ADVERTISEMENT

ಎಟಿಪಿ ನ್ಯೂಯಾರ್ಕ್‌ ಓಪನ್‌: ಫೈನಲ್‌ ಪ್ರವೇಶಿಸಿದ ಶುನರ್‌

ಏಜೆನ್ಸೀಸ್
Published 17 ಫೆಬ್ರುವರಿ 2019, 19:25 IST
Last Updated 17 ಫೆಬ್ರುವರಿ 2019, 19:25 IST
ಬ್ರೇಡನ್‌ ಶುನರ್‌
ಬ್ರೇಡನ್‌ ಶುನರ್‌   

ನ್ಯೂಯಾರ್ಕ್‌: ಅಮೋಘ ಆಟ ಆಡಿದ ಕೆನಡಾದ ಬ್ರೇಡನ್‌ ಶುನರ್‌ ಅವರು ಎಟಿಪಿ ನ್ಯೂಯಾರ್ಕ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಶುನರ್‌ 7–6, 4–6, 6–3ರಲ್ಲಿ ಅಮೆರಿಕದ ಸ್ಯಾಮ್‌ ಕ್ವೆರಿ ಅವರನ್ನು ಮಣಿಸಿದರು. ಈ ಹೋರಾಟ ಒಂದು ಗಂಟೆ 54 ನಿಮಿಷ ನಡೆಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 154ನೇ ಸ್ಥಾನದಲ್ಲಿರುವ ಬ್ರೇಡನ್‌ ಮತ್ತು ಆರನೇ ಶ್ರೇಯಾಂಕಿತ ಆಟಗಾರ ಸ್ಯಾಮ್‌ ಮೊದಲ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ‘ಟೈ ಬ್ರೇಕರ್‌’ನಲ್ಲಿ 23 ವರ್ಷ ವಯಸ್ಸಿನ ಶುನರ್‌ ಮಿಂಚಿನ ಆಟ ಆಡಿ ಗೆಲುವಿನ ತೋರಣ ಕಟ್ಟಿದರು.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ 49ನೇ ಸ್ಥಾನದಲ್ಲಿರುವ ಕ್ವೆರಿ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಹೀಗಾಗಿ ಮೂರನೇ ಸೆಟ್‌ ಉಭಯರ ಪಾಲಿಗೂ ಮಹತ್ವದ್ದೆನಿಸಿತ್ತು. ಈ ಹೋರಾಟದ ಆರಂಭದ ಆರು ಗೇಮ್‌ಗಳಲ್ಲಿ ಸಮಬಲದ ಹಣಾಹಣಿ ಕಂಡುಬಂತು. ನಂತರ ಕೆನಡಾದ ಆಟಗಾರ ಮೋಡಿ ಮಾಡಿದರು. ತಮ್ಮ ಸರ್ವ್‌ ಉಳಿಸಿಕೊಳ್ಳುವ ಜೊತೆಗೆ ಎದುರಾಳಿಯ ಸರ್ವ್‌ ಮುರಿದ ಶುನರ್‌ ಸಂಭ್ರಮಿಸಿದರು.

ನಾಲ್ಕರ ಘಟ್ಟದ ಇನ್ನೊಂದು ಹೋರಾಟದಲ್ಲಿ ರಿಯಿಲ್ಲಿ ಒಪೆಲ್ಕಾ 6–7, 7–6, 7–6ರಲ್ಲಿ ಅಗ್ರಶ್ರೇಯಾಂಕದ ಆಟಗಾರ ಜಾನ್‌ ಇಸ್ನರ್‌ಗೆ ಆಘಾತ ನೀಡಿದರು.

ಅಮೆರಿಕದ ಆಟಗಾರರ ನಡುವಣ ಈ ಪೈಪೋಟಿಯಲ್ಲಿ ಆರು ಮ್ಯಾಚ್‌ ಪಾಯಿಂಟ್ಸ್‌ಗಳನ್ನು ಉಳಿಸಿಕೊಂಡ ಒಪೆಲ್ಕಾ, 43 ಏಸ್‌ಗಳನ್ನು ಸಿಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.