ಪ್ಲಿಸ್ಕೋವಾ 6–3, 6–2 ರಿಂದ ಪೆಟ್ರಾ ಮಾರ್ಟಿಕ್‌ ವಿರುದ್ಧ ಜಯಗಳಿಸಿದ್ದರು.

ಉಳಿದಂತೆ ಅಗ್ರ 25 ಆಟಗಾರ್ತಿಯರ ರ್‍ಯಾಂಕಿಂಗ್‌ನಲ್ಲಿ ಬದಲಾವಣೆಯಾಗಿಲ್ಲ. ಎಲಿನಾ ಸ್ವಿಟೊಲಿನಾ, ನವೊಮಿ ಒಸಾಕಾ ಮತ್ತು ಬಿಯಾಂಕಾ ಆ್ಯಂಡ್ರೆಸ್ಕ್ಯು ಕ್ರಮವಾಗಿ ಮೂರರಿಂದ ಐದವರೆಗಿನ ಸ್ಥಾನ ಪಡೆದಿದ್ದಾರೆ. ಸಿಮೊನಾ ಹಲೆಪ್‌, ಪೆಟ್ರಾ ಕ್ವಿಟೋವಾ, ಕೀಕಿ ಬರ್ಟನ್ಸ್‌, ಸೆರೆನಾ ವಿಲಿಯಮ್ಸ್‌ ಮತ್ತು ಬೆಲಿಂಡಾ ಬೆನ್ಸಿಕ್‌ ಕ್ರಮವಾಗಿ ಆರರಿಂದ ಹತ್ತರವರೆಗಿನ ಸ್ಥಾನಗಳನ್ನು ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.