
ಕಾರ್ಲೋಸ್ ಅಲ್ಕರಾಜ್
ಮೆಲ್ಬರ್ನ್: ಸ್ಪೇನ್‌ನ ಸೂಪರ್ ಸ್ಟಾರ್ ಕಾರ್ಲೋಸ್ ಅಲ್ಕರಾಜ್ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಸೆಮಿಫೈನಲ್‌ಗೆ ಮುನ್ನುಗ್ಗುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಮಹಿಳೆಯರ ವಿಭಾಗದಲ್ಲಿ ಎಲಿನಾ ಸ್ವಿಟೋಲಿನಾ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಮೂರನೇ ಶ್ರೇಯಾಂಕದ ಕೊಕೊ ಗಾಫ್ ಅವರನ್ನು ಅನಾಯಾಸವಾಗಿ ಸೋಲಿಸಿದ್ದು ವಿಶೇಷ.
ವಿಶ್ವದ ಅಗ್ರಮಾನ್ಯ ಆಟಗಾರ ಅಲ್ಕರಾಜ್ ಅವರು ರಾಡ್ ಲೇವರ್ ಅರೇನಾದಲ್ಲಿ ತವರಿನ ಭರವಸೆ
ಯಾಗಿದ್ದ ಅಲೆಕ್ಸ್ ಡಿ ಮಿನೋರ್ ಅವರನ್ನು 7–5, 6–2, 6–1 ರಿಂದ ಸೋಲಿಸಿದರು. ಅವರು ಸೆಮಿಫೈನಲ್
ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಅವರನ್ನು ಎದುರಿಸಲಿದ್ದಾರೆ.
ಇಲ್ಲಿ ಮೊದಲ ಕಿರೀಟಕ್ಕೆ ಗುರಿ ಯಿಟ್ಟಿರುವ 22 ವರ್ಷ ವಯಸ್ಸಿನ ಅಲ್ಕರಾಜ್ ಈವರೆಗಿನ ಅಭಿಯಾನದಲ್ಲಿ ಒಂದೂ ಸೆಟ್ ಕಳೆದುಕೊಂಡಿಲ್ಲ. ಉಳಿದ ಮೂರು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಟ್ರೋಫಿ ಎತ್ತಿಹಿಡಿದಿರುವ ಅವರು, ಈ ಹಿಂದಿನ ಭೇಟಿಗಳಲ್ಲಿ ಕ್ವಾರ್ಟರ್‌ಫೈನಲ್ ದಾಟಿರಲಿಲ್ಲ.
ಸ್ಪೇನ್‌ನ ಆಟಗಾರ ಇಲ್ಲೂ ಟ್ರೋಫಿ ಗೆದ್ದಲ್ಲಿ ಎಲ್ಲ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಕಿರೀಟ ಧರಿಸಿದ ಅತಿ ಕಿರಿಯ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈಗ ಆ ಗೌರವ ಸ್ಪೇನ್‌ನವರೇ ಆದ ರಫೆಲ್ ನಡಾಲ್ (ಆಗ ಅವರ ವಯಸ್ಸು 24) ಹೆಸರಿನಲ್ಲಿದೆ.
ಜ್ವರೇವ್‌ಗೆ ಜಯ: ಕಳೆದ ಬಾರಿಯ ರನ್ನರ್ ಅಪ್ ಜ್ವರೇವ್ ಅವರು ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಲರ್ನರ್ ಟಿಯೆನ್ ಅವರನ್ನು 6–3, 6–7 (5/7), 6–1, 7–6 (7/3) ರಿಂದ ಸೋಲಿಸಿದರು. ಭರ್ಜರಿ ಸರ್ವ್‌ಗಳ ಪ್ರದರ್ಶನ ನೀಡಿದ ಜ್ವರೇವ್ 24 ಏಸ್‌ಗಳನ್ನು ಸಿಡಿಸಿದರು.
ಮೂರನೇ ಕ್ರಮಾಂಕದ ಆಟಗಾರ ಜ್ವರೇವ್, 28ರ ವಯಸ್ಸಿನಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಜರ್ಮನಿಯ ತಾರೆ, 2025ರ ಫೈನಲ್‌ನಲ್ಲಿ ಯಾನಿಕ್ ಸಿನ್ನರ್‌ಗೆ ಮಣಿದಿದ್ದರು.
ರ್‍ಯಾಕೆಟ್ ಕುಕ್ಕಿದ ಗಾಫ್: ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಎದುರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎಸಗಿದ ತಪ್ಪುಗಳ ಸರಮಾಲೆಯ ಪರಿಣಾಮ ಮೂರನೇ ಶ್ರೇಯಾಂಕದ ಕೊಕೊ ಗಾಫ್ ಹೊರಬಿದ್ದರು. ಸ್ವಿಟೋಲಿನಾ ಕೇವಲ 59 ನಿಮಿಷಗಳಲ್ಲಿ 6–1, 6–2 ಯಿಂದ ಅಚ್ಚರಿಯ ರೀತಿ ಜಯಗಳಿಸಿದರು. 12ನೇ ಶ್ರೇಯಾಂಕದ ಸ್ವಿಟೋಲಿನಾ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಅವರನ್ನು ಎದುರಿಸಲಿದ್ದಾರೆ.
ಉರಿಬಿಸಿಲಿನಲ್ಲಿ ಆಡಿದ ಸಬಲೆಂಕಾ 6–3, 6–0 ಯಿಂದ ಹದಿಹರೆಯದ ಆಟಗಾರ್ತಿ ಇವಾ ಜೋವಿಕ್ (ಅಮೆರಿಕ) ಅವರನ್ನು ಹಿಮ್ಮೆಟ್ಟಿಸಿ ಸೆಮಿಫೈನಲ್ ತಲುಪಿದರು.
ಗಾಫ್ ಅವರು ಸೋತು ಅಂಕಣದಿಂದ ಹೊರಹೋಗುವ ಹಾದಿಯಲ್ಲಿ ಹತಾಶೆಯಿಂದ ರ್‍ಯಾಕೆಟ್ ಅನ್ನು ಪದೇ ಪದೇ ನೆಲಕ್ಕೆ ಕುಕ್ಕುತ್ತಿದ್ದ ದೃಶ್ಯ ಟಿ.ವಿ.ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.