ADVERTISEMENT

ಆಸ್ಟ್ರೇಲಿಯನ್ ಓಪನ್: ಸೆಮಿಗೆ ಸಿಟ್ಸಿಪಾಸ್‌, ಕಾಲಿನ್ಸ್‌; ಮೆಡ್ವೆಡೆವ್‌ ಜಯಭೇರಿ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಸ್ವಾಟೆಕ್‌ಗೆ ಮಣಿದ ಕನೆಪಿ; ಮ್ಯಾರಥಾನ್ ಪಂದ್ಯದಲ್ಲಿ ಫೆಲಿಕ್ಸ್‌ ಹೋರಾಟ

ಏಜೆನ್ಸೀಸ್
Published 26 ಜನವರಿ 2022, 14:07 IST
Last Updated 26 ಜನವರಿ 2022, 14:07 IST
ಡ್ಯಾನಿಲ್ ಮೆಡ್ವೆಡೆವ್ ಸಂಭ್ರಮ –ಎಎಫ್‌ಪಿ ಚಿತ್ರ
ಡ್ಯಾನಿಲ್ ಮೆಡ್ವೆಡೆವ್ ಸಂಭ್ರಮ –ಎಎಫ್‌ಪಿ ಚಿತ್ರ   

ಮೆಲ್ಬರ್ನ್: ಮ್ಯಾರಥಾನ್ ಪಂದ್ಯದಲ್ಲಿ ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸಿಮ್ ಅವರ ದಿಟ್ಟ ಆಟಕ್ಕೆ ತಿರುಗೇಟು ನೀಡಿದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಸುಲಭ ಜಯ ಸಾಧಿಸಿದ ಗ್ರೀಸ್‌ನ ಸ್ಟೆಫನೋಸ್ ಸಿಟ್ಸಿಪಾಸ್ ಮತ್ತು ಅಮೆರಿಕದ ಡ್ಯಾನಿಯೆಲಿ ಕಾಲಿನ್ಸ್ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಸೆಮಿಫೈನಲ್ ಪ್ರವೇಶೀಸಿದರು.

ನಾಲ್ಕು ತಾಸು 42 ನಿಮಿಷಗಳ ಪ್ರಬಲ ಪೈಪೋಟಿಯಲ್ಲಿ ಮೆಡ್ವೆಡೆವ್ 21 ವರ್ಷದ ಫೆಲಿಕ್ಸ್ ವಿರುದ್ಧ 6-7 (4/7), 3-6, 7-6 (7/2), 7-5, 6-4ರಲ್ಲಿ ಗೆಲುವು ಸಾಧಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರುಸ್ಟೆಫನೋಸ್ ಸಿಟ್ಸಿಪಾಸ್ ಎದುರು ಸೆಣಸುವರು.

ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ, ಎಸ್ಟೋನಿಯಾದ ಕಯಾ ಕನೆಪಿ ಅವರ ಸವಾಲು ಮೀರಿನಿಂತ ಪೋಲೆಂಡ್‌ನ ಇಗಾ ಸ್ವಾಟೆಕ್ ಕೂಡ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದರು.

ADVERTISEMENT

11ನೇ ಶ್ರೇಯಾಂಕದ ಆಟಗಾರ ಇಟಲಿಯ ಜನಿಕ್ ಸಿನ್ನರ್ ಎದುರು ನಡೆದ 2 ತಾಸು ಆರು ನಿಮಿಷಗಳ ಪಂದ್ಯದಲ್ಲಿ ಸಿಟ್ಸಿಪಾಸ್6-3, 6-4, 6-2ರಲ್ಲಿ ಜಯ ಗಳಿಸಿದರು. ಪಂದ್ಯದ ನಂತರ ‘ನಿರೀಕ್ಷಿತ ವಲಯ’ ಪ್ರವೇಶಿಸಿದೆ ಎಂದು ಹೇಳಿದ ಸಿಟ್ಸಿಪಾಸ್ ಇದು ಈ ಟೂರ್ನಿಯಲ್ಲಿ ತಮ್ಮ ನೆಚ್ಚಿನ ಪಂದ್ಯವಾಗಿತ್ತು ಎಂದು ಅಭಿಪ್ರಯಾಪಟ್ಟರು.

ವಿಶ್ವ ಕ್ರಮಾಂಕದ ನಾಲ್ಕನೇ ಸ್ಥಾನದಲ್ಲಿರುವ ಸಿಟ್ಸಿಪಾಸ್ ರಾಡ್ ಲೇವರ್ ಅರೆನಾದಲ್ಲಿ ನಡೆದ ಹಣಾಹಣಿಯ ಆರಂಭದಲ್ಲೇ ಎದುರಾಳಿಯ ಸರ್ವ್ ಮುರಿದು ಹಿಡಿತ ಸಾಧಿಸಿದರು. ನಂತರ ಪಂದ್ಯದುದ್ದಕ್ಕೂ ಆಧಿಪತ್ಯ ಮೆರೆದರು. ಎರಡನೇ ಸೆಟ್‌ನ ನಡುವೆ ಮಳೆ ಸುರಿದ ಕಾರಣ ಅಂಗಣದ ಮೇಲಿನ ಛಾವಣಿಯನ್ನು ಮುಚ್ಚಲಾಯಿತು.

ಕಳೆದ ವರ್ಷ ಬಲ ಮೊಣಕೈಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಿಟ್ಸಿಪಾಸ್ ಪ್ರಯಾಸವಿಲ್ಲದೆ ಈ ಟೂರ್ನಿಯಲ್ಲಿ ಆಡುತ್ತಿದ್ದು ಬುಧವಾರದ ಪಂದ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದರು. ಎದುರಾಳಿ ಲೋಪಗಳನ್ನು ಸಂಪೂರ್ಣ ಸದುಪಯೋಗಮಾಡಿಕೊಂಡ ಅವರು ಪ್ರಬಲ ಸರ್ವ್‌ಗಳ ಮೂಲಕ ಮಿಂಚಿದರು. ಮೊದಲ ಸೆಟ್‌ ತಮ್ಮದಾಗಿಸಿಕೊಳ್ಳಲು ಅವರಿಗೆ 36 ನಿಮಿಷಗಳು ಸಾಕಾದವು.

ಸ್ವಾಟೆಕ್‌, ಕೊಲಿನ್ಸ್ ಜಯಭೇರಿ

ಇಗಾ ಸ್ವಾಟೆಕ್ ಮತ್ತು ಡ್ಯಾನಿಯೆಲಿ ಕಾಲಿನ್ಸ್ ಮಹಿಳಾ ವಿಭಾಗದ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವರು. ಕೇವಲ 88 ನಿಮಿಷಗಳ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಫ್ರಾನ್ಸ್‌ನ ಅಲಿಸ್‌ ಕಾರ್ನೆಟ್ ವಿರುದ್ಧ 7–5, 6–1ರಲ್ಲಿ ಕಾಲಿನ್ಸ್‌ ಜಯಭೇರಿ ಮೊಳಗಿಸಿದರು. ಏಳನೇ ಶ್ರೇಯಾಂಕಿತೆ ಸ್ವಾಟೆಕ್‌ 4-6, 7-6 (7/2), 6-3ರಲ್ಲಿ ಕಯಾ ಕೆನಪಿ ವಿರುದ್ಧ ಗೆದ್ದರು.

ಎಟಿಪಿ ದುಬೈ ಟೂರ್ನಿಯಲ್ಲಿ ನೊವಾಕ್ ಕಣಕ್ಕೆ?

ದುಬೈ: ಮುಂದಿನ ತಿಂಗಳಲ್ಲಿ ನಡೆಯಲಿರುವ ಎಟಿಪಿ ದುಬೈ ಟೆನಿಸ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಲಸಿಕೆ ಹಾಕಿಸಿಕೊಳ್ಳದೇ ದೇಶ ಪ್ರವೇಶಿಸಿದ್ದ ಜೊಕೊವಿಚ್‌ ಅವರ ವೀಸಾ ರದ್ದು ಮಾಡಿದ್ದ ಆಸ್ಟ್ರೇಲಿಯಾ ಸರ್ಕಾರ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಅವಕಾಶ ನೀಡಿರಲಿಲ್ಲ. ಟೂರ್ನಿ ಆರಂಭವಾಗುವ ಹಿಂದಿನ ದಿನ ಅವರು ಅಲ್ಲಿಂದ ತವರಿಗೆ ವಾಪಸಾಗಿದ್ದರು. ಹೀಗಾಗಿ ದಾಖಲೆಯ 21 ಗ್ರ್ಯಾನ್‌ ಸ್ಲಾ ಪ್ರಶಸ್ತಿ ಗೆಲ್ಲುವ ಅವರ ಕನಸು ಭಗ್ನಗೊಂಡಿತ್ತು.

ಫೆಬ್ರುವರಿ 21ರಿಂದ 26ರ ವರೆಗೆ ನಿಗದಿಯಾಗಿರುವ ದುಬೈ ಟೂರ್ನಿಗೆ ಹೆಸರು ನೊಂದಾಯಿಸಿಕೊಂಡಿರುವವರ ಪಟ್ಟಿ ಮಾಧ್ಯಮದವರ ಮೂಲಕ ಹೊರಬಿದ್ದಿದ್ದು ಅದರಲ್ಲಿ ಜೊಕೊವಿಚ್ ಹೆಸರು ದಾಖಲಾಗಿದೆ.

ಮೆಡ್ವೆಡೆವ್‌–ಫೆಲಿಕ್ಸ್ ಪಂದ್ಯ ಸಾಗಿದ ಹಾದಿ

ಫೆಲಿಕ್ಸ್‌;ವಿವರ;ಮೆಡ್ವೆಡೆವ್‌

18;ಏಸ್‌ಗಳು;15

4;ಡಬಲ್‌ ಫಾಲ್ಟ್‌ಗಳು;9

1;ಗೆದ್ದ ಟೈಬ್ರೇಕರ್‌ಗಳು;1

182;ಗೆದ್ದ ಪಾಯಿಂಟ್‌ಗಳು;182

28;ಗೆದ್ದ ಗೇಮ್‌ಗಳು;29

4;ಸತತ ಗೆದ್ದ ಗೇಮ್‌;3

6;ಸತತ ಗೆದ್ದ ಪಾಯಿಂಟ್ಸ್‌;6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.