ADVERTISEMENT

ಪ್ರಶಸ್ತಿಗೆ ಸಿನ್ನರ್‌–ಜ್ವರೇವ್ ಸೆಣಸಾಟ

ಪಿಟಿಐ
Published 24 ಜನವರಿ 2025, 19:37 IST
Last Updated 24 ಜನವರಿ 2025, 19:37 IST
   

ಮೆಲ್ಬರ್ನ್ (ಎಎಫ್‌ಪಿ): ಹಾಲಿ ಚಾಂಪಿಯನ್ ಯಾನಿಕ್ ಸಿನ್ನರ್ ಅವರು ಶುಕ್ರವಾರ ನೇರ ಸೆಟ್‌ಗಳಿಂದ ಬೆನ್ ಶೆಲ್ಟನ್ ಅವರ ಸವಾಲನ್ನು ಬದಿಗೊತ್ತಿ ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿಯ ಫೈನಲ್ ತಲುಪಿದರು. ವಿಶ್ವದ ಅಗ್ರಮಾನ್ಯ ಆಟಗಾರ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವರೇವ್ ಅವರನ್ನು ಎದುರಿಸಲಿದ್ದಾರೆ.

ಎರಡನೇ ಶ್ರೇಯಾಂಕದ ಜ್ವರೇವ್ ಇನ್ನೊಂದು ಸೆಮಿಫೈನಲ್‌ನಲ್ಲಿ ಒಂದು ಸೆಟ್‌ಅನ್ನು ಟೈಬ್ರೇಕರ್‌ನಲ್ಲಿ 7–6 (7–5)ರಲ್ಲಿ ಪಡೆದಾಗ ಅವರ ಎದುರಾಳಿ ನೊವಾಕ್ ಜೊಕೊವಿಚ್‌ ಗಾಯಾಳಾಗಿ ಪಂದ್ಯ ಬಿಟ್ಟುಕೊಟ್ಟರು. ಇದರಿಂದ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಕಿರೀಟ ಧರಿಸುವ 37 ವರ್ಷ ವಯಸ್ಸಿನ ಆಟಗಾರನ ಕನಸು ಇಲ್ಲಿ ನುಚ್ಚುನೂರಾಯಿತು. ಎಡಗಾಲಿನ ಮೇಲೆ ಟೇಪ್‌ (ಬ್ಯಾಂಡೇಜ್‌) ಸುತ್ತಿ ಕೊಂಡಿದ್ದ ಸರ್ಬಿಯಾದ ಆಟಗಾರ ಎದುರಾಳಿಗೆ ಹಸ್ತಲಾಘವ ಮಾಡಿ ಕೋರ್ಟ್ ತೊರೆದರು.

ಇದು ತಮ್ಮ ಕೊನೆಯ ಆಸ್ಟ್ರೇಲಿಯನ್ ಓಪನ್ ಆಗಿರಬಹುದು ಎಂಬ ಸುಳಿವನ್ನು 10 ಬಾರಿಯ ಚಾಂಪಿಯನ್‌ ಆಟಗಾರ ನೀಡಿದರು. ಮತ್ತೆ ಆಡುವ ಸಾಧ್ಯತೆಯ ಬಗ್ಗೆ ಕೇಳಿದಾಗ ‘ಯಾರಿಗೆ ಗೊತ್ತು? ಈ ವರ್ಷದ ಟೂರ್ನಿಗಳನ್ನು ನಾನು ಹೇಗೆ ನಿರ್ವಹಿಸುತ್ತೇನೆ ಎಂಬುದನ್ನು ನೋಡಿಕೊಂಡು ನಿರ್ಧಾರಕ್ಕೆ
ಬರಬೇಕಾಗುತ್ತದೆ’ ಎಂದರು.

ADVERTISEMENT

ಇದು ಜ್ವರೇವ್‌ಗೆ ಇಲ್ಲಿ ಮೊದಲ ಫೈನಲ್ ಆಗಿದೆ. ಈ ಹಿಂದೆ ಎರಡು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ರನ್ನರ್ ಅಪ್ ಆಗಿದ್ದರು. 2024ರ ಫ್ರೆಂಚ್‌ ಓಪನ್‌ನಲ್ಲಿ ಮತ್ತು 2020ರ ಅಮೆರಿಕ ಓಪನ್‌ನಲ್ಲಿ ಅವರು ಫೈನಲ್ ತಲುಪಿದ್ದರು.

ಸಿನ್ನರ್‌ಗೆ ಜಯ: ಇಟಲಿಯ ಸಿನ್ನರ್ ಮೊದಲ ಸೆಟ್‌ ಗೆಲ್ಲುವ ಮೊದಲು ಎರಡು ಬಾರಿ ಅದನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದರು. ನಂತರ ಉತ್ತಮ
ವಾಗಿ ಆಡಿ 22 ವರ್ಷ ವಯಸ್ಸಿನ ಶೆಲ್ಟನ್ ಅವರನ್ನು 2 ಗಂಟೆ 36 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ 7–6 (7–2), 6–2, 6–2 ರಿಂದ ಸೋಲಿಸಿದರು.

ಅಮೆರಿಕದ ಆಟಗಾರನ ವಿರುದ್ಧ ಆಡಿರುವ ಐದು ಪಂದ್ಯಗಳಲ್ಲಿ ಸಿನ್ನರ್‌ಗೆ ಇದು ನಾಲ್ಕನೇ ಜಯ. ಕಳೆದ ವರ್ಷ ಇದೇ ಟೂರ್ನಿಯಲ್ಲಿ ಸಿನ್ನರ್ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು.

ಮೂರನೇ ಸೆಟ್‌ನಲ್ಲಿ ಸಿನ್ನರ್‌ಗೂ ಸ್ನಾಯು ಸೆಳೆತದ ಸಮಸ್ಯೆ ಎದುರಾಯಿತು. ಚೇಂಜ್‌ಓವರ್‌ ವೇಳೆ ಎಡಗಾಲಿನ ಸ್ನಾಯುರಜ್ಜು ನೋವು ಮತ್ತು ಬಲತೊಡೆಯ ಸ್ನಾಯು
ಸೆಳೆತಕ್ಕೆ ಅವರು ಟ್ರೇನರ್‌ನಿಂದ ಚಿಕಿತ್ಸೆ ಪಡೆದರು.

ಮೊದಲ ಸೆಟ್‌ನಲ್ಲಿ ಅವರು ಲಯಕ್ಕೆ ಪರದಾಡಿದರು. ಅದರೆ ಶೆಲ್ಟನ್‌ 6–5ರಲ್ಲಿ ಸೆಟ್‌ಗಾಗಿ ಸರ್ವ್‌ ಮಾಡುತ್ತಿದ್ದಾಗ ಮಾಡಿದ ತಪ್ಪಿನಿಂದ 23 ವರ್ಷ ವಯಸ್ಸಿನ ಸಿನ್ನರ್‌ಗೆ ಪುನರಾಗಮನ ಮಾಡಲು ಸಾಧ್ಯವಾಯಿತು. ಈ ಸೆಟ್‌ 71 ನಿಮಿಷ ನಡೆಯಿತು. ಎರಡನೇ ಸೆಟ್‌ನ ಆರಂಭದಲ್ಲೇ ಶೆಲ್ಟನ್ ಸರ್ವ್‌ ಬ್ರೇಕ್ ಮಾಡಿದ ಅವರು ಅದನ್ನು 42 ನಿಮಿಷಗಳಲ್ಲಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.